‘‘ಹೇ ಪಾಂಡವ! (ಕರ್ಮ)ಸಂನ್ಯಾಸವೇ ‘ಯೋಗ’. ಕರ್ಮಕ್ಕೆ ಕಾರಣವಾಗುವ ಸಂಕಲ್ಪಗಳನ್ನು ತ್ಯಾಗ ಮಾಡದೇ ಇರುವವನು ‘ಯೋಗಿ’ಯಾಗಲಾರ. ಆರುರುಕ್ಷನಾದ ಮುನಿಗೆ (ನಿಷ್ಕಾಮ)ಕರ್ಮವೇ ‘ಯೋಗ’ಕ್ಕೆ ಹೇತು. ಯೋಗಾರೂಢನಿಗೆ ಸಂಕಲ್ಪಗಳ ತ್ಯಾಗವೇ ‘ಶಮ’ಸ್ಥಿತಿಯನ್ನು ತರುತ್ತದೆ’’ (ಭ.ಗೀ.: 6.3).
ಆರುರುಕ್ಷನೆಂದರೆ (ಯೋಗಕ್ಕೆ) ಏರಲಿಚ್ಛಿಸುವವನು. ಯೋಗಕ್ಕೇರಿದವನು ‘ಯೋಗಾರೂಢ’. ಯೋಗಾರೂಢನ ಸ್ಥಿತಿಯನ್ನು ಕೃಷ್ಣನು ನಿರ್ವಚಿಸುತ್ತಾನೆ – ‘‘ಇಂದ್ರಿಯಭೋಗಗಳಲ್ಲೂ, (ತತ್ಸಂಬಂಧಿಯಾದ ಭೋಗ) ಕರ್ಮಗಳಲ್ಲೂ ಆಸಕ್ತಿಯಿಲ್ಲದವನೂ, (ಅದಕ್ಕೆ ಕಾರಣವಾದ) ಸಂಕಲ್ಪಗಳನ್ನು ತ್ಯಾಗ ಮಾಡಿದವನೂ ಆದ ಪುರುಷನೇ ಯೋಗಾರೂಢನು’’ (ಭ.ಗೀ.: 6.4).
ಭೋಗಸಂಕಲ್ಪಗಳಿಂದಾಗಿ ಭೋಗಕರ್ಮಗಳಲ್ಲಿ ತೊಡಗುತ್ತೇವೆ. ಇದಕ್ಕೆ ಸಿಲುಕದೆ ಸಂಕಲ್ಪಮುಕ್ತನೂ ಭೋಗಮುಕ್ತನೂ ಕರ್ಮಮುಕ್ತನೂ ಆದವನು ‘ಯೋಗಾರೂಢ’. ಮುಂದಿನ ಶ್ಲೋಕವು ಮಹತ್ವದ್ದು.
‘‘ಉದ್ಧರೇದಾತ್ಮನಾತ್ಮಾನಂ…’’ ‘‘ನಮ್ಮನ್ನು ನಾವೇ ಉದ್ಧಾರ ಮಾಡಿಕೊಳ್ಳಬೇಕು. ಆತ್ಮಾವಸಾದನವನ್ನು ಮಾಡಿಕೊಳ್ಳಬಾರದು. ನಮಗೆ ಬಂಧುವೂ ನಾವೇ ಮಿತ್ರನೂ ನಾವೇ’’ (ಭ.ಗೀ.: 6.5).
ಕೃಷ್ಣನ ಈ ಮಾತನ್ನು ಸುವರ್ಣಾಕ್ಷರಗಳಲ್ಲಿ ಬರೆದಿಟ್ಟುಕೊಳ್ಳಬೇಕು. ಅತ್ಯುಚ್ಚ ಯೋಗಸಾಧನೆಗೆ ಇದೆಷ್ಟು ಮುಖ್ಯವೋ, ವ್ಯಾವಹಾರಿಕ ಬದುಕಿನಲ್ಲಿನ ಕಾರ್ಯಸಾಧನೆಗೂ, ಆತ್ಮಾವಲೋಕನಕ್ಕೂ, ದೇಶ-ಧರ್ಮಗಳ ರಕ್ಷಣೆ-ಪೋಷಣೆಗೆ ನಿಲ್ಲಬೇಕಾದಾಗಲೂ ಈ ಮಾತು ನಮ್ಮನ್ನು ಮುನ್ನಡೆಸುವಂಥದ್ದು. ‘ನಮಗೆ ನಾವೇ ಹೊಣೆ’ ಎನ್ನುವ ಜವಾಬ್ದಾರಿ ಬಂದಾಗಲೇ ಮನುಷ್ಯನು ಪ್ರಾಮಾಣಿಕ ಸಾಧನೆಗೆ ಮೊದಲಾಗುವುದು.
ಲೌಕಿಕ ಜೀವನದಲ್ಲೂ ಗುರಿಸಾಧನೆಯ ಹಾದಿಯಲ್ಲಿ ಹಲವು ಅನುಕೂಲ ಪ್ರತಿಕೂಲಗಳು ಬಂದುಹೋಗುತ್ತವೆ. ಅವುಗಳಿಗೆಲ್ಲ ಪ್ರತಿಸ್ಪಂದಿಸುತ್ತಿದ್ದರೆ ಸಾಧನೆಯೇ ಮುಂದೆ ಸಾಗಲಾರದು. ಸೋತರೂ ಗೆದ್ದರೂ ತಲೆ ಕೆಡಿಸಿಕೊಳ್ಳದೆ, ಯಾರನ್ನೂ ಅತಿಯಾಗಿ ನೆಚ್ಚದೆ, ಹೀಯಾಳಿಸದೆ, ಆತ್ಮಾವಲೋಕನ ಮಾಡುತ್ತ, ಸತತ ಶ್ರಮಿಸುವವರೇ ಲೋಕದಲ್ಲಿ ಯಶಸ್ವಿಯಾಗಲು ಸಾಧ್ಯ!
‘ಉದ್ಧರೇದಾತ್ಮನಾತ್ಮಾನಂ’¬¬ಮಾತು ಯೋಗಸಾಧನೆಯ ನೆಲೆಯಲ್ಲೂ ದಾರಿದೀಪ. ಲೋಕದ ವಿವರಗಳಲ್ಲಿ ಕಳೆದುಹೋದ ನಾವು ಆತ್ಮಸಂಸ್ಥಿತಿಯಿಂದ ಜಾರಿದ್ದೇವೆ. ಮತ್ತೆ ಯೋಗಸಂಸ್ಥಿತಿಗೇರಲು ಆತ್ಮಸ್ವಾಮ್ಯ ಸಾಧಿಸಬೇಕಿದೆ. ‘ನಾನು ಪಾಪಿ, ದುರ್ಬಲ, ಅದೃಷ್ಟಹೀನ, ನನ್ನಿಂದೇನಾದೀತು?’ ಎಂಬ ಕೀಳರಿಮೆ, ಅವಿಶ್ವಾಸಗಳು ನಮ್ಮಲ್ಲಿದ್ದರೆ ಯೋಗಸಾಧನೆಯ ಉತ್ಸಾಹವೇ ಬರದು. ಈ ‘ಕಾರ್ಪಣ್ಯಭಾವ’ ಯಾಕೆ ಏಳುತ್ತದೆ? ಮನುಷ್ಯನು ಮಾಡಬೇಕಾದ ಧರ್ಮ-ಕರ್ಮ-ಉಪಾಸನಾವಿಧಿಗಳನ್ನು ಮಾಡುತ್ತ ಸಂತೋಷವಾಗಿರದೆ ದಕ್ಕದ ಭೋಗಗಳ ಹಂಬಲದಲ್ಲಿ ಬೇರಾವುದೋ ಪೂಜೆ-ಜ್ಯೋತಿಷ್ಯಗಳೆಂದು ತಿರುಗಾಡುತ್ತಾನೆ! ಮೋಸ-ಹಿಂಸಾಚಾರಗಳಿಗೆ ಇಳಿಯುತ್ತಾನೆ. ಇವೆಲ್ಲದರಿಂದ ಒಂದಿಷ್ಟು ಭೋಗ ಸಿಗಬಹುದು. ಆದರೆ ಆತ್ಮಗೌರವ ಕುಂದುತ್ತದೆ. ನೆಮ್ಮದಿ ಹಾಳಾಗುತ್ತದೆ. ರೋಗ, ಕಲಹ, ಮಾನಭಂಗಗಳುಂಟಾಗುತ್ತವೆ. ಕಟ್ಟಿಕೊಂಡ ಭೋಗವೂ ಕೈತಪ್ಪುವ ಭಯ. ಇಂಥ ಸಂದರ್ಭದಲ್ಲಿ ಮನುಷ್ಯನು ದೃಢಮನದಿಂದ ‘ಸಾಕು’ ಎಂದು ಹೊರಬರಬೇಕು, ಕಟ್ಟಿಕೊಂಡದ್ದನ್ನು ಕೊಡವಿ ಆತ್ಮಸಂಸ್ಥಿತಿಯತ್ತ ಗಮನ ಹರಿಸಬೇಕು. ಆಗ ಮನದ ಮೋಡಗಳು ಕರಗಿ ನೆಮ್ಮದಿ ಮರುಕಳಿಸುತ್ತದೆ, ಮುಂದಿನ ಕಾರ್ಯವೇನೆಂಬ ಸ್ಪಷ್ಟತೆ ಮೂಡುತ್ತದೆ. ಆದರೆ ಹಾಗಾಗಲು ಮಮಕಾರ ಬಿಡಬೇಕಲ್ಲ! ನೆಚ್ಚಿಕೊಂಡದ್ದು ಬಳಲಿಸಿ ಬೀಳಿಸಿದರೂ ಅದನ್ನು ಬಿಡಲಾಗದು! ಭಯವಾಗುತ್ತದೆ! ಜೀವನವೇ ದುರ್ಭರವೆನಿಸುತ್ತದೆ! ದೈನ್ಯಭಾವ ಆವರಿಸುತ್ತದೆ! ‘ನನಗೇಕೆ ಹೀಗಾಯಿತು? ಏನು ತಪ್ಪು ಮಾಡಿದೆ? ನನಗಿನ್ನೇನು ಗತಿ? ನನ್ನನ್ನಾರು ಉದ್ಧಾರ ಮಾಡಿಯಾರು?’ ಎಂದೆಲ್ಲ ಅನಿಸಲಾರಂಭಿಸುತ್ತದೆ!
‘ತಾನೇ ಕಟ್ಟಿಕೊಂಡ ಸಂಕಲ್ಪಗಳ ಜಾಲದಿಂದ ಹೊರಬಂದರಾಯಿತು!’ ಎನ್ನುವ ಸಾಮಾನ್ಯ ಸತ್ಯವು ಹೊಳೆಯುವುದೇ ಇಲ್ಲ! ಮೋಹಜನ್ಯ ದುಃಖದ ಭರದಲ್ಲಿ ಮನುಷ್ಯನು ತನ್ನ ಸುತ್ತಲ ಜನರನ್ನೂ, ಜಗತ್ತನ್ನೂ ದೂಷಿಸುತ್ತಾನೆ. ತನ್ನ ಜಾತಕವನ್ನೂ ಅದೃಷ್ಟವನ್ನೂ ದೇಶಕಾಲಗಳನ್ನೂ ದೂಷಿಸುತ್ತಾನೆ! ದೇವರನ್ನೇ ದೂಷಿಸುತ್ತಾನೆ! ತಲೆಯ ತುಂಬ ದುಃಖ-ದುಗುಡ! ಆಚೆ ಬರುವ ಉಪಾಯವಿಲ್ಲವೆಂದಲ್ಲ! ಆದರೆ ಪ್ರಕ್ಷುಬ್ಧಮಾನಸದಲ್ಲಿ ಅದು ಹೊಳೆಯುವುದಿಲ್ಲ ಅಷ್ಟೆ! ಈ ‘ಕಾರ್ಪಣ್ಯ’ಭಾವವೇ ನಮ್ಮ ದಾರಿ ತಪ್ಪಿಸುವುದು. ಅಪಾತ್ರರಲ್ಲಿ ಮೋಹವನ್ನು ಮೂಡಿಸುವುದು. ಮೋಹಗ್ರಸ್ತ ಮನಕ್ಕೆ ಧರ್ಮವು ‘ನಿಷ್ಠುರ’ ಎನಿಸುತ್ತದೆ. ವೈರಿಗಳು ‘ಮಿತ್ರರು’ ಎನಿಸುತ್ತಾರೆ. ಧರ್ವಧರ್ಮಗಳು ಅಸ್ಪಷ್ಟವಾಗುತ್ತವೆ. ಕರ್ತವ್ಯಪ್ರಜ್ಞೆಯಿಂದ ಮುನ್ನುಗ್ಗಿ ಸಮಸ್ಯಾ-ಪರಿಹಾರವನ್ನು ಮಾಡುವ ಹುರುಪೇ ಇಲ್ಲವಾಗುತ್ತದೆ. ‘ನಾನೊಬ್ಬನು ಏನು ತಾನೆ ಮಾಡಬಲ್ಲೆ? ನನ್ನಿಂದ ಎಷ್ಟು ತಾನೆ ಮಾಡಲಾದೀತು? ನಾನು ಹುಲುಮಾನವ! ಎಲ್ಲ ಕಲಿಯುಗದ ಪ್ರಭಾವ!’ ಎಂಬೀ ತೆರನಾದ ವಾಕ್ಯಗಳು ಚಿಮ್ಮುತ್ತವೆ! ‘ಯಾವುದೋ ಪವಾಡ ನಡೆದೀತು, ಎಲ್ಲವೂ ಹಠಾತ್ತನೆ ಸರಿಹೋದೀತು!’ ಎಂದು ಕನಸು ಕಾಣುತ್ತ ಸುಮ್ಮನೆ ಕೂತಿರುವುದು ‘ಧರ್ಮ’ ಎಂಬ ಭ್ರಮೆ ಮೂಡುತ್ತದೆ. ಅರ್ಜುನನನ್ನು ಆವರಿಸಿ ಮತಿಗೆಡಿಸಿದ್ದೂ ಇದೇ ‘ಕಾರ್ಪಣ್ಯದೋಷವೇ’ ಅಲ್ಲವೇ?!
ಎಲ್ಲವೂ ದೈವೇಚ್ಛೆಗೆ ಅಧೀನ. ಆದರೂ ‘ನಿಮಿತ್ತಮಾತ್ರನಾಗಿ’ ಮನುಷ್ಯ ನಿಲ್ಲದಿದ್ದರೆ ದೇವರು ಸಹಾಯಕ್ಕೆ ಬರಲಾರ. ಸರ್ವಶಕ್ತ ಶ್ರೀಕೃಷ್ಣನು ತಾನೇ ‘ಪವಾಡ ಮಾಡಿ’ ಕೌರವರನ್ನೇಕೆ ಧ್ವಂಸ ಮಾಡಲಿಲ್ಲ? ಅದು ಅವನ ವಿಧಾನವಲ್ಲ! ಧರ್ಮಪಕ್ಷಿಗಳೆಲ್ಲ ಪಾಂಡವಚಮುವಿನಲ್ಲಿ ಸಂಘಟಿತರಾಗಿ ನಿಂತಮೇಲೆಯೇ ಅವನು ಅವರ ಸಾರಥ್ಯಕ್ಕೆ ಬಂದದ್ದು! ತಾನೂ ನಿಂತು ಅವರ ಕೈಯಲ್ಲೂ ಮಾಡಿಸಿದ!
ಕೃಪೆ: ವಿಜಯವಾಣಿ