ನಾವು ಸಣ್ಣವರಿದಾಗ ಕಲಿತ ಅಭ್ಯಾಸಗಳು ಅಷ್ಟು ಸುಲಭವಾಗಿ ಬಿಡುವುದಕ್ಕೆ ಆಗದು. ಅಷ್ಟಿಲ್ಲದೆ ತಿಳಿದವರು ‘ಹುಟ್ಟು ಗುಣ ಸುಟ್ಟರೂ ಹೋಗಲ್ಲ’ ಎಂದು ಹೇಳುತ್ತಿರಲಿಲ್ಲ. ಹಾಗಾಗಿ ಮಕ್ಕಳಿಗೆ ಒಳ್ಳೆಯ ಅಭ್ಯಾಸ ಕಲಿಸುವುದು ತುಂಬಾ ಮುಖ್ಯ. ಹಾಗಂತ ಹೇಳುವಾಗ ಇನ್ನೊಂದು ಗಾದೆ ನೆನಪಿಗೆ ಬರುತ್ತಿದೆ. ‘ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೆ?’. ಕೆಲವೊಂದು ಅಭ್ಯಾಸ, ವಿದ್ಯೆಗಳು, ದೊಡ್ಡವರಾದ ಮೇಲೆ ಕಲಿಯುವುದು ಕಷ್ಟ.
ನನ್ನ ಅನುಭವದಲ್ಲಿ ಹೇಳುವುದಾದರೆ, ನಾನು ಸಣ್ಣವಳಿದ್ದಾಗಿನಿಂದ ತುಂಬಾ ಆಟಗಳಲ್ಲಿ ಭಾಗವಹಿಸುತ್ತಿದ್ದೆ. ಆದರೆ ಈಜುವುದ ಮಾತ್ರ ಕಲಿಯಲಿಲ್ಲ. ಈಗ ಸುಮಾರು ಐದು ವರ್ಷಗಳಿಂದ ಎಷ್ಟು ಪ್ರಯತ್ನ ಪಟ್ಟರೂ ಸರಿಯಾಗಿ ಈಜು ಕಲಿಯುವುದಕ್ಕೆ ಆಗಿಲ್ಲ. ಯಾಕೆ ಈ ಅಭ್ಯಾಸಗಳ ಬಗ್ಗೆ ಹೇಳುವುದಕ್ಕೆ ಹೊರಟೆ ಎಂದರೆ, ನಾನು ಚಿಕ್ಕವಳಿದ್ದಾಗ ನನ್ನ ಅಮ್ಮ ಪದಬಂಧ ಮಾಡುವ ಅಭ್ಯಾಸ ಮಾಡಿಸಿದ್ದರು. ದಿನಾ, ಬೆಳಗ್ಗೆ ಪದಬಂಧ ಮಾಡಿಲ್ಲ ಅಂದ್ರೆ ನನಗೆ ಒಂದು ರೀತಿಯ ಹಿಂಸೆ ಆಗುತ್ತಿರುತ್ತೆ. ನಮ್ಮ ಆಡು ಭಾಷೆಯಲ್ಲಿ ಹೇಳುವುದಾದರೆ ಕೈ ಗುರುಗುಡುತ್ತೆ!
ಪದಬಂಧ ಮಾಡುವುದು ಒಂದು ಒಳ್ಳೆ ಹವ್ಯಾಸ. ಯಾಕಪ್ಪ ಅಂದರೆ ಪದಬಂಧ ಮಾಡುವುದಕ್ಕೆ ಸಮಸ್ಯೆ ಬಿಡಿಸುವ ಕೌಶಲ್ಯವಿರಬೇಕು. ಸಮಸ್ಯೆ ಬಿಡಿಸುವುದನ್ನು ವರ್ಲ್ಡ್ ಹೆಲ್ತ್ ಆರ್ಗನೈಜೇಶನ್ ಒಂದು ಜೀವನ ಕೌಶಲ್ಯವೆಂದು ಗುರುತಿಸಿದೆ. ವರ್ಲ್ಡ್ ಹೆಲ್ತ್ ಆರ್ಗನೈಜೇಶನ್ ಅವರು ಇನ್ನು ಹತ್ತು ಜೀವನ ಕೌಶಲ್ಯಗಳನ್ನು ಗುರುತಿಸಿದ್ದಾರೆ. ಪ್ರತಿಯೊಬ್ಬ ಮನುಷ್ಯನು ಮಾನಸಿಕವಾಗಿ ಆರೋಗ್ಯವಾಗಿ, ನೆಮ್ಮದಿಯಾಗಿ ಇರಲು ಈ ಕೌಶಲ್ಯಗಳು ನೆರವಾಗುತ್ತವೆ.
ನೀವು ಪದಬಂಧ ಮಾಡಿದ್ದರೆ ನಿಮಗೆ ಈ ಅನುಭವಗಳು ಆಗಿರಬಹುದು. ಪದಬಂಧ ಮಾಡಲು ಕೆಲವು ಸೂಚನೆಗಳಿರುತ್ತವೆ.
‘ಎಡದಿಂದ ಬಲಕ್ಕೆ’ ಹಾಗು ‘ಮೇಲಿನಿಂದ ಕೆಳಕ್ಕೆ’ ಎಷ್ಟು ಅಕ್ಷರ ಹಾಗು ಯಾವ ಪದ ಎನ್ನುವುದಕ್ಕೆ ಸುಳಿವು ಕೊಟ್ಟಿರುತ್ತಾರೆ. ಪದಗಳು ಇಂತದ್ದೆ ಅನುಕ್ರಮದಲ್ಲಿ ಬಿಡಿಸಬೇಕು ಎನ್ನುವ ನಿಯಮವೇನೂ ಇಲ್ಲ. ಯಾವ ಪದ ಬೇಕಾದರೂ ಮೊದಲು ಬಿಡಿಸಬಹುದು.
ಸಾಮಾನ್ಯವಾಗಿ, ಜನ ಎಡದಿಂದ ಬಲಕ್ಕೆ ಕೊಟ್ಟಿರುವ ಒಂದೊಂದು ಪದಗಳ ಸೂಚನೆಯನ್ನು ಓದುತ್ತಾ ಹೊಗುತ್ತಾರೆ. ಯಾವುದಾದರು ಪದ ಹೊಳೆದರೆ, ಅದನ್ನು ಪದಬಂಧದ ಚೌಕಗಳಲ್ಲಿ ಬರೆಯುತ್ತಾರೆ. ಉತ್ತರ ಸಿಕ್ಕಿದ ಅಕ್ಕ ಪಕ್ಕ, ಮೇಲೆ ಕೆಳಗೆ ಬರುವ ಪದಗಳ ಸೂಚನೆಯನ್ನು ಓದಿ, ಆ ಪದ ಹೊಳೆಯುತ್ತದೆಯೇ ಪ್ರಯತ್ನಿಸುತ್ತಾರೆ. ಅದು ಹೊಳೆದರೆ, ಮತ್ತೆ ಅದರ ಅಕ್ಕ ಪಕ್ಕ , ಮೇಲೆ ಕೆಳಗೆ, ಹೀಗೆ ಸಮಸ್ಯೆ ಬಿಡಿಸುವ ಪ್ರಕ್ರಿಯೆ ಮುಂದುವರೆಯುತ್ತದೆ.
ಮೇಲ್ನೋಟಕ್ಕೆ ಇದು ನಮಗೆ ತಿಳಿದಿರುವ ಶಬ್ದ ಬಂಢಾರದ ಪರೀಕ್ಷೆಯೇನಿಸಿದರೂ, ಇದು ಸಮಸ್ಯೆ ಬಿಡಿಸುವ ಕೌಶಲ್ಯವನ್ನು ಪರೀಕ್ಷಿಸುತ್ತದೆ. ಜೀವನದಲ್ಲಿ ದಿನನಿತ್ಯ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇರುತ್ತದೆ. ಹಾಗಾಗಿ ಪ್ರತಿಯೊಬ್ಬ ಮನುಷ್ಯನಿಗೆ ಸಮಸ್ಯೆ ಬಿಡಿಸುವ ಕೌಶಲ್ಯವಿದ್ದಾರೆ ಜೀವನ ಸರಾಗ. ಸಮಸ್ಯೆ ಒಂದು ರೀತಿ ಗಂಟುಗಳ ಹಾಕಿಕೊಂಡ ಸರವಿದ್ದ ಹಾಗೆ. ಎಲ್ಲೋ ಒಂದು ಕಡೆ ಸರದ ಒಂದು ಗಂಟನ್ನು ಮೊದಲು ಬಿಡಿಸಬೇಕು.ನಂತರ ಮತ್ತೊಂದು, ಇನ್ನೊಂದು. ಒಂದೊಂದಾಗಿ ಎಲ್ಲ ಗಂಟುಗಳನ್ನೂ ಬಿಡಿಸಿದರೆ, ಸರದ ಸಮಸ್ಯೆ ಬಗೆ ಹರಿಯುತ್ತದೆ. ಹಾಗೆ ಈ ಪದಬಂಧ. ನಾನು ಮೂರನೇ ಪದ ಮೊದಲು ಬಿಡಿಸಿದರೆ, ನೀವು ಅದನ್ನು ಕೊನೆಗೆ ಬಿಡಿಸಬಹುದು. ಒಬ್ಬಬ್ಬರದ್ದು ಒಂದೊಂದು ಅನುಕ್ರಮವಿರಬಹುದು. ಗುರಿ ಮಾತ್ರ ಪೂರ್ತಿ ಪದಬಂಧ ಮಾಡುವುದು. ಒಟ್ಟು, ಪದಬಂಧ ಮಾಡುವುದರಿಂದ ನಾವು ಸಮಸ್ಯೆ ಬಿಡಿಸುವ ಕೌಶಲ್ಯವನ್ನು ಕಲಿಯುತ್ತೇವೆ. ಈ ಕೌಶಲ್ಯ ಪರೋಕ್ಷವಾಗಿ ನಮ್ಮ ಜೀವನದಲ್ಲಿ ದಿನ ನಿತ್ಯ ಸಹಾಯವಾಗುತ್ತದೆ.
ಎಲ್ಲ ಪದಗಳೂ ನನಗೊಬ್ಬಳಿಗೆ ಹೊಳೆಯುತ್ತದೆ ಎಂದು ಹೆಳಲಾಗದು. ನನಗೆ ಹೊಳೆಯದಿದ್ದಾಗ ನಾನು ನಮ್ಮ ಮನೆಯಲ್ಲಿ ಅಮ್ಮ ಅಪ್ಪನನ್ನೂ, ಅಣ್ಣನನ್ನೋ ಮತ್ಯಾರನ್ನೋ ಕೇಳುವೆ. ಅದರಿಂದ ನನ್ನ ಪದಬಂಧ ವೇಗವಾಗಿ ಸಾಗುತ್ತದೆ ಮತ್ತು ಸಂಪೂರ್ಣಗೊಳಿಸಲು ಸಹಾಯವಾಗುತ್ತದೆ. ಇದು ನಮಗೆ ಒಗ್ಗಟ್ಟಿನಲ್ಲಿ ಹೆಚ್ಚು ಬಲ ಎಂಬುದನ್ನು ಮನದಟ್ಟು ಮಾಡುತ್ತದೆ. ಸಮಸ್ಯೆಗಳು ಬಂದಾಗ ನಮಗೆ ಸಮಸ್ಯೆ ನಿವಾರಿಸಿಕೊಳ್ಳುವ ಬಲವಿರದಿದ್ದಾಗ ಮನೆಯವರ, ಸ್ನೇಹಿತರ ಸಹಾಯ ಕೇಳುವ ಮನೋಭಾವ, ಹಾಗೆ ಸಹಾಯ ಹಸ್ತ ನೀಡುವ ಮನೋಭಾವವನ್ನು ಹುಟ್ಟು ಹಾಕುತ್ತದೆ.
ನೀವು ಪದಬಂಧ ಮಾಡ್ತೀರಲ್ಲ ಇವತ್ತಿಂದ? ನಿಮ್ಮ ಮಕ್ಕಳಿಗೂ ಅಭ್ಯಾಸ ಕಲಿಸುತ್ತೀರಲ್ಲ?
1 Comment
ನನಗೂ ಈ ಪದಬಂಧ ಮತ್ತು ಸುಡೊಕುಗಳು ಆಸಕ್ತಿಯ ವಿಷಯವಾಗಿವೆ.