ಪಂಪನ ಕಾವ್ಯದಲ್ಲಿ ಭಗವದ್ಗೀತೆ ಭಾಗ-೩
ಪಂಪನ ಈ ಪದ್ಯವನ್ನು ಮತ್ತೊಮ್ಮೆ ವಿಶ್ಲೇಷಿಸಿದರೆ,
ಅದಿರದೆ ಇದಿರ್ಚಿ ತಳ್ತಿಱಿಯಲ್ ಈ ಮಲೆತು ಒಡ್ಡಿದ ಚಾತುರಂಗಮೆಂಬುದು ನಿನಗೆ ಒಡ್ಡಿ ನಿಂದುದು
ಇದನ್ ಓವದೆ ಕೊಲ್ವೊಡೆ ನೀನುಂ ಎನ್ನ ಕಜ್ಜದೊಳ್ ಎಸಗು
ಈ ಪದ್ಯದಲ್ಲಿ ಇದಿಷ್ಟೇ ಸಾರವತ್ತಾದ ಭಾಗ. ಉಳಿದದ್ದು ‘ಸೈತ ಅಜಿತನ್ ಆದಿಯ ವೇದರಹಸ್ಯದೊಳ್ ನಿರಂತದ (ಪರಿರ‍್ಯೆಯಿಂ) ನೆಱೆಯೆ ಯೋಜಿಸಿದಂ ಕದನ ತ್ರಿಣೇತ್ರನಂ.’
ಭಗವದ್ಗೀತೆಯನ್ನು ಗಮನವಿರಿಸಿ ಓದಿದವರಿಗೆ ಮತ್ತು ಆ ಬೆಳಕಿನಲ್ಲಿ ಪಂಪನ ಈ ಪದ್ಯವನ್ನು ಕಣ್ಣಿಟ್ಟು ಪರಿಶೀಲಿಸಿದವರಿಗೆ, ಈ ಪದ್ಯದ ಒಂದೊಂದು ಮಾತಿನಲ್ಲೂ ಗೀತೆಯ ಸಾರ ಘನೀಭವಿಸಿರುವುದು ಕಂಡುಬರುತ್ತದೆ. ಯುದ್ಧ ಮಾಡಲೇಬೇಕಾದದ್ದು ಸ್ವಧರ್ಮವಾಗಿರುವ ಕ್ಷತ್ರಿಯ ವೀರನಾದ ಅರ್ಜುನನಿಗೆ ವಿಷಮ ಸಮಯದಲ್ಲಿ ವ್ಯಾಮೋಹ ಆವರಿಸಿ, ವಿಲಕ್ಷಣವಾದ ವೈರಾಗ್ಯ ಕವಿದು, ಆತ ತನ್ನ ಕರ್ತವ್ಯದಿಂದ ವಿಮುಖನಾಗಿರುವ ಹೊತ್ತಿನಲ್ಲಿ, ಆತನಿಗೆ ತನ್ನ ಕರ್ತವ್ಯದ ಅರಿವನ್ನು ಮಾಡಿಕೊಟ್ಟದ್ದು ಗೀತೋಪದೇಶದ ನೆಲೆಗಟ್ಟೇ ಈ ವಿಷಯವನ್ನೆ ಪಂಪನ ಕೃಷ್ಣನು ಇಲ್ಲಿ ಹೇಳಿದ್ದಾನೆ: “ಅದಿರದೆ ಇದಿರ್ಚಿ ತಳ್ತು ಇಱಿಯಲ್ ಈ ಮಲೆತು ಒಡ್ಡಿದ ಚಾತುರಂಗಮೆಂಬುದು ನಿನಗೆ ಒಡ್ಡಿ ನಿಂದುದು” ಎಂಬ ಈ ಮಾತಿನಲ್ಲಿ. ಹೆದರದೆ ನಿನ್ನೊಂದಿಗೆ ಹೋರಾಡಲೆಂದು ವಿಜೃಂಭಿಸಿ ನಿಂತ ಚತುರಂಗ ಬಲ ಎನ್ನುವುದು ನಿನಗೆ ಒಡ್ಡಿ ನಿಂದದ್ದು ಎನ್ನುವ ಈ ವಾಕ್ಯದಲ್ಲಿ ‘ನಿನಗೊಡ್ಡಿ ನಿಂದುದು’ ಎನ್ನುವ ಮಾತಿನ ಅರ್ಥ ಕೇವಲ ‘ನಿನಗೆ ಎದುರಾಗಿ ನಿಂತಿದೆ’ ಎಂದು ಮಾತ್ರ ಅಲ್ಲ; ಈ ಸೈನ್ಯ ನಿನ್ನ ವ್ಯಕ್ತಿತ್ವಕ್ಕೆ ಆಹ್ವಾನವಾಗಿ, ನಿನ್ನ ವಿಕ್ರಮದ ಒರೆಗಲ್ಲಾಗಿ ನಿಂತಿದೆ ಎಂದು ಅರ್ಥ. ಮಹಾಭಾರತದ ಕಥೆಯ ಹಿನ್ನೆಲೆಯಲ್ಲಿ ಅರ್ಜುನನ ಲೋಕೈಕವೀರತೆ ಅದ್ವಿತೀಯವಾಗಿ ಪ್ರಕಟವಾದದ್ದು ಕುರುಕ್ಷೇತ್ರದ ರಣರಂಗದಿಂದಲೇ. ಆದಕಾರಣ ತನಗೆ ಒಡ್ಡಿನಿಂತ ಈ ಕರ್ತವ್ಯದಿಂದ ಅರ್ಜುನ ಯಾವ ಕಾರಣದಿಂದಲೂ ವಿಮುಖನಾಗುವ ಹಾಗಿಲ್ಲ. ಕ್ಷತ್ರಿಯನಾದ ಅರ್ಜುನನಿಗೆ ತನಗೆ ಒಡ್ಡಿ ನಿಂದ ಈ ಪರಬಲವನ್ನು ಎದುರಿಸುವುದೇ ಸ್ವಧರ್ಮವಲ್ಲದೆ ಬೇರೆಯ ದಾರಿಯಿಲ್ಲ” ಎನ್ನುವ ಕರ್ತವ್ಯ ನಿರ್ದೇಶನದ ಅಧಿಕಾರವಾಣಿ ಧ್ವನಿತವಾಗುತ್ತದೆ, ‘ಅದಿರದೆ ಇದಿರ್ಚಿ ತಳ್ತು ಇಱಿಯಲ್ ಈ ಮಲೆತು ಒಡ್ಡಿದ ಚಾತುರಂಗ ಬಲಮೆಂಬುದು ನಿನಗೊಡ್ಡಿ ನಿಂದುದು’ ಈ ಎನ್ನುವ ಮಾತಿನಲ್ಲಿ.
ಮುಂದಿನ ಮಾತು, ಪಂಪನ ಇದೇ ಪದ್ಯದಲ್ಲಿ : ‘ಇದನ್ ಓವದೆ ಕೊಲ್ವೊಡೆ ನೀನುಂ ಎನ್ನ ಕಜ್ಜದೊಳ್ ಎಸಗು’ ಕರ್ತವ್ಯ ನಿರ್ದೇಶನವಾಯಿತು, ಇನ್ನು ಕರ್ತವ್ಯ ಕರ್ಮದ ಕೌಶಲ್ಯವನ್ನು ಕುರಿತ ಮಾತು ಇದು. ಭಗವದ್ಗೀತೆಯಲ್ಲಿ ಅತ್ಯಂತ ಸಾರವತ್ತಾದ ಕರ್ಮಣ್ಯೇ ವಾಧಿಕಾರಸ್ಥೇ ಮಾಫಲೇಷು ಕದಾಚನ’ ಎಂಬ ಮಾತು ಇದು.
ಸ್ವಧರ್ಮವನ್ನು ಕ್ಷಣಕಾಲ ಮರೆತ ಅರ್ಜುನನಿಗೆ ತನ್ನ ಸ್ವಧರ್ಮ ಏನೆಂಬುದರ ಅರಿವನ್ನು ತಂದುಕೊಟ್ಟುದಾಯಿತು. ಅಕರ್ಮ ಆತನ ಗುರಿ ಅಲ್ಲ, ಕರ್ಮದಲ್ಲಿ ಎಂದರೆ ಯುದ್ಧಕರ್ಮದಲ್ಲಿ ತೊಡಗಬೇಕಾದದ್ದು ಯೋಧನಾದ ಆತನಿಗೆ ಅನಿವಾರ್ಯ ಎನ್ನುವ ಮಾತನ್ನು ಕೃಷ್ಣನು ಹೇಳಿದ್ದಾಯಿತು. ಆದರೆ ಆತನ ಕರ್ತವ್ಯದ ಬುಡದಲ್ಲಿ ಮನೆ ಮಾಡಿರುವ ಸ್ವಜನ ವ್ಯಾಮೋಹವನ್ನು ಕಳೆದಲ್ಲದೆ ಅವನ ಕರ್ತವ್ಯ ವಿಮುಖವಾದ ಮನಸ್ಸಿನಲ್ಲಿ ತೊಳಲಾಟ ತಪ್ಪದು. ಭಗವದ್ಗೀತೆಯಲ್ಲಿ ಪ್ರತಿಪಾದಿತವಾಗಿರುವ ಮತ್ತೊಂದು ಪ್ರಧಾನವಾದ ಅಂಶವೇ ಇದು. ಕರ್ಮದಲ್ಲಿ ತೊಡಗಿಯೂ ಅಕರ್ಮಿಯಾಗ ಬೇಕಾದರೆ ವ್ಯಕ್ತಿಗೆ ನಾನು, ನನ್ನದು, ನನ್ನವರು ಎನ್ನುವ ಮೋಹ ತೊಲಗಿ ‘ಅಸಂಗತ್ವ’ ಪ್ರಾಪ್ತವಾಗಬೇಕು. ಇದರೊಂದಿಗೇ, ಅರ್ಜುನನಿಗೆ ಎದುರಿಗೆ ಒಡ್ಡಿ ನಿಂತವರು ತನ್ನವರು ಎನ್ನುವ ಮಮಕಾರದಿಂದ ಬಿಡುಗಡೆ ಮಾತ್ರವಲ್ಲದೆ, ಈ ಯುದ್ಧ ಕರ್ಮದಲ್ಲಿ ಕೊಲ್ಲುವವನೂ ನಾನೇ ಎಂಬ ಅಹಂಕಾರದಿಂದಲೂ ಬಿಡುಗಡೆ ದೊರೆಯಬೇಕು. ಹಾಗಾದಾಗ ಕರ್ಮದಲ್ಲಿ ತೊಡಗಿದ ವ್ಯಕ್ತಿತ್ವಕ್ಕೆ ನೆಲೆ ಎಲ್ಲಿ? ನೆಲೆ ಇಲ್ಲಿ: ಕೊಲ್ಲುವವನು ನಾನಲ್ಲ; ಕೊಲ್ಲುವಂತೆ ತೋರುವ, ಯುದ್ಧಕರ್ಮ ಪ್ರವೃತ್ತವಾದಂತೆ ತೋರುವ, ‘ನಾನು’ ಎನ್ನುವುದು ಬೇರೊಂದು ದಿವ್ಯಶಕ್ತಿಯ ಉಪಕರಣ ಅಥವಾ ನಿಮಿತ್ತ ಮಾತ್ರ ಎನ್ನುವ ಅರಿವಿನಲ್ಲಿ. ಹಾಗೆ ಭಾವಿಸಿದಾಗ ವ್ಯಕ್ತಿಗೆ ಕರ್ಮಫಲರೂಪವಾದ, ಲಾಭ-ನಷ್ಟ, ಪಾಪ-ಪುಣ್ಯ ಇತ್ಯಾದಿ ಭಾವನೆಗಳ ಸೋಂಕು ಇರುವುದಿಲ್ಲ. ಇದೇ ಭಗವದ್ಗೀತೆಯ ಪ್ರಕಾರ ನಿಷ್ಕಾಮಕರ್ಮ, ಅಥವಾ ಕರ್ಮದಲ್ಲಿ ತೊಡಗಿಯೂ ಅಕರ್ಮದಲ್ಲಿ ನಿಲ್ಲುವ ಕೌಶಲ. ಆದ್ದರಿಂದಲೇ ಪಾರ್ಥನಿಗೆ ಶ್ರೀಕೃಷ್ಣ ಹೇಳುತ್ತಾನೆ: ‘ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್’ ಎಂದು!
ಭಗವದ್ಗೀತೆಯ ಈ ತತ್ವವೆಲ್ಲವೂ ಸಾರವತ್ತಾಗಿ ಬಂದಿದೆ ಪಂಪನ ‘ಇದನ್ ಓವದೆ ಕೊಲ್ವೊಡೆ ನೀನುಂ ಎನ್ನ ಕಜ್ಜದೊಳ್ ಎಸಗು’- ಎಂಬ ಒಂದು ಮಾತಿನಲ್ಲಿ. ಇಲ್ಲಿ ಪ್ರತಿಯೊಂದು ಮಾತೂ ಸಾರ್ಥಕವಾಗಿದೆ. ‘ಇದನ್’ ಎಂದರೆ, ನಿನಗೆ ಒಡ್ಡಿದ ಈ ಚಾತುರಂಗಬಲವನ್ನು, ‘ಓವದೆ ಕೊಲ್ವೊಡೆ’ ಎಂದರೆ ಇವರು ನನ್ನವರು ತನ್ನವರು ಎನ್ನುವ ಸ್ವಜನಾಸಕ್ತಿಯನ್ನು ತಾಳಿಕೊಳ್ಳದೆ ಕೊಲ್ಲುವುದಾದರೆ ‘ನೀನುಂ ಎನ್ನ ಕಜ್ಜದೊಳ್ ಎಸಗು’ ಎಂದರೆ ‘ನೀನೂ ನನ್ನ ಕಾರ್ಯದಲ್ಲಿ- ಇದು ನಿನ್ನ ಕೆಲಸ ಎಂದು ಅಲ್ಲ, ನನ್ನ, ಸೃಷ್ಟಿ ಸ್ಥಿತಿ ಲಯಕರ್ತನಾದ ನನ್ನ ಕಾರ್ಯ ಎಂದು ತಿಳಿದು’ ವ್ಯವಹರಿಸು ಎನ್ನುತ್ತಾನೆ ಪಂಪನ ಕೃಷ್ಣ. ‘ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್’- ಎನ್ನುವ ಮಾತು ಅದರ ಹಿನ್ನೆಲೆಯ ಸಮೇತ ‘ನೀನುಂ ಎನ್ನ ಕಜ್ಜದೊಳ್ ಎಸಗು’ ಎಂಬ ಒಂದು ಮಾತಿನಲ್ಲಿ ಅಡಕವಾಗಿದೆ.
ಮುಂದುವರೆಯುತ್ತದೆ.