ನೆರೆ-ಹೊರೆ…
ಇರಲೇಬೇಕು ಎಲ್ಲರಿಗು
ಒಳ್ಳೆಯ ನೆರೆ-ಹೊರೆ,
ಇಲ್ಲದಿರೆ ಸಾಲ ಕೇಳಲು
ಹೋಗುವುದು ಯಾರ ಮೊರೆ?
ಖರೆ ಅದರೀ. ನೆರೆಹೊರೆಯ ಜನಾ ಛೋಲೋ ಬೇಕು.
ಮ್ಯಾಲೆ ಬರದದ್ದು ಬರೇ ಹಾಸ್ಯಕ್ಕಂತಲ್ರೀ. ನಮ್ಮ ಭಾರತೀಯ ಸಂಪ್ರದಾಯದಾಗ ಮೊದಲೆಲ್ಲಾ ಮನೀಗೆ ಬರೋ ನೆಂಟರು ಫೋನ್ ಮ್ಯಾಲ ಬರಬೇಕೋ ಬ್ಯಾಡೋ ಅಂತ ಕನ್ಫರ್ಮ್ ಮಾಡ್ಕೊಂಡ ಬರತಿದ್ದಿಲ್ರಿ . ಧುತ್ತಂತ ಬಂದ ಬಿಡವ್ರು. ಬಂದವ್ರಿಗೆ ತಿಂಡಿ ತಿನಸೂ ಅಂತ ಮಾಡಲಿಕ್ಕೇನೋ ಮನ್ಯಾಗ ಸಾಮಾನಿರತಿತ್ತು. ಆದರ ಕಾಫಿ, ಚಹಾಕ್ಕ ಹಾಲು? ಆವಾಗೇನ ಈಗಿನ್ಹಂಗ ಓಣಿಗೊಂದ ಮಿಲ್ಕ್ ಬೂತ…? ಮನಿಮನಿಯೊಳಗ ಫ್ರಿಡ್ಜ್? ಬ್ಯಾಸಿಗ್ಯಾಗ ಮಣ್ಣಿನ ಗಡಿಗ್ಯಾಗ ತಣ್ಣನಿಯ ನೀರು. ಅಮೃತಾ… ಅಮೃತಾ.
ಹೂಂ . ವಿಷಯಕ್ಕ ಬರೋಣ. ಹಾಲಿನಕೀ ಮುಂಜಾನಿ ಹಾಲ ಕೊಟ್ಟ ಹೋದ್ಲಂದ್ರ ಸಂಜೀಕನ ಮತ್ತ ಹಾಲ ಹಿಂಡಕೊಂಡ ತೊಗೊಂಬರಾಕಿ. ಇದ್ದಾರಲಾ ಬಾಜೂ ಮನಿಯವ್ರು! ಹಾಲಿಗೊಂದ ಲೋಟ ಹಿಡಕ್ವಂಡ ಹೋದ್ರ ಹಾಲ ಕೊಟ್ಟು ದೇವರ್ಹಂಗ ಮಾನಾ ಕಾಪಾಡತಿದ್ರು! ಅಷ್ಟs ಟೈಮಿನ್ಯಾಗ ಯಾರ ಬಂದಾರ, ಎಷ್ಟ ದಿನದ ವಸ್ತೀ…ನಿಮಗ ಬೇಕಾದವ್ರೋ ಬ್ಯಾಡಾದವ್ರೋ? ಎಲ್ಲಾನೂ ಕೇಳೋದಾಗತಿತ್ತು!
ಇನ್ನ ಈ ಪ್ರಪಂಚದಾಗ ಅಗದೀ ಬದನಾಮ್ ರಿಶ್ತಾ ಅಂದ್ರ ಈ ಅತ್ತಿ ಸೊಸೀದನ ನೋಡರಿ. ಕೂಡಿ ಅಂತೂ ನಡೀಲಿಕ್ಕೇ ಸಾಧ್ಯ ಇಲ್ಲ ಬಿಡ್ರಿ. ಅಂದಮ್ಯಾಲ ಛಾಡಾ ಗೀಡಾ ಇದ್ದ ಇರತಿದ್ವು. ಅದಕನ ಹೇಳೋದು ನೆರೀ ಹೊರೀ ಆಗಬಾರದೂ ಅಂತ. ನಮ್ಮ ಮನ್ಯಾಗ ಒಂದ ಕುಟುಂಬಾ ಬಾಡಿಗೀ ಇದ್ರು. ಅತ್ತಿ ಬಲು ಖೋಡಿ. ಭಾಳ ತ್ರಾಸ ಕೊಡತಿದ್ಲು. ಸೊಸೀ ಸುಮ್ಮನ ಇದ್ದೂ ಇದ್ದೂ ಒಂದೊಂದ ಸರತೆ ಚಿರಡಿಗೆ ಬರತಿದ್ಲು. ಅತ್ತು, ಕರದೂ.. ಮನೀ ಬಿಟ್ಟು ಹೋಗೂತನಾ ಸರ್ತಿ ಆಗತಿತ್ತು. ಅವ್ವಾ ಅಷ್ಟೊತ್ತನಾ ಅವ್ರ ಮನೀ ಜಗಳದಾಗ ತಲೀ ಹಾಕದೇದ್ದಾಕಿ ಇಬ್ರಿಗೂ ಬುದ್ಧೀ ಹೇಳಿ ಜಗಳಕ್ಕ ಕೊನೀ ಹಾಡತಿದ್ಲು. ಸಂಜೀಕೆ ಗಂಡ ಬರೋ ಹೊತ್ತಿಗೆ ಅತ್ತಿ ಸೊಸೀ ಎಲ್ಲಾ ಮರತು ತಮ್ಮ ತಮ್ಮ ಕೆಲಸದಾಗ ಬಿಜಿ! ಹಿಂಗ ಜಗಳಾ ಬಿಡಸಲಿಕ್ಕೂ ನೆರಿಹೊರಿ ಬೇಕಾಗತಿತ್ತರೀ!
ಈಗ ಕಾಲ ಬದಲಿ ಆಗೇದರಿ. ನೆರೀ ಹೊರಿ ಕಾನ್ಸೆಪ್ಟ್ ನೂ ಬದಲಾಗ್ಯಾವರಿ. ಮೊದಲಿನ ಹಂಗ ಕೂಡುಕುಟುಂಬರೆ ಎಲ್ಲವ ಈಗ? ಅತ್ತಿಗೆ ತನ್ನವ ಹಾಬೀ… ಓದೋದು, ಬರಿಯೋದೂ.. ಫೇಸ್ಬುಕ್ಕೂ. ವಾಟ್ಸಾಪ್… ಗೆಳತೇರು… ಸೊಸೀ ಕೈಯಾಗ ಸಿಗಲಿಕ್ಕೂ ಒಲ್ಲಳು ಈಗಿನ ಅತ್ತೀ! ಹಿಂಗಾಗಿ ಜೋಡೀ ಅಂತೂ ಇರವ್ರನ ಕಡಿಮೀ. ಇದ್ದೂ ಬಿದ್ದೂ ಮೂರ ಮಂದೀ ಸಂಸಾರಾ… ಗಂಡಾ ಹೇಣತಿ, ಮಗೂ…!30*40 ಸೈಟಿನ್ಯಾಗ ಪ್ರತ್ಯೇಕವಾಗಿ ಮನಿ ಕಟ್ಟಿಸಿದರಂತೂ ಮುಗೀತು… ಮುಚ್ಚಿದ ಬಾಗಲಾ ತಗಿಯೋದನ ಕಷ್ಟ. ಅಷ್ಟ ಅಲ್ರೀ.. ಮೊದಲಿನ ಕಾಲದ ವಠಾರದ ಸುಧಾರಿಸಿದ ಆವೃತ್ತಿ ಈ ಅಪಾರ್ಟ್ಮೆಂಟ್! ಈ ಜೀವನಾ ಮಾತ್ರ ವಠಾರಧಂಗಲ್ರೀ. ಬಾಜೂ ಮನ್ಯಾಗ ಯಾರಿದ್ದಾರನ್ನೂದ ಸೈತ ಈಗ ಒಮ್ಮೊಮ್ಮೆ ಗೊತ್ತಿರಂಗಿಲ್ರೀ. ಈಗ ಒಬ್ಬರ ಮನೀ ಕಾರಭಾರ ಇನ್ನೊಬ್ಬರ ಮಾಡಂಗಿಲ್ಲಾಂತ ಮ್ಯಾಲ ಮ್ಯಾಲ ಅಗದೀ ಸಂಭಾವಿತತನದ ಸೋಗ ಹಾಕಿದ್ರೂ ಒಳಗನ ಮುಚ್ಚಿದ ಬಾಗಲ ಸಂದ್ಯಾಗಿಂದನ ಯಾರ ಮನೀಗೆ ಯಾರ ಬಂದ್ರು, ಯಾರ ಗಂಡಾ ಯಾ ಹುಡಗಿನ್ನ ತನ್ನ ಪಿಲಿಯನ್ ಸೀಟಿನ ಮ್ಯಾಲ ಕರಕೊಂಡಬಂದಾ… ಬಾಜೂ ಮನಿಯಾಕೀ ಫೋನ್ ಮ್ಯಾಲ ಯಾರ ಜೋಡೆ ಅರ್ಧರ್ಧಾ ತಾಸ ಹರಟೀ ಕೊಚ್ಚತಾಳ? ಅಂಥಾದ್ದೇನಿರತದ… ಹಿಂಗೆಲ್ಲಾ…
ಆದರೂ ನೆರಿ ಅನ್ನೂದು ಬೇಕ ಬೇಕ ನೋಡ್ರಿ. ನಾನು, ನಮ್ಮವರೂ ಇಬ್ಬರೂ ಒಂದ ಸರತೆ ಜೋಡೀನ ಅರಾಮಿಲ್ಲದ ಆಸ್ಪತ್ರೆಗೆ ದಾಖಲಾಗಿದ್ವಿ. ಆಗ ನಮ್ಮ ಅಪಾರ್ಟ್ಮೆಂಟ್ ನವ್ರು ತೊಗೊಂಡ ಕಾಳಜೀಗೆ ನಾವು ಅಗದೀ ಋಣಿ ಆಗಿರಬೇಕು ನೋಡ್ರಿ. ನೆರಿಹೊರಿಯಂದ್ರ ಒಂಥರಾ ಫಸ್ಟ್ ಏಡ್ ಸರ್ವಿಸ್ ಇದ್ದಂಗ. ಮಕ್ಕಳು, ಮರೀ ಎಲ್ಲಾ ಎಲ್ಲೆಲ್ಲೋ ದೂರ ಇರತಾರ. ಇವರ ಮಕ್ಳು, ಸ್ನೇಹಿತರು..
ಮನಿ ಅಷ್ಟೇ ಅಲ್ರೀ… ನೆರಿಹೊರಿ ದೇಶಾನೂ ಛೊಲೋ ಇರಬೇಕರಿ. ನಿಮಗೂ ಗೊತ್ತದಲಾ, ನಮ್ಮ ನೆರೀ ದೇಶ ಪಾಕಿಸ್ತಾನದವರ ಸುದ್ದಿ… ಅವರ ಖುದ್ದರಗೇಡಿ ಗುಣದ ಸಲವಾಗಿ ನಾವು ದಿನವೊಂದಕೂ ಎಷ್ಟು ಜೀವಾ ಬಲಿ ಕೊಡಬೇಕಾಗೇದನ್ನೋದು.. ಆ ಸೈನಿಕರೋ ತಮ್ಮ ಜೀವಂತೂ ಸೈಯ ಸೈ, ತಮ್ಮ ರಾತ್ರಿ ನಿದ್ದೀಗೆ ಸೈತ ತಿಲಾಂಜಲಿ ಕೊಟ್ಟು ದೇಶಾ ಕಾಯತಾರ.. ನಾವು ನಿಶ್ಚಿಂತಿಂದ ನಿದ್ದಿ ಮಾಡಲಿ ಅಂತ!
ಒಟ್ಟಾರೆ ಹೇಳಬೇಕಂದ್ರ ನೆರಿ ಇರಬೇಕು, ಆದರ ಹೊರಿ ಆಗೂವಂಗ ಇರಬಾರದೂ.. ನಾವೂ ಅಷ್ಟೇ… ಚೂರುಪಾರೂ ಕಾರಭಾರ ಓಕೆ. ಆದರೂ ಆಜೂ ಬಾಜೂದವ್ರಿಗೆ ಬೇಕಾಕ್ಕೊಂಡ ಇರಬೇಕ ನೋಡ್ರಿ.