ನಾಚಿಕೆಯನ್ನು ಮರೆಮಾಚುವುದು ಹೇಗೆ?
ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಯಾವುದೇ ಒಂದು ಪ್ರಸಂಗದಲ್ಲಿ ನಾಚಿಕೆಯ ಸ್ವಭಾವವನ್ನು ವ್ಯಕ್ತಪಡಿಸುತ್ತಾನೆ. ಇದು ಸರ್ವೇಸಾಮಾನ್ಯವಾದ ಸಂಗತಿ.
ನಾಚಿಕೆಯುಂಟಾದಾಗ ಏನೇನಾಗುತ್ತದೆ? ಮನುಷ್ಯನ ಬಾಯಿ ಒಣಗಿದಂತಾಗುತ್ತದೆ. ಕೈಕಾಲುಗಳು ನಡುಗುತ್ತವೆ. ಅಂಗೈಗಳಲ್ಲಿ ಬೆವರು ಮೂಡುತ್ತದೆ. ಹಾಗೂ ಹೇಳಬೇಕಾದ ಶಬ್ದಗಳು ಗಂಟಲಿನಲ್ಲಿಯೇ ಉಳಿಯುತ್ತವೆ. ಯಾಕೆ ಹೀಗಾಗುತ್ತದೆ? ಈ ನಾಚಿಕೆ ಎನ್ನುವುದು ಎಲ್ಲಿಂದ ಬರುತ್ತದೆ? ಯಾಕೆ ಹೀಗಾಗುತ್ತದೆ? ಈ ನಾಚಿಕೆ ಎನ್ನುವುದು ಎಲ್ಲಿಂದ ಬರುತ್ತದೆ? ಎಂದು ವಿಚಾರ ಮಾಡಿದಾಗ ಕೆಲವು ಸಲ ವಂಶಾವಳಿಗಳಿಂದ ಬರುತ್ತದೆ ಎಂದು ಹೇಳಬಹುದು. ಯಾವ ಮಕ್ಕಳು ನಾಚಿಕೆಯ ಸ್ವಭಾವದವರಾಗಿರುತ್ತಾರೋ ಆ ಮಕ್ಕಳ ತಾಯ್ತಂದೆಯರೂ ಕೂಡ ಸ್ವತಃ ನಾಚಿಕೆಯ ಸ್ವಭಾವದವರಾಗಿರುತ್ತಾರೆ. ಕೆಲವು ಸಲ ಜೀವನದ ಪ್ರಾರಂಭದಲ್ಲಿ ನಡೆದ ಘಟನೆಗಳಾಗಲೀ, ಸಾಮಾಜಿಕ ಪರಿಸರವಾಗಲೀ ಇದಕ್ಕೆ ಪರಿಣಾಮ ಬೀರುತ್ತವೆ ಎಂದು ಹೇಳಬಹುದು. ಉದಾಹರಣೆಗೆ ಚಿಕ್ಕ ಮಗು ಸೂಕ್ಷ್ಮಮನಸ್ಥಿತಿಯದ್ದಾಗಿದ್ದರೆ ಆ ಮಗುವಿನ ಉತ್ತರ ತಪ್ಪಾದಾಗ ಆತ ಅಥವಾ ಆಕೆಯ ಟೀಚರ ತರಗತಿಯಲ್ಲಿ ಮಗುವಿನ ಕುರಿತು ದೊಡ್ಡದಾಗಿ ಎಲ್ಲರ ಮುಂದೂ ಅವಹೇಳನ ಮಾಡಿದರೆ ಆ ಮಗ ಒಂಥರದ ಗಿಲ್ಟೀ ಫೀಲಿಂಗಿನಿಂದಾಗಿ ಮುಂದೆ ಯಾವತ್ತೂ ಉತ್ತರ ಹೇಳಲು ಮುಂದಾಗುವುದಿಲ್ಲ.
ತನ್ನದೇ ಮೇಲಿರುವ ಅಪನಂಬಿಕೆ ಸೋಲಿನೆಡೆಗೆ ನಡೆಸುತ್ತದೆ. ಇದು ಕೂಡ ನಾಚಿಕೆಯ ಸ್ವಭಾವದ ಮೂಲವಾಗಬಹುದು. ನಾವು ಕೆಲಸ ಮಾಡುವಾಗ ನಮ್ಮದೇ ಬೇಕು ಬೇಡಗಳನ್ನು ನಮ್ಮ ಮೇಲಾಧಿಕಾರಿಯರಿಗೆ ತಿಳಿಸಲು ಹಿಂಜರಿಯುತ್ತೇವೆ. ಸಾಮಾಜಿಕವಾಗಿ ನಾವು ಮುಂದುವರೆದು ‘ಹೆಲೋ’ ಎಂದು ಹೇಳಲಾಗದೇ ದೊರಕಬಹುದಾದ ಮುಖ್ಯವಾದ ಅವಕಾಶವನ್ನು ಕಳೆದುಕೊಂಡಿರುತ್ತೇವೆ.
ಬಹಳಷ್ಟು ಸಲ ನಾವು ಇತರರು ನಮ್ಮೆಡೆಗೇ ನೋಡುತ್ತಿರುತ್ತಾರೆ. ನಮ್ಮ ಪ್ರತಿಯೊಂದು ಕಾರ್ಯವನ್ನು ಇಂಚಿಂಚಾಗಿ ಗಮನಿಸಲಾಗುತ್ತಿದೆ. ನಮ್ಮ ನಡಾವಳಿಗಳೂ ಹಾಗೂ ಅಭಿವ್ಯಕ್ತಿಗಳನ್ನು ವೀಕ್ಷಿಸಲಾಗುತ್ತಿದೆ ಎಂದು ತಿಳಿದಿರುತ್ತೇವೆ. ಅದರ ಪರಿಣಾಮವೇನೆಂದರೆ ನಾವು ಹೊರಗಡೆ ಹೋಗುವುದನ್ನು ನಿಲ್ಲಿಸುತ್ತೇವೆ. ಜನರೊಂದಿಗೆ ಬೆರೆಯುವುದನ್ನು ತಪ್ಪಿಸಲಾರಂಭಿಸುತ್ತೇವೆ. ಸಾಮಾಜಿಕ ಗ್ಯಾದರಿಂಗ್ ನಲ್ಲಿ ನಾವು ನಮ್ಮನ್ನು ಪರಿಚಯಿಸುವುದಾಗಲೀ ಅಥವಾ ನಮ್ಮ ಅಭಿಪ್ರಾಯ ಮಂಡಣೆಯನ್ನಾಗಲೀ ಮಾಡುವುದಿಲ್ಲ.
ಹಾಗಾಗಿದ್ದಲ್ಲಿ ನಾವು ನಾಚಿಕೆಯ ವಿರುದ್ಧ ಹೇಗೆ ಹೋರಾಡಬಲ್ಲೆವು? ನಮ್ಮ ನಾಚಿಕೆಯ ಸ್ವಭಾವವನ್ನು ಹೇಗೆ ಹೊಡೆದೋಡಿಸಬೇಕು? ಜಗತ್ತನ್ನು ಹಾಗೂ ನಮ್ಮ ಸಮಸ್ಯೆಯನ್ನು ಧೈರ್ಯವಾಗಿ ಹೇಗೆ ಎದುರಿಸಬಲ್ಲೆವು ಎಂದೆಲ್ಲ ವಿಶ್ಲೇಷಿಸಿದಾಗ ನನಗನಿಸುತ್ತದೆ. ನಾವು ಸಮಸ್ಯೆಯಿಂದ ಎಷ್ಟು ದೂರ ಓಡುತ್ತೇವೋ ಅಷ್ಟು ಆ ಸಮಸ್ಯೆ ಹೆಚ್ಚೇ ಆಗುತ್ತದೆ. ಅಥವಾ ನಮ್ಮನ್ನು ಸುತ್ತಿಕೊಳ್ಳುತ್ತದೆ. ಉದಾಹರಣೆಗೆ, ಯಾವುದೇ ಒಂದು ಪಾರ್ಟಿಗೆ ಹೋಗಬೇಕಾದ ಸಂದರ್ಭ ಯಾವುದೇ ಒಂದು ವಿಷಯದ ಮೇಲೆ ಮಾತನಾಡುವ ಅವಕಾಶ, ಗ್ರೂಪ್ ಡಿಸ್ಕಶನ್ ನಲ್ಲಿ ಭಾಗವಹಿಸುವಿಕೆಯೇ ಇರಬಹುದು. ಆಗ ನಾವೆಲ್ಲ ಮುಂದುವರೆದು ಭಾಗವಹಿಸಬೇಕಾದದ್ದು ಅವಶ್ಯಕ. ಹಾಗೂ ದೊರೆತ ಅವಕಾಶದಿಂದ ನಮ್ಮ ನಾಚಿಕೆಯ ಸ್ವಭಾವವನ್ನೂ ದೂರಗೊಳಿಸಬಹುದು.
ಯಾವುದೇ ಸಮಸ್ಯೆ ಎದುರಾದರೂ ಧನಾತ್ಮಕ ಚಿಂತನೆಯಿಂದ ಅದನ್ನು ಯಶಸ್ವಿಯಾಗಿ ಎದುರಿಸಿ ಗೆಲ್ಲಬಹುದು. ಯಾವತ್ತಿಗೂ ಸಂಶಯಗಳಿಗೆ ಅವಕಾಶ ನೀಡಬಾರದು. ಉದಾಹರಣೆ: ಈ ಡ್ರೆಸ್ ನನಗೆ ಇವತ್ತಿನ ಸಮಾರಂಭಕ್ಕೆ ಒಪ್ಪುತ್ತದೋ ಹೇಗೆ? ನನಗೆ ಅಲ್ಲಿ ಪರಿಚಿತರು ಸಿಗುತ್ತಾರೆಯೇ ಇಲ್ಲವೋ ಅಥವಾ ಕಾರ್ಯಕ್ರಮದಲ್ಲಿ ನನ್ನ ವಿಷಯ ಮಂಡಣೆ ಸರಿಯಾಗುತ್ತದೋ ಇಲ್ಲವೋ ಎಂಬೆಲ್ಲ ಸಂಶಯಗಳನ್ನು ಬದಿಗೊತ್ತಿ ಅತ್ಯಂತ ಆತ್ಮವಿಶ್ವಾಸದಿಂದ ಆನೆ ನಡೆದದ್ದೇ ದಾರಿ ಎಂಬಂತೆ ನಡೆದರೆ ನಾವು ಯಾರನ್ನೋ ಅನುಕರಿಸುವುದನ್ನು ಬಿಟ್ಟು ನಮ್ಮನ್ನೇ ಜನ ಅನುಕರಿಸಬಹುದು ಅಲ್ಲವೇ? ಯಾವಾಗಲೂ ಸ್ನೇಹ ಪೂರಿತವಾಗಿ, ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬೇಕು. ಎತ್ತಲೋ ದೃಷ್ಟಿ ಇಟ್ಟು ಮಾತನಾಡುವುದು ಸರಿಯಲ್ಲ. ಬಾಡಿಲ್ಯಾಂಗ್ವೇಜ ಕೂಡ ಮುಖ್ಯವಾಗಿರುತ್ತದೆ.
ನಾವು ನಾಚಿಕೆ ಸ್ವಭಾವದಿಂದ ಹೊರಬರಲು ಯತ್ನಿಸುತ್ತಿರುವಾಗ ದೊಡ್ಡ ಗೆಲುವನ್ನೇನೂ ಅಪೇಕ್ಷಿಸಲಾಗುವುದಿಲ್ಲ. ಒಂದು ವೇಳೆ ದೊಡ್ಡ ಫಂಕ್ಷನ್ ಗಳಲ್ಲಿ ಮಾತನಾಡಲು ಹಿಂಜರಿಕೆಯಾಗುತ್ತಿದ್ದರೆ ಮೊದಮೊದಲು ಮನೆಯಲ್ಲಿಯ ಹಿರಿಯರೊಂದಿಗೆ ಅಂದರೆ ಅಮ್ಮ, ಅಪ್ಪ, ತಾತ, ಅಜ್ಜಿ, ಸಹೋದರ, ಸಹೋದರಿಯರೊಂದಿಗೆ ಮಾತನಾಡಲು ಪ್ರಾರಂಭಿಸಬೇಕು. ಮತ್ತೆ ಮುಂದುವರೆದು ಚಿಕ್ಕಗುಂಪಿನ ಮಿತ್ರರೊಂದಿಗೆ ಮಾತನಾಡಲಾರಂಭಿಸಬೇಕು. ಹಾಗೇ ಮುಂದೆ ದೊಡ್ಡ ಗುಂಪಿನೊಂದಿಗೆ ಮಾತನಾಡುವಾಗ ಹಿಂಜರಿಕೆ ಕಡಿಮೆಯಾಗುತ್ತದೆ. ಸ್ಟೇಜಫಿಯರ ಎನ್ನುವುದು ಮರೆಯಾಗುತ್ತದೆ. ಹಾಗೇ ಮೈಕಿನ ಮುಂದೆ ಮಾತನಾಡಲು ಖುಷಿ ಎನ್ನಿಸಲಾರಂಭಿಸುತ್ತದೆ.
ನಾಚಿಕೆಯಾಗುವುದಕ್ಕೆ ಮುಖ್ಯ ಕಾರಣಗಳೇನು ಎಂಬುದನ್ನು ಮೊದಲು ಗುರ್ತಿಸಬೇಕು. ಬಹುಶಃ ನಮ್ಮ ಹೊರಗಿನ ಅಪಿಯರೆನ್ಸ್ ಅಥವಾ ಸ್ವಲ್ಪ ಗುಗ್ಗುವಿಕೆ ಅಥವಾ ನಮಗೇ ತಿಳಿಯದ ಕೆಲವೊಂದು ವಿಚಿತ್ರ ಅಭಿವ್ಯಕ್ತಿಗಳು ಅಥವಾ ಮರೆಗುಳಿತನ, ಯಾವುದೇ ದೋಷಗಳಿದ್ದರೂ ಕೂಡ ಅವನ್ನು ಗುರ್ತಿಸಿದಾಗ ಅದನ್ನು ಸರಿಪಡಿಸಲು ಮೊದಲು ಸಿದ್ಧರಾಗಬೇಕು. ಕೇಶರಾಶಿಯನ್ನು ಸುಂದರ ಒಪ್ಪವಾಗಿ ಕತ್ತರಿಸಿ ಅಲಂಕರಿಸಿಕೊಳ್ಳಬಹುದು. ಜಾಸ್ತಿ ತೂಕವಿದ್ದರೆ ಕಡಿಮೆಗೊಳಿಸಿ, ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಡೈರಿಗಳಲ್ಲಿ ಹೆಸರುಗಳನ್ನು ಬರೆದಿಟ್ಟುಕೊಂಡು ಹೆಸರುಗಳನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಸ್ಪಷ್ಟವಾಗಿ ಉಚ್ಛರಿಸಲು ಪ್ರಯತ್ನಿಸಿದಂತೆ ಗುಗ್ಗುತನವು ಕಡಿಮೆಯಾಗುತ್ತದೆ. ಸತತ ಪ್ರಯತ್ನದಿಂದ ನಮ್ಮಲ್ಲಿಯ ದೌರ್ಬಲ್ಯಗಳನ್ನು ಇಲ್ಲವಾಗಿಸಬಹುದು. ಕೆಲವೊಂದು ಸಲ ನಮ್ಮಲ್ಲಿಯ ಕೀಳರಿಮೆ ಕೂಡ ನಾಚಿಕೆ ಸ್ವಭಾವ ಬರಲು ಅನುವು ಮಾಡಿಕೊಡುತ್ತದೆ.
ಯಾವಾಗಲೂ ಗುಂಪಿನಲ್ಲಿದ್ದುಕೊಂಡು ಕೆಲಸ ಮಾಡುವುದು ಸರಳವಾದುದು. ಸಹಿಸಂಗ್ರಹಣೆ, ಫಂಡ್ ಕೂಡಿಸುವುದು, ಪರಿಸರ ಆಂದೋಲನದಲ್ಲಿ ಪಾದಯಾತ್ರೆ ಕೈಗೊಳ್ಳುವುದು, ಗ್ರೂಪ್ ಡಿಸ್ಕಸ್ ಮಾಡುವುದು, ಯಾವುದೇ ಪಾರ್ಟಿಯಲ್ಲಿ ಕ್ರಿಕೆಟ್ ಮ್ಯಾಚ್ ಅಥವಾ ಇನ್ಯಾವುದೋ ಕ್ರೀಡೆ, ರಾಜಕೀಯ ವಿಷಯಗಳ ಬಗ್ಗೆ ವಿಚಾರವಿನಿಮಯ ಮಾಡುವುದು, ತಮ್ಮ ಅನಿಸಿಕೆಗಳನ್ನು ಹೇಳುವುದು, ಆಗ ನಮಗೇ ನಮ್ಮ ನಾಚಿಕೆ ಸ್ವಭಾವ ದೂರವಾಗುತ್ತವೆ ಅಥವಾ ಮರೆಯಾಗುತ್ತಿದೆ ಎಂದೆನಿಸುತ್ತದೆ.
ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಇರಲಿ ಹಾಗೇ ಮೆಚ್ಚುಗೆ ಕೂಡ. ಪ್ರತಿಯೊಬ್ಬರೂ ಪರಿಪೂರ್ಣರಲ್ಲ. ಅವರಲ್ಲಿ ಒಳ್ಳೆಯ ಗುಣಗಳ ಜೊತೆಗೆ ಕೆಟ್ಟಗುಣಗಳೂ ಇರಬಹುದು. ಮೊದಲು ನಮ್ಮಲ್ಲಿ ಏನೇನು ಒಳ್ಳೆಯ ಗುಣಗಳಿವೆ ಎಂಬುದನ್ನು ಎಣಿಕೆ ಮಾಡಿ ನಂತರ ನಮ್ಮಲ್ಲಿರುವ ತಪ್ಪುಗಳನ್ನು, ಅಪಯಶಸ್ಸನ್ನು ಒಪ್ಪಿಕೊಳ್ಳಬೇಕು.
ನಾಚಿಕೆ ಸ್ವಭಾವ ಇದು ಅತ್ಯಂತ ಸ್ವಾಭಾವಿಕ ಹಾಗೂ ಸಾಮಾನ್ಯವಾದದ್ದು. ಅದಕ್ಕಾಗಿ ಚಿಂತಿಸುವ ಕಾರಣವಿಲ್ಲ. ಮಹಾತ್ಮಾ ಗಾಂಧೀಜಿಯವರೂ ಕೂಡ ಮೊದಲು ತುಂಬಾ ನಾಚಿಕೆಯ ಸ್ವಭಾವದವರಾಗಿದ್ದರು. ಅವರು ಹೋರಾಟಗಾರರಾಗಿ ಪರಿವರ್ತನೆ ಹೊಂದಿದಾಗ ಅವರ ನಾಚಿಕೆಯ ಸ್ವಭಾವವೂ ಬಿಟ್ಟು ಹೋಯಿತು.
ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ಚಿಕ್ಕಂದಿನಿಂದಲೇ ನಾಚಿಕೆ ಸ್ವಭಾವವನ್ನು ದೂರಗೊಳಿಸಿ ಆತ್ಮವಿಶ್ವಾಸದಿಂದ ಬೆಳೆಸಬೇಕಾದದ್ದು ಅವಶ್ಯಕ. ಅದಕ್ಕಾಗಿ ತಾಯಿ ತಂದೆಗಳು ಶ್ರಮಿಸಬೇಕು. ಕೇವಲ ಟಿವಿ, ಕಂಪ್ಯೂಟರ್ ಗಳ ಮುಂದೆ ಕುಳಿತುಕೊಳ್ಳುವ ಇಂದಿನ ಮಕ್ಕಳು ಕೇವಲ ಕಣ್ಣಷ್ಟನ್ನೇ ಕೆಡಿಸಿಕೊಳ್ಳದೇ ಆರೋಗ್ಯವನ್ನೂ ಕೆಡಿಸಿಕೊಳ್ಳುತ್ತಿವೆ. ಅವರನ್ನು ಮಿತ್ರರೊಂದಿಗೆ ಆಡಲು ಬಿಡಬೇಕು. ನೆರೆಹೊರೆಯವರೊಮದಿಗೆ ಉತ್ತಮ ಬಾಂಧವ್ಯ ಏರ್ಪಡಿಸುವಂತೆ ಅವರನ್ನು ಹುರಿದುಂಬಿಸಬೇಕು. ಉತ್ತಮ ಅಭಿವ್ಯಕ್ತಿ ಇತರರೊಂದಿಗಿನ ಸಂವಾದ ನಾಚಿಕೆ ಸ್ವಭಾವವನ್ನು ದೂರಗೊಳಿಸುತ್ತದೆ ಎಂದು ಹೇಳಬಹುದು.