ಪಯಣ
ತಾಯಿಯ ಮಡಿಲಲಿ
ಬೆಚ್ಚಗೆ ಪವಡಿಸಿದ್ದ
ಮಗುವಿಗೆ ಮಡಿಲು ಚಿಕ್ಕದಾಯ್ತು
ಅಂಬೆಗಾಲಿಕ್ಕುತ ನಡೆವ
ಮಗು ಈಗ ಅಂಗಳಕ್ಕಿಳಿದಾಯ್ತು
ಅಂಗಳವು ಸಾಲದಾಗಿ
ಬೀದಿಗೆ ನಡೆದಾಯ್ತು
ಪುಟ್ಟ ಪಾದಗಳು
ದೊಡ್ಡದಾಗಿ ಮಗು
ಶಾಲೆಗೆ ನಡೆದಾಯ್ತು
ವರ್ಗದಿಂದ ವರ್ಗಕ್ಕೆ
ತೇರ್ಗಡೆಯಾಗುತ್ತಾ
ಕಾಲೇಜು ಕಲಿಕೆ ಮುಗಿದಾಯ್ತು
ಅಣ್ಣನ ಜೊತೆಯ ಕದನ
ತಮ್ಮ ತಂಗಿಯರೊಂದಿಗಿನ
ಜಗ್ಗಾಟ, ಕಳ್ಳಾಟಗಳು ಕೊನೆಯಾಗಿ
ಮಗು ಈಗ ಬೆಳೆದು ನಿಂತ ವಧುವಾಗಿ
ಕಣ್ಗಳಲಿ ಕನಸಿನ ಗೋಪುರ
ಮನದಲಿ ಆಸೆಗಳ ಮಹಾಪೂರ
ಚೆಂದದ ವರನಿಗೆ ಈಕೆ ವಧುವಾಗಿ
ನಡೆದಳು ಆತನ ಮನೆಯೆಡೆಗೆ
ಬೆರಗಾಗಿ ಆಕೆಯೆಡೆಗೆ
ತಾಯ ಕಣ್ಣಲಿ ನೀರಿನ ಹರಿವು
ತಂದೆಯ ಗಂಟಲುಬ್ಬಿ ಮಾತು ಬರವು
ತಬ್ಬಿದ ಮಗಳ ತಲೆಯ ನೇವರಿಸಿ
ಹರಿಸಿ ಕಳಿಸುವಾಗ ನೆರೆದ ನೆಂಟರ
ಕಣ್ಣುಗಳೆಲ್ಲ ಹಸಿಯಾಗಿ
ನೂರೆಂಟು ಹಾರೈಕೆಗಳು
ಮೇಳೈಸಿ ನಲ್ಮೆಯ
ಅಕ್ಕರೆಯ ಬೀಳ್ಕೊಡುಗೆ
ಕಣ್ಣ ನೀರ ಸರಿಸುವ ಮೊದಲೇ
ಪತಿರಾಯ ಕೈ ನೀಡಿ
ಬಳಿ ಕರೆದೊಯ್ದು ಮುದ್ದಿನ
ಮಡದಿಯ ಪ್ರೇಮದಿ
ಕರೆದೊಯ್ದು ತನ್ನರ ಮನೆಗೆ
ಒಲವಿನ ಸ್ನೇಹದಲಿ ಬೆರೆತು
ಒಂದಾದಳು ಆ ಮನೆಯ ಸೊಸೆಯಾಗಿ
ಕೀರುತಿಯ ತಂದಿಹಳು
ಈ ಮನೆಯ ಮಗಳಾಗಿ