ನನ್ನೊಳಗಿನ ಅವಳು!?
ಹೇಳಲಾಗದು ನನ್ನೊಳಗಿನ ಅವಳ ಮೋಡಿ
ಮೌನವಾದರೆ ಸಾಕು ಮಾತಿನ ಮಳೆಗರೆವಳು
ಏಕಾಂಗಿಯಾಗಿರಲು ಥಟ್ಟನೆ ಪ್ರತ್ಯಕ್ಷ ಆಗುವಳು
ಒಳ್ಳೆ ಜೊತೆಗಾತಿ ನನ್ನೊಳಗಿನ ಅವಳು
ನಗುವಾಗ ನಾನು, ಸಂತಸ ಪಡುವಳು ಅವಳು
ದುಃಖ ಆವರಿಸಿದಾಗ ಸಂತೈಸುವ ಹೃದಯದವಳು
ಆಗದೆಂದು ಕೈಕಟ್ಟಿ ಕುಳಿತರೆ ವ್ಯಂಗ್ಯ ಮಾಡುವಳು
ಒಳ್ಳೆಯ ಸ್ಫೂರ್ತಿಯ ಚಿಲುಮೆ ನನ್ನೊಳಗಿನ ಅವಳು
ಸೋತಾಗ ಗೆಲುವಿನ ಹಾದಿಗಳ ತೋರುವ ಗುರು
ಗೆದ್ದಾಗ ಅಹಂಕಾರ ಬಾರದಂತೆ ಎಚ್ಚರಿಸುವ ಧ್ಯಾನಿ
ಸಲ್ಲದ ಮೋಹ ಪಾಶದಲಿ ಸಿಲುಕದಂತೆ ಹಿಡಿವ ಯೋಗಿ
ಅಜ್ಞಾನದ ಕೊಳೆಯಿಂದ ಹೊರ ತರುವ ಜ್ಞಾನಿ ನನ್ನೊಳಗಿನ ಅವಳು
ಅಂಜಿಕೆಯಲಿ ಬಲ ತುಂಬುವ ದುರ್ಗಿ ಅವಳು
ಸರಿದಾರಿಯ ಹುಡುಕಾಟದಲ್ಲಿ ದಿಕ್ಸೂಚಿ ಅವಳು
ದ್ವೇಷ ಮತ್ಸರ ಸುಳಿದಾಗ ಹಿಯಾಳಿಸಿ ಅಲ್ಲಗಳೆವ ಅಥಿತಿ
ಗುರಿ ಸಾಧನೆಯ ಗುರುಬಲವು ನನ್ನೊಳಗಿನ ಅವಳು
ದೂರ ಸರಿವವರ ಕಂಡು ತಾನಿರುವುದಾಗಿ ಭರವಸೆ ನೀಡುವವಳು
ಎಡರು ತೋದರುಗಳ ಬದುಕಿನಲ್ಲಿ ಮೆಟ್ಟಿನಿಲ್ಲುವುದ ಕಲಿಸಿದವಳು
ಎಂದಿಗೂ ನಡುನೀರಿನಲ್ಲಿ ಕೈಬಿಡದೆ ಹಿಡಿವ ನಂಬಿಕೆ
ನನ್ನೊಳಗಿನ ಅವಳು
ಕನ್ನಡಿ ಎದುರು ನಿಂತಾಗ ಎಲ್ಲಿಹಳೆಂದು ಹುಡುಕಲು
ಅಡಗಿ ಕುಳಿತು ಒಳಗೊಳಗೇ ನಗುವ ನನ್ನ ನಕಲು
ಹುಡುಕಾಡಿ ಹಿಡಿದೆನವಳ ಮೂಲ ಜಾಡು
ಸರ್ವಕಾಲಕ್ಕೂ ಕೈಹಿಡಿವ ನಿಜ ಗೆಳತಿ ಅವಳು
ಸದಾ ರಕ್ಷಿಸುವ ಸೈನ್ನಿಕಳು ನನ್ನೊಳಗಿನ ಅವಳು!
ಉಮಾ ಭಾತಖಂಡೆ.