ಪ್ರಶಸ್ತಿ

ಪ್ರಶಸ್ತಿ
‘ಕಲರ್ಸ್’ ಟಿ.ವಿ. ಚಾನೆಲ್ ನಲ್ಲಿ ಬಿತ್ತರಗೊಳ್ಳುತ್ತಿರುವ ‘ಬಿಗ ಬಾಸ್’ನ್ನು ಅದೇಕ ಚಿತ್ತದಿಂದ ನೋಡುವುದರಲ್ಲಿ ತಲ್ಲೀನನಾಗಿದ್ದೆ. ಫೋನು ರಿಂಗಣಿಸಿತು. ಆನಂದಕ್ಕೆ ಸೂಜಿ ಚುಚ್ಚಿದ ಬಲೂನಿನಂತೆನಿಸಿತು. ಯಾವುದೇ ಒಂದು ನಮಗಿಷ್ಟವಾದ ಪ್ರೋಗ್ರ್ಯಾಂ ನೋಡುತ್ತಿರುವಾಗ ಅಡೆತಡೆಯಾದರೆ ಮನಸ್ಸಿಗೆ ಒಂಥರ ಪಿಚ್ಚೆನಿಸುತ್ತದೆ. ಬೇಸರದಿಂದಲೇ ಫೋನೆತ್ತಿದೆ. ಅತ್ತ ಕಡೆಯಿಂದ ಅಪರಿಚಿತ ಪುರುಷ ಧ್ವನಿ! ‘ಹಲೋ’ ಎಂದೆ. ಅತ್ತ ಕಡೆಯಿಂದ ‘ದೀಪಿಕಾ ಅವರಿದ್ದಾರೆಯೇ’ ಎಂದಾಗ ‘ಹೌದು, ನಾನೇ ಮಾತನಾಡುವುದು ಏನಾಗಬೇಕಿತ್ತು?’ ಎಂದೆ ಮುಗುಮ್ಮಾಗೆ. ‘ನಿಮಗೆ ಒಂದು ಪ್ರಶಸ್ತಿ ಬಂದಿದೆ’ ಎನ್ನಬೇಕೆ. ನಾನು ದಿಗ್ಭ್ರಾಂತಳಾಗಿ ಹೋದೆ. ಈಗ ಆಫ್ ಆಗಿದ್ದ ಮೂಡು ಆನ್ ಆಯಿತು. ‘ಬಿಗ್ ಬಾಸ್’ ಕೂಡ ಸಪ್ಪೆಯೆನಿಸತೊಡಗಿತು. ‘ಹೌದೇ ಯಾವ ಪ್ರಶಸ್ತಿ?’ ಎಲ್ಲ ರಸಗಳೂ ಗಂಟಲಿನಿಂದ ಸ್ಪರ್ಧೆಗೆ ಒಳಗಾಗಿ ನಾಮುಂದು ತಾ ಮುಂದು ಹೊರಬರುತ್ತಿರುವಂತೆ ಧ್ವನಿ ಬಂದಿತು. ಅಕ್ಷರಶಃ ಚೀರಿದ್ದೆ.
‘ನಾನು ಪತ್ರಿಕೆಯ ಸಂಪಾದಕನಿದ್ದೇನೆ. ‘ಉರಿಬಿಸಿಲು’ ಎಂಬ ಪತ್ರಿಕೆಯದು. ಗುಲ್ಬರ್ಗಾದಿಂದ ಪತ್ರಿಕೆ ಹೊರಡತ್ತಿದೆ. ನಿಮ್ಮನ್ನು ನಮ್ಮ ಕಮೀಟಿಯವರು ಪ್ರಶಸ್ತಿಗಾಗಿ ಆಯ್ಕೆ ಮಾಡಿದ್ದಾರೆ. ಮತ್ತೊಮ್ಮೆ ನಿಮಗೆ ತಿಳಿಸುತ್ತೇನೆ. ಹಾಗೇ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಕಳಿಸಿಕೊಡುತ್ತೇನೆ. ತಾವು ಬಂದು ಪ್ರಶಸ್ತಿಯನ್ನು ಸ್ವೀಕರಿಸಬೇಕು ದಯವಿಟ್ಟು….’ ಎಂದು ಒತ್ತುಕೊಟ್ಟು ಹೇಳಿದ ಆತ ಫೋನಿಟ್ಟ, ನನಗೆ ನಾನೇ ಮುಗಿಲಿನ ಮೇಲೆ ಹೋಗಿ ಕುಳಿತಷ್ಟು ಸಂತೋಷಭರಿತನಾದೆ. ನನ್ನ ಲೇಖನಗಳು ಅಲ್ಲಲ್ಲಿ ಬರುತ್ತಿರುವುದುಂಟು. ನನ್ನ ಕಥೆಗಳಿಗೆ ಕೆಲವೊಂದು ಬಹುಮಾನಗಳು ಬಂದದ್ದುಂಟು. ಕವನಗಳಿಗೆ ಮೆಚ್ಚುಗೆಯಾಗಿದ್ದುಂಟು. ಒಂದು ಕಥಾ ಸಂಕಲನವೂ, ಒಂದು ಅನುವಾದವೂ ಮಾಡಿದ್ದುಂಟು. ಯಾವುದನ್ನು ನೋಡಿ ನನಗೆ ಪ್ರಶಸ್ತಿ ಕೊಟ್ಟಿರಬಹುದು. ಕನ್ನಡ ಸಾಹಿತ್ಯ ಕೃಷಿ ಮಾಡಿದ, ಮಾಡುತ್ತಿರುವವರ, ಉದ್ದಾಮ ಸಾಧನೆಗೈದ ಘಟಾನುಘಟಿಗಳ ದಂಡೇ ಇಲ್ಲಿರುವಾಗ ನನ್ನಂಥ, ಈಗ ತಾನೇ ಅಂಬೆಗಾಲಿಕ್ಕುವ, ಕೂಡಲು, ನಿಲ್ಲಲು ಪ್ರಯತ್ನಿಸುತ್ತಿರುವ ನನ್ನನ್ನು ಹೇಗೆ ಆಯ್ಕೆ ಮಾಡಿರುವರು ಎಂಬ ಯಕ್ಷಪ್ರಶ್ನೆ ನನ್ನ ಮುಂದೆ ಸುಳಿದಾಡತೊಡಗಿತು. ಆಯ್ಕೆ ಕಮೀಟಿಯಲ್ಲಿ ಯಾರ್ಯಾರು ಇದ್ದಾರೋ ಎನ್ನುವ ಅನಗತ್ಯ ಕುತೂಹಲ ಒಂದೆಡೆ ನನ್ನನ್ನು ಸುಸ್ತು ಮಾಡಿತು. ಇದೆಲ್ಲ ವಿಚಾರಗಳ ಗುಂಗೀಹುಳ ಬಿಗಬಾಸ್ ನ್ನು ಮಖಾಳ ಮಾಡಿ ನನ್ನ ರಾತ್ರಿಯ ನಿದ್ದೆಯನ್ನು ನುಂಗಿತು. ಇನ್ನೂ ಕನ್ ಫರ್ಮ ಆಗದೇ ಯಾರ ಮುಂದೂ ಹೇಳುವಂತೆಯೂ ಇಲ್ಲ. ಸುಮ್ಮನೇ ಒಳಗೊಳಗೇ ಏಳುವ ಖುಷಿಯ ಅಲೆಗಳು ಎದ್ದೇಳುತ್ತಿದ್ದುದ್ದನ್ನೂ ನೋಡುತ್ತ ಅನುಭವಿಸುತ್ತ ಇರಬೇಕಾಯಿತು. ಯಾವುದೇ ಪ್ರಶಸ್ತಿಯನ್ನೂ ಪಡೆಯದ ನನಗೆ ಅದರ ಜರೂರಿ ಇತ್ತು! ಮರುದಿನ ಎದ್ದ ತಕ್ಷಣವೇ ಇಂಟರ್ನೆಟ್ಟನ್ನು ತೆಗೆದು ಆ ಥರದ ಪತ್ರಿಕೆ ಇದೆಯೇ ಎಂದು ನೋಡಿದ್ದಾಯಿತು. ಅಲ್ಲೆಲ್ಲೂ ಆ ಥರದ ಹೆಸರಿನ ಪತ್ರಿಕೆ ಕಾಣಲಿಲ್ಲ. ಹೊಸದಾಗಿ ತೆಗೆದಿದ್ದಾಗಿರಬಹುದು ಎಂದು ನನ್ನಷ್ಟಕ್ಕೇ ನಾನು ಸಮಾಧಾನಿಸಿಕೊಂಡೆ. ಮತ್ತೆಲ್ಲಾದರೂ ಪ್ರಶಸ್ತಿ ತಪ್ಪಿದರೆ ಎಂಬ ವಿನಾಕಾರಣ ಅಂಜಿಕೆ ಬೇರೆ! ಯಾವಾಗ ಆಮಂತ್ರಣ ಪತ್ರಿಕೆ ಬರುತ್ತದೋ ಎಂದು ದಿನವೂ ಹಾದಿ ನೋಡಿದ್ದೇ ಬಂತು. ಹದಿನೈದು ದಿನ ಕಳೆದರೂ ಯಾವುದೇ ನಿಯಂತ್ರಣ ಇಲ್ಲ, ಕಾರ್ಡೂ ಇಲ್ಲ. ಆತನ ಫೋನು ನಂಬರನ್ನು ನಾನು ನೋಟ ಮಾಡಲಿಲ್ಲವಾದ್ದರಿಂದ ಏನೂ ಮಾಡಲೂ ತಿಳಿಯದೇ ಹಾಗೇ ಕುಳಿತುಕೊಳ್ಳಬೇಕಾಯಿತು. ಒಂದಿನ ಮಧ್ಯಾಹ್ನ ಆತನಿಂದ ಮತ್ತೆ ಫೋನು ಬಂದಿತು. ಈ ಸಲ ಆತ ನನ್ನ ಬಯೋಡೇಟಾ ಕಳಿಸಲು ವಿನಂತಿಸಿದ್ದ, ಅದರೊಂದಿಗೆ ನನ್ನ ಫೋಟೋ ಒಂದನ್ನು ಲಗತ್ತಿಸಲು ಸೂಚಿಸಿದ. ‘ಫೋಟೊ ಯಾಕೆ?’ ಪೋಲಿಸ್ ನಾಯಿಗೆ ಬರುವ ಎಂಥದೋ ವಾಸನೆ ಬಂದು ನಾನು ಹಾಗೆ ಹೇಳಿದೆ. ಆತ ಅಷ್ಟೇ ಸಮಾಧಾನ ಚಿತ್ತನಾಗಿ, ‘ನಿಮಗೆ ಪ್ರಶಸ್ತಿ ಬಂದ ಮೇಲೆ ನಾವು ಹೊರಡಿಸುತ್ತಿರುವ ಪತ್ರಿಕೆಯಲ್ಲಿ ಹಾಕಲು’ ಎಂದ. ‘ಸರಿ’ ಎಂದೆ. ಮರುದಿನವೇ ನೀಟಾಗಿ ನನ್ನ ಬಯೋಡೇಟಾವನ್ನು ಬರೆದು ಅದಕ್ಕೆ ನನ್ನದೇ ಒಂದು ಫೋಟೋ ಲಗತ್ತಿಸಿ ಪೋಸ್ಟ ಮಾಡಿದೆ. ಹದಿನೈದು ದಿನವಾದರೂ ಆತನಿಂದ ಮುಟ್ಟಿದ ಬಗ್ಗೆ ಸುಳಿವೇ ಇಲ್ಲ. ಈ ಸಲ ಫೋನು ಬಂದಾಗ ಆತನ ಫೋನು ನಂಬರನ್ನು ನೋಟ ಮಾಡಿಕೊಂಡಿದ್ದೆ. ಈ ನಂಬರಕ್ಕೆ ಫೋನಾಯಿಸಿದಾಗ ಲೈನು ಕಟ್ಟಾಯಿತು. ಮತ್ತೆ ನಾಕೆಂಟು ಸಲ ಪ್ರಯತ್ನಿಸಿದಾಗ ಭೂಪ ಕೊನೆಗೊಮ್ಮೆ ಫೋನೆತ್ತಿದ. ‘ನಾ ಗಾಡೀ ಮ್ಯಾಲ ಇದ್ನರೀ ಅದಕ್ಕ ಫೋನು ಎತ್ತಲಿಲ್ಲ’ ಎಂದು ಸಮಜಾಯಿಷಿ ನೀಡಿದ.
‘ಸರಿ, ನಾನು ನನ್ನ ಬಯೋಡೇಟಾ ಕಳಿಸಿ ಹದಿನೈದು ದಿನವಾದರೂ ಮುಟ್ಟಿದ ಬಗ್ಗೆ ನಿಮ್ಮಿಂದ ಏನೂ ಉತ್ತರವೇ ಇಲ್ಲ. ತಲುಪಿತೋ ಇಲ್ಲೋ’ ಎಂದೆ ತುಸು ಖಾರವಾಗಿಯೇ. ಆಗ ಆತ ಮೆತ್ತಗಾದಂತೆ ‘ಇಲ್ರೀಮೇಡಂ, ಇನ್ನೂ ಮುಟ್ಟೇ ಇಲ್ಲ’ ಎಂದ. ನಾನು ದಂಗಾದೆ. ಅಂದರೆ ಈತ ಕೊಟ್ಟ ಅಡ್ರೆಸ್ಸು ಸರಿ ಇದೆಯೋ ಇಲ್ಲವೋ ಎಂದು ಮತ್ತೊಮ್ಮೆ ಆತನಿಂದ ಕನ್ ಫರ್ಮ ಮಾಡಿಕೊಂಡೆ. ಅಡ್ರೆಸ್ಸು ಸರಿ ಇತ್ತು. ಮತ್ತೆ ಹೋತೆಲ್ಲಿಗೆ ಮನಸ್ಸಿನಲ್ಲಿಯೇ ಲೆಕ್ಕ ಹಾಕುತ್ತಿದ್ದೆ. ಮತ್ತೆ ಆತನೇ, ‘ಸಾರೀರೀ ಮೇಡಂ, ನೀವು ಕಳಿಸಿದ್ದ ಬಯೋಡೇಟಾ ಮುಟ್ಟೇ ಇಲ್ಲ. ನೀವು ಇನ್ನು ಹತ್ತು ದಿನದಲ್ಲಿ ಇನ್ನೊಮ್ಮೆ ಬೇಗನೇ ಕಳಿಸಿ, ಯಾಕಂತಂದ್ರ ನಾವು ಒಟ್ಟು ಹತ್ತು ಮಂದಿಗೆ ಆಯ್ಕೆ ಮಾಡೀವಿ. ಅದರಲ್ಲಿ ನಿಮ್ದೂ ಹೆಸರು ಅದೆ. ಬೇಗನೇ ಕಳಿಸಿದ್ರೆ ನಿರ್ಧಾರ ಮಾಡಲಿಕ್ಕೆ ಛೋಲೋ ಆಗ್ತದೆ’ ಎಂದು, ಸಣ್ಣ ಲಕ್ಷ್ಮೀ ಪಟಾಕಿಯನ್ನು (ಬಾಂಬನ್ನು) ನನ್ನೆಡೆಗೆ ಎಸೆದಂತೆ ಹೇಳಿದ. ಮತ್ತೆ ನನ್ನ ಮನಸ್ಸಿನಲ್ಲಿ ಗಡಿಬಿಡಿ ಶುರುವಿಟ್ಟುಕೊಂಡಿತು. ಮೊದಲಾದರೆ ನನಗಷ್ಟೇ ಆಯ್ಕೆ ಮಾಡಿದ್ದಾಗಿ ಹೇಳಿದ್ದಾನೆ. ಈಗ ನೋಡಿದರೆ ಹತ್ತು ಜನರು ಎಂದು ಹೇಳುತ್ತಾನಲ್ಲ ಎಂದು ವಿಷಾದ ಆವರಿಸಿತು. ಮತ್ತೆ ಪ್ರಶಸ್ತಿ ನನಗೆ ಬರುವುದು ತಪ್ಪಿದರೆ ಎಂಬ ಆತಂಕದಿಂದ ಮತ್ತೆ ಮೊದಲಿನಂತೇ ಬಯೋಡೇಟಾ ತಯಾರಿಸಿ ಫೋಟೋ ಅಂಟಿಸಿ ಕಳಿಸಿದೆ. ಈ ಬಾರಿ ಫ್ರೊಫೆಶನಲ್ ಕೋರಿಯರ್ ದಿಂದ ಕಳಿಸುವುದನ್ನು ಮರೆಯಲಿಲ್ಲ. ಎಂಟು ದಿನಕ್ಕೆ ನಾನೇ ಫೋನಾಯಿಸಿ ಕೇಳಿದೆ. ಈ ಸಲ ಫೋನನ್ನೇನೂ ಡಿಸಕನೆಕ್ಟ್ ಮಾಡದೇ ಮಾತನಾಡಿದ. ಹಾಗೂ ಬಯೋಡೇಟಾ ತಲುಪಿರುವ ವಿಷಯವನ್ನು ಹೇಳಿದ. ಆವಾಗ ಸಮಾಧಾನವೆನಿಸಿತು. ಮನಸ್ಸಿನಲ್ಲಿ ಈತನ ಬಗ್ಗೆ ಮೂಡಿದ್ದ ಶಂಕೆ ಸ್ವಲ್ಪ ಮರೆಯಾಯಿತು. ‘ಮತ್ತೇ ಪ್ರಶಸ್ತಿ ಪ್ರದಾನ ಸಮಾರಂಭ ಯಾವಾಗ ಇಟ್ಕೊಂಡಿದೀರಿ?’ ನಾಚಿಕೆ ಬಿಟ್ಟು ಕೇಳಿದೆ.
‘ಈಗೆಲ್ಲಾ ಬಯೋಡೇಟಾ ಬರಕತ್ತಾವ್ರೀ, ಎಲ್ಲಾ ಬಂದ ಮೇಲೆ ಸ್ಕ್ರುಟಿನಿ ಮಾಡಿ ತಿಳಿಸ್ತೀವಿ’ ಎಂದು ಆತಂಕದ ಬಾಂಬನ್ನು ನನ್ನ ತಲೆಯ ಮೇಲೆ ಹಾಕಿ ಫೋನಿಟ್ಟುಬಿಟ್ಟಮಾರಾಯ. ಮತ್ತೆ ಈತನ ಪ್ರಶಸ್ತಿಯ ಪ್ರಾಮಾಣಿಕತೆಯ ಬಗ್ಗೆಯೇ ಸಂದೇಹ ಮೂಡಲಾರಂಭಿಸಿತು. ಮೊದಲು ನನಗೊಬ್ಬಳಿಗೆ ಆಯ್ಕೆಯಾಗಿದೆ ಎಂದು ಅರುಹಿದ್ದ. ನಂತರ ಹತ್ತು ಜನರಲ್ಲಿ ಎಂದ. ಈಗ ಇನ್ನೂ ಎಂಟ್ರೀಸ್ ಬರುತ್ತಿವೆ ಎಂದೂ ಅದರಲ್ಲಿ ಆಯ್ಕೆ ಮಾಡುವುದಾಗಿಯೂ ಹೇಳುತ್ತಿರುವನಲ್ಲ. ಇದರ ಅರ್ಥವೇನು? ಮುಂದೆ ಇನ್ನೊಂದು ಸಲ ಫೋನಾಯಿಸಿ ನೂರು ಜನರೋ ಇನ್ನೂರು ಜನರೋ ಆಯ್ಕೆಗಾಗಿ ಇರುವುದಾಗಿಯೂ ಅದರಲ್ಲಿ ನಿಮ್ಮನ್ನು ಆಯ್ಕೆ ಮಾಡಲು ನೀವು ಇಂತಿಷ್ಟು ಸಾವಿರ ದುಡ್ಡು ಕೊಡಬೇಕಾಗುವುದೆಂದರೆ ಗತಿ ಏನು? ನನಗಂತೂ ಇದ್ದ ಉತ್ಸಾಹವೆಲ್ಲ ಜರ್ರನೇ ಜರಿದು ಹೋದಂತಾಯಿತು,. ಫಂಕ್ಷನ್ನಿಗೆ ಹೋಗಲು ಯಾವ ಸೀರೆ ಉಡಬೇಕು, ಯಾವ ಬಳೆ, ಯಾವ ಓಲೆ, ಯಾವ ಸರ, ಬಿಂದಿ ಎಲ್ಲವನ್ನೂ ನಿರ್ಧರಿಸಿಕೊಂಡಿದ್ದೆ. ಪ್ರಶಸ್ತಿ ತೆಗೆದುಕೊಳ್ಳುವಾಗಿನ ಫೋಟೋ ಒಂದನ್ನು ಚೆಂದದ ಫ್ರೇಮಿನಲ್ಲಿ ಕಟ್ಟಾಕಿಸಿ ಹಾಲ್ ನ ಯಾವ ಲೋಕೇಶನ್ನಿನಲ್ಲಿ ಹಾಕಬೇಕೆನ್ನುವ ಬಗ್ಗೆಯೂ ವಿಚಾರ ಮಾಡಿದ್ದೆ. ಇಷ್ಟೆಲ್ಲ ನಿರ್ಧರಿಸಿದರೂ ಮನೆಯವರ ಮುಂದೆ ಏನೂ ಹೇಳದೇ ಇದ್ದೆ. ಆತನ ಆಮಂತ್ರಣ ಪತ್ರಿಕೆ ಬಂದಾಗಲೇ ಇವರ ಮುಂದೆ ಹಿಡಿದು ಆಶ್ಚರ್ಯಚಕಿತಗೊಳಿಸಬೇಕೆಂದುಕೊಂಡಿದ್ದೆ. ಆದರೆ ಆ ಸಂದರ್ಭ ಬರಲೇ ಇಲ್ಲ! ಆ ದಿನ ನಮ್ಮಣ್ಣನೂ ಊಟಕ್ಕೆ ಬಂದಿದ್ದ. ಊಟಕ್ಕೆ ಬಡಿಸುತ್ತಾ, ಮೆಲ್ಲನೇ ‘ನನಗೂ ಪ್ರಶಸ್ತಿ ಕೊಡುವವರಿದ್ದಾರಂತೆ’ ಎಂದೆ. ‘ಯಾರಂವಾ ನಿನಗ ಪ್ರಶಸ್ತಿ ಕೊಡಾಂವಾ’ ಎನ್ನಬೇಕೆ ಇವರು. ‘ಗುಲ್ಬರ್ಗಾದಿಂದ ಹೊರಡುವ ಉರಿಬಿಸಿಲು ಪತ್ರಿಕೆಯ ಸಂಪಾದಕನಂತೆ, ಫೋನು ಮಾಡಿ ಹೇಳಿದ್ದರಿಂದ ನನ್ನ ಬಯೋಡೇಟಾ ಕಳಿಸಿದ್ದರವರೆಗೂ ಎಲ್ಲವನ್ನೂ ಹೇಳಿದೆ. ನನ್ನ ಅಣ್ಣ, ‘ಯಾವನೋ ನಿನ್ನನ್ನು ಪೂಲ ಮಾಡಿದ್ದಾನೆ, ಗುಲ್ಬರ್ಗಾದಾಗ ಇರೋದು ಎರಡೇ ಎರಡು ಕಾಲ ಒಂದು ಬಿಸಿಲು, ಇನ್ನೊಂದು ಉರಿಬಿಸಿಲು. ಆ ಎರಡನೆದ್ದನ್ನೇ ಉಪಯೋಗಿಸಿಕೊಂಡು ಪ್ರಶಸ್ತಿಯ ಹೆಸರು ಹೇಳಿ ನಿನ್ನ ಮೂರ್ಖ ಮಾಡ್ಯಾನೇ ಅವನು’ ಎಂದ. ‘ನನಗ ಹಂಗ ಹೇಳಿದ್ರೆ ಅವನಿಗೇನು ಲಾಭ’ ಎಂದೆ.
‘ಅಂವ ಪತ್ರಿಕೆಯ ಸಂಪಾದಕನೇ ಆಗಿದ್ದರೆ….’
‘ಅಂದ್ರೆ ಆಗಿರದಿದ್ದರೆ ಎಂಬುದು ನಿನ್ನ ಶಂಕೆ ಏನು?’ ಗಾಬರಿಯಿಂದಲೇ ನಮ್ಮಣ್ಣನನ್ನು ಕೇಳಿದೆ.
‘ಸಾಧ್ಯತೆ ಇದೆ. ಆಗಿದ್ದರೆ ಅವನ ಪತ್ರಿಕೆಗೆ ನಿನ್ನ ಮೂಲಕ ಕೆಲವಾರು ಸಬ್ ಸ್ಕ್ರೖಬರ್ ಆದರೂ ಸಿಗಬಹುದು. ಆಗಿರದಿದ್ದರೆ…. ಇದ್ದೇ ಇದೆಯಲ್ಲ ಈ ರೀತಿ ದುಡ್ಡುಗಳಿಸುವ ಮಾರ್ಗ. ಯಾವುದೋ ಒಂದು ಪ್ರಿಂಟೆಟ್ ಸರ್ಟಿಫಿಕೇಟ ಹಾಗೂ ಫಲ ತುಂಬಿದ ಪಾತ್ರೆ ನೀಡಿ ಸತ್ಕರಿಸಿ ಪ್ರತಿಯೊಬ್ಬರಿಂದಲೂ ಕೆಲವಾರು ಸಾವಿರ ಗಳಿಸುವುದು’ ಎಂದ.
‘ಹೌದಲ್ಲ ಎಂದೆನಿಸಿತು. ನಾನೂ ಎಂಥಾ ಮೂರ್ಖ ಶಿಖಾಮನೀ ನೋಡು.’
‘ಮತ್ತೆ ನಿನಗ್ಯಾರಾದರೂ ಶಾಣ್ಯಾ ಅಂತಾರೇನು’ ತನ್ನ ಎಂದಿನ ಚಾಷ್ಟಿ ಮಾಡುವ ಧಾಟಿಯಲ್ಲಿ ನುಡಿದು ನಗಾಡಿದಾಗ ಇವರೂ ಅದರಲ್ಲಿ ಶಾಮೀಲಾದರು.
ಹೆಣ್ಣು ಮಕ್ಕಳಿಗೆ ಯಾವುದೇ ಪ್ರಶಸ್ತಿ ಬಂದಿದೆ ಎಂದಾಗ ಬಾಯಿ ತೆಗೆಯುತ್ತಾರೆ ಎಂಬ ಶುಭ್ರ ಸತ್ಯ ಗೋಚರಿಸಿ ಮುಂದೆ ಘಟಿಸಬಹುದಾದ ಅವಘಡ ತಪ್ಪಿದ್ದಕ್ಕೆ ಸಂತೋಷ ಪಟ್ಟೆ. ಟಿ.ವಿ. ೯ ದಲ್ಲಿ ಒಂದೇ ಸಮನೆ ಹದಿನೆಂಟು ಯುವತಿಯರನ್ನು ಪರಿಚಯಿಸಿಕೊಂಡು ಹತ್ಯಗೈದ ನರಹಂತಕನ ಸುದ್ದಿ ಮೇಲಿಂದ ಮೇಲೆ ಬಿತ್ತರವಾಗುತ್ತಿತ್ತು. ಈ ಕಲಿಕಾಲದಲ್ಲಿ ಎಂಥೆಂಥಾ ಜನರು ಉಂಟೋ ಎಂದು ಚಡಪಡಿಸಿ ಸುಮ್ಮನಾದೆ. ಅಂದಿನಿಂದ ಬುದ್ಧನ ‘ಆಸೆಯೇ ದುಃಖಕ್ಕೆ ಮೂಲ’ ಎಂಬ ತತ್ವದ ಅರ್ಥ ಮನದಟ್ಟಾಯಿತು.

 

Leave a Reply