ನರ್ಮದಾ ಯೋಗಿ ಶ್ರೀಕೃಷ್ಣ ಸಂಪಗಾಂವಕರ್

ಸೊಲ್ಲಾಪುರದ ಮಾಡರ್ನ್‌ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಳೇ ವಿದ್ಯಾರ್ಥಿಗಳು ಜಮಾಯಿಸಿದ್ದರು. ಎಂಬತ್ತು ವಸಂತ ಪೂರೈಸಿರುವ ಹೆಡ್‍ಮಾಸ್ಟರ್ ಕುಲಕರ್ಣಿ ಅವರಿಗೆ ಎಲ್ಲಿಲ್ಲದ ಆನಂದ. ತಾವು ಕಲಿಸಿದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಪ್ರಖ್ಯಾತರಾಗಿದ್ದಾರೆ. ಎಂಜಿನಿಯರ್, ಡಾಕ್ಟರ್, ಉದ್ಯಮಿಗಳಾಗಿದ್ದಾರೆ. ಅವರ ನಡುವೆ ಒಂದು ಒಂಟಿ ನಕ್ಷತ್ರ; ಮುಗುಳು ನಗುತ್ತಾ ಕುಳಿತಿರುವ ತಮ್ಮ ನೆಚ್ಚಿನ ವಿದ್ಯಾರ್ಥಿ ಶ್ರೀಕೃಷ್ಣ. ಸೂಟಿಲ್ಲ; ಬೂಟಿಲ್ಲ. ಖಾಲಿ ಜೇಬು. ಹೃದಯದಾಳದಿಂದ ಚಿಮ್ಮಿದ ಬೆಳದಿಂಗಳ ನಗೆ. ಅವರೇ ನರ್ಮದೆಯ ದಂಡೆಯಿಂದ ಮರಳಿ ಬಂದ ನರ್ಮದಾ ಯೋಗಿ ಶ್ರೀಕೃಷ್ಣ ಸಂಪಗಾಂವಕರ್. ಪುಣೆ ವಿಶ್ವವಿದ್ಯಾಲಯದಿಂದ ಕಮ್ಯೂನಿಕೇಷನ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ, ನೀನಾಸಂನಿಂದ ಫೆಲೋಶಿಪ್, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸಂಸ್ಥೆಯಿಂದ ಪಿ.ಜಿ ಡಿಪ್ಲೊಮ, ಭದ್ರಗಿರಿ ಅಚ್ಯುತದಾಸರಲ್ಲಿ ಹರಿಕಥೆ ಶಿಷ್ಯವೃತ್ತಿ, ಹೊಳೆನರಸೀಪುರದಲ್ಲಿ ವೇದಾಂತಾಧ್ಯಯನ –ಹೀಗೆ ಜ್ಞಾನಾರ್ಜನೆಯಲ್ಲಿ ಯಶಸ್ವಿಯಾಗಿ, ಎಲ್ಲವನ್ನೂ ತ್ಯಜಿಸಿ ನರ್ಮದೆಯ ಮಡಿಲು ಸೇರಿದ ವಿರಾಗಿ ಈ ಶ್ರೀಕೃಷ್ಣ. ಅಧ್ಯಾತ್ಮದಲ್ಲಿ ಆಸಕ್ತಿ, ನಿರಂತರ ಸಾಧನೆ ಹಾಗೂ ವೈರಾಗ್ಯವನ್ನು ನಿರಾಯಾಸವಾಗಿ ರೂಢಿಸಿಕೊಳ್ಳಲು ಶ್ರೀಕೃಷ್ಣರಿಗೆ ಸ್ಫೂರ್ತಿ ದೊರಕಿದ್ದು ಅವರ ಅಜ್ಜನಿಂದ. ವಿಜಯಪುರದ ಕನ್ನೂರಿನ ಯೋಗಿ ಗಣಪತರಾವ್ ಕನ್ನೂರ್‌ ಅವರೇ ಶ್ರೀಕೃಷ್ಣ ಅವರ ಅಜ್ಜ. ಗುರುವೂ ಹೌದು. ಉತ್ತರ ಕರ್ನಾಟಕದ ಜನರು ಗಣಪತರಾವ್ ಮಹಾರಾಜರನ್ನು ‘ನಡೆದಾಡುವ ದೇವರು’ ಎಂದು ಕರೆಯುತ್ತಿದ್ದರು. 1951ರಲ್ಲಿ ಕನ್ನೂರಿನಲ್ಲೊಂದು ಶಾಂತಿಕುಟೀರ ಸ್ಥಾಪಿಸಿದರು. ಆ ಮೂಲಕ ಜನಸಾಮಾನ್ಯರಲ್ಲಿ ಅಧ್ಯಾತ್ಮದ ಒಲವು ಮೂಡಿಸಿದರು. ಆತ್ಮಜ್ಞಾನ ಸುಲಭ, ಅತಿಸುಲಭ ಎಂದು ತೋರಿಸಿಕೊಟ್ಟರು. ಅವರು ಕನ್ನಡದಲ್ಲಿ ರಚಿಸಿದ ‘ಸುಲಭ ಆತ್ಮಜ್ಞಾನ’ ಕೃತಿಯು ಹಿಂದಿ, ಮರಾಠಿ, ಗುಜರಾತಿ, ಇಂಗ್ಲಿಷ್ ಹಾಗೂ ಫ್ರೆಂಚ್‌ ಭಾಷೆಗೆ ಭಾಷಾಂತರಗೊಂಡು ಜನಪ್ರಿಯವಾಗಿದೆ. 2009ರಲ್ಲಿ ಗಣಪತರಾವ್ ಕನ್ನೂರ್ ಮಹಾರಾಜರ ಶತಮಾನೋತ್ಸವದ ಅಂಗವಾಗಿ ಶ್ರೀಕೃಷ್ಣ ಅವರು ಗುರುಗಳ ಸಂದೇಶವನ್ನು ನಾಡಿನ ಮೂಲೆಮೂಲೆಗೆ ಕೊಂಡೊಯ್ಯಲು ನಿರ್ಧರಿಸಿದರು. ತತ್ವಪದ-ವಚನ-ದೇವರನಾಮ, ಮರಾಠಿ ಅಭಂಗಗಳು, ಬಾರುಡ್ ಗಾಯನ, ಹರಿಕಥೆ ಹೀಗೆ ಹಲವು ಸಾಂಸ್ಕೃತಿಕ ಹೊಳೆತೊರೆಗಳನ್ನು ಒಟ್ಟುಗೂಡಿಸಿ ಆತ್ಮಾನುಭವ ಸತ್ಸಂಗವನ್ನು ಯೋಜಿಸಿದರು. 2013ರಲ್ಲಿ ದೇಶದುದ್ದಕ್ಕೂ ಅತ್ಯುತ್ಸಾಹದಿಂದ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನ ಆಚರಿಸಲಾಯಿತು. ಈ ವೇಳೆ ಶ್ರೀಕೃಷ್ಣ ಮತ್ತೆ ಬಣ್ಣಹಚ್ಚಿಕೊಂಡರು. ಈ ನವಯುಗದ ‘ತರುಣ ಸನ್ಯಾಸಿ’ ದೇಶದಾದ್ಯಂತ ಸಂಚರಿಸಿ, ಸಾವಿರಾರು ಶಾಲಾ, ಕಾಲೇಜುಗಳಲ್ಲಿ ಯುವಜನರಿಗೆ ವಿವೇಕಾನಂದರ ಸಂದೇಶ ಮುಟ್ಟಿಸಿದರು. ‘ಈ ಸಮಯದಲ್ಲೇ ನನಗೆ ಸ್ವಾಮೀಜಿ ಅವರಂತೆ ದೇಶದುದ್ದಕ್ಕೂ ಪರಿವ್ರಾಜಕನಾಗಿ ಸಂಚರಿಸಬೇಕೆಂಬ ಇಚ್ಛೆ ಅಂಕುರಿಸಿತು’ ಎನ್ನುತ್ತಾರೆ ಅವರು. ನಾಲ್ಕಾರು ಬಾರಿ ಹಿಮಾಲಯದ ಪರ್ವತ ಶ್ರೇಣಿಗಳಲ್ಲಿ ತಿರುಗಾಡಿ ಬಂದಿದ್ದರೂ ಏನೋ ಒಂದು ಕೊರತೆ ಕಾಡುತ್ತಿತ್ತು. ಎಲ್ಲವನ್ನು ಬಿಟ್ಟು ಸ್ವಂತ ಅನುಕೂಲಗಳನ್ನೆಲ್ಲಾ ತಳ್ಳಿಹಾಕಿ ಏನೇನೂ ಇಲ್ಲದೆ ಇರಬೇಕೆಂಬ ಬಯಕೆ ತೀವ್ರವಾಯಿತು; ನರ್ಮದೆ ಕೈಬೀಸಿ ಕರೆದಳು. ತರುಣ ಬ್ರಹ್ಮಚಾರಿ ನರ್ಮದೆಯ ದಂಡೆಯತ್ತ ನಡೆದರು. ‌ ನರ್ಮದೆ ಅಧ್ಯಾತ್ಮ ಸಾಧನೆಗೊಂದು ಪ್ರಯೋಗ ಶಾಲೆ. ಈ ನದಿಯ ಪ್ರದಕ್ಷಿಣೆಗೆ ಮೂರು ವರ್ಷ, ಮೂರು ತಿಂಗಳು, ಹದಿಮೂರು ದಿನಗಳು. ಈ ದೀರ್ಘ ಕಾಲಾವಧಿಯಲ್ಲಿ ಪ್ರಕೃತಿಯ ಮಡಿಲಲ್ಲಿ ವಾಸ ಹಾಗೂ ಸಂಚಾರ. ಬರಿಗಾಲಿನಲ್ಲಿ ನಡಿಗೆ. ‘ಭೂ ತಾಯಿಯ ಸ್ಪರ್ಶಸುಖ ಏನೆಂದು ನನಗೆ ತಿಳಿದಿದ್ದೇ ನರ್ಮದೆಯಲ್ಲಿ’ ಎಂದು ನೆನಪಿಸಿಕೊಳ್ಳುತ್ತಾರೆ ಈ ಪ್ರಕೃತಿಪ್ರೇಮಿ. ‘ಜೇಬಲ್ಲಿ ಹಣವಿಲ್ಲ. ದಾರಿ ಬುತ್ತಿ ಇಲ್ಲ. ನರ್ಮದಾ ಮಾಯಿ ಒಪ್ಪತ್ತು ಹೊಟ್ಟೆಗಿಷ್ಟು ಮುದ್ದೆ ಕೊಡುತ್ತಾಳೆ. ನನ್ನನ್ನು ಕಾಪಾಡುತ್ತಾಳೆ ಎಂಬ ಭರವಸೆಯೆ ಈ ಯಾತ್ರೆಗೆ ಬೇಕಾದ ಬಂಡವಾಳ’ ಎನ್ನುತ್ತಾರೆ ಅವರು.‘ಕಾಯುವ ಈಶ್ವರನಿದ್ದಾನೆ ಎಂಬ ವಿಶ್ವಾಸ ದೃಢವಾಗಿದ್ದರೆ ನಿರ್ಭಯತೆ ತಾನಾಗಿಯೆ ಹಿಂಬಾಲಿಸುತ್ತದೆ. ಆಗ ವನ್ಯಮೃಗಗಳ ಭಯವಾಗಲಿ, ನರ್ಮದೆಯ ಮೂಲನಿವಾಸಿಗಳಾದ ಭಿಲ್ಲರ ಭೀತಿಯಾಗಲಿ ಕಾಡದು. ಭಕ್ತಿಮಾರ್ಗ ಅಷ್ಟು ಸುಲಭವೇನಲ್ಲ. ಓದಿ, ಕೇಳಿ ಅಷ್ಟಿಷ್ಟು ಜ್ಞಾನ ಸಂಪಾದಿಸಬಹುದು. ಆದರೆ, ಭಕ್ತಿ ಹೃದಯದಾಳದಿಂದ ಚಿಮ್ಮಬೇಕು. ‘ಮಾಡುವವ ನಾನಲ್ಲ, ಮಾಡಿಸುವನು ಅವನು; ಅನ್ನ ಕೊಡುವವನು ಅವನು ಎಂದು ಭಗವಂತನಲ್ಲಿ ದೃಢ ವಿಶ್ವಾಸವಿರಬೇಕು, ಭಕ್ತಿಯನ್ನು ಪರೀಕ್ಷಿಸುವ ಒರೆಗಲ್ಲು ನರ್ಮದಾ ಪರಿಕ್ರಮ’ ಎಂಬುದು ಅವರ ವಿವರಣೆ. ಪರಿಕ್ರಮ ಹೇಗೆ? ಉತ್ತರ-ದಕ್ಷಿಣವಾಗಿ ಭೌಗೋಳಿಕವಾಗಿ ಭಾರತವನ್ನು ವಿಭಜಿಸುವ ನರ್ಮದೆ, ಸಾಂಸ್ಕೃತಿಕವಾಗಿ ದೇಶವನ್ನು ಒಂದುಗೂಡಿಸುತ್ತಾಳೆ. ಅವಳ ಮಡಿಲಿಗೆ ಬರುವವರೆಲ್ಲಾ ಅವಳ ಶಿಶುಗಳೇ. ನರ್ಮದಾ ಪರಿಕ್ರಮ ಪ್ರಾಚೀನಕಾಲದಿಂದ ಪ್ರಚಲಿತವಾಗಿದೆ. ಸ್ಕಂದ ಪುರಾಣದ ರೇವಾಖಂಡದಲ್ಲಿ ಇದರ ಉಲ್ಲೇಖನವಿದೆ. ನರ್ಮದೆಯ ಇನ್ನೊಂದು ಹೆಸರು ರೇವಾ. ಮಧ್ಯಪ್ರದೇಶದ ಪೂರ್ವದ ತುತ್ತತುದಿಯಲ್ಲಿ ಮೇಕಲ ಶ್ರೇಣಿ ಸಮುದ್ರದ ತಡಿಯಿಂದ 1057 ಮೀಟರ್ ಅಂದರೆ 3468 ಅಡಿ ಎತ್ತರದಲ್ಲಿದೆ ಈ ಶ್ರೇಣಿಯ ಅಮರಕಂಟಕದಲ್ಲಿ ಜನಿಸುವ ನರ್ಮದೆ, ವಿಂಧ್ಯಾಚಲ ಮತ್ತು ಸತ್ಪುಡ ಪರ್ವತ ಶ್ರೇಣಿಗಳ ನಡುವೆ ಹಾಯ್ದು 1312 ಕಿಲೋಮೀಟರ್ ದೂರದ ಪಶ್ಚಿಮದ ಅರಬ್ಬಿ ಸಮುದ್ರದತ್ತ ಧಾವಿಸುತ್ತಾಳೆ. ಕಾಲ್ನಡಿಗೆಯಲ್ಲಿ ನರ್ಮದೆಯನ್ನು ಸುತ್ತಿ ಬರಲು 3500 ಕಿಲೋಮೀಟರ್ ನಡೆಯಬೇಕಾಗುತ್ತದೆ. ಶ್ರೀಕೃಷ್ಣ ಅವರು ತಮ್ಮ ಯಾತ್ರೆ ಪ್ರಾರಂಭಿಸಿದ್ದು ನರ್ಮದೆಯ ಉತ್ತರ ದಂಡೆಯ ನೆಮಾವರದಲ್ಲಿ. ಪೂರ್ವದತ್ತ ನಡೆದು ನದಿಯ ಉಗಮ ಸ್ಥಾನ ಅಮರಕಂಟಕ ಕ್ಷೇತ್ರವನ್ನು ಸುತ್ತು ಹಾಕಿ ದಕ್ಷಿಣ ದಂಡೆಗೆ ಬಂದು ಅಲ್ಲಿಂದ ನದಿಯ ಹರಿವನ್ನೆ ಹಿಂಬಾಲಿಸುತ್ತಾ ಪಶ್ಚಿಮಕ್ಕೆ ನಡೆದರು. ನರ್ಮದೆ ಪಶ್ಚಿಮ ಸಮುದ್ರವನ್ನು ಸೇರುವ ರೇವಾ ಸಂಗಮದ ಸನಿಹದ ರತ್ನಾಸಾಗರವನ್ನು ನಾವೆಯಲ್ಲಿ ದಾಟಿ ಮತ್ತೆ ನರ್ಮದೆಯ ಉತ್ತರ ದಂಡೆಯನ್ನು ಸೇರಿ, ಪೂರ್ವಾಭಿಮುಖವಾಗಿ ನಡೆಯುತ್ತಾ ನೆಮಾವರದಲ್ಲಿ ಪರಿಕ್ರಮ ಮುಗಿಸಿದರು. 2016ರ ಫೆಬ್ರುವರಿ ತಿಂಗಳಲ್ಲಿ ಪ್ರಾರಂಭಿಸಿದ ಮೂರು ವರ್ಷ, ಮೂರು ತಿಂಗಳು ಹದಿಮೂರು ದಿನಗಳ ಮಹಾಯಾತ್ರೆ 2019ರ ಮೇ ತಿಂಗಳಲ್ಲಿ ಮುಗಿಯಿತು. ಪ್ರತಿವರ್ಷ ಚಾತುರ್ಮಾಸದ ನಾಲ್ಕು ತಿಂಗಳು ನಡೆಯುವಂತಿಲ್ಲ. ಹೀಗಾಗಿ, ಕಾಲ್ನಡಿಗೆ ಎರಡು ವರ್ಷ, ಮೂರು ತಿಂಗಳು ಹದಿಮೂರು ದಿನಗಳು ಮಾತ್ರ. ಚಾತುರ್ಮಾಸದ ನಾಲ್ಕು ತಿಂಗಳು ಅಧ್ಯಯನ, ಜಪ-ತಪಗಳಿಗೆ ಮೀಸಲು. ನರ್ಮದಾ ಪರಿಕ್ರಮ ಮುಗಿಸಿ ಅವರು ನರ್ಮದೆಯ ನಡುಗಡ್ಡೆಯಲ್ಲಿರುವ ಓಂಕಾರೇಶ್ವರ ದೇವಾಲಯದಲ್ಲಿ ಓಂಕಾರೇಶ್ವರನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಶಾಂತಿಕುಟೀರಕ್ಕೆ ಮರಳಿ ಬಂದರು. ಅನ್ನದೇವರ ಮುಂದೆ… (ನರ್ಮದಾ ಯೋಗಿ ಶ್ರೀಕೃಷ್ಣರ ಆತ್ಮಾನುಭವ ಸತ್ಸಂಗ ಕಾರ್ಯಕ್ರಮವು ಜ. 20ರಿಂದ 24ರವರೆಗೆ ಮೈಸೂರಿನ ನಾದಬ್ರಹ್ಮ ಸಭಾಂಗಣದಲ್ಲಿ ನಡೆಯಲಿದೆ)

author- ಸುಬ್ಬರಾವ್

courtsey:prajavani.net

https://www.prajavani.net/artculture/article-features/narmada-yogi-srikrishna-sampangaonkar-698932.html

Leave a Reply