ಪೂಜ್ಯಾಯ ರಾಘವೇಂದ್ರಾಯ

ಮಂತ್ರಾಲಯ: ಇಂದು ಪ್ರಪಂಚದಾದ್ಯಂತ ಪ್ರಸಿದ್ಧಿಯನ್ನು ಪಡೆದಿರುವ ತೀರ್ಥಕ್ಷೇತ್ರ. ಜಾತಿ–ಮತಗಳ ಗೊಡವೆಯಿಲ್ಲದೆ ಎಲ್ಲರಿಗೂ ಪವಿತ್ರಕ್ಷೇತ್ರ ಎನಿಸಿರುವ ಈ ಕ್ಷೇತ್ರಕ್ಕೆ ಇಂಥದೊಂದು ಶಕ್ತಿ ಒದಗಿದ್ದು ರಾಘವೇಂದ್ರಸ್ವಾಮಿಗಳಿಂದ (1595–1671). ಅವರು ಭಕ್ತರ ಪಾಲಿಗೆ ಗುರುರಾಯರು, ಗುರುಸಾರ್ವಭೌಮರು, ಕಲಿಯುಗದ ಕಲ್ಪವೃಕ್ಷ–ಕಾಮಧೇನು.ವೆಂಕಟಭಟ್ಟ ಎಂಬುದು ಇವರ ಮೊದಲಿನ ಹೆಸರು; ಕುಂಭಕೋಣದವರು.(ವೆಂಕಟನಾಥ, ವೆಂಕಣ್ಣಭಟ್ಟ – ಎಂದೂ ಹೇಳುವುದುಂಟು.) ಅವರ ತಂದೆಯ ಹೆಸರು ತಿಮ್ಮಣ್ಣಭಟ್ಟ. ತಾಯಿಯ ಹೆಸರು ಗೋಪಿಕಾಂಬ. ತಿಮ್ಮಣ್ಣಭಟ್ಟರ ತಾತನವರಿಗೂ ವಿಜಯನಗರ ಸಂಸ್ಥಾನಕ್ಕೂ ನಂಟಿತ್ತು. ಎಳವೆಯಿಂದಲೇ ಅಪಾರ ವಿದ್ವತ್ತನ್ನು ಸಂಪಾದಿಸಿದವರು ವೆಂಕಟಭಟ್ಟ. ಅವರ ಜ್ಞಾನನಿಷ್ಠೆಯನ್ನೂ ವೈರಾಗ್ಯವನ್ನೂ ಕಂಡು ಗುರುಗಳಾದ ಸುಧೀಂದ್ರತೀರ್ಥರು ಅವರಿಗೆ ‘ರಾಘವೇಂಧ್ರತೀರ್ಥ’ ಎಂಬ ಹೆಸರನ್ನು ನೀಡಿ, ಸನ್ಯಾಸದೀಕ್ಷೆಯನ್ನು ಕೊಟ್ಟರು. ಪ್ರಹ್ಲಾದನ ಮೂರನೇ ಅವತಾರವೇ ರಾಘವೇಂದ್ರಸ್ವಾಮಿಗಳು ಎಂಬ ನಂಬಿಕೆ ಅವರ ಭಕ್ತರದ್ದು. ರಾಘವೇಂದ್ರಸ್ವಾಮಿಗಳು ಹಲವು ಪವಾಡಗಳನ್ನು ನಡೆಸಿದವರು ಎಂದೂ ಪ್ರತೀತಿಯಿದೆ. ಈಗಲೂ ಅವರು ತಮ್ಮ ಭಕ್ತರ ಸಂಕಷ್ಟವನ್ನು ಪವಾಡಸದೃಶವಾಗಿಯೇ ಪರಿಹಾರ ಮಾಡುತ್ತಾರೆ ಎಂದು ನಂಬುವವರ ಸಂಖ್ಯೆಯೂ ಅಪಾರವಾಗಿದೆ. 1671ರ ಶ್ರಾವಣ ಬಹುಳ ತದಿಗೆಯಂದು ಅವರು ಮಂತ್ರಾಲಯದಲ್ಲಿ ಸಶರೀರವಾಗಿ ಬೃಂದಾವನಸ್ಥರಾದರು. ರಾಯರ ಆರಾಧನೆಯನ್ನು ನೂರಾರು ವರ್ಷಗಳಿಂದ ಶ್ರದ್ಧಾ–ಭಕ್ತಿಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಬೃಂದಾವನದಲ್ಲಿಯೇ ಇದ್ದುಕೊಂಡು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿದ್ದಾರೆ ಎಂಬ ನಂಬಿಕೆ ಅವರ ಭಕ್ತರದ್ದು. ರಾಯರ ಹೆಸರಿನಲ್ಲಿ ನೂರಾರು ಬೃಂದಾವನಗಳು ನಾಡಿನೆಲ್ಲೆಡೆ ಇವೆ. ವಿದ್ವಾಂಸರೂ ಆಗಿದ್ದ ರಾಯರು ಹತ್ತಾರು ಕೃತಿಗಳನ್ನು ರಚಿಸಿದ್ದಾರೆ; ದ್ವೈತದರ್ಶನಕ್ಕೆ ಅವರ ಕೊಡಗೆ ಅಪಾರ. ‘ಇಂದು ಎನಗೆ ಗೋವಿಂದ’ ಅವರ ಕೃತಿ ತುಂಬ ಜನಪ್ರಿಯ ಕೀರ್ತನೆಯಾಗಿದೆ

courtsey:prajavani.net

https://www.prajavani.net/artculture/article-features/god-raghavendra-mantralaya-658447.html

Leave a Reply