ನಿಜವಾದ ಬಡವರು ಯಾರು?
ಫೇಸ್ಬುಕ್ಕಿನಲ್ಲಿ ಯಾವಾಗಲೂ ಪುನರಾವರ್ತಿತವಾಗುವ ಕಲೆವು ಕಥೆಗಳಿವೆ. ಅದರಲ್ಲಿ ಒಂದು:
ಒಮ್ಮೆ ಆಗರ್ಭ ಶ್ರೀಮಂತನೊಬ್ಬ ತನ್ನ ಮಗನಿಗೆ ತಾನು ಎಂಥ ಶ್ರೀಮಂತ ಬಾಲ್ಯವನ್ನು ಕರುಣಿಸಿದ್ದೇನೆಂದು ಮನಗಾಣಿಸಬೇಕೆಂದೂ, ಆ ವಿಷಯದಲ್ಲಿ ತನ್ನ ಮಗ ಎಷ್ಟು ಅದೃಷ್ಟವಂತ ಎಂಬುದು ತಿಳಿಯಲೆಂದೂ ನಾಲ್ಕು ದಿನ ಪಕ್ಕದ ಹಳ್ಳಿಗೆ ಕರೆದೊಯ್ಯುತ್ತಾನೆ.
ಮರಳಿ ಬರುವಾಗ, ಮಗನ ಅನಿಸಿಕೆ ತಿಳಿಯಲು ಪ್ರಶ್ನಿಸಿದಾಗ ಆ ಬಾಲಕ ಹೇಳಿದ್ದು….
“ಅಪ್ಪಾ, ನಮ್ಮ ಮತ್ತು ಅವರ ಬದುಕಿಗೆ ಹೋಲಿಕೆಯೇ ಸಲ್ಲ… ನಮ್ಮ ಮನೆಯೇ ನಮಗೆ ಊರು… ಅವರಿಗೆ ಇಡೀ ಊರೇ ಮನೆ. ನಾವು ರಾತ್ರಿ ಬೆಳಕಿಗಾಗಿ ದೀಪ ಹಚ್ಚುತ್ತೇವೆ… ಅವರಿಗೆ ಚಂದ್ರ, ನಕ್ಷತ್ರಗಳದೇ ಬೆಳಕು. ನಾವು ಆಡಲು ಕ್ಲಬ್, ಮಾಲ್ಗಳನ್ನು ಹುಡುಕಿಕೊಂಡು ಹೋಗುತ್ತೇವೆ. ಅವರಿಗೆ ಊರಿನ ಬಯಲೆಲ್ಲ ಆಡುಂಬೊಲ… ನಾವು ಒಂದೋ. ಎರಡೋ ನಾಯಿಗಳನ್ನು ಸಾಕಿದರೆ ಊರನಾಯಿಗಳೆಲ್ಲ ಅವರದೇ.. ಚೀಲ, ಪೆಟ್ಟಗೆಗಳಲ್ಲಿ ನಾವು ಆಹಾರ ಸಾಮಗ್ರಿ ತರುತ್ತೇವೆ…. ಅವರು ಹೊಲದಲ್ಲಿ ಖುದ್ದು ಬೆಳೆದು ತಿನ್ನುತ್ತಾರೆ. ನಮಗೇಕೆ ಆ ಶ್ರೀಮಂತಿಕೆ ಇಲ್ಲಪ್ಪ?”
ಇಲ್ಲಿ ಮಗನಿಗೆ ಅಪ್ಪ ಏನು ಹೇಳಿದ? ಮಗ ಹೇಳಿದ್ದು ನಿಜವೋ? ಉತ್ಪ್ರೇಕ್ಷೆಯೋ? ಅನ್ನುವದು ನಮಗೆ ಬೇಡ. ಆದರೆ ಆ ರೀತಿಯ ಬಾಲ್ಯ ಕಳೆದಂಥವರಿಗೆ ಖಂಡಿತ Nostalgic feeling ಬಂದು ಹನಿಗಣ್ಣಾಗುವುದು ನೂರಕ್ಕೆ ನೂರು ಖಾತ್ರಿ.
ನಾನೂ ಅವರಲ್ಲಿ ಒಬ್ಬಳು ಎಂಬ ಹೆಮ್ಮೆ ನನಗೆ. ಹೀರೇಕೇರೂರು ತಾಲೂಕಿನ ರಟ್ಟೀಹಳ್ಳಿ ಹೆಚ್ಚು ಕಡಿಮೆ ಇದೇ ಬಾಲ್ಯವನ್ನು ನಮಗೆ ಕೊಟ್ಟಿದೆ. ಒಂದು ಪಡಸಾಲೆ, ಒಂದು ಅಡುಗೆ ಮನೆಯ, ಮನೆಯಲ್ಲಿ 15 ವರ್ಷಕ್ಕೂ ಮಿಕ್ಕಿ ಹತ್ತು ಜನರ ಸಂಸಾರ ನಡೆದದ್ದು, ಆಡಲು ಇಡೀ ಹಳ್ಳಿಯ ಬಯಲುಗಳು, ವಿದ್ಯುತ್ ಇಲ್ಲದೆ sslc ಮುಗಿಸಿದ್ದು, ಒಂದು ಭಾಗವಾದರೆ ಒಂದು ಚಿಕ್ಕಾಸಿನ ಖರ್ಚಿಲ್ಲದೇ ಸುಂದರ, ಶ್ರೀಮಂತ ಬಾಲ್ಯ ಕಳೆದದ್ದು ಇಂದಿಗೂ ಹಚ್ಚ ಹಸಿರು.
ಡಬ್ಬಿಯಿಂದ ಬೇರೆಯಾದ ಮುಚ್ಚಳಗಳು, ಮುಚ್ಚಳದಿಂದ ಬೇರೆಯಾದ ಡಬ್ಬಿಗಳು, ಗಜಗ, ಹುಣಸೆಬೀಜ, ಒಡೆದ ಬಳೆ ತುಂಡುಗಳು, ಜೋಳದ ದಂಟುಗಳು. ಕಟೆದ ಆಣೆಕಲ್ಲುಗಳು, ಪುಕ್ಕಟೆ ಸಮೇದ್ಧವಾಗಿ ಸಿಗುವ ಮಣ್ಣರಾಶಿ, ಗಾಜಿನ ಗೋಲಿಗಳು, ಚಪ್ಪಟೆ ಕಲ್ಲುಗಳ ತುಂಡುಗಳು ಏನಲ್ಲ ಬಳಸಿ ಆಡುತ್ತಿದ್ದ ಆಟಗಳು ಈಗ ‘ಗ್ರಾಮೀಣ’ ಎಂಬ ಶಬ್ಧದ ಭಾರದಡಿಯಲ್ಲಿ ಅತ್ಯಂತ ಮಹತ್ವ ಪಡೆದಿವೆ.
ಅಡುಗೆ ಆಟ (ಮಣ್ಣಿನ ಪಾತ್ರೆ ಮಾಡಿ) ಬಳೆ ತುಂಡುಗಳನ್ನು ಮೂರು ತಗ್ಗುಗಳನ್ನು ಮಾಡಿ ಮುಚ್ಚಿಟ್ಟು ಹುಡುಕುವ ಆಟ, ದಂಟಿನಿಂದ ಸರಗೋಲು, ಚಪ್ಪಟೆ ಕಲ್ಲುಗಳಿಂದ, ಕುಂಟುಪಿಲ್ಲೆ, ಲಗೋರಿ, ದಂಟಿನ ಬೆಂಡಿನಿಂದ ಕೊಲ್ಲಾರಿ ಚಕ್ಕಡಿ, ಎತ್ತು ಕಡಗೋಲು, ಏನೇನೋ ಮಾಡಿ ಆಡಿದ್ದರ ಬಗ್ಗೆಯೇ ಒಂದು ಪುಸ್ತಕ ಬರೆಯಬಹುದು…. ಓದುವವರಿದ್ದರೆ
ನಾಲ್ಕು ತಲೆಮಾರಿಗೆ ಸಕ್ರೀಯ ಸದಸ್ಯಳಾಗಿ ನಾನೇ ಸಾಕ್ಷಿಯಾಗಿದ್ದು ಆದ, ಆಗುತ್ತಿರುವ, ಆಗಬಹುದಾದ ಬದಲಾಣೆಗಳಿಗೆ ನಾನೇ ಉದಾಹರಣೆ… ಹೊಸೂರು ಮುಗಿದು ತಮಿಳುನಾಡು ಪ್ರವೇಶಿಸುವ ಮುನ್ನ JAIN FARM RESORT ಇದೆ. ಅದರ ಒಂದು ದಿನದ ಖರ್ಚು ಒಬ್ಬರಿಗೆ 3000/- ಸಮೀಪ. ವಿಶೇಷ ಸೌಲಭ್ಯಗಳು ಆಡೋಕೆ ಬಯಲು ಮಣ್ಣಿನ ಗಡಿಗೆಯ ಮಜ್ಜಿಗೆ, ಕೋತಿ, ಗುಬ್ಬಿ, ಕಾಗೆಗಳಿಗೆ ಕಾಳುಣಿಸುವದು. 30/- ರೂಪಾಯಿಗೆ ಒಂದು ಸುತ್ತು ಚಕ್ಕಡಿ ಸವಾರಿ, ರಾತ್ರಿ ಹುಲ್ಲಿನ ಗುಡಿಸಲುಗಳಲ್ಲಿ ಕಂದೀಲು ಬೆಳಕಿನಲ್ಲಿ ಹಗಲು ಅಲ್ಲಲ್ಲಿ ಇರುವ ಕಲ್ಲು ಬೆಂಚುಗಳ ಮೇಲೆ ಮಲಗುವ ಭಾಗ್ಯ ಇಂಥವೇ ಹಲವಾರು LUXURY ಗಳು ಬೆಂಗಳೂರು ಅಪಾರ್ಟಮೆಂಟಗಳಲ್ಲಿ ಉಸಿರುಗಟ್ಟಿ ಸಾಯುವವರು ಅಲ್ಲಿ ಬಯಲು ಹವಾ ಕೇಳಿದಷ್ಟು ಹಣ ಚಲ್ಲಿ ಪಡೆಯುತ್ತಾರೆ. ಅಲ್ಲಿಯೂ ಮಹಲುಗಳು ಬರುವ ಮೊದಲೊಮ್ಮೆ ಬೇಕಾದರೆ visit ಮಾಡಿ.