ಅನಿತಾ ನಾಡಿಗ್ ೧೩ ನೇ ಜನವರಿ ೧೯೮೦ರಲ್ಲಿ ಕೆ.ಜಿ.ಎಫ್.ನಲ್ಲಿ ಜನಿಸಿದರು. ಇವರು ಕೋಲಾರದ ಚಿನ್ಮಯ ಮಿಷನ್ ಸ್ಕೂಲಿನಲ್ಲಿ ಎಲ್.ಕೆ.ಜಿ., ಕೆ.ಜಿ.ಎಫ್.ನ ಸೆಂಟ್ ಥೆರೆಸಾ ಸ್ಕೂಲಿನಲ್ಲಿ ಯು.ಕೆ.ಜಿ.ಯಿಂದ ೨ನೇ ತರಗತಿವರೆಗೆ, ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಸುಜ್ಞಾನ ನಿಕೇತನ ಶಾಲೆಯಲ್ಲಿ ೩ ಮತ್ತು ೪ನೇ ತರಗತಿಯನ್ನು ಪೂರೈಸಿ, ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ೫ ಮತ್ತು ೬ನೇ ತರಗತಿಯಲ್ಲಿ ತೇರ್ಗಡೆ ಹೊಂದಿದರು. ಅನಂತರ ಕೋಲಾರದ ಸೆಂಟ್ ಆನ್ಸ್ ಹೈಸ್ಕೂಲಿನಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ, ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯು ಶಿಕ್ಷಣವನ್ನು ಪಡೆದರು. ಅನಂತರ, ಹಾಸನದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಪದವಿಯನ್ನು ಪೂರೈಸಿದರು. ಈಗ ಬೆಂಗಳೂರಿನ ‘ಸಿಂಪೋನಿ ಟೆಲಿಕಾ’ದಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ೨೦೦೦ನೇ ಇಸವಿಯಿಂದ ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಚುಟುಕ ಮತ್ತು ಕವನಗಳು ಪ್ರಕಟವಾಗುತ್ತಿವೆ. ಬ್ಲಾಗ್ ನಲ್ಲಿ ಲಲಿತಪ್ರಬಂಧಗಳನ್ನು ಪ್ರಕಟಿಸುತ್ತಿದ್ದಾರೆ. ಕನ್ನಡದ ಜೊತೆಗೆ, ಇಂಗ್ಲಿಷ್ ನಲ್ಲಿ ಕವನ ಹಾಗೂ ಸಣ್ಣಕಥೆಗಳನ್ನು ಇವರು ಬರೆದಿದ್ದಾರೆ. “ಅಜ್ಜಿ ‘ಪಂಚ್’ತಂತ್ರ” ಇವರ ಮೊದಲ ಪುಸ್ತಕ. ಪ್ರವಾಸ ಹಾಗೂ ಫೋಟೋಗ್ರಫಿ ಇವರ ಇತರ ಹವ್ಯಾಸಗಳು.