ಬೆಂಗಳೂರು: ಹನ್ನೆರಡು ವರ್ಷಗಳ ಹಿಂದಿನ ಆ ದಿನ ಇನ್ನೂ ಚೆನ್ನಾಗಿ ನೆನಪಿದೆ. ಏಪ್ರಿಲ್ ನಾಲ್ಕರ ಸುಡುಬಿಸಿಲಿನ ಮಧ್ಯಾಹ್ನ ಮೂರುವರೆ ಆಗಿತ್ತು. ಪಾಟೀಲ ಪುಟ್ಟಪ್ಪನವರ ಕೈಬರಹದ ನಿಖರತೆಯು ಹತ್ತಿರದಿಂದ ದರ್ಶನವಾದ ದಿನ ಅದು. ವಿಶ್ವೇಶ್ವರನಗರದಲ್ಲಿರುವ ಪಾಟೀಲ ಪುಟ್ಟಪ್ಪನವರ ಮನೆಯ ಗೇಟ್ ತೆಗೆದು ಒಳಗೆ ಅಡ್ಡಿಯಿಟ್ಟಾಗ, ಎದುರಾದ ವ್ಯಕ್ತಿಯೊಬ್ಬರಿಗೆ ನನ್ನ ಪರಿಚಯ ಮಾಡಿಕೊಂಡೆ. ಅವರು ನನ್ನನ್ನು ಒಳಗೆ ಕರೆದುಕೊಂಡು ಹೋದರು. ಸೋಫಾದಲ್ಲಿ ಕುಳಿತಿದ್ದ ಪಾಟೀಲ ಪುಟ್ಟಪ್ಪನವರು ‘ಪ್ರಜಾವಾಣಿಯವರೇನೂ ಬಾ. ಕುಂದ್ರು. ಹತ್ ನಿಮಿಷ್ ಇರು ಬರ್ತೇನಿ’ ಎನ್ನುತ್ತ ನಿಧಾನಕ್ಕೆ ತಮ್ಮ ಕೋಣೆಯೊಳಗೆ ಹೋದರು. ಹೋಗುವ ಮುಂಚೆ ಅಲ್ಲಿಯೇ ಟಿಪಾಯ್ ಮೇಲಿದ್ದ ಯಾವುದೋ ಹಳೆಯ ಅಂಗೈಯಗಲದ ಆಮಂತ್ರಣ ಪತ್ರಿಕೆಯನ್ನು ಎತ್ತಿಕೊಂಡು ನಿಧಾನವಾಗಿ ಹೆಜ್ಜೆ ಹಾಕಿದ್ದರು. ಅಲ್ಲಿಯೇ ಇದ್ದ ಪತ್ರಿಕೆಯನ್ನು ಕೈಗೆತ್ತಿಕೊಂಡು ಓದುತ್ತ ಕುಳಿತೆ. ಹತ್ತು–ಹನ್ನೆರಡು ನಿಮಿಷಗಳ ನಂತರ ಪಾಪು ಹೊರಗೆ ಬಂದರು. ಕೈಯಲ್ಲಿದ್ದ ಕಾರ್ಡ್ ನನಗೆ ಕೊಟ್ಟರು. ಕಾರ್ಡ್ ಹಿಂಭಾಗದಲ್ಲಿ ಖಾಲಿ ಇದ್ದ ಬಿಳಿ ಭಾಗದಲ್ಲಿ ಗುಂಡಗಿನ ಅಕ್ಷರಗಳಲ್ಲಿ ಬಾಬು ಜಗಜೀವನರಾಂ ಜನ್ಮ ಶತಮಾನೋತ್ಸವದ ನೆನಪಿನ ಲೇಖನ ಇತ್ತು.‘ತೊಗೋ ನಿಮ್ಮ ಬ್ಯುರೋ ಮುಖ್ಯಸ್ಥರಿಗೆ ಕೊಡು’ ಎಂದು ಕಾರ್ಡ್ ಅನ್ನು ಕವರ್‌ನಲ್ಲಿ ಹಾಕಿಕೊಟ್ಟರು. ಕಚೇರಿಗೆ ಬಂದಾಗ ಆ ಲೇಖನವನ್ನು ಕೀ ಮಾಡಿ (ಕಂಪ್ಯೂಟರ್‌ನಲ್ಲಿ ಟೈಪಿಂಗ್) ಮಾಡಿ ಬೆಂಗಳೂರಿಗೆ ಕಳಿಸು ಎಂದು ಎಂದ ಮುಖ್ಯಸ್ಥರ ಸೂಚನೆಗೆ ಕೇಳಿ ಖುಷಿಯಾಗಿತ್ತು. ಆ ಕಾರ್ಡ್ ಮುಂದಿಟ್ಟುಕೊಂಡು ಕೀ ಮಾಡುತ್ತಾ ಹೋದೆ. ಬಾಬುಜೀಯವರ ಜೀವನ, ಅವರ ರಾಜಕೀಯ ಹೋರಾಟಗಳು, ಎದುರಿಸಿದ ಸವಾಲುಗಳನ್ನು ಆ ಲೇಖನದಲ್ಲಿ ಪಾಪು ಮನಮುಟ್ಟುವಂತೆ ಬರೆದಿದ್ದರು. ಕೊನೆಯ ಪದವನ್ನು ಕೀ ಮಾಡಿ, ಫೈಲ್ ಸೇವ್ ಮಾಡಿ ವರ್ಡ್‌ಕೌಂಟ್ (ಪದ ಲೆಕ್ಕಾಚಾರ) ನೋಡಿದಾಗ ಬರೋಬ್ಬರಿ 600 ಪದಗಳು. ಆಗ ಸಂಪಾದಕೀಯ ಅಂಕಣಕ್ಕೆ ಈ ಪದಮಿತಿಯೇ ಇತ್ತು. ಅಚ್ಚರಿಯೆಂದರೆ, ಕುಳಿತ ಪಟ್ಟಿನಲ್ಲಿ ಕೈಬರಹದಲ್ಲಿ ವ್ಯಾಕರಣ, ಪದಗಳ ಒಂದೂ ತಪ್ಪು ಇರದಂತೆ ಬರೆದಿದ್ದ ಅವರ ವಿದ್ವತ್ತು. ಇಡೀ ಲೇಖನದಲ್ಲಿ ಎಲ್ಲೂ ಒಂದೂ ಚಿತ್, ಕಾಟ್ ಇರಲಿಲ್ಲ. ಇವತ್ತು ನಾವು ಕಂಪ್ಯೂಟರ್‌ನಲ್ಲಿ ಪದಗಳಲೆಕ್ಕಾಚಾರಕ್ಕೆ ಅಟೋಮೇಟಿಕ್ ವ್ಯವಸ್ಥೆಯನ್ನು ಅವಲಂಬಿಸಿದ್ದೇವೆ. ಆದರೆ ಅವರಿಗೆ ಕೈಬರಹದಲ್ಲಿಯೂ ಅಂತಹ ಅಗಾಧ ನೈಪುಣ್ಯತೆ ಇತ್ತು. ತಮ್ಮ ಮನೆಯಲ್ಲಿ ಬೀಸಾಕಿದ್ದ ‘ವೇಸ್ಟ್ ಪೇಪರ್’ಗಳ ಖಾಲಿ ಜಾಗದಲ್ಲಿ ಪಾಪು ಅವರು ತಮ್ಮ ಪ್ರಪಂಚ ಸೇರಿದಂತೆ ಬೇರೆ ಬೇರೆ ಪತ್ರಿಕೆಗಳಿಗೆ ಬರೆದುಕೊಟ್ಟ ಲೇಖನಗಳು ಓದುಗರ ಮನ ಮತ್ತು ಕಡತಗಳಲ್ಲಿ ಶಾಶ್ವತವಾಗಿ ಛಾಪು ಮೂಡಿಸಿರುವುದು ಸುಳ್ಳಲ್ಲ. ಈ ಘಟನೆಗೂ ಮೊದಲು ಪಾಪು ಅವರನ್ನು ಬಹಳಷ್ಟು ಸಲ ಭೇಟಿಯಾಗಿದ್ದೆ. ವಿದ್ಯಾರ್ಥಿ ದೆಸೆಯಿಂದಲೂ ಅವರ ಲೇಖನಗಳನ್ನು ಓದಿದ್ದೆ. ಅವರ ಭಾಷಣಗಳಿಗೆ ಕಿವಿಯಾಗಿದ್ದೆ. ಆದರೆ ನನ್ನ ಎದುರಿಗೆ ತಮ್ಮ ಕೈಗೆ ಸಿಕ್ಕ ಕಾರ್ಡ್‌ನ ಹಿಂಭಾಗದಲ್ಲಿ ಅವರು ಬರೆದುಕೊಟ್ಟಿದ್ದನ್ನು ನೋಡಿದ್ದು ಅದೇ ಮೊದಲು. ಆಗ 86 ವರ್ಷದ ಪಾಪು ಅವರ ಬರೆವಣಿಗೆಯ ಉತ್ಸಾಹ ಮತ್ತು ಜೀವನಪ್ರೀತಿ ಕಂಡು ಬೆರಗಾಗಿದ್ದೆ. ಯಾವುದೇ ಹೊತ್ತಿನಲ್ಲೂ ಕನ್ನಡ, ಕರ್ನಾಟಕಕ್ಕೆ ಸಂಬಂಧಿಸಿದ ಚರ್ಚೆಗಳಿಗೆ ಸಿದ್ಧವಾಗಿರುತ್ತಿದ್ದ ಅವರ ನೆನಪಿನ ಶಕ್ತಿ ಅದ್ಭುತವಾದದ್ದು. ಅವರೊಂದಿಗೆ ಮಾತಿಗೆ ಕುಳಿತವರು ಯಾವುದೋ ಘಟನೆಯ ತಾರೀಕು, ಊರಿನ ಹೆಸರು ವ್ಯಕ್ತಿಗಳ ಹೆಸರು ತಪ್ಪಾಗಿ ಹೇಳಿದರೆ ತಟ್ಟಂಥ ತಿದ್ದುತ್ತಿದ್ದರು. ‘ಗೂಗಲ್ ಸರ್ಚ್’ ಎಂಜಿನ್ ರೀತಿಯಲ್ಲಿ ಅವರ ಸ್ಮರಣ ಶಕ್ತಿ ಇತ್ತು ಎಂದರೆ ಅತಿಶಯೋಕ್ತಿಯೇನಲ್ಲ.
author- ಗಿರೀಶ ದೊಡ್ಡಮನಿ
courtsey:prajavani.net
https://www.prajavani.net/artculture/article-features/patil-puttappa-hand-writing-limits-712939.html