ನಾನು ಮಂಡೋದರಿ…
ನನ್ನ ಹೆಸರು ಮಂಡೋದರಿ. ನಿಮಗೆಲ್ಲ ಗೊತ್ತಿರಬೇಕಲ್ಲ.. ನಾನೇ ರಾಮಾಯಣದ ಖಳನಾಯಕನಾದ ಆ ಅತ್ಯಂತ ಸುಂದರ, ಶೂರ, ಮಹಾ ಶಿವಭಕ್ತನಾದ ರಾವಣನ ಪತ್ನಿ.
ಭಾರತೀಯ ಪುರಾಣಗಳಲ್ಲಿ ನನ್ನನ್ನು ನಿತ್ಯವೂ ಪ್ರಾರ್ಥನೆ ಸಲ್ಲಿಸಬೇಕಾದ ಐದು ಜನ ಪತಿವ್ರತಾ ಮಹಿಳೆಯರಲ್ಲಿ ಒಬ್ಬಳೆಂದು ಉಲ್ಲೇಖಿಸುತ್ತಾರೆ. ನಾವು ಐವರೂ ಲೋಕರಕ್ಷಣೆಗಾಗಿಯೇ ನಮ್ಮ ಜೀವನವನ್ನು ಮುಡಿಪಾಗಿರಿಸಿದವರು.
ನಾನು ಸೀತೆಗೆ ಸಮಾನಳಾದ ಸುಂದರಿ. ಅಷ್ಟೇ ಅಲ್ಲ, ಅವಳಂತೆಯೇ ಅತ್ಯಂತ ಧಾರ್ಮಿಕಳು ಹಾಗೂ ನೀತಿವಂತೆಯೂ ಕೂಡ.
ನನ್ನ ತಂದೆ ಮಯಾಸುರ. ಅವನು ಅಪ್ರತಿಮ ಪ್ರತಿಭಾಶಾಲಿಯಾದ ವಾಸ್ತುಶಿಲ್ಪ ತಜ್ಞ. ನನ್ನ ತಾಯಿ ಗಂಧರ್ವ ಕನ್ಯೆ ಹೇಮಾ. ನನ್ನ ಅಪ್ಪ ಮಯನು ಅಮ್ಮನೊಂದಿಗೆ ಒಂದು ಸಾವಿರ ವರ್ಷ ಪರ್ಯಂತ ಸಂಸಾರ ನಡೆಸಿದನಂತೆ! ಅವಳಿಗೆಂದೇ ತನ್ನ ಮಾಯಾಶಕ್ತಿಯಿಂದ ವಜ್ರವೈಡೂರ್ಯ ಖಚಿತವಾದ ಸುವರ್ಣ ನಗರವನ್ನೂ ಕೂಡ ನಿರ್ಮಿಸಿದ್ದನಂತೆ. ಆದರೂ ಆ ಅತೃಪ್ತ ತಾಯಿ ನನ್ನ ತಂದೆಯನ್ನು ತೊರೆದು ಹೊರಟು ಹೋದಳು! ನನಗೆ ಮಾಯಾವಿ, ದುಂದುಭಿ ಎಂಬ ಇಬ್ಬರು ಸೋದರರೂ ಇದ್ದರು. ಅವರು ದೊಡ್ಡವರಾದಂತೆ ಸ್ವತಂತ್ರರಾಗಿದ್ದರು. ಆದರೆ ತಂದೆಯು ವಿರಹದಲ್ಲಿ ದುಃಖದಿಂದ ಬೇಯುತ್ತ ನವ ಯುವತಿಯಾದ ನನ್ನನ್ನು ಕರೆದುಕೊಂಡು ಕಾಡಿನಲ್ಲಿ ತಿರುಗುವಾಗ ರಾವಣ ಒಮ್ಮೆ ಆಕಸ್ಮಿಕವಾಗಿ ನನ್ನ ತಂದೆಗೆ ಭೇಟಿಯಾದ. ರಾವಣ ಅತ್ಯಂತ ಸುಂದರ ಹಾಗೂ ಶೂರ. ಅವನ ಸುಂದರವಾದ ಅಂಗಸೌಷ್ಟವವು ಎಂಥವರನ್ನೂ ಮರುಳು ಗೊಳಿಸುವಂಥದು. ತಂದೆಯೂ ಅವನಿಗೆ ಮಾರುಹೋಗಿದ್ದ. ನನ್ನನ್ನು ಮದುವೆಯಾಗುವಂತೆ ತಂದೆಯು ರಾವಣನನ್ನು ಕೇಳಿದಾಗ ರಾವಣನೂ ಒಪ್ಪಿಕೊಂಡ. ಆ ಕೂಡಲೇ ತಂದೆಯು ಅಗ್ನಿಯನ್ನು ಪ್ರತಿಷ್ಠಾಪಿಸಿ ವಿಧ್ಯುಕ್ತವಾಗಿ ನನ್ನನ್ನು ರಾವಣನಿಗೆ ಮದುವೆ ಮಾಡಿಕೊಟ್ಟ. ಜೊತೆಗೇ ಅದ್ಭುತವೂ ಅಮೋಘವೂ ಆದ ಒಂದು ಶಕ್ತ್ಯಾಯುಧವನ್ನೂ ರಾವಣನಿಗೆ ಕೊಟ್ಟ. ಅದು ಪರಮ ತಪೋಬಲದಿಂದ ತಂದೆಗೆ ಲಭಿಸಿತ್ತು. ಅಷ್ಟೇ ಅಲ್ಲ, ನನ್ನ ಪತಿಯಾದ ರಾವಣನಿಗೆ ಉಡುಗೊರೆಯ ರೂಪದಲ್ಲಿ ತಂದೆಯು ಕಣ್ಣು ಕೋರೈಸುವಂತಹ ಪರಿಶುದ್ಧವಾದ ಚಿನ್ನದಿಂದ ನಿರ್ಮಿತವಾದ ಹೊಸ ನಗರಿಯನ್ನು ಕೂಡ ನಿರ್ಮಿಸಿ ಕೊಟ್ಟಿದ್ದ. ನಾನು ಪತಿಯೊಂದಿಗೆ ಸುಖವಾಗಿ ಸಂಸಾರ ಮಾಡಿಕೊಂಡಿದ್ದೆ. ಕಾಲಕ್ರಮೇಣ ನಮಗೆ ಅತಿಕಾಯ, ಮೇಘನಾದ ಮತ್ತು ಅಕ್ಷಯ ಕುಮಾರ ಎಂಬ ಮೂವರು ಅತ್ಯಂತ ಶೂರರಾದ ಮಕ್ಕಳು ಜನಿಸಿದರು.
ನನ್ನ ಪತಿ ಅತ್ಯಂತ ಗುಣವಂತನಾಗಿದ್ದನು. ಭಗವಾನ್ ಶಿವನು ನನಗೆ ದಯಪಾಲಿಸಿದ್ದ ವರದ ಪ್ರಕಾರ ರಾವಣನು ಕೇವಲ ಓರ್ವ ಮಹಾನ್ ಪರಾಕ್ರಮಿಯಾದ ರಾಜನಾಗಿರುವುದಷ್ಟೇ ಅಲ್ಲ, ಜೊತೆಗೆ ಓರ್ವ ಮಹಾನ್ ಶಿವಭಕ್ತನೂ ಆಗಿದ್ದನು. ಆದರೆ ವಿನಾಶಕಾಲೇ ವಿಪರೀತ ಬುದ್ಧಿಃ ಎಂಬಂತೆ ತನ್ನ ವಿನಾಶವನ್ನು ತಾನೇ ಕೈಯಾರೆ ಬರಮಾಡಿಕೊಂಡನು. ‘ಅಬ್ಧಿಯುಮೊರ್ಮೆ ಮೇರೆಯಂ ದಾಂಟುವಂತೆ’ ನನ್ನ ಪತಿ ತನ್ನ ಮೇರೆಯನ್ನು ದಾಟಿದ್ದನು. ಅಯೋಧ್ಯಾಪತಿ ಶ್ರೀ ರಾಮಚಂದ್ರನ ಪತ್ನಿ ಸೀತೆಯನ್ನು ಅಪಹರಿಸಿಕೊಂಡು ತಂದನು. ನಾನು ಮಾತ್ರ ಓರ್ವ ಆದರ್ಶ ಪತ್ನಿಯ ರೂಪದಲ್ಲಿ ಎಂದೆಂದಿಗೂ ನನ್ನ ಪತಿಯ ವಿಷಯದಲ್ಲಿ ನನ್ನ ನಿಷ್ಟೆಯನ್ನು ಕಾಪಾಡಿಕೊಂಡುಬಂದಿದ್ದವಳು. ಯಾವಾಗಲೂ ಧರ್ಮಮಾರ್ಗದಲ್ಲಿಯೇ ಜೀವನ ನಡೆಸುತ್ತಿದ್ದ ನಾನು ನನ್ನ ಪತಿಗೂ ಕೂಡ ಅದೇ ರೀತಿಯ ಜೀವನವನ್ನು ಸಾಗಿಸಲು ಒತ್ತಾಯಿಸುತ್ತಿದ್ದೆ . ಆದರೆ ನಾನು ನಾನಾ ವಿಧವಾಗಿ ಅವನಲ್ಲಿ ಕೇಳಿಕೊಂಡರೂ ಏನೂ ಪ್ರಯೋಜನವಾಗದಾಯಿತು. ಪರಮಸಾಧ್ವಿಯಾದ ನನ್ನ ಸಲಹೆಗಳನ್ನು ರಾವಣನು ಎಂದಿಗೂ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಸೀತೆಯನ್ನು ಮರಳಿ ರಾಮನಿಗೆ ಒಪ್ಪಿಸಬೇಕೆಂದು ನಾನು ಅವನಲ್ಲಿ ಪರಿಪರಿಯಾಗಿ ಕೇಳಿಕೊಂಡರೂ ಕೂಡಾ ಅದರಿಂದೇನೂ ಪ್ರಯೋಜನವಾಗುವುದಿಲ್ಲ. ಅವನ ಸ್ತ್ರೀಲಂಪಟತನವೇ ಆತನ ಪಾಲಿಗೆ ಮುಳುವಾಗುತ್ತದೆಯೆಂಬ ಸಂಗತಿಯನ್ನು ನಾನು ಅರಿತೆ. ಉಪಾಯಗಾಣದಾದೆ. ಆದರೂ ಅವನಿಗೆ ಸನ್ಮಾರ್ಗದಲ್ಲಿ ಮುನ್ನಡೆಯಬೇಕೆಂಬ ಮಾತನ್ನು ಹೇಳುತ್ತಲೇ ಇದ್ದೆ, ಅದೆಲ್ಲವೂ ಬೋರ್ಗಲ್ಲ ಮೇಲೆ ನೀರು ಸುರಿದಂತೆಯೇ ಆಗುವುದೆಂಬ ಅರಿವು ನನಗಿದ್ದರೂ. ಶೂರರಾದ ರಾಮಲಕ್ಷ್ಮಣರು ವಾನರ ಸೈನ್ಯವನ್ನು ಕಟ್ಟಿಕೊಂಡು ರಾವಣನ ಮೇಲೆ ಯುದ್ಧಕ್ಕೆ ಬಂದರು. ಆ ಯುದ್ದದಲ್ಲಿ ಇಂದ್ರಾದಿಗಳಿಗೂ ಅಜೇಯರಾದ ನನ್ನ ಪತಿ ರಾವಣ, ಮೈದುನ ಕುಂಭಕರ್ಣ, ನನ್ನ ಮಗ ಇಂದ್ರಜಿತು ಎಲ್ಲರೂ ಸತ್ತುಹೋದರು. ಅತ್ಯಂತ ಶೂರರಾದ ಇವರು ನಾಶವಾಗಬೇಕಾದರೆ ರಾಮ ಮಾನವನಲ್ಲ, ದೇವಾಂಶ ಸಂಭೂತನೇ ಆಗಿರಬೇಕೆಂದು ನನಗೆ ನಂಬಿಕೆಯಾಯಿತು.
ನಾನೇನು ಕಡಿಮೆ ಸುಂದರಿಯಲ್ಲ… ಆದರೂ ನನ್ನ ಪತಿಯಾದ ರಾವಣನು ಪರಸ್ತ್ರೀ ವ್ಯಾಮೋಹಕ್ಕೆ ಬಲಿಯಾದ. ಕವಿಗಳು ನನ್ನ ಸೌಂದರ್ಯವನ್ನು ವರ್ಣನೆ ಮಾಡಿದ ರೀತಿಯಲ್ಲಿ ಅದು ಗೋಚರವಾಗುತ್ತದೆ. ಆದಿಕವಿ ವಾಲ್ಮೀಕಿಗಳು ತಮ್ಮ ಮಹಾಕಾವ್ಯವಾದ ರಾಮಾಯಣದಲ್ಲಿ ನಿರೂಪಿಸಿರುವ ಪ್ರಕಾರ, ನನ್ನ ಸೌಂದರ್ಯಕ್ಕೆ ಹನುಮಂತನೇ ಆಶ್ಚರ್ಯಗೊಂಡಿದ್ದನಂತೆ. ಶ್ರೀ ರಾಮಚಂದ್ರನ ವಾನರದೂತನಾದ ಹನುಮಂತನು ಸೀತಾಮಾತೆಯನ್ನು ಹುಡುಕುತ್ತ ನಮ್ಮ ರಾಜಧಾನಿ ಲಂಕೆಗೆ ಬಂದಾಗ, ನಮ್ಮ ಶಯ್ಯಾಗೃಹವನ್ನು ಪ್ರವೇಶಿಸಿದ ಹನುಮಂತನು ಅಲ್ಲಿ ನನ್ನನ್ನು ನೋಡಿ ಸೀತಾಮಾತೆಯೇ ನಾನೆಂದು ತಪ್ಪಾಗಿ ಭಾವಿಸುತ್ತಾನಂತೆ. ಕೋಪ ಬಂದು ಹನುಮನು ಹಿಂತಿರುಗಿ ಹೊರಟಾಗ ದಾರಿಯಲ್ಲಿ ಅಶೋಕವನವು ಕಾಣುತ್ತದೆಯಂತೆ. ಅಲ್ಲಿ ನಿಜವಾದ ಸೀತೆಯು ವಿರಾಗಿಣಿಯಂತೆ ಶೋಕಿಸುತ್ತ ಕುಳಿತಿರುತ್ತಾಳೆಯಲ್ಲ! ಅಲ್ಲದೆ ಆ ಅವೇಳೆಯಲ್ಲಿ ಅಲ್ಲಿಗೆ ಬಂದ ರಾವಣನು, “ನನ್ನನ್ನು ವಿವಾಹವಾಗದಿದ್ದರೆ ನಿನ್ನನ್ನು ಕೊಂದುಬಿಡುವೆ” ಎಂದು ಸೀತಾಮಾತೆಯನ್ನು ಹೆದರಿಸುತ್ತಿರುವ ದೃಶ್ಯವು ಹನುಮನ ಕಣ್ಣಿಗೆ ಬೀಳುತ್ತದೆಯಂತೆ. ಸೀತೆಯು ರಾವಣನ ಬೆದರಿಕೆಗೆ ಸೊಪ್ಪು ಹಾಕದಿದ್ದಾಗ, ರಾವಣನು ತನ್ನ ಖಡ್ಗವನ್ನೆತ್ತಿ ಸೀತೆಯ ತಲೆಯನ್ನು ಕಡಿದು ಹಾಕಲು ಮುಂದಾಗುವನಂತೆ. ಆಗ ಮುಂದೆ ಬರುವ ನಾನು ರಾವಣನ ಕೈಹಿಡಿದು ಸೀತೆಯನ್ನು ಕೊಲ್ಲದಂತೆ ತಡೆಯುತ್ತೇನೆಯಂತೆ.. ಅಲ್ಲದೆ ಸ್ತ್ರೀಹತ್ಯೆಯು ಅತ್ಯಂತ ಪಾಪವೆಂದೂ ಹಾಗೂ ಸೀತೆಯನ್ನು ಕೊಲ್ಲಬಾರದೆಂದೂ ಬೇಡಿಕೊಂಡೆನಂತೆ! ವಾಲ್ಮೀಕಿಗಳೂ ಕೂಡ ನನಗಾಗಿ ಮರುಗಿದ್ದಾರೆ… ನಾನು ಒಬ್ಬ ಒಳ್ಳೆಯ ಪತ್ನಿಯ ಕರ್ತವ್ಯವನ್ನು ಮಾಡಿದರೂ ರಾವಣನ ಕರ್ಮಫಲವು ಅವನಿಗೆ ಅಡ್ಡಿಯಾಯಿತೆಂದು ಅವರ ಹೇಳಿಕೆ.
ರಾವಣನ ಮನವೊಲಿಸಲು ಶತಪ್ರಯತ್ನ ಶಾಂತಿ, ಸಂಧಾನ ಮಾರ್ಗದ ಮೂಲಕ ಸೀತಾಮಾತೆಯನ್ನು ಹಿಂಪಡೆಯುವ ಎಲ್ಲಾ ಪ್ರಯತ್ನಗಳೂ ವ್ಯರ್ಥವೆಂದೆನಿಸಿದಾಗ, ರಾಮನು ರಾವಣನ ಲಂಕೆಯ ವಿರುದ್ಧ ಸಮರ ಘೋಷಣೆಗೈಯ್ಯುತ್ತಾನೆ. ರಾಮನೊಂದಿಗಿನ ಅಂತಿಮ ಯುದ್ಧಕ್ಕೆ ಮೊದಲೂ ಕೂಡಾ, ರಾವಣನ ಮನವೊಲಿಸಲು ನಾನು ಅಂತಿಮ ಪ್ರಯತ್ನವನ್ನು ಮಾಡಿದ್ದೆ. ಆದರೆ ನನ್ನ ಆ ಪ್ರಯತ್ನವೂ ಕೂಡ ವ್ಯರ್ಥವಾಗಿತ್ತು. ಕಟ್ಟಕಡೆಯದಾಗಿ, ಓರ್ವ ವಿಧೇಯ ಹಾಗೂ ವಿಶ್ವಾಸಪೂರ್ಣ ಪತ್ನಿಯ ರೂಪದಲ್ಲಿ ನಾನು ರಾಮನೊಂದಿಗಿನ ಅಂತಿಮ ಕದನದಲ್ಲಿ ನನ್ನ ಪತಿಗೆ ಬೆಂಬಲವಾಗಿ ನಿಲ್ಲಬೇಕಾಗಿತ್ತು. ಆದರೂ ನಾನು ನನ್ನ ಪ್ರಯತ್ನವನ್ನು ಬಿಡಲಿಲ್ಲ. ನನ್ನ ಪುತ್ರನಾದ ಮೇಘನಾದ (ಇಂದ್ರಜಿತು – ಸ್ವರ್ಗಾಧಿಪತಿಯಾದ ಇಂದ್ರನನ್ನು ಗೆದ್ದವನು) ನಿಗೆ ಕೂಡ ರಾಮನ ವಿರುದ್ಧ ಸಮರಕ್ಕಿಳಿಯದಂತೆ ಸಲಹೆ ಮಾಡಿದೆ.
ವಾಲ್ಮೀಕಿ ಋಷಿಗಳು ತಮ್ಮ ರಾಮಾಯಣದಲ್ಲಿ, ರಾವಣನ ಎಲ್ಲಾ ಪುತ್ರರೂ ಹಾಗೂ ಯೋಧರೂ ಯುದ್ಧದಲ್ಲಿ ಮಡಿದ ಬಳಿಕವೂ ಕೂಡ, ತಾನೇ ವಿಜಯವನ್ನು ಹೊಂದಬೇಕೆಂಬ ಇಚ್ಛೆಯಿಂದ ರಾವಣನು ಯಜ್ಞವೊಂದನ್ನು ಆಯೋಜಿಸಿದನು. ಆ ಯಜ್ಞವನ್ನು ಹಾಳುಗೆಡಹುವುದಕ್ಕಾಗಿ ಹನುಮಂತ ಹಾಗೂ ವಾನರಪಡೆಯ ನಾಯಕನಾದ ಅಂಗದರ ನೇತೃತ್ವದಲ್ಲಿ ಸಮಸ್ತ ವಾನರಪಡೆಯನ್ನು ರಾಮನು ಕಳುಹಿಸುತ್ತಾನೆ. ವಾನರರು ರಾವಣನ ಅರಮನೆಯಲ್ಲಿ ಇನ್ನಿಲ್ಲದ ಗೊಂದಲವನ್ನುಂಟು ಮಾಡಿಬಿಡುತ್ತಾರಾದರೂ ಕೂಡಾ, ರಾವಣನು ಯಜ್ಞವನ್ನು ಮುಂದುವರೆಸುತ್ತಾನೆ. ರಾವಣನ ಸಮ್ಮುಖದಲ್ಲಿಯೇ ಅಂಗದನು ನನ್ನ ಕೇಶರಾಶಿಯನ್ನು ಹಿಡಿದು ದರದರನೆ ಎಳೆದಾಡುತ್ತಾನೆ. ಆಗ ನಾನು ನನ್ನನ್ನು ರಕ್ಷಿಸುವಂತೆ ರಾವಣನಲ್ಲಿ ಗೋಗರೆಯುತ್ತೇನೆಯಂತೆ. ಅಲ್ಲದೆ ರಾಮನು ತನ್ನ ಪತ್ನಿಗೋಸ್ಕರ ಏನೆಲ್ಲಾ ಮಾಡುತ್ತಿದ್ದಾನೆ ಎಂದು ರಾವಣನನ್ನು ಹೀಗಳೆಯುತ್ತೇನೆಯಂತೆ. ಆಗ ಸಿಟ್ಟಿಗೆದ್ದ ರಾವಣನು ಯಜ್ಞಕಾರ್ಯವನ್ನು ಅಲ್ಲಿಗೇ ಬಿಟ್ಟು ಅಂಗದನನ್ನು ತನ್ನ ಖಡ್ಗದಿಂದ ಹೊಡೆಯಲು ಏಳುತ್ತಾನೆ. ಇದರಿಂದಾಗಿ ಯಜ್ಞವು ಭಂಗಗೊಳ್ಳುತ್ತದೆ ಹಾಗೂ ಅಂಗದನ ಉದ್ದೇಶವು ನೆರವೇರುತ್ತದೆ. ಅಂಗದನು ನನ್ನನ್ನು ಕ್ಷಮೆ ಯಾಚಿಸಿ, ಅಲ್ಲಿಂದ ಪರಾರಿಯಾಗುತ್ತಾನೆ. ಆಗಲೂ ಕೂಡ ಮತ್ತೊಮ್ಮೆ ಮಂಡೋದರಿಯು ಸೀತಾಮಾತೆಯನ್ನು ರಾಮನಿಗೆ ಹಿಂದಿರುಗಿಸಬೇಕೆಂದು ಒತ್ತಾಯಿಸುತ್ತೇನೆ ಎಂದೇ ಚಿತ್ರಿಸಿದ್ದಾರೆ. ಆದರೆ, ಹಠಬಿಡದ ರಾವಣನು ಮತ್ತೊಮ್ಮೆ ಅವಳ ಕೋರಿಕೆಯನ್ನು ನಿರಾಕರಿಸಿದನೆಂದೂ ಹೇಳಿದ್ದಾರೆ.
ಹೀಗೆ ಎಲ್ಲಾ ಪುರಾಣ ಕಾವ್ಯಗಳಲ್ಲೂ ನನ್ನ ಹಿರಿಮೆಯನ್ನು ಹಾಡಿ ಹೊಗಳಿದ್ದಾರೆ. ಆದರೂ ನನ್ನ ಮನಸ್ಸಿನಲ್ಲಿ ಒಂದು ಕೊರಗಿದೆ. ಹೆಣ್ಣನ್ನು ಆದಿಕಾಲದಿಂದಲೂ ಹೀಗೇಕೆ ತುಚ್ಛವಾಗಿ ನಡೆಸಿಕೊಳ್ಳಲಾಗುತ್ತದೆ? ಅವಳನ್ನು ಪಗಡೆಯಾಟದ ದಾಳದಂತೇಕೆ ತಿಳಿಯಲಾಗುತ್ತದೆ? ಅವಳಿಗೂ ಒಂದು ಮನಸ್ಸಿದೆ… ಅದಕ್ಕೂ ಆಶೆಗಳಿವೆ… ಅವಳವೇ ಆದ ಸುಖ ದುಃಖಗಳ ವ್ಯಾಖ್ಯೆಗಳೂ ಇವೆ ಎಂದೇಕೆ ಅರಿಯುವುದಿಲ್ಲ? ರಾವಣನು ಒಂದು ವೇಳೆ ನಾನು ಹೇಳಿದ ಬುದ್ಧಿವಾದವನ್ನು ಕೇಳಿದ್ದರೆ ಅವನಿಗೆ ಈ ಗತಿ ಬರುತ್ತಿತ್ತೇ? ಆಗ ಕೆಲವರು ಅವನ ದೈವದಲ್ಲಿ ಇದೆಲ್ಲ ಘಟಿಸಲೇಬೇಕಿತ್ತು, ಅವನ ಮರಣವು ರಾಮನಿಂದಲೇ ಎಂದು ವಿಧಿ ನಿಶ್ಚಯಿಸಿಬಿಟ್ಟಿತ್ತು ಎಂದು ಹೇಳಿ ಅವನ ವರ್ತನೆಯನ್ನು ಪುಷ್ಟೀಕರಿಸುತ್ತಾರೆ. ಇದು ಸರಿಯೇ? ಅವರಿಗೆ ಈ ವಿಧಿಯ ಬಗ್ಗೆ ತಿಳಿದಿತ್ತೆ? ಹಾಗಾದರೆ ಅವರು ಎಚ್ಚರಿಸಲಿಲ್ಲವೇಕೆ? ತಪ್ಪು ರಾಜನೇ ಮಾಡಲಿ, ಹಿರಿಯನೇ ಮಾಡಲಿ, ಅದನ್ನು ತಪ್ಪು ಎಂದು ತಡೆಯುವ ಎದೆಗಾರಿಕೆ ಇದ್ದವನೇ ಹಿತವಂತನಲ್ಲವೇ? ಅಂಥ ಧೈರ್ಯ ಮಾಡಿದ ನನ್ನ ಮೈದಾನ ವಿಭೀಷಣನು ನನ್ನ ದೃಷ್ಟಿಯಲ್ಲಿ ಪೂಜನೀಯ.