ನಿಜಕ್ಕೂ ಹಾಗೇ ಸುಮ್ಮನೇ…..
Bassss! kuchh aise heeee…
ನನ್ನ ಪದವಿಗೆ ನಾನು ಆಯ್ದುಕೊಂಡ ವಿಷಯಗಳು ಇಂಗ್ಲಿಷ್ ಹಾಗೂ ಹಿಂದಿ. ಆ ಭಾಷೆಗಳಲ್ಲಿ ಪ್ರಭುತ್ವವಿತ್ತು ಎಂಬ ಕಾರಣಕ್ಕೆ ಖಂಡಿತ ಅಲ್ಲ.. ನೌಕರಿಯ ವಿಚಾರವೇ ನನಗಾಗ ಇರಲಿಲ್ಲ. ಹೀಗಾಗಿ ವಿಜ್ಞಾನದ ಆಯದಕೆಯ ಪ್ರಸ್ತಾಪ ತಲೆಯಲ್ಲಿ ಇರಲಿಲ್ಲ. ಕಲಿತರೆ ಮತ್ತೆರಡು ಭಾಷೆಗಳನ್ನೇ ಕಲಿಯುವದು ಉತ್ತಮ… ಇಂದಿಲ್ಲದಿರೆ ನಾಳೆ, ಎಲ್ಲೋ, ಯಾವಾಗಲೋ, ಯಾವುದೋ ರೀತಿಯಲ್ಲಿ ಉಪಯೋಗ ಬರಬಹುದು ಎಂಬುದು ಅಣ್ಣನ ವಿಚಾರ. ನಾವು ಎಂಟನೇ ವರ್ಗದಲ್ಲಿ ABCD ತೀಡಿದವರು. ಇಂಗ್ಲೀಷ ಗಂಧ ಗಾಳಿ ಇಲ್ಲದ ಕುಗ್ರಾಮದಿಂದ ಬಂದ ನಾನು ಈ ಧೈರ್ಯ ಮಾಡಿದ್ದರ ಬಗ್ಗೆ ಇವತ್ತಿಗೂ ನನಗೆ ಅಚ್ಚರಿಯಿದೆ. ಹೇಳಿಕೊಳ್ಳುವಷ್ಟು ಜಾಣರಲ್ಲದಿದ್ದರೂ ನಿಯಮಿತವಾಗಿ class ಗಳಿಗೆ ಹಾಜರಾಗಿ ತದೇಕಚಿತ್ತದಿಂದ ಹೇಳಿದ್ದನ್ನು ಪಾಲಿಸಿ ಒಂದು ವರ್ಷವೂ ನಪಾಸಾಗದೇ ಪಾಸಾಗಿದ್ದೇ ನನ್ನ ಸಾಧನೆಯನ್ನ ಬಹುದು. ಆಗಿನ ಕಾಲದ ಕಲಿಸುವಿಕೆಯನ್ನು ವೃತವೆಂದು ಭಾವಿಸುತ್ತಿದ್ದ ಗುರುಗಳು ನಮಗೆ ಸಿಕ್ಕದ್ದೂ ಒಂದು ಪ್ರಮುಖ ಕಾರಣವೇ…
ನನ್ನ ಸಾಹಿತ್ಯಿಕ ಒಲವು, ಅನುವಾದದ ಬಗ್ಗೆ ನನಗೆ ಪ್ರೀತಿ ಬೆಳೆದದ್ದು ಈ ಕಾಲದಲ್ಲಿಯೇ. ಇಂಗ್ಲೀಷ major ದಲ್ಲಿ ಗದ್ಯ, ಪದ್ಯಗಳಿಗೇ ಪ್ರತೇಕ ಪುಸ್ತಕಗಳಿದ್ದು ಅವೆರಡುಗಳ ನಡುವೆ ಸ್ಪಷ್ಟ ಗೆರೆಗಳಿದ್ದವು. ಗದ್ಯಂ ವದ್ಯಂ.. ಪದ್ಯಂ ಹೃದ್ಯಂ ಎಂಬುದು ಅಲಿಖಿತ ಒಪ್ಪಂದವಾಗಿತ್ತು. ಗದ್ಯವು ವಿಚಾರವನ್ನು ಪ್ರಚೋದಿಸಿದರೆ, ಪದ್ಯಗಳು ಹೃದಯಗಳನ್ನು ತಟ್ಟುತ್ತಿದ್ದವು. poetry is a spontaneous overflow of feelings in tranquillity ಅಂದರೆ ಶಾಂತ ಮನಸ್ಥಿತಿಯಲ್ಲಿ ಯಾವುದೇ ಬಾಹ್ಯ ಒತ್ತಡವಿಲ್ಲದೇ ತಂತಾನೇ ಹರಿದುಬರುವ ಭಾವನೆಗಳ ಮಹಾಪೂರವೇ ಕಾವ್ಯವೆಂದು ಕರೆಸಿಕೊಳ್ಳುತ್ತಿದ್ದ ಕಾಲವದು. ಕಾವ್ಯಗಳಿಗೆಂದೇ ಪ್ರತ್ಯೇಕ ಶಬ್ದ ಕೋಶವಿರುತ್ತಿತ್ತು. _poetic vocabulary_ ಕಾವ್ಯಕ್ಕೆ ಸುಂದರ, ಸಾಲಂಕೃತ ಕನ್ಯೆಯ ಪರಿಕಲ್ಪನೆಯಿದ್ದು, ‘ಕಾವ್ಯಕನ್ನಿಕೆ’ ಎಂಬ ಅಭಿದಾನವಿತ್ತು. ಛಂದಸ್ಸು, ಪ್ರಾಸ, ಪ್ರಸ್ತಾರಗಳು, ಅಲಂಕಾರ- ಮಾತ್ರೆ (ತ್ರಾ) ಗಳ ಸಂಕೋಲೆಗಳಿರುತ್ತಿದ್ದವು. ಗಡುಸಲ್ಲದ, ಒತ್ತಕ್ಷರಗಳಿರದ, ಮೃದು ಮಧುರ ಶಬ್ದಗಳ ಬಳಕೆ ಪ್ರಚಲಿತವಿತ್ತು. ( you/ thou, your/thy, to you/ to thee, alas) ಇಂಗ್ಲಿಷನಂತೆ ಕನ್ನಡದಲ್ಲೂ ತಮ್ಮದೇ ನಿಯಮ ಪಾಲನೆಗಳಿದ್ದವು. ಯಾವಾಗ, ಹೇಗೆ, ಯಾಕಾಗಿ ಕಾವ್ಯದಲ್ಲಿಯೂ ಕ್ರಾಂತಿ ಶುರುವಾಯಿತೋ ನಿಬಂಧನೆಗಳು ಸಡಿಲಗೊಂಡವು. ಸ್ವಾತಂತ್ರ್ಯದ ಹೆಸರಲ್ಲಿ ವಿವಿಧತೆ ಕಾಣಿಸಿಕೊಂಡಿತು. ಕಾವ್ಯಗಳ ರೂಪ ಬದಲಾಗುತ್ತ ಬರೆದದ್ದೇ ಕಾವ್ಯವಾಗುವ ಸಾಧ್ಯತೆ ಹೆಚ್ಚಾಗುತ್ತ ಹೋಯಿತು…
ಕ್ರಮೇಣ ಕಾವ್ಯಗಾಯನ (ಗೇಯ ಪದ್ಯಗಳು) ಇಳಿಕೆಯಾಗಿ, ಕಾವ್ಯವಾಚನ ಪ್ರಾರಂಭವಾಯಿತು.ಸಾಂಪ್ರದಾಯಿಕ look ಕಳೆದುಕೊಂಡು modern label ನಲ್ಲಿ ಪದ್ಯಗಳ ರಚನೆ ಕಾಣಿಸಿಕೊಳ್ಳುವದು ಪ್ರಾರಂಭವಾಯಿತು. ಈಗಂತೂ ಓದುವವರಿಗಂತ ಬರೆಯುವವರೇ ಹೆಚ್ಚಾಗಿದ್ದೇವೆ. ಬರೆಯುವದಕ್ಕೆ ಪೂರ್ವ ತಯಾರಿಯೂ ಬೇಕಿಲ್ಲ. ಬರೆದದ್ದೇಲ್ಲ ಸಾಹಿತ್ಯವೇ…. ಮುಕ್ತ ವಿಮರ್ಶೆಗಖಿಗೂ ಆಸ್ಪದವಿಲ್ಲ. ಯಾರೂ ಸ್ವೀಕರಿಸುವದೂ ಇಲ್ಲ ಎಂಬ ಹಂತಕ್ಕೆ ಬಂದು ನಿಂತಿದೆ.
ನನ್ನ ಈ ಬರಹದಲ್ಲಿ ಯಾವುದನ್ನೂ ಖಂಡಿಸುವ, ದೂಷಿಸುವ, ತಪ್ಪೆಣೆಸುವ ಉದ್ದೇಶ ಖಂಡಿತ ನನ್ನದಲ್ಲ. ಇಂದು ಬೆಳಿಗ್ಗೆ ನಾನು ಕಲಿಯುವಾಗಿನ, ಕಲಿಸಿದಾಗಿನ, ಈಗ ನೋಡುತ್ತಿರುವ ವಿದ್ಯಮಾನಗಳೆಲ್ಲ ಕಣ್ಣಮುಂದೆ ಹಾದುಹೋದವು. ಇದರಲ್ಲಿ ಎಷ್ಟು ತಪ್ಪೋ, ಎಷ್ಟು ಒಪ್ಪೋ ನನಗೆ ಗೊತ್ತಿಲ್ಲ. ಇದನ್ನೆಲ್ಲ ನಿರಂತರ ಬೆಳವಣಿಗೆಯ ಪ್ರಕ್ರಿಯೆಯ ಅನಿವಾರ್ಯ ಭಾಗವೆಂದು ಪರಿಗಣಿಸುವದೊಂದೇ ನಮಗಿದ್ದ ದಾರಿ. ಯಾವುದನ್ನೂ ಪ್ರಶ್ನಿಸದೇ ಬಂದುದನ್ನೆಲ್ಲ ಗೊಣಗದೇ ಸ್ವೀಕರಿಸುತ್ತ ಬಂದ ವರ್ಗಕ್ಕೆ ಸೇರಿದವಳು ನಾನು. ನನ್ನದೇನಿದ್ದರೂ ನನ್ನ ಮಟ್ಟಿಗಿನ, ನನ್ನದೇ ವ್ಯಾಪ್ತಿಯಲ್ಲಿಯ, ನನ್ನ ತಿಳುವಳಿಕೆಯ ಪರಿಧಿಗೊಳಪಟ್ಟ ಆಲೋಚನೆಗಳು. ಇಷ್ಟು ಹೊರತಾಗಿ ಈ ಬರಹಕ್ಕೆ ಹೆಚ್ಚಿನ ಮಾನ್ಯತೆ ಕೊಡಬೇಕಿಲ್ಲ ಯಾರೂ.. ಯಾವುದೇ ಕಾರಣಕ್ಕೂ…..