ನೀನಿರ ಬೇಕಾದ ಕ್ಷಣ
ಸುಖ ದುಃಖದಲಿ ಸಮಭಾಗಿಯಾಗಿ ಸಪ್ತಪದಿ
ತುಳಿದರೂ ಸಂಸಾರನೌಕೆಯಲಿ ಜೊತೆಯಾಗಲಿಲ್ಲ
ನನ್ನೆಲ್ಲ ಮೊದಲುಗಳು ನಿನಗೆ ಧಾರೆ ಎರೆದರೂ
ಆ ಪವಿತ್ರ ಪ್ರೀತಿಗೆ ನೀ ಅವಮಾನಿಸದೆ ಬಿಡಲಿಲ್ಲ
ನಿನ್ನ ಅಪ್ಪುಗೆಯ ಬಯಸಿ ನಾ ಬಂದಾಗ
ನೀನೆನಗೆ ವಿಶಾಲ ಬಾಹುಗಳಲ್ಲಿ ಆಲಂಗಿಸಲಿಲ್ಲ
ಎದುರಿಸಿದ ಒಂದೊಂದು ಕಡಲಾಳದ ಕಷ್ಟಕ್ಕೆ
ಭರವಸೆಯ ಅಭಯ ಹಸ್ತ ನೀಡಲಿಲ್ಲ
ನಾ ಬಿಕ್ಕಳಿಸಿ ಕಣ್ಣೀರು ಸುರಿಸುವಾಗ ಬಳಿ
ಬಂದು ಒದ್ದೆಯಾದ ಕೆನ್ನೆಯ ಒರಿಸಿ ಸಮಾಧಾನಿಸಲಿಲ್ಲ
ಜವಾಬ್ದಾರಿಗಳ ಗಂಟು ಹೆಗಲಿಗೇರಿ
ದೇಹ ನಲುಗಿದರೂ ಭರವಸೆಗೆ ನೀ ಬರಲೇ ಇಲ್ಲ
ದುಃಖಿಸಿದ ಪ್ರತಿ ಸಂದರ್ಭಕ್ಕೆ ನೀ ಕಾರಣವಾದರೂ
ಕ್ಷಮಿಸಿದ ನನಗೆ ನೀ ಋಣಿಯಾಗಲಿಲ್ಲ
ನೀನಿರಲೇ ಬೇಕಾಗಿ ಹತೊರೆದ ಒಂದೊಂದು
ಕ್ಷಣ, ನಾ ನಲುಗಿ ಬೆಂದು ಬೆಂಡಾದರೂ ನೀ ಕರಗಲಿಲ್ಲ
ನಾನಿಂದು ಗಂಟಿನ ನಂಟಿಗೆ ಬಿದ್ದು ದೇಹ ನೀಡ ಬಹು ದಷ್ಟೇ
ಅಂತರಂಗದಲ್ಲಿ ನೀ ನೆಲೆಸಲು ಸಾಧ್ಯವೇ ಆಗಲಿಲ್ಲ
ಅಂದು ಕಲ್ಲಾಗಿತ್ತು ಹೃದಯ ನಿನ್ನದು
ಹೂವಿನಂತೆ ಇತ್ತು ಮನ ನನ್ನದು
ನಿನ್ನ ಮನವ ಹೂವಾಗಿಸಲು ನಾನಂದು ಶ್ರಮಿಸಿದೆ
ಸೋತ ನನ್ನ ಹೃದಯವಿಂದು ಕಠೋರವಾಗಿದೆ
ಪ್ರೀತಿ, ಪ್ರೇಮ ಸಹಚರ ಶಬ್ಧಗಳು ನನಗೆ ಬೇಸರಿಸಿವೆ
ನಲ್ಲ ವಿಶಾಲ ಹೃದಯ ವಿಂದು ಶೂನ್ಯವಾಗಿದೆ
ಶೂನ್ಯ ದಾಂಪತ್ಯದಲ್ಲಿ ಇನಿಯ ಇನಿಯನಾಗಲಾರ
ನಲ್ಲೆಯ ಪ್ರೀತಿಗಳಿಸಲಾರ ಬದುಕು ಹಸನಾಗಿಸಲಾರ.
ಉಮಾಭಾತಖಂಡೆ