ವಿವೇಕ ರೈಯವರು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಣಚಾ ಗ್ರಾಮದ ಅಗ್ರಾಳದಲ್ಲಿ ೧೯೪೬ ದಶಂಬರ ೮ರಂದು ಜನಿಸಿದರು. ಅಗ್ರಾಳ ಪುರಂದರ ರೈಯವರು ಇವರ ತಂದೆ.ಅವರು ಡಾ.ಶಿವರಾಮ ಕಾರಂತರ ಶಿಷ್ಯ ಹಾಗೂ ಅವರ ದೊಡ್ಡ ಅಭಿಮಾನಿ. ಪುರಂದರ ರೈಯವರು ಸಾಹಿತಿ ಮತ್ತು ಪತ್ರಕರ್ತ ಆಗಿದ್ದರು.ತಂದೆಯವರ ಪ್ರೇರಣೆಯಿಂದ ಸಾಹಿತ್ಯದಲ್ಲಿ ತೊಡಗಿಸಿಕೊಂಡ ವಿವೇಕ ರೈಯವರು, ಕನ್ನಡಸಾಹಿತ್ಯ ಮತ್ತು ಜಾನಪದ ಕ್ಷೇತ್ರಗಳಲ್ಲಿ ದೊಡ್ಡ ವಿದ್ವಾಂಸರಾಗಿದ್ದಾರೆ.ಡಾ. ಬಿ. ಎ. ವಿವೇಕ ರೈ ಇವರು ಕನ್ನಡ ಸಂಶೋಧಕರು ,ವಿಮರ್ಶಕರು, ಜಾನಪದ ವಿದ್ವಾಂಸರು ಮತ್ತು ಕನ್ನಡ ಪ್ರಾಧ್ಯಾಪಕರು. ಕಳೆದ ೫೦ ವರ್ಷಗಳಿಂದ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ತುಳುವಿನ ಕುರಿತು ಹೆಚ್ಚಿನ ಕೆಲಸ ಮಾಡಿದ್ದಾರೆ. ಇವರ ತಾಯ್ನುಡಿ ತುಳು. ಇವರಿಗೆ ಚಿಕ್ಕ ವಯಸ್ಸಿಗೆ ತಮ್ಮ ತಂದೆಯವರ ಮೂಲಕ ಶಿವರಾಮ ಕಾರಂತರ ಪರಿಚಯ ಆಯಿತು. ಆ ಪ್ರಭಾವದಿಂದಾಗಿ ಇವರು ಭಾಷೆ,ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರು.