ಚೆನ್ನಣ್ಣ ವಾಲೀಕಾರ ಕೊನೇ ಉಸಿರು ಇರುವವರೆಗೂ ದಲಿತಪರ ಬಂಡಾಯ ಸಂವೇದನೆಯನ್ನೇ ಜೀವನಾಡಿ ಆಗಿಸಿಕೊಂಡಿದ್ದವರು. ಪುಟ್ಟ ಪದ್ಯದಿಂದ ಹಿಡಿದು ಮಹಾಕಾವ್ಯದವರೆಗೆ ಪ್ರಯೋಗ ಮಾಡಿ ಬಂಡಾಯ ಸಾಹಿತ್ಯದಲ್ಲಿ ಅಚ್ಚಳಿಯದ ಮುದ್ರೆ ಒತ್ತಿದವರು… ಅಂದು ನಾನು ಬೆಳಗಾವಿಯಲ್ಲಿದ್ದೆ. 24ರ ರಾತ್ರಿ 10.30ಕ್ಕೆ ಬಂಡಾಯ ಬಂಧು ಚೆನ್ನಣ್ಣ ವಾಲೀಕಾರ ನಿಧನರಾದ ಸುದ್ದಿ ತಿಳಿದು ಕಂಗಾಲಾದೆ. ರಾತ್ರಿಯಿಡಿ ನಿದ್ದೆ ಬಾರದೆ ಒದ್ದಾಡಿದೆ. ಚೆನ್ನಣ್ಣ ಬಂಡಾಯ ಸಾಹಿತ್ಯ ಚಳವಳಿಯಲ್ಲಿ ಅತ್ಯಂತ ಬದ್ಧತೆಯಿಂದ ತೊಡಗಿಸಿಕೊಂಡಿದ್ದು ಮಾತ್ರ ನನ್ನ ಸಂಕಟಕ್ಕೆ ಕಾರಣವಾಗಿರಲಿಲ್ಲ. ಆತ ನಮಗೆಲ್ಲ ಬಂಧುವಾಗಿದ್ದ. ನಮ್ಮ ನಡುವೆ ಕುಟುಂಬದ ಪರಿಭಾಷೆಯ ಮೂಲಕ ಬಾಂಧವ್ಯವನ್ನು ಭಾವಕೋಶದ ಭಾಗವಾಗಿಸಿಕೊಂಡವರಲ್ಲಿ ಚೆನ್ನಣ್ಣ ಪ್ರಮುಖ. ನನಗಂತೂ ಆತ ಏಕವಚನದ ಗೆಳೆಯ. ಪರಸ್ಪರ ಏಕವಚನದಲ್ಲಿ ಸಂಬೋಧಿಸಿ ಸಂತಸಪಡುತ್ತಿದ್ದ ನನ್ನ ಇಬ್ಬರು ಪ್ರಮುಖ ಕವಿಮಿತ್ರರೆಂದರೆ– ಒಬ್ಬ: ಚೆನ್ನಣ್ಣ ವಾಲೀಕಾರ; ಇನ್ನೊಬ್ಬ: ಎಂ.ಎನ್. ವ್ಯಾಸರಾವ್. ನಾವು ಯಾವತ್ತೂ ಬಹುವಚನ ಬಳಸಿದವರಲ್ಲ. ಚೆನ್ನಣ್ಣನಂತೂ ನನ್ನನ್ನು ಯಾವಾಗಲೂ ‘ಭಾವ’ ಎಂದೇ ಕರೆಯುತ್ತಿದ್ದ. ನನ್ನ ಪತ್ನಿ ರಾಜಲಕ್ಷ್ಮಿಯನ್ನು ‘ತಂಗಿ’ ‘ತಂಗ್ಯವ್ವ’ ಎನ್ನುತ್ತಿದ್ದ. ಇಂಥ ಒಬ್ಬ ಭಾವ ಬಂಧುವನ್ನು ಕಳೆದುಕೊಂಡ ನನಗೆ ಹೇಗೆ ನಿದ್ದೆ ಬಂದೀತು? ಚೆನ್ನಣ್ಣನ ಸಾವಿನ ಆಘಾತದಲ್ಲಿ ನನ್ನ ಪತ್ನಿಯ ಸಾವಿನ ನೆನಪೂ ಸೇರಿ, ನಾನು ‘ಪ್ರಜಾವಾಣಿ’ಯಲ್ಲಿ ಬರೆದ ಕವಿತೆಯ ಸಾಲುಗಳು ನೆನಪಾದವು:‘ಸರ್ವರನು ಸಾಯಿಸುವ ಸಾವೇ ನೀನೇಕೆ ಸಾಯುವುದಿಲ್ಲ? ಆಕಾರವಿಲ್ಲದ ಸರ್ವಾಧಿಕಾರವೇ ನಿನಗೇಕೆ ಕೊನೆಯೆಂಬುದಿಲ್ಲ’ ಈ ಕವಿತೆಯನ್ನು ಓದಿದ ಚೆನ್ನಣ್ಣ ನನಗೆ ದೂರವಾಣಿ ಕರೆ ಮಾಡಿ ಗದ್ಗದಿತನಾಗಿದ್ದ. ‘ನಾವೆಲ್ಲರೂ ನೀನು ಹೇಳಿದ ಆಕಾರವಿಲ್ಲದ ಸರ್ವಾಧಿಕಾರಕ್ಕೆ ಬಲಿಯಾಗಲೇಬೇಕಲ್ಲವೆ ಭಾವ?’ ಎಂದು ಸಮಾಧಾನಿಸಿದ್ದ. ಈಗ ಆತನೂ ಸಾವಿನ ಸರ್ವಾಧಿಕಾರಕ್ಕೆ ‘ಬಲಿ’ಯಾಗಿಬಿಟ್ಟ! ನನ್ನಂಥ ಅನೇಕ ಬಂಡಾಯ ಬಂಧುಗಳಲ್ಲಿ ಅನಾಥ ಪ್ರಜ್ಞೆ ಹುಟ್ಟುಹಾಕಿಬಿಟ್ಟ. ಈ ಚೆನ್ನಣ್ಣನೇ ಹಾಗೇ. ಹಚ್ಚಿಕೊಂಡುಬಿಟ್ಟರೆ ಎಂದೂ ದೂರವಾಗದ ಅಯಸ್ಕಾಂತ ಅಂತಃಕರಣದ ಮನುಷ್ಯ. ಈತನಿಗೆ ಸಾಮಾಜಿಕ ಕಾಳಜಿಯ ಕಾವ್ಯ ಮೊದಲ ಆದ್ಯತೆಯಾದಂತೆ ಮನುಷ್ಯ ಸಂಬಂಧವೂ ಆದ್ಯತೆಯಾಗಿತ್ತು. ಹೀಗಾಗಿ ಚೆನ್ನಣ್ಣ ತಾನು ನಂಬಿದ ಸಿದ್ಧಾಂತವನ್ನು ಸೆರೆಮನೆಯಾಗಿಸಿಕೊಳ್ಳಲಿಲ್ಲ; ಸ್ನೇಹಮಯವಾಗಿಸಿಕೊಂಡ. ಈ ಸ್ನೇಹವನ್ನು ಸಿದ್ಧಾಂತದ ಆಚೆಗೂ ವಿಸ್ತರಿಸಿಕೊಂಡ. ಎಲ್ಲರೊಂದಿಗೆ ಬೆರೆಯುತ್ತಲೇ ‘ಕೆಂಪಂಗಿ ಚೆನ್ನಣ್ಣ’ನಾಗಿ ಬೆಳೆಯುತ್ತ ಬಂದ. ಹೌದು; ಆತ ಸದಾ ಕೆಂಪು ಅಂಗಿ ಧರಿಸಿಯೇ ಸಮಾರಂಭಗಳಿಗೆ ಬರುತ್ತಿದ್ದ. ಆತನ ಕೆಂಪು ಕೇವಲ ಮಾರ್ಕ್ಸ್‌ವಾದಕ್ಕೆ ಮಾದರಿಯಾಗಿರಲಿಲ್ಲ. ಅಂಬೇಡ್ಕರ್ ಅರಿವಿನಲ್ಲಿ ಅರಳುತ್ತ ಮಾರ್ಕ್ಸ್ ಮುಂತಾದವರನ್ನೂ ಒಳಗೊಳ್ಳುತ್ತ ಸಮಾಜ ಬದಲಾವಣೆಯ ಸಂಕೇತವಾಗಿತ್ತು. ಈ ವಿಶಾಲ ಮನೋಧರ್ಮದ ‘ಮುಗ್ಧಭಾವ’ದಿಂದಲೇ ಸಿದ್ಧಾಂತವನ್ನು ಸಂಬಂಧದ ಸಂವೇದನೆಯಾಗಿಸುವ ನಡವಳಿಕೆಯನ್ನು ರೂಢಿಸಿಕೊಂಡಿದ್ದ ಚೆನ್ನಣ್ಣನ ವಿಚಾರಧಾರೆ ಕೂದಲೆಳೆ ಸೀಳುವ ಜಾಣ್ಮೆಯಾಗುವ ಬದಲು ಒಲುಮೆಯಾಗಿತ್ತು. ಸ್ಥೂಲ ರೂಪದಲ್ಲಿ ಸಮಾಜ ಬದಲಾವಣೆಯ ಸಕರಾತ್ಮಕ ಚಿಂತನೆಯಾಗಿತ್ತು; ನಿಗರ್ವ ಹಾಗೂ ನಿಸ್ಸಂಕೋಚದ ನಡೆಯೂ ಆಗಿತ್ತು. ಆತನ ಲೆಟರ್‌ಹೆಡ್‌ನಲ್ಲಿ ಅಚ್ಚು ಮಾಡಿದ ಅಕ್ಷರಗಳು ಕೂಡ ಕೆಂಪಾಗಿದ್ದವು. ಆತನ ಪ್ರಕಾಶನದ ಹೆಸರು ‘ಬಂಡಾಯ ಪ್ರಕಾಶನ’ವಾಗಿತ್ತು. ಅಂದರೆ ತಾನು ಏನು ಎನ್ನುವುದನ್ನು ಢಾಳಾಗಿ ಕಾಣಿಸುವ ಉಮೇದು ಆತನಲ್ಲಿತ್ತು. ಆದರೆ, ಇದ್ಯಾವುದೂ ಆತನ ಮನುಷ್ಯ ಸಂಬಂಧಗಳಿಗೆ ಅಡ್ಡಿಯಾಗಲಿಲ್ಲ. ಹಾಗೆಂದು ತನ್ನ ಸೈದ್ಧಾಂತಿಕ ನಂಬಿಕೆಗಳಿಗೆ ವಂಚನೆ ಮಾಡಲಿಲ್ಲ.ನಮ್ಮ ನಡುವೆ ಕುಟುಂಬ ಪರಿಭಾಷೆಯ ಪ್ರಮುಖ ಎಂದರೆ ಚೆನ್ನಣ್ಣನೇ ಎಂದು ನಾನು ಆರಂಭದಲ್ಲಿ ಹೇಳಿದೆ. ಆತ ಯಾವ ಗೆಳೆಯರ ಮನೆಗೆ ಬಂದರೂ ‘ತಿಂಡಿ ರೆಡಿ ಮಾಡಿ’ ಎಂದು ನಿಸ್ಸಂಕೋಚವಾಗಿ ಹೇಳುವಷ್ಟು ಕುಟುಂಬ ವತ್ಸಲನಾಗಿದ್ದ. ನಮ್ಮ ಮನೆಗೆ ಬರುವಾಗ ‘ಭಾವ, ತಂಗಿಗೆ ಹೇಳು ನಾನ್ ಬರ‍್ತೀನಿ’ ಎಂದರೆ ತಿಂಡಿ ರೆಡಿಯಾಗಿರಬೇಕು ಎಂದರ್ಥ. ಆಗ ನನ್ನ ಪತ್ನಿ ಹೇಳುತ್ತಿದುದು ಹೀಗೆ; ‘ಚೆನ್ನಣ್ಣ ಬರೋದಾದ್ರೆ ನಮಗೆಲ್ಲ ಮಾಡಿರೊ ತಿಂಡಿ ಅವ್ರಿಗ್ ಆಗುತ್ತೆ. ನಮ್ಗೆ ಬೇರೆ ಮಾಡ್ತೀನಿ’. ಇದೇ ಮಾತನ್ನು ಚೆನ್ನಣ್ಣನಿಗೆ ಹೇಳಿದಾಗ ಆತ ‘ನನ್ನ ವಿಷ್ಯ ತಂಗೀಗ್ ಚೆನ್ನಾಗ್ ಗೊತ್ತು ಬಿಡು ಭಾವ’ ಎಂದು ಹೊಟ್ಟೆ ತುಂಬ ತಿಂಡಿ ತಿನ್ನುತ್ತಿದ್ದ ಸಂಭ್ರಮಕ್ಕೆ ಸಾಟಿಯೇ ಇಲ್ಲ. ಇಂಥ ಭೋಜನ ಪ್ರಿಯತೆಯನ್ನು ಕಂಡು ಚಂದ್ರಶೇಖರ ಪಾಟೀಲರು ಹೀಗೆ ಒಂದು ಪದ್ಯ ಬರೆದು ಬಿಟ್ಟರು: ‘ನಮ್ಮ ದಲಿತ ಕವಿ ಚೆನ್ನಣ್ಣನಿಗೆ ಯಾರಾದರೂ ಪ್ರೀತಿಯಿಂದ ‘ಚೆನ್ನಣ್ಣ ಊಟು ಮಾಡು’ –ಅಂದರೆ ಸಾಕು, ಚೆಂದಾಗಿ ಕುಂತು ತೀರಿಸಿಕೊಳ್ಳುತ್ತಾನೆ ಶತಮಾನದ ಸೇಡು’ ಚೆನ್ನಣ್ಣ ಇಂತಹ ಮಾತುಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವ ದೊಡ್ಡ ಮನಸ್ಸಿನ ಮನುಷ್ಯ. ತನ್ನನ್ನು ಗೇಲಿ ಮಾಡುತ್ತಾರೆಂದು ಆತ ಭಾವಿಸಲಿಲ್ಲ. ಗೇಲಿಯ ಬದಲು ಗೆಳೆತನದ ತಮಾಷೆಯಿಂದಷ್ಟೆ ಇಂತಹ ಮಾತುಗಳು ಬಂದಿವೆಯೆಂಬ ಸತ್ಯ ಆತನಿಗೆ ಗೊತ್ತಿತ್ತು. ಚೆನ್ನಣ್ಣ, ತನ್ನ ನಿಷ್ಕಪಟ ಮನಸ್ಸಿನ ಮನುಷ್ಯನಾಗಿಯಷ್ಟೇ ಅಲ್ಲ, ಒಬ್ಬ ಬರಹಗಾರನಾಗಿ ಬಹುದೊಡ್ಡ ಸಾಧಕ. ಆತ ಸದಾ ಪ್ರಯೋಗಶೀಲ. ಪುಟ್ಟ ಪದ್ಯದಿಂದ ಹಿಡಿದು ಮಹಾಕಾವ್ಯದವರೆಗೆ ಪ್ರಯೋಗ ಮಾಡಿದ ಈ ಬಂಡಾಯ ಬಂಧು ಸಾಹಿತ್ಯಕವಾಗಿ ಎದುರಿಸಿದ ಸವಾಲುಗಳೇನು ಕಡಿಮೆಯಲ್ಲ. ತನ್ನ ಮೊದಲ ಕವನ ಸಂಕಲನ ‘ಕರಿತಲಿ ಮಾನವನ ಜೀ ಪದ’ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಬಂದಾಗ ರಾಯಚೂರಿನಲ್ಲೇ ಇದ್ದ ಪ್ರಸಿದ್ಧ ಹಿರಿಯ ಸಾಹಿತಿಯೊಬ್ಬರು ಈ ಸಂಕಲನವು ಜನಪದರ ಹಾಡುಗಳ ನಕಲು ಎಂಬ ತಕರಾರು ತೆಗೆದರು. ಅವರ ಆಕ್ಷೇಪದಲ್ಲಿ ಚೆನ್ನಣ್ಣನ ರಚನೆಗಳಲ್ಲಿ ಸ್ವಂತಿಕೆಯಿಲ್ಲವೆಂಬ ಅಂಶ ಪ್ರಮುಖವಾಗಿತ್ತು. ಇದು ವಿವಾದ ಎಬ್ಬಿಸಿತು. ಆಗ ಸರಜೂ ಕಾಟ್ಕರ್, ಸತೀಶ ಕುಲಕರ್ಣಿ ಮುಂತಾದವರು ಚೆನ್ನಣ್ಣನ ಬೆಂಬಲಕ್ಕೆ ನಿಂತರು. ಚೆನ್ನಣ್ಣನ ಪ್ರಯೋಗಗಳನ್ನು ಸರಿಯಾಗಿ ಗ್ರಹಿಸದೆ ನಿರ್ಲಕ್ಷ್ಯ ಮಾಡಿದ ‘ನಿಪುಣತೆ’ ಮತ್ತೂ ಮುಂದುವರೆಯಿತು. ಚೆನ್ನಣ್ಣ ‘ಬೆಳ್ಯ’ ಎಂಬ ಕಿರುಕಾದಂಬರಿಯನ್ನು ಬರೆದಾಗ ಅದ ಭಾಷಾ ಪ್ರಯೋಗವನ್ನು ಅರಗಿಸಿಕೊಳ್ಳಲಾಗದವರು ಅಪಹಾಸ್ಯ ಮಾಡಿದರು. ‘ಬೆಳ್ಯ’ ಕಾದಂಬರಿಯು ರಾಯಚೂರು ಸುತ್ತಮುತ್ತಲ ಪ್ರಾದೇಶಿಕ ಆಡುಭಾಷೆಯಲ್ಲಿಯೇ ಪೂರ್ಣ ನಿರೂಪಣೆಗೊಂಡಿತ್ತು. ಹೀಗೆ ಪೂರ್ಣ ಪ್ರಮಾಣದಲ್ಲಿ ಪ್ರಾದೇಶಿಕ ಭಾಷೆಯಲ್ಲಿ ನಿರೂಪಿತವಾದ ಪ್ರಥಮ ಪ್ರಯೋಗವೂ ಆಗಿತ್ತು. ಅದರೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಕೆಲವರು ಈ ಕೃತಿಯನ್ನು ಮೌಖಿಕವಾಗಿ ಗೇಲಿ ಮಾಡಿದರು. ಮತ್ತೊಬ್ಬ ವಿಮರ್ಶಕರು ‘ಈ ಕಾದಂಬರಿಯನ್ನು ಕಂಪೋಸ್ ಮಾಡಿದ ಮತ್ತು ಕರಡು ತಿದ್ದಿದವರಿಗೆ ಅಭಿನಂದಿಸಬೇಕು’ ಎಂದು ವ್ಯಂಗ್ಯವಾಗಿ ಬರೆದರು. ಆದರೆ, ಆನಂತರ ಪ್ರಾದೇಶಿಕ ಆಡು ಭಾಷೆಯಲ್ಲೇ ನಿರೂಪಣೆಗೊಂಡ ದೇವನೂರರ ‘ಕುಸುಮಬಾಲೆ’ಗೆ ಅಪರಿಮಿತ ಮನ್ನಣೆ ಸಿಕ್ಕಿತು. ಬೆಳ್ಯ ಮತ್ತು ಕುಸುಮಬಾಲೆ– ಕೃತಿಗಳ ಸೃಜನಶೀಲ ಅಂಶಗಳಲ್ಲಿ ಅಂತರವಿದೆಯೆಂದು ಒಂದು ವೇಳೆ ಭಾವಿಸಿದರೂ ‘ಬೆಳ್ಯ’ ಕೃತಿಯು ಇಂತಹ ಮೊದಲ ಪ್ರಯೋಗವೆಂಬ ಗಂಭೀರ ಮನ್ನಣೆಗೆ ಪಾತ್ರವಾಗಬೇಕಿತ್ತು. ಚೆನ್ನಣ್ಣ ಎದೆಗುಂದಲಿಲ್ಲ. ವಿಮರ್ಶಕರ ವಿರುದ್ಧ ಅಸಹನೆ ತೋರಲಿಲ್ಲ. ಆತನ ಮನೋಧರ್ಮ ಹೇಗಿತ್ತೆಂದರೆ, ನನಗೆ ಮುನ್ನುಡಿ ಬರೆಯಲು ‘ಫ್ಯಾಂಥರ್ ಪದ್ಯಗಳು’ ಎಂಬ ಕೃತಿಯನ್ನು ಕೊಟ್ಟು ಹೇಳಿದ್ದೇನು ಗೊತ್ತೆ? ‘ನಿನ್ನ ಬರಹ ವಿಮರ್ಶಾತ್ಮಕವಾಗಿರಲಿ. ಕೊಚ್ಚಬೇಕೆನ್ನಿಸಿದರೆ ಚೆನ್ನಾಗಿಯೇ ಕೊಚ್ಚಿ ಬರೆ’ ಎಂಬುದು ಚೆನ್ನಣ್ಣನ ಮಾತು. ಇತ್ತೀಚೆಗೆ ಚೆನ್ನಣ್ಣ ಬರೆದ ‘ಮ್ಯೋಮೊವ್ಯೋಮ’ ಎಂಬ (ಗಪದ್ಯ) ಮಹಾಕಾವ್ಯದ ಬಗ್ಗೆಯೂ ಲಘುವಾದ ಮಾತುಗಳು ಬಂದದ್ದು ನಿಜ. ಇಡೀ ಕೃತಿಯು ಕಾಮಾ, ಪೂರ್ಣವಿರಾಮವಿಲ್ಲದೆ ಒಂದೇ ಸಮ ಸಾಲುಸಾಲಾಗಿ ಸಾಗುವ ಪ್ರಯೋಗದಿಂದ ಕೂಡಿದೆ. ಸಾಲುಗಳನ್ನು ಒಡೆದು ಕೆಲವು ಕಡೆಯಾದರೂ ಪದ್ಯಭಾಗ ಮಾಡಬಾರದಿತ್ತೆ ಎನ್ನಿಸುವುದುಂಟು. ಆದರೆ, ಚೆನ್ನಣ್ಣನ ಸಂಕಲ್ಪದ ಮುಂದೆ ಬೇರೆಲ್ಲವೂ ಗೌಣವಾಗುತ್ತದೆ. ಹಾಗೆಂದು ಆತನ ಶ್ರಮಮೂಲ ಸೃಜನಶೀಲ ಪ್ರಯೋಗಗಳನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಚೆನ್ನಣ್ಣನನ್ನು ಕಳೆದುಕೊಂಡ ಈ ಸಂದರ್ಭದಲ್ಲಿ ಇನ್ನೇನು ಬರೆಯಲಿ? ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟುವುದಕ್ಕೆ ಪೂರ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಖಿಲ ಭಾರತ ಸಮ್ಮೇಳನದಲ್ಲಿ ದಲಿತಗೋಷ್ಠಿ ಇರಬೇಕೆಂದು ಚೆನ್ನಣ್ಣ ‘ಪ್ರಜಾವಾಣಿ’ಯಲ್ಲಿ ಒತ್ತಾಯಿಸಿದ್ದನ್ನು ಹೇಗೆ ಮರೆಯಲಿ? ಹೀಗೆ ಮಾಡಿದ ಒತ್ತಾಯವೇ ಚರ್ಚೆ, ಚಿಂತನೆಗಳಿಗೆ ಕಾರಣವಾಗಿ ಮೊದಲ ಬಂಡಾಯ ಸಾಹಿತ್ಯ ಸಮ್ಮೇಳನಕ್ಕೆ ಒದಗಿದ ಕೆಲವು ಪ್ರೇರಣೆಗಳಲ್ಲಿ ಒಂದಾಗಿತ್ತೆಂಬ ಚಾರಿತ್ರಿಕ ಸತ್ಯವನ್ನು ಇಲ್ಲಿ ನೆನೆಯಬೇಕು. ಅಂದಿನಿಂದ ಕೊನೇ ಉಸಿರು ಇರುವವರೆಗೂ ದಲಿತಪರ ಬಂಡಾಯ ಸಂವೇದನೆಯನ್ನೇ ಜೀವನಾಡಿಯಾಗಿಸಿಕೊಂಡಿದ್ದ ಚೆನ್ನಣ್ಣ ಇಂದು ನಮ್ಮನ್ನು ಬಿಟ್ಟು ಬದ್ಧತೆಯನ್ನು ಕೊಟ್ಟು ಹೋದ ವಾಸ್ತವ ನಮ್ಮೊಳಗನ್ನು ಕಾಡುತ್ತಿದೆ. ಈ ಕಾಡುವಿಕೆಯಲ್ಲಿ ತೇವಗೊಂಡ ಮನಸಿನಲ್ಲಿ ಕೆಂಪಂಗಿ ಚೆನ್ನಣ್ಣನ ಹಾಡು ಪ್ರತಿಧ್ವನಿಸುತ್ತಿದೆ.‘ಯಾವ ಅಕ್ಷರದಿಂದ ಬರೆದು ತೋರಿಸಲಯ್ಯ ನನ್ನ ಜನಗಳಿಗಾದ ಎದೆಯ ಬ್ಯಾನಿ ಲೂಟಿಗಾರರೆ ಇಲ್ಲಿ ಲೀಡರಾಗುವ ಹೊತ್ತು ನಿಲ್ಲಲಾರವು ನಡೆವ ನಮ್ಮ ಖೂನಿ’ ನಿಜ, ಚೆನ್ನಣ್ಣ ನಿಜ. ನಿನ್ನ ಎಚ್ಚರದ ನುಡಿ ಇಂದಿಗೂ ನಿಜ! ನೀನೂ ನಮ್ಮೊಳಗಿನ ನಿಜ!
courtsey:prajavani.net
https://www.prajavani.net/artculture/article-features/article-by-baraguru-ramachandrappa-686487.html