ನ್ಯಾಯ:
ಭಾರತೀಯ ತರ್ಕಶಾಸ್ತ್ರಕ್ಕೆ ನ್ಯಾಯದರ್ಶನ ಎಂದು ಹೇಳುತ್ತಾರೆ. ನ್ಯಾಯದ ಅರ್ಥವು ಸಾಮಾನ್ಯ ಜೀವನದಲ್ಲಿ ಕಾನೂನು, ಯೋಗ್ಯ, ಉಚಿತ ಎಂದಾಗುತ್ತದೆ. ನ್ಯಾಯಶಾಸ್ತ್ರವು ಕಾನೂನಿನ ತತ್ವ ಹಾಗೂ ಸಿದ್ಧಾಂತ. ಕಾನೂನು ತಜ್ಞರು ಹೇಳುವಂತೆ ಇದು justice ಇಂಗ್ಲಿಷ್‍ನಲ್ಲಿ ಜ್ಯೂರಿಸ್ಪ್ರುಡೆನ್ಶಿಯಾ ಎಂಬ ಲ್ಯಾಟಿನ್ ಪದದ ವ್ಯುತ್ಪತ್ತಿ. ಜ್ಯೂರಿಸ್ ಎಂದರೆ ಕಾನೂನು ಅಥವಾ ನಿಯಮ. ಪ್ರುಡೆನ್ಶಿಯಾ ಎಂದರೆ ಜ್ಞಾನ. ಆದರೆ ಇಲ್ಲಿ ನಮ್ಮ ನ್ಯಾಯಶಾಸ್ತ್ರವು ಕವಲೊಡೆಯುತ್ತದೆ.
ನ್ಯಾಯದರ್ಶನವು ಸಂಸ್ಕೃತ ಶಬ್ದ. ಇದರ ಅರ್ಥ ವ್ಯುತ್ಪತ್ತಿಯ ಆಧಾರದ ಮೇಲೆ ಮಾರ್ಗದರ್ಶನ ಮಾಡುವ ಎಂದಾಗುತ್ತದೆ. ಇಲ್ಲಿ ನ್ಯಾಯ ಎಂಬುದರ ಅರ್ಥವು ಯೋಗ್ಯ ಅಥವಾ ಉಚಿತದಿಂದ ಒಂದಿಷ್ಟು ದೂರ ಸರಿದು ಪ್ರಮಾಣೈಃ ಅರ್ಥ ಪರೀಕ್ಷಣಂ ನ್ಯಾಯಃ ಎಂದರೆ ಪ್ರಮಾಣಗಳಿಂದ ವಸ್ತು ತತ್ವವನ್ನು ಪರೀಕ್ಷಿಸುವುದು ಎಂದು ವಾತ್ಸಾಯನ ಭಾಷ್ಯವಿದೆ. ಭಾರತೀಯ ತರ್ಕ ಶಾಸ್ತ್ರವು ನ್ಯಾಯ ದರ್ಶನ. ಇದರ ಕರ್ತೃ ಗೌತಮ ಅಕ್ಷಪಾದ. ನ್ಯಾಯಶಾಸ್ತ್ರದ ಸೂತ್ರಗಳ ರಚನೆಯ ಯಾವಾಗ ಅಯಿತೆಂದು ಹೇಳುವುದು ಕಷ್ಟ. ವಿದ್ವಾಂಸರು ಕ್ರಿ ಪೂ ಆರನೆಯ ಶತಮಾನದಿಂದ ಕ್ರಿ ಪೂ ಐದನೆಯ ಶತಮಾನದ ಮಧ್ಯ ಭಾಗದಲ್ಲಿ ಆಗಿಲಬಹುದೆಂದು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವರಾದರೂ ಅವೆಲ್ಲವೂ ತರ್ಕಗಳು ಮಾತ್ರ. ಉಮೇಶ ಮಿಶ್ರರು ರಚಿಸಿದ “ಭಾರತೀಯ ದರ್ಶನ” ದಲ್ಲಿ ತರ್ಕಶಾಸ್ತ್ರವು ಬೌದ್ಧರಿಗೂ ಮೊದಲೇ ಅಸ್ತಿತ್ವದಲ್ಲಿತ್ತು ಎಂಬ ಉಲ್ಲೇಖವಿದೆ. ಇದಕ್ಕೆ ತರ್ಕವಿದ್ಯೆ, ತರ್ಕ ಶಾಸ್ತ್ರ, ವಾದವಿದ್ಯೆ ಇತ್ಯಾದಿ ಹೆಸರುಗಳಿವೆ.
ನ್ಯಾಯದರ್ಶನದ ಸ್ಥಾನ:
ಭಾರತೀಯ ದರ್ಶನದಲ್ಲಿ ಗ್ರಂಥ ಸಂಪತ್ತಿನ ದೃಷ್ಟಿಯಿಂದ ನೋಡಿದರೆ ವೇದಾಂತದರ್ಶನದ ನಂತರದ ಸ್ಥಾನವು ನ್ಯಾಯ ದರ್ಶನಕ್ಕೇ ಸಲ್ಲುತ್ತದೆ. ನ್ಯಾಯ ದರ್ಶನದ ವಿಕಾಸದಲ್ಲಿ ಎರಡು ಪದ್ಧತಿಗಳು ಇದ್ದು, ಮೊದಲನೆಯದು ‘ಪದಾರ್ಥ ಮೀಮಾಂಸಾತ್ಮಕ ಪದ್ಧತಿ’ ಎಂದು ಹೇಳುವ ಸೂತ್ರಕಾರ ಗೌತಮನದಾದರೆ ಎರಡನೆಯದು ಪ್ರಮಾಣ ಮೀಮಾಂಸಾತ್ಮಕ ಪದ್ಧತಿಯಾಗಿದ್ದು ಇದಕ್ಕೆ ಪ್ರಮಾಣ ಮೀಮಾಂಸೆ ಎಂದು ಹೇಳುತ್ತಾರೆ.
ಇದು ಅತ್ಯಂತ ಜಟಿಲವಾದ ವಿಷಯವಾಯಿತು. ಇನ್ನು ನಮ್ಮಂಥವರಿಗೆ ಎಟುಕುವ ನ್ಯಾಯದ ಬಗ್ಗೆ ಮಾತನಾಡುವುದಾದರೆ ನಮ್ಮ ಪವಿತ್ರ ಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತಗಳೂ ಕೂಡ ವಿಭಿನ್ನ ಹಾಗೂ ವಿಶೇಷವಾದಂಥವೇ.
ರಾಮಾಯಣವು ನಡೆದದ್ದು ತ್ರೇತಾಯುಗದಲ್ಲಿ. ನಾಯಕ ಶ್ರೀ ರಾಮನು ವಿಷ್ಣುವಿನ ಅವತಾರ. ತನ್ನ ತ್ಯಾಗದ ಗುಣದಿಂದ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಇವನು ಸೀಮಾ ಪುರುಷೋತ್ತಮ. ಜನರಲ್ಲಿ ಆದರ್ಶಗಳನ್ನು ಹುಟ್ಟು ಹಾಕಲೆಂದೇ ಜನ್ಮ ತಳೆದವ. ರಾಮಾಯಣವು ರಾಮನೊಬ್ಬನೇ ನಡೆದ, ನಡೆಯಬೇಕಾದ ಹಾದಿಯಲ್ಲ. ಅವನಂತೂ ನ್ಯಾಯದ ರೇಖೆಯಿಂದ ಅತ್ತಿತ್ತ ಅಲುಗದವ. ಒಟ್ಟಿನಲ್ಲಿ ಇದೊಂದು ಅಪರೂಪದ ತ್ಯಾಗದ ಕಥೆ. ತಂದೆಯು ಬಲ ತಾಯಿಗೆ ಎಂದೋ ಕೊಟ್ಟ ಮಾತಿಗಾಗಿ ರಾಜ್ಯಾಧಿಕಾರವನ್ನು ಬಿಟ್ಟು ಕೊಟ್ಟು ನವವಧುವಿನೊಂದಿಗೆ ವನವಾಸಕ್ಕೆ ಹೊರಟ. ರಾಜ್ಯವು ದೊರೆಯುತ್ತಲಿದ್ದರೂ ಊರಹೊರಗೆ ಋಷಿಸದೃಶ ಜೀವನ ಸಾಗಿಸುತ್ತ ಅಣ್ಣನ ಪಾದುಕೆಗಳನ್ನು ಸಿಂಹಾಸನದ ಮೇಲಿರಿಸಿ ರಾಜ್ಯ ಭಾರ ಮಾಡಿದ ಭರತ. ಸೀತೆ, ಕೌಶಲ್ಯೆ, ಮಂಡೋದರಿ, ಶಬರಿ, ಜಟಾಯು ಹೀಗೆ ಇನ್ನೂ ಅನೇಕ ತ್ಯಾಗ ಜೀವಿಗಳು ವಾಲ್ಮೀಕಿಯ ಸೀಮಾಪುರುಷೋತ್ತಮನ ಚರಿತೆಯನ್ನು ತರ್ಕದಿಂದ ಆದರ್ಶದ ಹಾದಿಗೊಯ್ದ ಕಥೆ. ಆದ್ದರಿಂದಲೇ ಇಂದಿಗೂ ಜನಮಾನಸದಲ್ಲಿ ಆ ಕಾಲದಲ್ಲಿ ಆದಂಥ ನ್ಯಾಯಾನ್ಯಾಯಗಳ ಬಗ್ಗೆ ಚರ್ಚೆ ನಡೆಯುತ್ತವೆ. ಸೀತೆಗಾದ ಅನ್ಯಾಯವನ್ನು ಖಂಡಿಸುವವರಿದ್ದಾರೆ. ಅದರೆ ಆ ಕಾಲದ ನ್ಯಾಯನಿರ್ಣಯಕ್ಕೆ ಆಕೆ ತಲೆಬಾಗಿದಳೆಂದೇ ಇಂದಿಗೂ ಶ್ರೀ ರಾಮನ ರಾಮರಾಜ್ಯ ಕಲ್ಪನೆ ಜನರ ಮನದಲ್ಲಿ ಅಚ್ಚಳಿಯದೆ ನಿಂತಿದೆ.
ಇನ್ನು ಮಹಾಭಾರತ ನಡೆದುದು ದ್ವಾಪರ ಯುಗದಲ್ಲಿ. ಅಂದರೆ ಸುಮಾರು ಐದು ಸಾವಿರ ವರ್ಷಗಳ ಹಿಂದೆ. ತ್ರೇತಾಯುಗದಲ್ಲಿ ರಾಮನಾಗಿದ್ದ ವಿಷ್ಣುವು ದ್ವಾಪರದಲ್ಲಿ ಕೃಷ್ಣನಾಗುತ್ತಾನೆ.
“ಯದಾಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ.. ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ.. ಪರಿತ್ರಾಣಾಯ ಸಾಧೂನಾಂ ವಿನಾಶಯ ಚ ದುಷ್ಕೃತಾಂ..”
ಧರ್ಮಕ್ಕೆ ಹಾನಿಯಾದಾಗ ನಾನು ಸಜ್ಜನರನ್ನು ಕಾಪಾಡಿ, ದುರ್ಜನರನ್ನು ನಾಶ ಮಾಡಲು, ಧರ್ಮಸಂಸ್ಥಾಪನೆ ಮಾಡಲು ಪ್ರತಿ ಯುಗದಲ್ಲಿ ಭೂಮಿಯಲ್ಲಿ ಅವತರಿಸುವೆನು ಎಂದು ಹೇಳಿದವನು.
ಅಂತೆಯೇ ನ್ಯಾಯವನ್ನು ಪರಿಪಾಲನೆ ಕೂಡ ಮಾಡುತ್ತಾನೆ. ಅರ್ಧ ಸತ್ಯದ ಯುಗವಿದು. ಇಲ್ಲಿ ನಡೆಯುವ ಘಟನೆಗಳೆಲ್ಲವೂ ನ್ಯಾಯಸಮ್ಮತವೇ ಎಂದು ಹೇಳಲಾಗದು. ಪಾಂಡವರನ್ನು ರಾಜ್ಯ ರಹಿತರನ್ನಾಗಿಸುವ ಯೋಜನೆಯಲ್ಲಿ ಕಪಟದ್ಯೂತ… ಅದರ ಫಲವಾಗಿ ನಡೆದ ದ್ರೌಪದಿಯ ವಸ್ತ್ತಾಪಹರಣ… ಇಲ್ಲಿ ನಡೆದುದಂತೂ ಸ್ತ್ರೀ ಲೋಕಕ್ಕಾದ ಅನ್ಯಾಯದ ಪರಾಕಾಷ್ಠೆ. ಆದರೂ ಸಭೆಯಲ್ಲಿ ಇರುವ ಮಹಾ ಮಹಾ ಧರ್ಮಿಷ್ಠರೂ ದ್ರೌಪದಿಯ ಪ್ರಶ್ನೆಗೆ ಉತ್ತರ ಗೊತ್ತಿದ್ದೂ ಸುಮ್ಮನೆ ಕೂಡ್ರುತ್ತಾರೆ.. ಆ ದುಷ್ಕರ್ಮಿಗಳಿಗೆ ನ್ಯಾಯದ ದಾರಿಯನ್ನು ತೋರುವ ಹಿರಿಯರೂ ಮೂವತ್ತೆರಡು ಹಲ್ಲುಗಳ ನಡುವೆ ಅವಿತುಕೂಡ್ರುವ ನಾಲಿಗೆಯಂತಾಗಿದ್ದಾರೆ. ಮುಂದೆ ಇದೇ ಕಾರಣಕ್ಕೆ ನಡೆದ ಕುರುಕ್ಷೇತ್ರ ಯುದ್ಧ.. ಇಲ್ಲಿ ಶ್ರೀ ಕೃಷ್ಣನು ಕುಟಿಲತನದಿಂದಲೇ ಆಗಲಿ, ಧರ್ಮವನ್ನು ಜಯದತ್ತ ಕೊಂಡೊಯ್ಯುತ್ತಾನೆ. ಆಗ ನಡೆದ ಅನ್ಯಾಯಗಳೆಲ್ಲವೂ ಲೋಕಹಿತಕ್ಕಾಗಿಯೇ ಎಂದು ಧರ್ಮದ ನೆಪದಲ್ಲಿ ಅವುಗಳಿಗೆ ಪರದೆ ಎಳೆಯುತ್ತೇವೆ.
ಮಹಾಭಾರತದಲ್ಲಿಯ ವಿದುರ ನೀತಿ ಇಂದಿಗೂ ಹೆಸರಾಗಿದೆ. ಇದು ಕೇವಲ ದಾಯಾದಿ ಜಗಳದ ಕಥೆಯಲ್ಲ… ಇಲ್ಲಿ ತತ್ವ, ನೀತಿ, ದರ್ಶನ, ವಿಜ್ಞಾನ ಎಲ್ಲವೂ ಇಲ್ಲಿದೆ. ಧರ್ಮ, ಅರ್ಥ, ಕಾಮ, ಮೋಕ್ಷ ಮುಂತಾದ ಚತುರ್ವಿಧ ಪುರುಷಾರ್ಥಗಳ ವಿವರಣೆಯಿಲ್ಲಿದೆ.
ನಮ್ಮಲ್ಲಿ ನ್ಯಾಯವು ಅತ್ಯಂತ ಪಾರದರ್ಶಕವಾಗಿದೆ ಎಂದು ಹೇಳುವ ಒಂದು ನುಡಿಯಿದೆ.. ಹಂಸಕ್ಷೀರ ನ್ಯಾಯ! ನಿಜ ಹೇಳಬೇಕೆಂದರೆ ನ್ಯಾಯದಲ್ಲಿ ಹಂಸವೆಂಬ ಪಕ್ಷಿಯೂ ಇಲ್ಲ, ಕ್ಷೀರವೆಂಬ ಹಾಲೂ ಇಲ್ಲವಂತೆ! ಹಂಸವೆಂದರೆ ನಾನು ಮತ್ತು ನೀವೆಲ್ಲರೂ ಎಂದರ್ಥ. ಕ್ಷೀಣಂತಿ ರವಾಃ ಇತಿ ಕ್ಷೀರಃ.. ಇಲ್ಲಿ ರವ ಎಂದರೆ ಕಷ್ಟ. ನಿಮ್ಮಲ್ಲಿ ಯಾರಿಗೆ ಕಷ್ಟವಿದೆ ಅದನ್ನು ಉಪಶಮನಗೊಳಿಸುವ ಪರಿಹಾರೋಪಾಯವೇ ಹಂಸಕ್ಷೀರ ನ್ಯಾಯ. ಈ ನ್ಯಾಯಸೂತ್ರಗಳನ್ನು ತಿಳಿದ ಜ್ಞಾನಿ ಹಂ ಅಂದರೆ ನಾನು. ಸಃ ಎಂದರೆ ನೀವೆಲ್ಲರೂ. (ವೇದಿಕ್ ಸಾಯನ್ಸ್). ಸಮಾಜದಲ್ಲಿ ಅಪರಾಧ ಘಟಿಸಿದಲ್ಲಿ ಅದಕ್ಕೆ ಮೂಲಕಾರಣಗಳನ್ನು ಹುಡುಕಿ ಅದನ್ನು ಯಾರಿಗೂ ತೊಂದರೆ ಬಾರದ ರೀತಿಯಲ್ಲಿ ಪರಿಹರಿಸಿ ಘಟನೆಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ದಂಡಿಸದೆ ಅನ್ಯೋನ್ಯವಾಗಿ ಬದುಕುವುದಕ್ಕಾಗಿ ಸನ್ಮಾರ್ಗ ತೋರುವ ಸೂತ್ರಗಳನ್ನು ಹಂಸಕ್ಷೀರ ನ್ಯಾಯದ ಸೂತ್ರ ಎಂದು ಹೇಳುತ್ತಾರೆ. ನ್ಯಾಯಸೂತ್ರಗಳು ದೈಹಿಕ ಬಲಕ್ಕೆ ಮಹತ್ವ ಕೊಡುವುದಿಲ್ಲ. ಜ್ಞಾನ ಬಲವೇ ಶ್ರೇಷ್ಠ ಎಂದು ಹೇಳುತ್ತವೆ. ಜ್ಞಾನಿಯಾದವನೇ ಸಮಾಜವನ್ನು ಮುನ್ನಡೆಸಬಲ್ಲ ಎಂದು ಹೇಳುತ್ತವೆ.
ಇಲ್ಲಿ ಹಂಸಕ್ಷೀರ ನ್ಯಾಯದ ಒಂದು ಭಾಗವಾದ ಮೀಮಾಂಸಾ ನ್ಯಾಯನಿರ್ಣಯಕ್ಕೆ ಪ್ರಾಧಾನ್ಯತೆ ಇದೆ. ಇದರಲ್ಲಿ ಮೇಲು-ಕೀಳು, ಸಿರಿವಂತ-ಬಡವ ಎಂಬ ಭೇದವಿಲ್ಲ. ಇವುಗಳು ಪ್ರಭಾವ ಬೀರಿದಲ್ಲಿ ಸಮರ್ಥವಾಗಿ ನ್ಯಾಯನಿರ್ಣಯ ಆಗಲಾರದು. ಸಮಾನತೆಯದೇ ಇಲ್ಲಿ ಪ್ರಮುಖ ಪಾತ್ರ.
ಒಟ್ಟಿನಲ್ಲಿ ನ್ಯಾಯಶಾಸ್ತ್ರವು ಕಾನೂನಿಗೂ ನ್ಯಾಯನೀತಿಗೂ ಪರಸ್ಪರ ಅವಲಂಬನೆಯಿದೆ ಎಂದು ಹೇಳುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಅವನು ಮಾಡಬೇಕಾದುದನ್ನು ಆದೇಶಿಸಿ, ಮಾಡಬಾರದ್ದನ್ನು ಪ್ರತಿಷೇಧಿಸಿ, ಕಾರ್ಯದ ಪ್ರಯೋಜನವನ್ನೂ, ಅಕಾರ್ಯದ ಅಪಾಯವನ್ನೂ ತಿಳಿಸಿ, ಸಮಾಜಹಿತಕ್ಕೆ ವಿರೋಧವಾಗದಂತೆ ತನ್ನ ಹಿತವನ್ನು ಸಾಧಿಸಿಕೊಂಡು ಅಭಿವೃದ್ಧಿಯನ್ನು ಹೊಂದಲು ಸಾಧ್ಯವಾಗುವಂತೆ ಅವನನ್ನು ರೂಪಿಸುವ ಕಾರ್ಯ ನಿರ್ವಹಿಸುತ್ತದೆ. ಕಾನೂನಿನ ನಿಯಮಗಳ ಯೋಗ್ಯ ನಿರೂಪಣೆ ಕಾನೂನಿನ ಆಚರಣೆಯ ತಳಹದಿ. ಆಚರಣೆ ಸಮಾಜದ ಹಿತದ ಸಾಧನೆಗೆ ತಳಹದಿ. ಅನ್ಯಾಯವನ್ನು ನಿವಾರಿಸಿ ನ್ಯಾಯವನ್ನು ಸ್ಥಾಪಿಸುವುದೇ ಕಾನೂನಿನ ಉದ್ದೇಶ. ಕಾನೂನಿಗೂ ನ್ಯಾಯಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿ ನೀತಿಶಾಸ್ತ್ರವಿದೆ. ಧಾರ್ಮಿಕ ಗ್ರಂಥಗಳ ಪ್ರಭಾವವೂ ಇದೆ. ನಿಯಮಗಳನ್ನು ಯುಕ್ತ ರೀತಿಯಿಂದ ಸಾರಿ ಅವುಗಳನ್ನು ಕಾನೂನಾಗಿ ಮಾಡುವುದು ಶಾಸನ.