ಪ್ರಕೃತಿ ಪ್ರೇಮ –ಸಾಮಾಜಿಕ ಕಳಕಳಿಯ ಸಮ್ಮಿಲನ

ಉರಗ ವಿಜ್ಞಾನಿಯೆಂದೇ ಖ್ಯಾತರಾಗಿರುವ ಗುರುರಾಜ್ ಸನಿಲ್ ಅವರು ಪರಿಸರ ಹಾಗೂ ಜೀವರಾಶಿಗಳ ಕುರಿತು ಅಪಾರ ಕಾಳಜಿಯುಳ್ಳವರು. ಮೂರು ಸಾವಿರಕ್ಕೂ ಹೆಚ್ಚು ಉರಗಗಳಿಗೆ ಶುಶ್ರೂಷೆ ನೀಡಿ, ಸುಮಾರು ಇಪ್ಪತ್ತೈದು ಸಾವಿರ ಉರಗಗಳನ್ನು ಸಂರಕ್ಷಿಸಿ ಸುರಕ್ಷಿತ ತಾಣಗಳಿಗೆ ಸೇರಿಸಿದ ಇವರು ಕೇವಲ ಉರಗತಜ್ಞರು ಮಾತ್ರವಲ್ಲ; ಪರಿಸರದ ಈ ಸೇವೆಯಲ್ಲಿ ಅವರಿಗಾದ ಅನುಭವಗಳನ್ನು ಹಾಗೂ ಉರಗ ಜೀವಿಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನು ದಾಖಲಿಸಿ ಲೇಖನಗಳ ಮೂಲಕ ಜನಜಾಗೃತಿಯನ್ನು ಮೂಡಿಸಿದವರು. ಈವರೆಗೆ ಬೆಳಕು ಕಂಡ ಸನಿಲರ ಒಟ್ಟು ಒಂಬತ್ತು ಕೃತಿಗಳಲ್ಲಿ, ಎಂಟು ಕೃತಿಗಳು ಉರಗಜೀವಿ ಮತ್ತು ಪರಿಸರಕ್ಕೆ ಸಂಬಂಧಪಟ್ಟ ಮೌಲ್ಯಯುತ ಕೃತಿಗಳಾಗಿವೆ. ಗುರುರಾಜ್ ಸನಿಲರ ‘ಗುಡಿ ಮತ್ತು ಬಂಡೆ’ ಚೊಚ್ಚಲ ಕಥಾಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ಬದುಕಿನಲ್ಲಿ ತಾನು ಕಂಡಿರುವ, ಅನುಭವಕ್ಕೆ ಬಂದಿರುವ ಸಣ್ಣಪುಟ್ಟ ಘಟನೆಗಳೇ ಇಲ್ಲಿನ ಕಥಾವಸ್ತುವಾಗಿದೆ. ಡಾ.ವ್ಯಾಸರಾವ್ ನಿಂಜೂರ್ ಅವರು ಬರೆದಿರುವ ಮುನ್ನುಡಿಯಲ್ಲಿ, “ಗುರುರಾಜ್ ಸನಿಲರ ಸರಳ ನಿರೂಪಣಾ ತಂತ್ರ, ಉಚಿತ ಪದಗಳ ಆಯ್ಕೆ, ಮನೋಹರ ಗದ್ಯ ಶೈಲಿಗೆ ಮಾರು ಹೋಗಿದ್ದೇನೆ. ಇವರಲ್ಲಿ, ನಿಸರ್ಗ ಪ್ರೇಮಿ, ಪ್ರಚಲಿತ ಮೌಢ್ಯಗಳ ನಿವಾರಕ ಹಾಗೂ ನಿಷ್ಟಾವಂತ ಬೋಧಕನಿರುವುದೂ ಗಮನಿಸಿದ್ದೇನೆ. ಇಲ್ಲಿನ ಕೆಲವು ಕಥೆಗಳಲ್ಲಿ ಲೇಖಕರ ಬಾಲ್ಯದ ದುರ್ಬರ ಪ್ರಸಂಗಗಳ ನೆನಪು ಇಣುಕುತ್ತದೆ. ಕೆಳ ಮಧ್ಯಮ ವರ್ಗದ ಬಾಳ್ವೆಯ ಕುರಿತು ವಿಷಾದವಿದೆ. ಇನ್ನು ಕೆಲವು ಕಥೆಗಳಲ್ಲಿ ತಾರುಣ್ಯದ ತಹತಹ, ಕಾಯದ ಹಸಿವು ಇದೆ. ಸನಿಲರ ಸೂಕ್ಷ್ಮಸಂವೇದನೆಗಳು ಅವರ ಹೆಚ್ಚಿನ ಕಥೆಗಳಲ್ಲಿ ಅನಾವರಣಗೊಂಡಿವೆ” ಎಂದು ಹೇಳಿದ್ದಾರೆ. ಶೀರ್ಷಿಕೆಯ ಹೆಸರನ್ನು ಒಳಗೊಂಡ ಕಥೆ ‘ಗುಡಿ ಮತ್ತು ಬಂಡೆ’ ಆಧುನೀಕರಣದ ಸೋಗಿಗೆ ಒಳಗಾಗಿ ಪರಿಸರ ನಾಶ ಹಾಗೂ ಪುರಾತನ ದೇವಾಲಯದ ನವೀಕರಣದ ಕುರಿತಾಗಿದೆ. ಇಲ್ಲಿ ಶ್ರೀಮಂತರೊಬ್ಬರ ಕನಸು ಪ್ರಕೃತಿ ನಾಶವನ್ನು ಪ್ರೇರೇಪಿಸಿದರೆ ವಿಶ್ವನ ಕನಸು ಪ್ರಕೃತಿಯ ಉಳಿವಿನ ಬಗೆಗೆ ಕಾಳಜಿವಹಿಸುತ್ತದೆ. ಸಂಶಯ ಅನ್ನುವುದು ಬೆಳೆಯುತ್ತ ಹೋದರೆ ಇಡೀ ಸಂಸಾರ ಹೇಗೆ ಬಿಗಡಾಯಿಸುತ್ತದೆ ಎನ್ನುವುದಕ್ಕೆ ‘ಕ್ರೌರ್ಯ’ ಕಥೆ ಒಂದು ಪ್ರಮುಖ ನಿದರ್ಶನವಾಗಿದೆ. ಇಲ್ಲಿ ಕ್ರೌರ್ಯದ ನಾನಾ ಮುಖಗಳು ಅನಾವರಣಗೊಳ್ಳುತ್ತವೆ. ಕೊನೆಗೆ ಶೀನ ಶೆಟ್ಟರ ಮಗ ರಘುರಾಮನ ಮಗಳು ಮನೋವೈದ್ಯೆಯಾಗಿ ಕತೆಯ ಅಂತ್ಯದಲ್ಲಿ ಬೇರೊಂದು ತಿರುವು ಕಾಣಿಸಿಕೊಳ್ಳುತ್ತದೆ. ಇಲ್ಲಿ ಕಥೆ ಮೂರು ತಲೆಮಾರುಗಳವರೆಗೆ ಮುಂದುವರಿಯುತ್ತದೆ. ಬದುಕು ಮತ್ತು ಸಾವಿನ ಬಗೆಗಿನ ಮಾನಸಿಕ ಸಂಘರ್ಷಗಳು ಹಾಗೂ ಓರ್ವ ವ್ಯಕ್ತಿಯ ಮನಸ್ಸು ಹಂತಹಂತವಾಗಿ ಆತ್ಮಹತ್ಯೆಯತ್ತ ಹೇಗೆ ಹೊರಳುತ್ತದೆ ಎಂಬುದನ್ನು ‘ಅವಸಾನ’ ಕಥೆಯಲ್ಲಿ ಕತೆಗಾರರು ಚಿತ್ರಿಸಿದ ಬಗೆ ಮನೋಜ್ಞವಾದುದು. ಇಲ್ಲಿನ ಪಾತ್ರಗಳು ಕೃಷಿ ಬದುಕಿಗೆ ಹಿಂದಿರುಗುವ ಮೂಲಕ ಸಮಾಜದಲ್ಲಿ ಇಂಥದ್ದೊಂದು ಬದಲಾವಣೆಯಾಗಬೇಕೆಂಬ ಆಶಯವನ್ನು ಕತೆಗಾರರು ವ್ಯಕ್ತಪಡಿಸಿದ್ದಾರೆ. ಕಥೆ ದೀರ್ಘವೆನಿಸಿದರೂ ನಿರೂಪಣೆಯ ವಿಶಿಷ್ಟ ಶೈಲಿ ಕಥನ ಕಲೆಯ ನೈಪುಣ್ಯವನ್ನು ತೋರಿಸುತ್ತದೆ. ಈ ಸಂಕಲನದ ಕೊನೆಯ ಕಥೆ ‘ಸಿನೆಮಾ’ ಅಮರ್ ಮತ್ತು ಮುಸ್ತಫರ ಬಾಲ್ಯದ ಗೆಳೆತನ, ಅವರ ನಡುವಿನ ಜಗಳ, ಮೋಸ, ವಂಚನೆಗಳ ಸುತ್ತ ಹೆಣೆದುಕೊಂಡಿದೆ. ಒಂದು ಜನಪದ ಕಲೆಯ ದರ್ಶನ ಇಲ್ಲಿ ಓದುಗನಿಗೆ ವೇದ್ಯವಾಗುವುದು. ಗುಡಿ ಮತ್ತು ಬಂಡೆ ಕಥಾಸಂಕಲನದಲ್ಲಿ ಕಂಡುಬರುವುದು ಸನಿಲರ ಅದಮ್ಯ ಪರಿಸರ ಪ್ರೇಮ. ಮನೋವೈಜ್ಞಾನಿಕ ನೆಲೆಯಲ್ಲಿ ಸಾಗುವ ಇವರ ಹೆಚ್ಚಿನ ಕಥೆಗಳು ಚಿಂತನೆಗೆ ಹಚ್ಚುವಂತಿದೆ. ಮಾನಸಿಕ ಸಂಘರ್ಷಕ್ಕೊಳಗಾಗಿ ನಡೆಯುವ ಸಂವಾದಗಳಿಂದ ಓದುಗನಿಗೆ ಹಲವಾರು ವಿಚಾರಗಳು ಗ್ರಾಹ್ಯವಾಗುತ್ತ ಹೋಗುತ್ತವೆ. ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ಶೋಷಣೆಯ ಬಗೆಗೆ ಲೇಖಕರಿಗೆ ಅನುಕಂಪವಿದೆ. ಪುರುಷರ ದಬ್ಬಾಳಿಕೆಯ ನೀತಿಯ ಬಗೆಗೆ ಆಕ್ರೋಶವಿದೆ. ಪರಿಸರ ನಾಶ ಮತ್ತು ಆಧುನೀಕರಣದತ್ತ ಸಾಗುವ ಮನುಷ್ಯನ ಸ್ವಾರ್ಥನೀತಿ ನಂಬಿಕೆಗಳ ಕುರಿತು ಅಸಮಾಧಾನವಿದೆ. ಗುರುರಾಜ್ ಸನಿಲ್ ಅವರ ವಿಭಿನ್ನ ನಿರೂಪಣಾ ಶೈಲಿ ಹಾಗೂ ಮನಸ್ಸಿನ ಸಂವೇದನೆಯನ್ನು ಪಾತ್ರಗಳ ಮೂಲಕ ವ್ಯಕ್ತಪಡಿಸಿರುವ ಪರಿ ಅನನ್ಯವಾಗಿದೆ. ಮನುಷ್ಯನ ನಡವಳಿಕೆಗಳ ಅತಿ ಸೂಕ್ಷ್ಮ ಅಂಶಗಳಿಗೂ ಗಮನ ಹರಿಸಿದ್ದಾರೆ. ಸಾಮಾಜಕ್ಕೆ ಅಗತ್ಯವಾಗಿ ಬೇಕಾದ ಅನೇಕ ಸಂದೇಶಗಳನ್ನು ಸನಿಲರು ತಮ್ಮ ಕಥೆಗಳ ಮೂಲಕ ನೀಡಿದ್ದಾರೆ. ಇಲ್ಲಿನ ಕಥೆಗಳಲ್ಲಿ ಬರುವ ಗೆಳೆತನ ಪ್ರೀತಿ ಮುಂತಾದ ಮಾನವೀಯ ಸಂಬಂಧಗಳ ಜೊತೆಗೆ ಪ್ರಕೃತಿ, ಸಂಸ್ಕೃತಿ, ಸಾಮಾಜಿಕ ಕಳಕಳಿ ಕತೆಗಳ ಒಟ್ಟು ಮೌಲ್ಯವನ್ನು ಹೆಚ್ಚಿಸಿದೆ. ಗುರುರಾಜ್ ಸನಿಲ್ ಅವರು ‘ಗುಡಿ ಮತ್ತು ಬಂಡೆ’ ಕಥಾಸಂಕಲನದ ಮೂಲಕ ಸಾಹಿತ್ಯಕ್ಷೇತ್ರಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ.

author- ಅನಿತಾ ಪಿ. ತಾಕೊಡೆ

courtsey:prajavani.net

https://www.prajavani.net/artculture/book-review/nature-and-love-book-reveav-668138.html

Leave a Reply