ಡಾ.ಚಂದ್ರಶೇಖರ ಕಂಬಾರ ಜನನ – ಜನವರಿ ೨, ೧೯೩೭ ಬೆಳಗಾವಿ ಜಿಲ್ಲೆ ಘೋಡಿಗೇರಿ ಗ್ರಾಮದಲ್ಲಿ ಬಸವಣ್ಣೆಪ್ಪ ಕಂಬಾರ ಹಾಗೂ ಚೆನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಗೋಕಾಕ್ ನ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಬಳಿಕ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಎ ಪದವಿ, ೧೯೬೨ರಲ್ಲಿ ‘ಕರ್ನಾಟಕ ವಿವಿ’ಯಿಂದ ಎಂ.ಎ ಪದವಿ ಹಾಗೂ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ.ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಕಂಬಾರರು ಯುವಕರಾಗಿದ್ದಾಗ ಧಾರವಾಡದ ಕವಿ ಸಮ್ಮೇಳನದಲ್ಲಿ ಕವಿತೆಯೊಂದನ್ನು ಓದಿದ್ದರಂತೆ, ಖ್ಯಾತ ಕವಿಗಳೊಬ್ಬರು ಕಂಬಾರರ ಕವಿತೆ ಅಲ್ಲಿ ಓದಿದ ಎಲ್ಲ ಕವಿಗಳಿಗಿಂತ ಭಿನ್ನವಾಗಿದ್ದದ್ದು ಎಲ್ಲರ ಗಮನಕ್ಕೆ ಬಂದಿದ್ದರೂ, ಅದ್ಯಕ್ಷರು ಕಂಬಾರರ ಬಗ್ಗೆ ಕುಹಕದ ಮಾತು ಹೇಳಿದ್ದರು. “ಕಬ್ಬಿಣ ಕಾಸುವವರೂ ಈಗ ಕಾವ್ಯ ಬರೆಯುತ್ತಿದ್ದಾರೆ ” ಎಂಬ ಅಧ್ಯಕ್ಷರ ಮಾತು ಕಂಬಾರರ ಸ್ವಾಭಿಮಾನವನ್ನೇ ಬಡಿದೆಬ್ಬಿಸಿತು.
ಅಂದೇ ಕಂಬಾರ ಕಾವ್ಯವನ್ನು ಪಳಗಿಸಿಕೊಳ್ಳಲು ನಿರ್ಧರಿಸಿದರಂತೆ. ಜಾನಪದ ಸೊಗಡನ್ನು ತಮ್ಮ ಬರವಣಿಗೆಯಲ್ಲಿ ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ.ಕಂಬಾರು ಬರೆದ ಪುಸ್ತಕಗಳು ತುಂಬ. ಅವರ ೧೦ಕಾವ್ಯ ಪುಸ್ತಕ, ೨೫ ನಾಟಕ ಪುಸ್ತಕ, ೧ ಮಹಾಕಾವ್ಯ, ೫ ಕಾದಂಬರಿ ಅಲ್ಲದೆ ೧೭ ಬೇರೆಬೇರೆ ಗದ್ಯ ಸಂಪಾದನೆಗಳು, ಸಂಗ್ರಹಗಳು, ಪ್ರಬಂಧ ಸಂಕಲನಗಳು, ಸಂಶೋಧನ ಪುಸ್ತಕಗಳು ಬಂದಿವೆ.ಅಭಿನಂನ ಗ್ರಂಥ:-ಸಿರಿಸಂಪಿಗೆ.