ನೀವು ಬಲು ಜೋರೂ…
“ಪಾಪ… ನಿಮ್ಮವ್ರು ಸಂಭಾವಿತರು… ನೀವ ಅಗದೀ ಜೋರ ಬಿಡ್ರಿ.. ”
ಇಂಥ ಮಾತುಗಳನ್ನು ಹೆಚ್ಚಾಗಿ ಹೆಣ್ಣು ಮಕ್ಕಳಾದ ನಾವು ಕೇಳೇ ಇರುತ್ತೇವೆ. ಆಗೆಲ್ಲಾ ನನ್ನ ಮನಸ್ಸಿಗೆ ಬೇಸರವಾಗುತ್ತದೆ. ಹೆಣ್ಣು ಹೀಗೆ ಜೋರಾಗಲು ಕಾರಣಗಳೇನು ಎನ್ನುವುದನ್ನು ಯಾರಾದರೂ ಚಿಂತಿಸಿದ್ದಾರೆಯೇ? ಹೆಣ್ಣಿನ ಸಂಬಂಧಿಕರು, ಗಂಡನ ಕಡೆಯವರು, ಅಷ್ಟೇ ಏಕೆ ಕೆಲಸದವರು, ಅಕ್ಕ ಪಕ್ಕದವರು.. ಮಕ್ಕಳ ಗೆಳೆಯ ಗೆಳತಿಯರು.. ಎಲ್ಲರಿಗೂ ಈ ಬಡಪಾಯಿಯ ಜೋರಿನ ಮೇಲೆಯೇ ಕಣ್ಣು.
“ರೀ, ಸಮಯಕ್ಕೆ ಸರಿಯಾಗಿ ಮನೆಗೆ ಬರ್ರೀ… ಈ ಅತಿಯಾದ ಸಿಗರೇಟು ಛೊಲೋ ಅಲ್ಲರೀ… ಗುಟಕಾ ಬ್ಯಾರೆ ಸುರೂ ಮಾಡೀರೀ… ಅದನ್ನೆಲ್ಲಾ ಬಿಟ್ಟ ಬಿಡರೀ… ಡಾಕ್ಟರ್ ನಿಮಗ ಮೊನ್ನೆ ಏನ ಹೇಳ್ಯಾರ ಮರತೀರೇನು? ಕ್ಯಾನ್ಸರ್ ಗೆ ಹಾಕ್ಕೋತಾವಂತರೀ ಈ ಎಲ್ಲಾ ಚಟಗೋಳೂ… ಅದ ರೊಕ್ಕದಾಗ ಒಂದು ಪಾಕೀಟು ಹಾಲ ಹೆಚಿಗೀ ತೊಗೊಳ್ಳೋಣ… ಹಣ್ಣು ತೊಗೊಂಬರ್ರಿ… ಹುಡುಗರಿಗೂ, ನಿಮಗೂ ಪೌಷ್ಟಿಕಾಂಶರೆ ಸಿಗತದ..”
ಗಂಡನ ದೃಷ್ಟಿಯಲ್ಲಿ ಇವಳು ಜೋರು. ಅತ್ತೆ, ಮಾವರೂ, “ನನ್ನ ಮಗಾ ಇಷ್ಟು ಗಳಸಿದ್ರ ಹತ್ತು ಪೈಸಾ ತನ್ನ ಸಲವಾಗಿ ಖರ್ಚು ಮಾಡೋಹಂಗಿಲ್ಲಾ.. ಈ ಸೊಸೀ ಭಾಳ ಜೋರು. ಮುಖ್ಯ ನನ್ನ ಮಗಾನ ಧಡ್ಡ. ಅಂವಗ ಮೂಗದಾರ ಹಾಕಲಿಕ್ಕೆ ಬಂದಿಲ್ಲಾ..” ಎನ್ನುತ್ತಾರೆ. ಅವರ ದೃಷ್ಟಿಯಲ್ಲಿ ಕೂಡ ಜೋರೇ.
“ಏ ಗುಂಡ್ಯಾ, ಈಗಿನ್ನೂ ಸಾಲಿಂದ ಬಂದೀದಿ… ಬ್ಯಾಗ್ ಒಗದ ಮತ್ತ ಗೆಳ್ಯಾರ ಜೋಡೆ ಹೊರಗ ತಿರಗಲಿಕ್ಕ ಹೊಂಟೇನ? ಏ ರಾಮ್ಯಾ, ಯಾಕಪಾ, ನಿಮಗ ಮನ್ಯಾಗ ಹೇಳವ್ರು ಕೇಳವ್ರು ಯಾರೂ ಇಲ್ಲೇನು? ಬರೆ ಆಟಾ… ಓಣ್ಯೋಣಿ ತಿರಗೋದೂ… ಅಲ್ಲಾ.. ಈಗೀಗ ಮನ್ಯಾಗಿನ ಚಿಲ್ಲರ್ ಬ್ಯಾರೆ ಕಡಿಮ್ಯಾಗಲಿಕ್ಕತ್ತ್ಯಾವು.. ಏನಪಾ ಪುಟ್ಯಾ, ನಿನ್ನೆ ನಿಮ್ಮವ್ವಗ ಇದನ್ನೇ ಹೇಳಿದ್ರ ಅಕೀ “ಅಯ್ಯ.. ನಾ ಅದರಾಗೆಲ್ಲಾ ತಲೀ ಹಾಕಾಕ ಹೋದ್ರ ನಮ್ಮತ್ತಿ ‘ಗಂಡ ಹುಡುಗೂರು… ಹಂಗ ಛಂದೇಳು.. ಹೆಂಗಸು ತಿರಗಿ ಕೆಟ್ಟಳಂತ.. ಗಂಡಸು ಕೂತ ಕೆಟ್ನಂತ..’ ಅಂತ ಬೈತಾಳರೀ.ಹೆಣಮಕ್ಕಳು ಜೋರ ಇರಬಾರದಂತರೀ..” ಅಂದ್ಲೂ.”
ಅವರನ್ನು ಕಳಿಸಿಬಂದ ಮಗ, “ಅವ್ವಾ, ನನ್ನ ಗೆಳೆಯಂದ್ರು “ನಿಮ್ಮನೀಗೆ ಬರಾಕನ ಹೆದರಿಕಿ ಬರತದೋಪಾ.. ನಿಮ್ಮವ್ವ ಭಾರಿ ಜೋರದಾರಲೆ” ಅಂತಾರ. ನೀ ಯಾಕ ಅವರಿದ್ದಾಗ ನನ್ನ ಬೈತೀ?” ಎಂದಿದ್ದ…
“ನೀ ಹೋದ ತಿಂಗಳ ಅಡ್ವಾನ್ಸ ಇಸ್ಕೊಂಡದ್ದನ ಇನ್ನೂ ಮುಟ್ಟಿಸಿಲ್ಲಾ. ಈಗ ಮತ್ತ ರೊಕ್ಕಾ ಕೇಳಿದ್ರ ಎಲ್ಲಿಂದ ಕೊಡತಾರ?” ಎಂದಾಗ, ಕೆಲಸದವಳು ಪಕ್ಕದ ಮನೆಯವರ ಹತ್ತಿರ, “ಆ ಬಾಯಾರು ಭಾರೀ ಜೋರರೀ. ಅವರದ ನಡೀತೈತಿ ಮನ್ಯಾಗ… ಸಾಯಬರು ಭಾಳ ಛೊಲೋರೀ… ಇವರು ಊರಿಗಿ ಹೋದಾಗ ಅವ್ರು ನಾ ಕೇಳಿದಾಗೆಲ್ಲಾ ಕೇಳಿದಷ್ಟು ರೊಕ್ಕಾ ಕೊಡತಿದ್ದರ್ರಿ..”
ಅವಳು ಏನೂ ಹೇಳದಿದ್ದರೆ, ಸುಮ್ಮನಿದ್ದರೆ ಬಹಳ ಸೌಮ್ಯ, ಸಂಭಾವಿತ. ಆದರೆ ಮನೆ ನಡೆಯಬೇಕಲ್ಲ?ಹೀಗೆ ಅಂಧಾದುಂಧಿ ಮಾಡಿದರೆ ಕುಟುಂಬದ ಖರ್ಚು ವೆಚ್ಚದ ಗತಿ? ಇಡೀ ತಿಂಗಳು ಖರ್ಚು ನಡೆಯಬೇಕಲ್ಲ? ಮಕ್ಕಳು ಸರಿಯಾದ ದಾರಿಯಲ್ಲಿ ನಡೆಯಬೇಕಲ್ಲ?
ಗಂಡನನ್ನು ತಿದ್ದುವ ಪ್ರಸಂಗಗಳಲ್ಲಿ ಸುಮ್ಮನಿದ್ದರೆ? ಸಿಗರೇಟು, ಗುಟಕಾದಂಥ ಹಾನಿಕಾರಕ ವಸ್ತುಗಳನ್ನು ಸೇವಿಸಬೇಡಿ ಎಂದು ಹೇಳದೆಹೋದರೆ? ಮಕ್ಕಳು ಅಭ್ಯಾಸ ಮಾಡದೆ ಉಡಾಳತನದಿಂದ ತಿರುಗಿದರೆ?ಮಕ್ಕಳು ಹಗಲು ರಾತ್ರಿ ಎನ್ನದೆ ಎಲ್ಲೆಲ್ಲಿಯೋ ಅಡ್ಡಾಡಿದರೆ? ಶಾಲೆಯಲ್ಲಿ ಮಕ್ಕಳಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳು ದೊರಕದೆ ಹೋದರೆ ಪ್ರತಿಭಟಿಸಿದರೆ? ಅತ್ತೆ ಮಾವರೇ ಆಗಲಿ, ಅಪ್ಪ ಅವ್ವರೇ ಇರಲಿ, ಅನಾವಶ್ಯಕವಾಗಿ ಅವಹೇಳನ ಮಾಡಿದಾಗ ಪ್ರತಿಭಟಿಸಿದರೆ? ಇತರರ ದುರ್ವರ್ತನೆಯನ್ನು ಖಂಡಿಸಿದರೆ? ಒಬ್ಬಂಟಿಯಾಗಿ ಪ್ರಯಾಣ ಮಾಡುವಾಗ ಯಾರಾದರೂ ನಮ್ಮ ಗೌರವಕ್ಕೆ ಕುಂದುಬರುವಂತೆ ವರ್ತಿಸಿದಾಗ ಖಂಡಿಸಿದರೆ ಅವಳು ಗಯ್ಯಾಳಿಯೇ?
ಸುಮ್ಮನಿರಬೇಕೇ? ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದರೆ ಪಾಪ… ಭಾಳ ಸಂಭಾವಿತಳು. ಹಾಗಾದರೆ ಅನ್ಯಾಯಕ್ಕೆ ತಲೆಬಾಗುವುದೇ ಸಂಭಾವಿತತೆಯೇ? ಇಂಥ ಸಂಭಾವಿತತೆ ಬೇಕೇ?
ಮಹಿಳೆಗೆ ಕುಟುಂಬದಲ್ಲಿ ಜವಾಬ್ದಾರಿಗಳು ಹೆಚ್ಚು. ಹೀಗಾಗಿ ಜೋರಾಗಿ ವರ್ತಿಸಬೇಕಾಗುವ ಸಂದರ್ಭಗಳೂ ಹೆಚ್ಚೇ. ಆದರೆ ಗಂಡಸು ಅಂಥ ಸಂದರ್ಭದಲ್ಲಿ ಅವಳಂತೆ ವರ್ತಿಸಿದರೆ ಅವನು ಜೋರಲ್ಲ… ಸ್ಟ್ರಿಕ್ಟ್… !
ನನ್ನ ಅಭಿಪ್ರಾಯದಲ್ಲಿ ಇಂದಿನ ಸಮಾಜದಲ್ಲಿ ಇಂಥ ಜೋರಿನ ಮಹಿಳೆಯರ ಅವಶ್ಯಕತೆಯೇ ಹೆಚ್ಚಿದೆ. ಅನ್ಯಾಯವನ್ನು ಪ್ರತಿಭಟಿಸುವ, ತನ್ನ ಕುಟುಂಬಕ್ಕಾಗಿ ಯಾರು ಏನೆ ಎಂದರೂ ಕೇರ್ ಮಾಡದೆ ಸರಿದಾರಿಯಲ್ಲಿ ಮುಂದುವರೆಯುವವರೆ ಬೇಕು.
ಜೋರು ಎನ್ನುವುದು ಯಾವುದೇ ಬೈಗುಳವಲ್ಲ. ಆದು ಮಹಿಳೆಯ ನೇರ ವ್ಯಕ್ತಿತ್ವಕ್ಕೆ ಸಂದ ಬಳುವಳಿ. ಆದರೆ, ಅದು ಅತಿಯಾಗದಂತೆ ಎಚ್ಚರ ವಹಿಸುವುದು ಅಗತ್ಯ. ನಮ್ಮ ಗೌರವಕ್ಕೆ, ನಮ್ಮ ಕುಟುಂಬಕ್ಕೆ ನಾವು ಢಾಲಾಗಬೇಕು.
ಇತರರು ಏನನ್ನುವರೋ ಎಂದು ಹಿಂಜರೆಯುವುದಕ್ಕಿಂತ ಸರಿ ದಾರಿಯಲ್ಲಿ ನಡೆವಾಗ ಇಂಥ ದಿಟ್ಟತನವಿದ್ದರೆ ಒಳ್ಳೆಯದಲ್ಲವೆ? ನೀವೇನಂತೀರೀ?
ಮಾಲತಿ ಮುದಕವಿ