ನಿನಗೆ ನೀನೇ ಹೊಣೆ
ಕರ್ಮಯೋಗದಲ್ಲಿ ಯುಕ್ತನು ನಿರ್ಲಿಪ್ತನಾಗಿ ಕರ್ಮವನ್ನೆಸಗಿ ನೈಷ್ಠಿಕೀಶಾಂತಿಯನ್ನು ಪಡೆದರೆ, ಅಯುಕ್ತನು (ಕರ್ಮಯೋಗವನ್ನು ಆಚರಿಸದವನು) ಅದೇ ಕರ್ಮದಲ್ಲಿ ಕಾಮವನ್ನೂ ಫಲಾಸಕ್ತಿಯನ್ನೂ ಬೆಳೆಸಿಕೊಂಡು ಬದ್ಧನಾಗುತ್ತಾನೆ. (ಭ.ಗೀ.: 5.11-12) ಹಾಗಾಗಿ ವಶಿಯಾದವನು (ತನ್ನನ್ನು ತಾನು ಗೆದ್ದವನು) ಮನಸ್ಸಿನಲ್ಲಿ ಕರ್ಮಗಳನ್ನೂ ಅವುಗಳ ಫಲಗಳನ್ನೂ ತ್ಯಾಗಮಾಡಿ ಸುಖವಾಗಿ ಇರುತ್ತಾನಾದ್ದರಿಂದ, ಆತನು ನವದ್ವಾರಗಳ ಈ ದೇಹದಲ್ಲಿದ್ದರೂ, (ಏನನ್ನೂ) ‘ಮಾಡದೆ’ ‘ಮಾಡಿಸದೆ’ ಇರುತ್ತಾನೆ. (5.13) ಎಂದು ಕೃಷ್ಣನು ಹೇಳುತ್ತಿದ್ದುದನ್ನು ನೋಡಿದ್ದೆವು.
ನವದ್ವಾರಗಳಿಂದ (ಬಾಯಿ, ಮೂಗಿನ ಹೊಳ್ಳೆಗಳು, ಕಣ್ಣುಗಳು, ಕಿವಿಗಳು, ಜನನೇಂದ್ರಿಯ-ಗುದದ್ವಾರ) ಕೂಡಿರುವ ಈ ದೇಹದಲ್ಲಿರುವವರೆಗೂ ಕರ್ಮಗಳು ತಪ್ಪವು. ದೇಹೇಂದ್ರಿಯಗಳ ಮೂಲಕ ಮನಸ್ಸು ಹರಿದು ವಿಷಯಗಳಲ್ಲಿ ‘ಮೋಹ’ ಬೆಳೆಸಿಕೊಳ್ಳುತ್ತದಲ್ಲ, ಅದನ್ನು ಮಾತ್ರವೇ ನಿಯಂತ್ರಿಸಬಹುದು! ಹಾಗೆ ನಿಯಂತ್ರಿಸಿ ಮಾಡುವ ನಿರ್ಲೆಪಕರ್ಮವೇ ‘ಕರ್ಮಯೋಗ’. ಆದರೆ ಕರ್ಮಯೋಗದ ಮರ್ಮವನ್ನರಿಯದಂತಹ ಮೋಹವಶನು ತನ್ನ ದೇಹ-ಮನಸ್ಸುಗಳನ್ನು ಸುಖಪಡಿಸಲು ಸುತ್ತಲ ಎಲ್ಲವನ್ನೂ ಎಲ್ಲರನ್ನೂ ಬಾಚಿಕೊಳ್ಳಲೆಳಸುತ್ತಾನೆ. ಸುಖ ಸಿಕ್ಕರೆ ಹಿಗ್ಗುತ್ತ, ದುಃಖ ಬಂದರೆ ಕುಗ್ಗುತ್ತ, ಭಾವನಾವೈಪರೀತ್ಯಗಳಿಂದ ಹೊಯ್ದಾಡುತ್ತಾನೆ. ಮತಿಯು ಬಗ್ಗಡವಾಗುತ್ತದೆ. ಅಂತಹವನ ನಿರ್ಣಯಗಳೂ ‘ಭೋಗಪ್ರಾಪ್ತಿ’ಯ ಲೆಕ್ಕಾಕ್ಕನುಸಾರವಾಗಿ ನಡೆಯುತ್ತವೆಯೇ ಹೊರತು ಧರ್ಮ-ನ್ಯಾಯಗಳನ್ನನುಸರಿಸಿ ಅಲ್ಲ. ಆದರೆ ಮನಸ್ಸನ್ನು ನಿಗ್ರಹಿಸಿರುವವನು ದೇಹಸಂಬಂಧಿಯಾದ ಕೆಲಸಕಾರ್ಯಗಳನ್ನು ಮಾಡುತ್ತಿದ್ದರೂ, ‘ನಾನೇನೂ ಮಾಡುತ್ತಿಲ್ಲ, ಎಲ್ಲವೂ ದೈವೇಚ್ಛೆಯಂತೆ ನಡೆಯುತ್ತಿದೆ’ ಎಂಬ ಬೋಧೆಯನ್ನು ಪಡೆದಿರುತ್ತಾನೆ. ಆತ ದೇಹದಿಂದ ‘ಮಾಡಿದರೂ’, ಮನಸ್ಸಿನಿಂದ ‘ಮಾಡಿಲ್ಲ’. ಹಾಗಾಗಿ ಅವನು ‘ಮಾಡಿಯೂ ಮಾಡಿಲ್ಲ’ದವನು ಎನಿಸುತ್ತಾನೆ.
ಭಗವಂತನು ಈ ಲೋಕದಲ್ಲಿ ಕರ್ಮಗಳನ್ನಾಗಲಿ ಆ ಕರ್ಮಫಲಗಳಲ್ಲಿನ ಸಂಗವನ್ನು (ಅದರ ಕುರಿತಾದ ನಮ್ಮ ಮೋಹವನ್ನು) ಸೃಜಿಸುವುದಿಲ್ಲ. ಆದರೆ ಮನುಷ್ಯರ ಸ್ವಭಾವವೇ ಅದನ್ನು ಉಂಟುಮಾಡುತ್ತದೆ. ಪಾಪವನ್ನಾಗಲಿ ಪುಣ್ಯವನ್ನಾಗಲಿ ಭಗವಂತನು ಉಂಬುವುದಿಲ್ಲ. ಅಜ್ಞಾನವು ಜೀವರ ಜ್ಞಾನವನ್ನು ಆವರಿಸಿರುವುದರಿಂದ ಅವರು ಮೋಹವಶರಾಗುತ್ತಾರೆ. (5.13-14)
ಎಲ್ಲವೂ ಭಗವಂತನ ಸೃಷ್ಟಿಯೇ ನಿಜ. ಆದರೆ ಭಗವಂತನು ಜಗತ್ತನ್ನೂ ಜೀವರನ್ನೂ ಅವರೊಳಗೆ ಮತಿಮನಸ್ಸುಗಳನ್ನೂ ಸೃಜಿಸಿಟ್ಟಿದ್ದಾನೆ, ಪಾಪಪುಣ್ಯಗಳನ್ನಲ್ಲ. ಜೀವನು ಅಂತಃಕರಣಗಳನ್ನು ಸೂಕ್ತವಾಗಿ ಬಳಸುತ್ತ, ಸುತ್ತಲ ವ್ಯಕ್ತಿ-ವಸ್ತು-ಸಂಬಂಧಗಳಲ್ಲಿ ಹದವರಿತು ವ್ಯವಹರಿಸಿದರೆ, ಅವನಿಂದ ಪುಣ್ಯಕಾರ್ಯಗಳಾಗುತ್ತವೆ, ಅಂಟದೆ ಶುದ್ಧವಾಗಿದ್ದರೆ ಮುಕ್ತನೇ ಆಗುತ್ತಾನೆ! ಆದರೆ ಅಂತಃಕರಣಗಳನ್ನು ಅನಿಯಂತ್ರಿವಾಗಿ ಬಳಸಿ, ವಸ್ತು-ವ್ಯಕ್ತಿ-ಸಂಬಂಧಗಳಲ್ಲಿ ಮೋಹ ಬೆಳೆಸಿಕೊಂಡರೆ, ಬಾಚಿಟ್ಟುಕೊಳ್ಳುವ ಹುಚ್ಚಿಗೆ ಬಿದ್ದರೆ, ಅವನಿಂದ ಪಾಪಕಾರ್ಯಗಳು ನಡೆಯುತ್ತವೆ. ಸುಖದುಃಖಗಳಿಂದ ಹೊಯ್ದಾಡಿ ಕಂಗೆಡುತ್ತಾನೆ. ಕೊನೆಗೆ ‘ಇದಕ್ಕೆಲ್ಲ ಆ ದೇವರೇ ಕಾರಣ!’ ಎಂದೂ ಶಪಿಸುತ್ತಾನೆ!
ಪ್ರಕೃತಿಯು ನೀಡುವ ಮಣ್ಣುನೀರುಗಳನ್ನು ಕುಂಬಾರನು ತನ್ನ ಕಾರ್ಯಾಗಾರದಲ್ಲಿ ತಂದಿರಿಸಿಕೊಳ್ಳುತ್ತಾನೆ. ಬೆರೆತು ಅಶುದ್ಧವಾಗದಂತೆ ಅವುಗಳನ್ನು ಅಂತರದಲ್ಲೂ ಇರಿಸುತ್ತಾನೆ. ಮಡಕೆಯನ್ನು ತಯಾರಿಸುವಾಗ ಅಗತ್ಯವಿದ್ದಷ್ಟು ಮಣ್ಣು-ನೀರುಗಳನ್ನು ಮಾತ್ರ ಬೆರೆಸಿಕೊಳ್ಳುತ್ತಾನೆ. ಹದವರಿತು ತಯಾರಿಸಿದರೆ ಉತ್ತಮ ಮಡಕೆಗಳು ತಯಾರು, ಇಲ್ಲದಿದ್ದರೆ ಸೀಳು ಬೀಳುತ್ತವೆ. ಅಷ್ಟೇ ಅಲ್ಲ, ಮಣ್ಣುನೀರುಗಳನ್ನು ಅಂತರದಲ್ಲಿಡದೆ, ಹೇಗೆಂದರೆ ಹಾಗೆ ಬೆರೆಯಲು ಬಿಟ್ಟುಬಿಟ್ಟರೆ, ಅವನ ಕಾರ್ಯಾಗಾರವೇ ಕೊಚ್ಚೆಕೆಸರುಗಳ ಮಡುವಾಗಿಬಿಟ್ಟೀತು! ಕುಂಬಾರನ ಕೌಶಲಕ್ಕೆ ಕಾರಣ ಮಣ್ಣುನೀರುಗಳೂ ಅಲ್ಲ, ಅವನ್ನು ಸೃಷ್ಟಿಸಿರುವ ಪ್ರಕೃತಿಯೂ ಅಲ್ಲ, ಆದರೆ ಅದನ್ನೆಲ್ಲ ಹದವಾಗಿ ಬಳಸುವ ಅವನ ನೈಪುಣ್ಯವೇ ಕಾರಣ! ಅವನ ಎಚ್ಚರಗೇಡಿತನದಿಂದ ಮಣ್ಣುನೀರುಗಳು ಬೆರೆತು ಅಂಗಳವೆಲ್ಲ ಕೊಚ್ಚೆಯಾದರೆ, ಅದಕ್ಕೂ ಪ್ರಕೃತಿಯಾಗಲಿ ಮಣ್ಣುನೀರುಗಳಾಗಲಿ ಕಾರಣವಲ್ಲ! ಅವನ ಅವಿವೇಕವೇ ಕಾರಣ ಅಲ್ಲವೆ?
ನಮ್ಮ ಬಾಳೂ ಅಷ್ಟೆ! ಭಗವಂತನ ವಿಶಾಲ ಸೃಷ್ಟಿಯಲ್ಲಿನ ಪುಟ್ಟ ಕಾರ್ಯಾಗಾರ! ಅಲ್ಲಿ ವ್ಯಕ್ತಿಗಳು ವಸ್ತುಗಳೂ ಸಂಬಂಧಗಳೂ ಕೆಲಸಕಾರ್ಯಗಳೂ ಇರುತ್ತವೆ. ಅಂತಃಕರಣಗಳಾದ ನಮ್ಮ ಮತಿಮನಗಳೂ ಇವೆ. ನಾವು ಅದನ್ನೆಲ್ಲ ಹದವರಿತು ಬಳಸಿದಾಗ, ನಮ್ಮಿಂದ ಪುಣ್ಯಕಾರ್ಯಗಳು ನಡೆಯುತ್ತವೆ. ಸರಿಯಾಗಿ ಬಳಸದೆ ಹೋದರೆ ಇದೇ ಜಗತ್ತು-ಜೀವ-ಸಂಬಂಧಗಳಲ್ಲಿ ಮೋಹ-ದುಗುಡಗಳ ಕೆಸರು ಸೃಷ್ಟಿಯಾಗುತ್ತದೆ. ನಮ್ಮ ಬಾಳಿನಂಗಳವು ಅಂದಗೆಡುತ್ತದೆ. ಆಗ ನಾವು ದೇವರನ್ನೂ ನವಗ್ರಹಗಳನ್ನೂ ದೂಷಿಸುತ್ತೇವೆ! ನಾವೆಸಗುವ ಪಾಪಪುಣ್ಯಗಳಿಗೆ ಕಾರಣ ಆ ಸೃಷ್ಟಿಕರ್ತನೂ ಅಲ್ಲ, ಸುತ್ತಲ ಪ್ರಪಂಚವೂ ಅಲ್ಲ, ನಮ್ಮ ಅಂತಃಕರಣಗಳೂ ಅಲ್ಲ. ಆದರೆ ಅವುಗಳನ್ನೆಲ್ಲ ಹದವರಿತು ಬಳಸಲಾಗದ ನಮ್ಮ ಅವಿವೇಕವೇ ಕಾರಣ! ಹಾಗಾಗಿ ನಾವೇ ಮೂಡಿಸಿಕೊಂಡಿರುವ ಕೆಸರಲ್ಲಿ ನಾವೇ ಜಾರಬೇಕು, ಬೀಳಬೇಕು, ಏಳಬೇಕು, ಅದನ್ನೆಲ್ಲ ತೊಳೆದು ಶುಚಿಗೊಳಿಸಿಕೊಳ್ಳಬೇಕು!
ಪಾಪಪುಣ್ಯಗಳೆಲ್ಲ ನಮ್ಮ ಇಹಜೀವನದಲ್ಲಿನ ವರ್ತನೆಗೆ ಸಂಬಂಧಿಸಿದ್ದು. ಭಗವಂತನು ಎಲ್ಲಕ್ಕೂ ಸಾಕ್ಷಿಯಾಗಿರುತ್ತಾನೆ. ಆದರೆ ಯಾವುದರಿಂದಲೂ ಲಿಪ್ತನಾಗುವುದಿಲ್ಲ. ‘ದೀಪದ ಬೆಳಕಿನಲ್ಲಿ ಭಗವದ್ಗೀತೆಯನ್ನೂ ಓದಬಹುದು, ಕೊಲೆಯನ್ನೂ ಮಾಡಬಹುದು. ಆದರೆ ಸ್ವತಃ ದೀಪಕ್ಕೆ ಅದರಿಂದ ಪುಣ್ಯವೂ ಬಾರದು, ಪಾಪವೂ ಬಾರದು. ಅಂತೆಯೇ ಅಂತರ್ಯಾಮಿಯಾದ ಭಗವಂತನು ಎಲ್ಲಕ್ಕೂ ಸಾಕ್ಷಿಯಾಗಿದ್ದರೂ ಅವನು ಈ ಪುಣ್ಯಪಾಪಗಳಿಂದ ಲಿಪ್ತನಾಗುವುದಿಲ್ಲ’ ಎಂಬ ರಾಮಕೃಷ್ಣರ ಮಾತು ಇಲ್ಲಿ ಸ್ಮರಣೀಯ.
ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ