ನಾ ಗೆಲ್ಲುವೆ!
ಬಿಟ್ಟೂ ಬಿಡದ ಮಳೆಯಲ್ಲಿ
ನಲಿದು ಕುಪ್ಪಳಿಸಿ ಕುಣಿಯುವೆ
ಉಕ್ಕಿ ಬರುವ ಕಣ್ಣೀರು ಕಾಣದಂತೆ
ಕತ್ತಲೆಯಲ್ಲಿ ಸಂತಸದಿ ಹಾಡುವೆ
ರಾಗ ಅನುರಾಗಗಳ ಫಲ್ಲವಿಸಿ
ಭಾವನೆಗಳು ಕಾಣದಂತೆ
ಬಯಲಲ್ಲಿ ಪುಷ್ಪಗಳ ಹಾಸಿ
ನಿದ್ರಿಸುವೆ ಸುಂದರ ಸ್ವಪ್ನವೆಂಬಂತೆ
ಆಂತರ್ಯದ ಮುಳ್ಳು ಕಾಣದಂತೆ
ಬೆಳಕಲ್ಲಿ ಎಲ್ಲರೊಡಗೂಡಿ ಬೆರೆಯುವೆ
ನಕ್ಕು ನಲಿಯುವೆ ಒಂದಾಗಿ
ದುಗುಡ ದುಮ್ಮನ ಕಾಣದಂತೆ
ವನಸಿರಿಯಲಿ ಹಸಿರು ತೊಟ್ಟು
ಕಂಗೊಳಿಸುವೆ ಹುಸಿ ಸಂತಸದಿ
ಕಾಂಡಕೆ ಮೆತ್ತಿದ ಜಿಗಳೆ ಕಾಣದಂತೆ
ಬಾನಲಿ ಹೊಳೆವ ನಕ್ಷತ್ರವಾಗಿ
ಜಗಮಗಿಸುವೆ ಮುಗಿಲಲಿ
ಉರಿದು ಭಸ್ಮವಾದರೂ ಕಾಣದಂತೆ
ಅಗ್ನಿ ಜ್ವಾಲೆಯಲಿ ಕೇಸರಿಯ
ರಂಗು ನನಾಗಿ ಮೆರೆಯುವೆ
ಬೂದಿಯಾದರೂ ಕಾಣದಂತೆ
ಓ ದೈವವೇ ನೀ ಎಸಗುವ
ಸವಾಲಿಗೆ ಪ್ರತ್ಯುತ್ತರ ನೀಡುವುದ ಬಿಡಲಾರೆ
ನಾನಾಗ ಗೆಲ್ಲುವೆ ನಿನಗೇ ಅರಿವಾಗದಂತೆ.
ಉಮಾ ಭಾತಖಂಡೆ.