ನನಗೆ ಸಮಯವೇ ಇಲ್ಲ
ನನ್ನ ಸ್ನೇಹಿತರೊಬ್ಬರಿಗೆ ಧಾರವಾಡದಿಂದ ಮತ್ತೊಂದು ಕಡೆಗೆ ವರ್ಗಾವಣೆಯಾಗಿತ್ತು. ಅವರಿಗೆ ಒಂದು ಬೀಳ್ಕೊ ಡುಗೆ ಇಟ್ಟುಕೊಳ್ಳುವುದಕ್ಕೆ ನಾವೆಲ್ಲ ಸ್ನೇಹಿತರು ನಿಶ್ಚಯಿಸಿದ್ದೆವು. ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ಸಂಪರ್ಕಿಸಿದಾಗ ಕಪ್ಪೀ ತೂಕ ಮಾಡಿದ ಅನುಭವವಾಗಿತ್ತು. ಎಲ್ಲರಿಗೂ ಒಂದೊಂದು ಸಮಸ್ಯೆ. ಯಾರಿಗೂ ಸಮಯವೇ ಇಲ್ಲ!
ಇವತ್ತಿನ ಗಡಿಬಿಡಿ ಜೀವನದಲ್ಲಿ ಯಾರಿಗೂ ಯಾವುದಕ್ಕೂ ಸಮಯವೇ ಇಲ್ಲ. ಪ್ರತಿಯೊಂದು ಕಾರ್ಯವೂ ಒತ್ತಡದಿಂದಲೇ ಆರಂಭ. ಬೆಳಗಿನ ಚಹಾ, ಸ್ನಾನ, ತಿಂಡಿ, ತಿನಸು, ಆಫೀಸು… ಅಲ್ಲಿಯ ಕೆಲಸ. ಮಾನಸಿಕ ಒತ್ತಡ, ದೈಹಿಕ ಒತ್ತಡ.. ಈ ಒತ್ತಡಗಳನ್ನು ಕಡಿಮೆಗೊಳಿಸುವ ಸಾಕಷ್ಟು ಮಾರ್ಗಗಳನ್ನು ಓದುತ್ತೇವೆ, ದೂರದರ್ಶನದಲ್ಲಿ ನೋಡುತ್ತೇವೆ.. ಆದರೆ ಅನುಸರಿಸಲು ಸಮಯವಿಲ್ಲ!
ಈ ಸಮಯವಿಲ್ಲ ಎನ್ನುವ ಬೀಜಮಂತ್ರ ಈಗಿನ ಕಾಲದಲ್ಲಿ ಉದ್ಯೋಗಸ್ಥರನ್ನಷ್ಟೇ ಅಲ್ಲ, ಒಂದು ನಿರ್ದಿಷ್ಟ ವಯೋಮಾನದವರೆಂತಲೇ ಅಲ್ಲ, ಯಾರನ್ನೂ ಬಿಟ್ಟಿಲ್ಲ. ಕಲಿಯುವ ಮಕ್ಕಳಿಗೆ ಕೂಡ ಆಡಿ ನಲಿಯಲು ಸಮಯವಿಲ್ಲ. ಈಗಿನ ಮಕ್ಕಳು ಆಟವನ್ನು ಕೂಡ ಹುಡುಗಾಟವಲ್ಲ, ಗಂಭೀರವಾಗಿಯೆ ಪರಿಗಣಿಸುತ್ತಾರೆ. ಆಟಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು… ಪದಕ ಗಳಿಸಬೇಕು.. ಓದಿದರೆ ರ್ಯಾಂಕ್ ಗಳಿಸಲೇಬೇಕು… ಹೇಗಾದರಾಗಲಿ… ಹಾಡಿದರೆ ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿಗಳಂತೆ ಹಾಡಬೇಕು.. ಇಲ್ಲವಾದರೆ ಇಲ್ಲ… ಪ್ರಯತ್ನ ಮುಖ್ಯ, ಫಲ ದೇವರಿತ್ತಂತೆ ಎಂಬ ಮಾತೇ ಇಲ್ಲ. ಇದರಲ್ಲಿ ಹಿರಿಯರ ಪಾಲೂ ಇದೆ. ಮಕ್ಕಳಲ್ಲಿ ಈ ಸ್ಪರ್ಧಾತ್ಮಕ ಮನೋಭಾವವನ್ನು ತುಂಬುವವರೆ ಅವರು. ನಮ್ಮ ಯುವಜನರು ಇಂದು ಹೆಸರು, ಕೀರ್ತಿ, ಹಣಗಳ ಹಿಂದೆ ಬೆನ್ನು ಹತ್ತಿರುವುದೆ ಇದಕ್ಕೆಲ್ಲ ಕಾರಣವಾಗಿದೆಯೋ ಏನೋ. ನಮ್ಮ ಮನಸ್ಸಂತೋಷಕ್ಕಾಗಿ ಎನ್ನುವ ಹವ್ಯಾಸಗಳೇ ಇಲ್ಲವೇ? ಇವೆಯಲ್ಲ, ಟಿವಿ ಚಾನೆಲ್ಸ್ , ಸ್ಮಾರ್ಟ್ ಫೋನ್…. ಮಕ್ಕಳಿಗೆ ಕಾರ್ಟೂನ್ ನೆಟ್ ವರ್ಕ್, ವಿಡಿಯೋ ಗೇಮ್ಸ್…
ಹಿಂದಿನವರು, ಕುಟ್ಟುತ್ತಿದ್ದರು, ಬೀಸುತ್ತಿದ್ದರು, ಹಾಡುತ್ತಿದ್ದರು, ಡಜನ್ ಗಟ್ಟಲೆ ಮಕ್ಕಳನ್ನು ಹಡೆಯುತ್ತಿದ್ದರು, ಪೋಷಿಸುತ್ತಿದ್ದರು, ಒಲೆಯ ಮುಂದೆ ಬೇಯುತ್ತಿದ್ದರು. ಆದರೂ ಅವರಿಗೆ ಸಮಯವೆಲ್ಲಿಂದ ಬರುತ್ತಿತ್ತು? ಆಗ ದಿನಕ್ಕೆ 25 ಗಂಟೆಗಳಿದ್ದವೇ?