‘ಪ್ರತಿ ತಿಂಗಳ 3ನೇ ಶನಿವಾರ ನನ್ನ ಜೀವನದ ಅತ್ಯಂತ ಅಮೂಲ್ಯ ದಿನ. ಆ ದಿನ ನಾನು ಹಾಡುವ ಸಂಗೀತ ನಿಜದ ಅರ್ಥದಲ್ಲಿ ನನಗೆ ಸಾರ್ಥಕತೆ ತಂದುಕೊಡುತ್ತದೆ‘ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರುವ ತೇಜಸ್ವಿನಿ ಎಚ್.ಪಿ ಹೀಗೆ ಹೆಮ್ಮೆಯಿಂದ ಹೇಳುತ್ತಾರೆ. ಆ ದಿನ ಅವರು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳ ಎದುರು 3 ರಿಂದ 4 ತಾಸು ಸಂಗೀತ ಕಚೇರಿ ನೀಡುತ್ತಾರೆ. ‘ಸಂಗೀತ ಜ್ಞಾನವಿರುವ ಸಾವಿರಾರು ಜನರ ಎದುರು ಕುಳಿತು ಶಾಸ್ತ್ರೀಯವಾಗಿ ಹಾಡಿ, ಚಪ್ಪಾಳೆ ಗಿಟ್ಟಿಸಿಕೊಳ್ಳುವುದಕ್ಕಿಂತ, ಇಲ್ಲಿ ಬಂದು ಪ್ರತಿ ತಿಂಗಳು ಹಾಡುವುದರಲ್ಲಿ ನನಗೆ ಅತೀವ ಆನಂದ ಸಿಗುತ್ತದೆ’ ಎನ್ನುತ್ತಾರೆ ಅವರು. ಸೂರ್ಯೋದಯ ಫೌಂಡೇಷನ್ ಮತ್ತು ಅಡಿಗ ಆರ್ಟ್ಸ್ ಅಕಾಡೆಮಿ ಎಂಬ ಟ್ರಸ್ಟ್‌ನೊಂದಿಗೆ ಜತೆಯಾಗಿ, ಈ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ. ಇದು ನಾಲ್ಕೂವರೆ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಚಟುವಟಿಕೆ. ‘ನಾನು ಎಲ್ಲೇ ಇರಲಿ 3ನೇ ಶನಿವಾರ ಬೆಂಗಳೂರಿಗೆ ಬಂದು ಕಿದ್ವಾಯಿ ಆಸ್ಪತ್ರೆ ತಲುಪಿ, ಸಂಗೀತ ಕಾರ್ಯಕ್ರಮ ನೀಡುತ್ತೇನೆ. ಇಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಎದುರು ಹಾಡುತ್ತೇನೆ. ಕಿಮೊ ಥೆರಪಿಯಿಂದ ನೋವು ಅನುಭವಿಸುವ ಆ ಜೀವಗಳು ನನ್ನ ಸಂಗೀತದಿಂದ ಆ ಕ್ಷಣದ ಮಟ್ಟಿಗಾದರೂ ತಮ್ಮ ನೋವು ಮರೆಯುತ್ತಾರೆ ಎನ್ನುವುದೇ ನನಗೆ ಸಮಾಧಾನ ತಂದುಕೊಡುತ್ತದೆ‘ ಎನ್ನುತ್ತಾರೆ ತೇಜಸ್ವಿನಿ. ತೇಜಸ್ವಿನಿ ಈ ಆಸ್ಪತ್ರೆಯಲ್ಲಿ ಹಾಡುವುದರ ಜತೆಗೆ, ರೋಗಿಗಳ ಜತೆ ಕೆಲವು ಆಟಗಳನ್ನು ಆಡಿಸುತ್ತಾರೆ. ‘ಹಾಡು ಕೇಳುವಾಗ, ಆಟವಾಡುವಾಗ ತಮ್ಮ ನೋವನ್ನು ಮರೆತು ಚಟುವಟಿಕೆಯಿಂದ ಇರುತ್ತಾರೆ. ಆಗಲೇ ನನಗೆ ಅನ್ನಿಸಿದ್ದು, ಸಂಗೀತಕ್ಕೆ ನಿಜಕ್ಕೂ ಚಿಕತ್ಸಕ ಶಕ್ತಿ ಇದೆ ಎಂಬುದಾಗಿ’ ಎಂದು ನೆನಪಿಸಿಕೊಳ್ಳುತ್ತಾರೆ ಅವರು. ತೇಜಸ್ವಿನಿ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದವರು. ತಂದೆ ಪ್ರಸನ್ನಕುಮಾರ್ ಎಚ್.ಬಿ., ತಾಯಿ ಶಶಿಕಲಾ ಎಚ್.ಪಿ., ಅಣ್ಣ ಉದಯ್ ಭಾಸ್ಕರ್ ಎಚ್.ಪಿ. ಬಾಲ್ಯದಿಂದಲೇ ಸಂಗೀತ ಅಭ್ಯಾಸ ಮಾಡುತ್ತಿರುವ ಅವರು, ಮೊದಲಿಗೆ ವಿದ್ವಾನ್ ವೆಂಕಟೇಶ್ ಚಿಪ್ಲುಂಕರ್ ಅವರಲ್ಲಿ ಸಂಗೀತ ಕಲಿತರು. ನಂತರ ತಂದೆಯವರಿಗೆ ಮೈಸೂರಿಗೆ ವರ್ಗವಾಯಿತು. ಅಲ್ಲಿ ವಿದುಷಿ ಭಾರತಿ ಅವರಲ್ಲಿ ಸಂಗೀತಾಭ್ಯಾಸ ಮುಂದುವರಿಸಿದರು. ಇವರಲ್ಲಿ ಸೀನಿಯರ್ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ನಂತರ, ವಿದುಷಿ ವೀಣಾ ಸೋಮಶೇಖರ್ ಅವರಲ್ಲಿ ವಿದ್ವತ್ ಅಭ್ಯಾಸ ಮಾಡಿ, ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಕೇವಲ ಶಾಸ್ತ್ರೀಯ ಸಂಗೀತವಲ್ಲದೇ ವಿದ್ವಾನ್ ದತ್ತಾತ್ರೇಯ ಇವರ ಬಳಿ ಮೆಂಡೊಲಿನ್ ವಾದನವನ್ನು ಅಭ್ಯಾಸ ಮಾಡಿ, ಜೂನಿಯರ್ ಪರೀಕ್ಷೆಯನ್ನೂ ಬರೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಓದಿನಲ್ಲೂ ಮುಂದಿರುವ ಅವರು, ಎಂಜಿನಿಯರಿಂಗ್ ಪದವಿಯಲ್ಲಿ ಕಾಲೇಜಿಗೆ ಪ್ರಥಮ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಸಂಗೀತದ ಸಾಧನೆ ಜತೆಗೆ ಐಎಎಸ್ ಮಾಡುವ ಕನಸು ಅವರಿಗಿದೆ. ‘ನನಗೆ ಇದರಲ್ಲಿಯೇ ಆತ್ಮತೃಪ್ತಿ ಇದೆ’ ಎನ್ನುವ ಅವರು, ‘ನಾನು ಸಂಗೀತ ಕಲಿತಿದ್ದು ಸಹ, ನನ್ನ ಆಸಕ್ತಿಯ ಕಾರಣಕ್ಕಾಗಿ. ನನ್ನ ಗುರುಗಳೂ ಸಂಗೀತವನ್ನು ವ್ಯಾವಹಾರಿಕವಾಗಿ ಕಂಡವರಲ್ಲ. ಅವರಂತೆ ನಾನೂ ಆಸಕ್ತ ಮಕ್ಕಳಿಗೆ ಸಂಗೀತ ಹೇಳಿಕೊಡುವ ಉದ್ದೇಶ ಹೊಂದಿದ್ದೇನೆ’ ಎನ್ನುತ್ತಾರೆ ತೇಜಸ್ವಿನಿ.
author- ಸುಕೃತ ಎಸ್.
courtsey:prajavani.net
https://www.prajavani.net/artculture/music/tejashwini-vocalist-709947.html