ಪ್ರತಿಯೊಂದು ಕರ್ಮವೂ ಬ್ರಹ್ಮಯಜ್ಞ
‘ಇದ್ದದ್ದರಲ್ಲಿ ಸಂತುಷ್ಟನಾಗಿರಬಲ್ಲವನು, ಗತಸಂಗನೂ (ಮೋಹವಿಲ್ಲದವನೂ), ಮಾತ್ಸರ್ಯಾದಿ ರಹಿತನೂ ಯಜ್ಞಭಾವದಿಂದ ಕರ್ಮವನ್ನೆಸಗುವವನೂ ಆದ ಕರ್ಮಯೋಗಿಯ ವಿಷಯದಲ್ಲಿ ಕರ್ಮ(ಬಂಧನ)ವೆಲ್ಲ ಅಳಿಯುತ್ತದೆ; ಆತ ಎಲ್ಲವನ್ನೂ ಮಾಡಿಯೂ ಏನೂ ಮಾಡದವನಂತೆ ನಿರ್ಲಿಪ್ತಿಯಿಂದಿರಬಲ್ಲ’ ಎಂದು ಕೃಷ್ಣನು ವಿವರಿಸುತ್ತಿದ್ದನಷ್ಟೆ? ಅಂಥ ಕರ್ಮಯೋಗಿಯ ಜೀವನದ ಎಲ್ಲ ವಿವರಗಳೂ ‘ಬ್ರಹ್ಮಮಯ’ವಾಗುತ್ತದೆ ಎನ್ನುತ್ತಾನೆ;
‘ಅರ್ಪಣ (ಯಾಗಾದಿ ಧಾರ್ವಿುಕ ಯಜ್ಞಗಳಲ್ಲಿ ಬಳಸಲಾಗುವ ಉಪಕರಣ), ಹವಿಸ್ಸು (ಆಹುತಿಗೈಯುವ ತುಪ್ಪ) ಹಾಗೂ ಅಗ್ನಿ, ಆಹುತಿಯ ಪ್ರಕ್ರಿಯೆ ಹಾಗೂ ಗಮ್ಯವು (ಅದೆಲ್ಲ ಯಾರಿಗೆ ಅರ್ಪಿತವಾಗುತ್ತದೋ ಆ ದೇವತೆ) ಹಾಗೂ ಕರ್ಮಸಮಾಧಿಯು (ಆ ಸಮಗ್ರ ಕರ್ಮವು ಪೂರ್ಣವಾಗಿ ಒದಗುವ ಕೃತಾರ್ಥಭಾವದ ಸ್ಥಿತಿ) – ಈ ಎಲ್ಲವೂ ‘‘ಬ್ರಹ್ಮ’’ವೇ (ಎಂಬ ಅನುಭವವು ಕರ್ಮಸಿದ್ಧನಿಗೆ ಆಗುತ್ತದೆ).’ (ಭ.ಗೀ.: 4.24)
‘ಕರ್ಮಯೋಗಿಗೆ ಕರ್ಮದ ಎಲ್ಲ ವಿವರಗಳೂ ಬ್ರಹ್ಮವಾಗಿ ಕಾಣಬರುತ್ತವೆ’ ಎಂದು ತಾತ್ಪರ್ಯ. ಇದನ್ನು ಸೂಚಿಸಲು ಕೃಷ್ಣನು ಹವನಕರ್ಮದ ನಿದರ್ಶನವನ್ನು ನೀಡುತ್ತಿದ್ದಾನೆ. ಕರ್ಮವು ಧಾರ್ವಿುಕವಾಗಲಿ ಲೌಕಿಕವಾಗಲಿ, ಕರ್ಮಯೋಗಿಗೆ ಅದೆಲ್ಲ ಬ್ರಹ್ಮದ ಅನುಭವವನ್ನೇ ಕೊಡುತ್ತವೆ. ಸಾಮಾನ್ಯನು ಬಾಹ್ಯವಿವರಗಳಲ್ಲಿ, ಫಲಾಫಲಗಳಲ್ಲಿ ಮತಿಮನಗಳನ್ನು ತೊಡಗಿಸಿ ಕರ್ಮಕ್ಕೇ ಬದ್ಧನಾಗುತ್ತಾನೆ. ಆದರೆ, ಅದೇ ಕರ್ಮಗಳನ್ನು ಕರ್ಮಯೋಗಿಯು ನಿರ್ಲಿಪ್ತವಾಗಿ ಮಾಡಿ ಬಂಧವಿಮುಕ್ತನಾಗುತ್ತಾನೆ. ಕರ್ಮಯೋಗವರಿತ ಗೃಹಿಣೀ-ಗೃಹಸ್ಥರಿಗೆ ಗೃಹನಿರ್ವಹಣ ಕಲಾಪಗಳೇ ಬ್ರಹ್ಮಯಜ್ಞ. ವಿದ್ಯಾರ್ಥಿಗೆ ವಿದ್ಯಾರ್ಜನವ್ರತವೇ ಬ್ರಹ್ಮಯಜ್ಞ. ಕಲಾವಿದನಿಗೆ ಕಲಾನುಸಂಧಾನವೇ ಬ್ರಹ್ಮಯಜ್ಞ. ಕ್ಷತ್ರಿಯನಿಗೆ ಲೋಕರಕ್ಷಣೆ ಧರ್ಮರಕ್ಷಣೆಗಳೇ ಬ್ರಹ್ಮಯಜ್ಞ. ಹೀಗೆ ಆರ್ಷದೃಷ್ಟಿಯಲ್ಲಿ ಅವರವರ ಕರ್ಮಗಳೇ ಅವರವರ ಆಂತರ್ಯದಲ್ಲಿ ಧರ್ಮದ ಸಾಕ್ಷಾತ್ಕಾರ ಮೂಡಿಸುತ್ತವೆ, ಮನೋನ್ನತಿ ಉಂಟುಮಾಡುತ್ತ ಕರ್ವತೀತ ಸ್ಥಿತಿಗೊಯ್ಯುತ್ತವೆ. ಹಾಗಾಗಿ ‘ಕರ್ಮವೆಲ್ಲವೂ ಬ್ರಹ್ಮಮಯ’ ಎಂಬುದು ಅನುಭಾವಕ್ಕೊಯ್ಯುವ ದಿವ್ಯಭಾವ. ಬ್ರಹ್ಮಾರ್ಪಣಂ ¬¬ಶ್ಲೋಕವನ್ನು ಭೋಜನಸಂದರ್ಭದಲ್ಲಿ ಪಠಿಸುವುದು ಪದ್ಧತಿ. ಇಲ್ಲಿ ಜಠರಾಗ್ನಿಯೇ ಹೋಮಾಗ್ನಿ, ಕೈಯೇ ‘ಅರ್ಪಣ’ವೆಂಬ ಉಪಕರಣ, ಆಹಾರವೇ ಹವಿಸ್ಸು, ಭೋಜನಕ್ರಿಯೆಯೇ ಯಜ್ಞವಿಧಿ, ತೃಪ್ತಿಯೇ ಕರ್ಮಸಮಾಧಿ – ಈ ಒಂದೊಂದೂ ‘ಬ್ರಹ್ಮ’ವೇ ಆಗಿವೆ ಎಂಬ ಭವ್ಯಭಾವ!
ಬಗೆಬಗೆಯಲ್ಲಿ ಈ ಬ್ರಹ್ಮಯಜ್ಞವು ನಡೆಯಬಲ್ಲುದು ಎನ್ನುವುದನ್ನು ಗೀತಾಚಾರ್ಯನು ಹೀಗೆ ಸೂಚಿಸುತ್ತಾನೆ – ‘ಕೆಲವು ಯೋಗಿಗಳು ದೇವತಾಯಜ್ಞ (ದೇವತಾ ಉಪಾಸನೆ) ಮಾಡುತ್ತಾರೆ; ಇನ್ನು ಕೆಲವರು ಬ್ರಹ್ಮವೆಂಬ ಅಗ್ನಿಯಲ್ಲಿ (ನಿರ್ವಿಕಾರ-ನಿರಾಕಾರ ಬ್ರಹ್ಮದ ಅನುಭೂತಿಯಲ್ಲಿ) ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ. ಇನ್ನು ಕೆಲವರು ಇಂದ್ರಿಯಗಳನ್ನು ಸಂಯಮವೆಂಬ ಅಗ್ನಿಯಲ್ಲಿ (ಬಾಹ್ಯಾಸಕ್ತಿಯನ್ನು ಸೆರೆಹಿಡಿದು ಅಖಂಡ ಸಂಯಮ ಪಾಲಿಸುತ್ತಾರೆ) ಅರ್ಪಿಸುತ್ತಾರೆ; ಮತ್ತೆ ಕೆಲವರು ಶಬ್ದ-ಸ್ಪರ್ಶ-ರೂಪ-ರಸ-ಗಂಧಗಳ ಅನುಭವವನ್ನೆಲ್ಲ ಇಂದ್ರಿಯಗಳೆಂಬ ಬೆಂಕಿಯಲ್ಲಿ ಅರ್ಪಿಸುತ್ತಾರೆ (ಇಂದ್ರಿಯಾನುಭವಗಳನ್ನೂ ಯಜ್ಞಭಾವದಲ್ಲಿ ಸ್ವೀಕರಿಸುತ್ತಾರೆ), ಮತ್ತೆ ಕೆಲವರು ಇಂದ್ರಿಯಕರ್ಮಗಳನ್ನು ಹಾಗೂ (ದೇಹ-ಮನಸ್ಸುಗಳ ಪ್ರಕ್ರಿಯೆಗಳನ್ನು ನಿಯಂತ್ರಿಸುವ ಪ್ರಾಣ-ಅಪಾನ-ಉದಾನ-ವ್ಯಾನ ಸಮಾನಗಳೆಂಬ) ಪಂಚಪ್ರಾಣಗಳ ಕರ್ಮಗಳನ್ನೂ ಆತ್ಮಸಂಯಮಾಗ್ನಿಯಲ್ಲಿ (ಬಾಹ್ಯದಿಂದ ಕಳಚಿಕೊಂಡು, ತನ್ನೊಳಗೆ ಜ್ಞಾನಾನುಭವದಲ್ಲಿ ನಿಶ್ಚಲವಾಗಿ ನಿಲ್ಲುವ ತಪಸ್ಸಿನಲ್ಲಿ) ಅರ್ಪಿಸುತ್ತಾರೆ. (ಭ.ಗೀ.: 4.25-27) ಕೆಲವರು ದ್ರವ್ಯಯಜ್ಞವನ್ನು (ವಸ್ತುಗಳನ್ನು ಬಳಸಿ ಹವನಾದಿ ಯಜ್ಞಕರ್ಮವನ್ನು) ಮಾಡಿದರೆ, ಇನ್ನು ಕೆಲವರು ತಪೋಯಜ್ಞಗಳಲ್ಲಿ (ಉನ್ನತಿ ಪಡೆಯಲು ಕಠಿಣ ನಿಯಮಾವಳಿಗಳಲ್ಲಿ) ತೊಡಗುತ್ತಾರೆ. ಮತ್ತೆ ಕೆಲವರು ವ್ರತಸ್ಥರಾಗಿ (ನೇಮನಿಷ್ಠೆಗಳಲ್ಲಿದ್ದು) ಸ್ವಾಧ್ಯಾಯವೆಂಬ ಜ್ಞಾನಯಜ್ಞದಲ್ಲಿ ತೊಡಗುತ್ತಾರೆ. (ಭ.ಗೀ.: 4.28) ಬಗೆಬಗೆಯ ಕರ್ಮಗಳೆಲ್ಲ ‘ಬ್ರಹ್ಮಯಜ್ಞ’ಗಳೇ ಆಗಬಲ್ಲವು ಎನ್ನುವುದು ತಾತ್ಪರ್ಯ.
‘ಬ್ರಹ್ಮಾನುಸಂಧಾನವು ಕೇವಲ ಪೂಜಾದಿ ಕಾರ್ಯಗಳಿಗಷ್ಟೇ ಸೀಮಿತ, ಬೇರೆಲ್ಲವೂ ಭೋಗಕ್ಕಾಗಿ’ ಎಂಬ ಬಾಲಿಶ ಲೆಕ್ಕಾಚಾರವು ಆರ್ಷಧರ್ಮದಲ್ಲಿಲ್ಲ. ದೈನಂದಿನ ಕರ್ತವ್ಯ ಹಾಗೂ ಲೋಕಜೀವನದ ಎಲ್ಲ ಚಿಕ್ಕ ದೊಡ್ಡ ಕೆಲಸಗಳೂ ಬ್ರಹ್ಮಯಜ್ಞವೇ ಆಗಬಲ್ಲುವು. ಕೃಷ್ಣನು ಮನಮುಟ್ಟಿಸುತ್ತಿರುವ ಈ ಆರ್ಷದರ್ಶನವನ್ನು ತತ್ವತಃ ಅರ್ಥ ಮಾಡಿಕೊಂಡವರಿಗೆ, ಮಾಡುವ ಯಾವ ಕೆಲಸವೂ, ವೃತ್ತಿಯೂ ಹೇಯವೆನಿಸದು, ಎಲ್ಲವೂ ಉಪಾಸನಾವಿಧಿಗಳೇ ಆಗಿ ಕಾಣುತ್ತವೆ! ಸ್ತ್ರೀ-ಪುರುಷ, ಉಚ್ಚ-ನೀಚ, ಬಡವ-ಬಲ್ಲಿದರ ಕರ್ಮಗಳಲ್ಲಿ ತಾರತಮ್ಯ ಎಸಗುವ ಗೀಳು ಕಳಚಿಬೀಳುತ್ತದೆ. ಸರ್ವವನ್ನೂ ಸರ್ವರನ್ನೂ ಬ್ರಹ್ಮಚೈತನ್ಯದ ತುಣುಕುಗಳಂತೆ ಕಾಣುವ ದಿವ್ಯದರ್ಶನ ಮೂಡುತ್ತದೆ.
ಕರ್ಮಯೋಗ ಮರೆತು ಕರ್ಮಭೋಗಕ್ಕಂಟಿಕೊಂಡ ತಕ್ಷಣವೇ ಮನುಷ್ಯನಲ್ಲಿ ತಾರತಮ್ಯದ ಲೆಕ್ಕಾಚಾರ ಮೊದಲಾಗುತ್ತದೆ. ‘ಈ ಕೆಲಸ ದೊಡ್ಡದು, ಅದು ಹೇಯ’ ಎಂಬ ಗೊಣಗಾಟ ಪ್ರಾರಂಭವಾಗುತ್ತದೆ. ಕಸ ಗುಡಿಸುವುದರಿಂದ ಹಿಡಿದು ರಾಜ್ಯವನ್ನಾಳುವವರೆಗೂ ಎಲ್ಲ ಕರ್ಮಗಳೂ ಬ್ರಹ್ಮಯಜ್ಞಗಳೇ ಎಂಬ ಭಾವವೇ ಸಹಸ್ರಮಾನಗಳ ಕಾಲ ನಮ್ಮ ಧರ್ಮ-ಸಂಸ್ಕ ೃಗಳನ್ನು ಭವ್ಯವಾಗಿ ಶಕ್ತವಾಗಿ ಬೆಳೆಸಿದ್ದು. ವೃತ್ತಿಗೌರವವನ್ನು ಕರ್ಮಯೋಗಭಾವವನ್ನೂ ಉದ್ದೇಶಪೂರ್ವಕವಾಗಿ ಹಾಳುಗೆಡವಿದ ಬ್ರಿಟಿಷ್ ಮೂಲದ ಇಂದಿನ ಶಿಕ್ಷಣದಲ್ಲಿ ಯಾರಿಗೂ ಅವರವರ ಕೆಲಸದಲ್ಲಿ ಶ್ರದ್ಧೆಯಿಲ್ಲ, ಅಭಿಮಾನವಿಲ್ಲ! ಎಲ್ಲರೂ ನೆಪಮಾತ್ರಕ್ಕಾಗಿ ಕೆಲಸ ಮುಗಿಸಿ ದುಡ್ಡೆಣೆಸಿಕೊಂಡು ಹೋಗುವ ಆತುರದವರೇ! ಅಲ್ಲೊಬ್ಬರು ಇಲ್ಲೊಬ್ಬರು ಕೀಳು-ಮೇಲೆನ್ನದೆ ಕೆಲಸಗಳನ್ನು ಆಸ್ಥೆಯಿಂದ ಮಾಡಿ ಉನ್ನತಿಗೇರುತ್ತಾರೆನ್ನಿ!
ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ