My daddy strongest
ಮಧ್ಯಾಹ್ನ ಹನ್ನೆರಡರ ಉರಿಬಿಸಿಲು.. ಸೂರ್ಯನಿಗೂ ಬೆವರಿಡುವ ಸಮಯ. ಕೂದಲಿಲ್ಲದ ಬಕ್ಕನೆತ್ತಿಯ ಮೇಲೆ ಇಪ್ಪತೈದು ಅಕ್ಕಿಯ ಮೂತೆ ಹೊತ್ತು ತಂದು ಪಡಸಾಲೆಯಲ್ಲಿ ಇಳಿಸಿ ನಾಲ್ಕು ಬೆರಳುಗಳಿಂದ ಬೆವರು ಗೀರಿ ತೆಗೆದರೆ ಒಂದು ಲೋಟ ತುಂಬಬೇಕು… ಯಾರಿಗೋ ಒಬ್ಬರಿಗೆ ಐದು/ಹತ್ತು ರೂಪಾಯಿ ಕೂಲಿ ಕೊಟ್ಟರೆ ಮನೆವರೆಗೂ ತರಬಹುದಾದದ್ದಕ್ಕೂ ಶ್ರಮ ಪಡುವ ಅನಿವಾರ್ಯತೆ ಆಗ ನಮ್ಮಪ್ಪನಿಗೆ… ಎಂಟು ಮಕ್ಕಳು, ಅಮ್ಮ-ಅಪ್ಪ-ಅಜ್ಜಿ ಹನ್ನೊಂದು ಜನರ ಸಂಸಾರದಲ್ಲಿ ಉಳಿತಾಯ ಬಿಟ್ಟರೆ ಬೇರೆ ಇನ್ನೊಂದು ಪದಕ್ಕೆ ಮಹತ್ವವೇ ಇಲ್ಲ ಎಂಬಂತಿದ್ದ ಬದುಕು. ಕಾಯಂ ಅಲ್ಲದ ಪುಟ್ಟ ನೌಕರಿ. ದೊಡ್ಡ ಪೋಸ್ಟನಿಂದ.Wholesaleನಲ್ಲಿ ಕಾರ್ಡು, ಇನ್ಲ್ಯಾಂಡ್, ಪೋಸ್ಟCoverಗಳು, ರೆವಿನ್ಯೂstamps, money order formsನಂಥ ಎಲ್ಲ ಸರಕು- ಸಾಮಗ್ರಿ ತಂದು ಕಮೀಶನ್ ಮೇಲೆ ಊರಲ್ಲಿ ಕೊಡುವದು. ಪುಟ್ಟ ಒಂದು ಕೋಣೆಯ ಮನೆ. ಒಂದಿಷ್ಟು ಜಮೀನು ಇದ್ದುದರಿಂದ ಹೊಟ್ಟೆ ಪಾಡಿಗೆ ಚಿಂತೆಯಿಲ್ಲದಿದ್ದರೂ ಸ್ವಲ್ಪು ತಲೆಗೆಳೆದರೆ ಕಾಲಿಗೆ, ಕಾಲಿಗೆಳೆದರೆ ತಲೆಗೆ ಸಾಲದ ಬದುಕು. ಆದರೆ ಕೊರತೆಗಳ ಬಗ್ಗೆ ಒಂದೇ ಒಂದು ದಿನವೂ ಮನೆಯಲ್ಲಿ ಮಾತುಗಳಾದ ನೆನಪು ನನಗಿಲ್ಲ. ಸ್ವಲ್ಪು ಹೆಚ್ಚು, ಸ್ವಲ್ಪು ಕಡಿಮೆ ಎಲ್ಲರದೂ ಅದೇ ಸ್ಥಿತಿಯಿತ್ತೋ, ಬದುಕೆಂದರೆ ಇಷ್ಟೇ ಎಂಬುದು ಪೂರ್ವ ಗ್ರಹಿತವಿತ್ತೋ ಇಂದಿಗೂ ಒಗಟು ನನಗೆ. ಇಷ್ಟಾದರೂ ಮಧ್ಯಾಹ್ನದ ವೇಳೆ ಯಾರೇ ಪರೂರಿಂದ ಬರಲಿ ಅವರು ನಮ್ಮನೆಯಲ್ಲಿ ಉಣಲೇಬೇಕು ಎನ್ನುವಷ್ಟು ಔದಾರ್ಯ.
ಆಗ ಸೌದೆ ಒಲೆಗಳ ಕಾಲ. ಕಡಿದ ಕಟ್ಟಿಗೆ ತುಂಬಾ ತುಟ್ಟಿ. ಮರದ ಬೊಡ್ಡೆಗಳನ್ನು ಖರೀದಿಸಿ ಬೆಳಿಗ್ಗೆ ಎರಡು ಗಂಟೆ ಕಟ್ಟಿಗೆ ಕಡಿಯುವ ಕೆಲಸ. ಚಹ ಕುಡಿದು, ಬಾಯಲ್ಲಿ ಎಲೆ, ಅಡಿಕೆ ತುಂಬಿ ನಮ್ಮಪೊ ರಾಮಣ್ಣ ಪರಶು ರಾಮಣ್ಣನಾಗುತ್ತಿದ್ದ. ನಮ್ಮ ಕೆಲಸ ಒಡೆದು ಗುಡ್ಡೆ ಹಾಕಿದ ಕಟ್ಟಿಗೆಗಳನ್ನು ಚಾಚಿದ ಕೈಗಳ ಮೇಲೆ ಬೇರೊಬ್ಬರಿಂದ ಏರಿಸಿಕೊಂಡು ಸೌದೆ ರೂಮಿಗೆ ಸಾಗಿಸುವದು. ಎಳೆಯ ಕೈಗಳು, ಕಟ್ಟಿಗೆ ಚುಚ್ಚಿ ಇನ್ನೇನು ರಕ್ತ ಚಿಮ್ಮತ್ತೇನೊ ಅನ್ನುವಂತಾದ ಮೇಲೆಯೇ ವಿರಾಮ. ಕಯಗಳ ಮೇಲೆ ತಣ್ಣೀರು ಸುರಿದುಕೊಂಡು ಕೊಬ್ಬರಿ ಎಣ್ಣೆ ಸವರಿಕೊಳ್ಳುತ್ತಿದ್ದ ನೆನಪು ಈಗಲೂ…..
ನಂತರ ದೇವರ ಪೂಜೆ ಮುಗಿಸಿ ಒಂದು ಸುತ್ತಿ ಹೊರಗೆ ಹೋಗಿ ಬಂದರೆ ಕೈಗಳಲ್ಲಿ ಕನಿಷ್ಟ ಒಂದೆರಡು ಪುಸ್ತಕಗಳು ಇರಲೇ ಬೇಕು. ಖರೀದಿಯಲ್ಲ. ಕೈಗಡ. ಅವನ ಪುಸ್ತಕ ಪ್ರೀತಿ ಜನ ಜನಿತವಾದ್ದರಿಂದ ಪರಿಚಯಸ್ಥರು ತಾವೇ ಕರೆದು ಪುಸ್ತಕ ಕೊಡುತ್ತಿದ್ದರು. ಕುರ್ಚಿಗೆ ಒರಗಿ ಕುಳಿತು ಸಾರಸ್ವತ ಹೊಕ್ಕರೆ ಅದೊಂದು ರೀರಿ ಸಮಾಧಿಯೇ.
1909 ರಲ್ಲಿ ಹುಟ್ಟಿ 2000ರದಲ್ಲಿ 90ನೇ ವರ್ಷಕ್ಕೆ ಸತ್ತರೂ ಒಂದೇ ರೀತಿಯ ಬದುಕು. ಶುದ್ಧ ಖಾದಿಧಾರಿ. ಮನೆತುಂಬಾ ಗಾಂಧಿ, ನೆಹರೂ, ರವೀಂದ್ರನಾಥ ಟ್ಯಾಗೂರ್, ಚಿತ್ತರಂಜನ ದಾಸ, ಲಾಲಬಹದ್ದೂರ ಶಾಸ್ತ್ರಿಗಳಂಥ ದೇಶ ಭಕ್ತರ ಫೋಟೋಗಳು ಮಾತಿನಲ್ಲೂ ನೇರ, ದಿಟ್ಟ, ತಮಾಷೆಗೂ ಕಡಿಮೆ ಇರಲಿಲ್ಲ. ಡಾಕ್ಟರರ ಬಳಿ ಹೋದಾಗ ಏನಾಗಿದೆ ಎಂದವರು ಕೇಳಿದರೆ, “ನೀವು ತಾನೇ ಡಾಕ್ಟರ್. ನೀವು ಹೇಳಬೇಕು. ನನಗೆ ಗೊತ್ತಿದ್ದರೆ ನಿಮ್ಮ ಬಳಿ ಏಕೆ ಬರುತ್ತಿದ್ದೆ?” ಎಂಬ ಉತ್ತರ. ಅವನು ಓದಿದ್ದು ಏಳನೇ ಇಯತ್ತೆ. ಇಂಗ್ಲಿಷ, ಕನ್ನಡ ತುಂಬ ಚೊಕ್ಕ. ಒಂದೇ ಒಂದು ತಪ್ಪು ಸಾಧ್ಯವೇ ಇಲ್ಲ. ನಾವು ಹಾಕಿದ ಪತ್ರಗಳಲ್ಲಿ ತಪ್ಪುಗಳೇನಾದರೂ ಇದ್ದರೆ ಅವುಗಳನ್ನು ತಿದ್ದಿ ತಂತಿಗೆ ಸಿಕ್ಕಿಬಿಟ್ಟು ನಾವು ಊರಿಗೆ ಹೋದಾಗ ಮೊದಲ ಕೆಲಸ ಅದನ್ನು ಮುಖಕ್ಕಿಡಿದು ಮಂಗಳಾರತಿ ಮಾಡುವದು. ಅವನಿಗೆ ಬರೆಯುವಾಗ ತಪ್ಪಾದರೆ ಎಂಬ ಗಾಬರಿಯಿಂದಲೇ ಹೆಚ್ಚು ಹೆಚ್ಚು ತಪ್ಪಾಗುತ್ತಿದ್ದುದ್ದೂ ಉಂಟು.
ಪರೋಪಕಾರದ ಆಯ್ಕೆಯ ಪ್ರಸಂಗಬಂದರೆ ಯಾವಾಗಲೂ ಪರರ ಪರ. ಮನೆಮಂದಿ ಕೊನೆಗೆ, ವಿಪರೀತ ಅಂತಃಕರುಣೆ. ಆದರೆ ಕೃತಿಯಿಂದ ತೋರಿಕೆ ಶಬ್ದ ನಿಘಂಟುವಿನಲ್ಲೇ ಇರಲಿಲ್ಲ ಒಂದೇ ಒಂದು ಸಲ ನಮ್ಮನ್ನು ಅಪ್ಪಿ ಮುದ್ದಾಡಿದ ನೆನಪಿಲ್ಲ. ಆದರೆ ಯಾವ ಮಕ್ಕಳಿಗಾದರೂ ಅಜಾರಿಯಾದರೆ ಊಟ ಬಿಟ್ಟು ಓಡಾಡಿದ್ದು ಕಂಡ ಅನುಭವಗಳಿವೆ. ಅತಿ ಸಲಿಗೆ ಮಕ್ಕಳಿಗೆ ಸಲ್ಲದು ಎಂಬ ನಿಲುವು ಮಾತು ಜೋರು ಅನಿಸುತ್ತಿದ್ದರೂ ಅದರ ಹಿಂದೆ ಕಳಕಳಿ ಎದ್ದು ಕಾಣುವಷ್ಟು ಪಾರದರ್ಶಕ. ತನಗೆ ಎಂಬತ್ತಾದರೂ ತನ್ನ ಹಿರಿಯರ ಮುಂದೆ ಚರ್ಚಿಸದೇ ಒಂದೇ ಒಂದು ನಿರ್ಣಐ ತೆಗೆದುಕೊಂಡವನಲ್ಲ. ಎದುರು ಆಡಿದವನಲ್ಲ. ಇದ್ದಾಗ ಬಿಡಿ. ಸತ್ತ ಮೇಲೂ ಹಿರಿಯರ ‘ಶ್ರಾದ್ಧ’ ಕರ್ಮಗಳನ್ನು ಮಾಡುವಾಗ ತನ್ನೆಲ್ಲ ಶ್ರದ್ಧೆಯಿಂದ ಎಲ್ಲ ಅಡಚಣೆಗಳನ್ನು ಪಣಕ್ಕಿಟ್ಟು ದೇವರಾಧನೆಯನ್ನು ರೂಪವನ್ನದಕ್ಕೆ ಕೊಟ್ಟು ಬಿಡುತ್ತಿದ್ದ. ಅದಕ್ಕೆ ಹಣ ಜೋಡಿಸಿ ಇದ್ದುದೆಲ್ಲ ಖರ್ಚು ಮಾಡಿ, ಜನರನ್ನು ಕೂಡಿಸಿ ಆಚರಿಸಿದಾಗ ನಾವು ತಮಾಷೆ ಮಾಡುತ್ತಿದ್ದುಂಡು. “ಇದು ಸತ್ತವರದಲ್ಲ. ಇದ್ದವರ ಶ್ರಾದ್ಧ” ಎಂದು.
ಸ್ವಾವಲಂಬನೆ ಅವನ ಇನ್ನೊಂದು ಹೆಗ್ಗುರುತು. ಸಾಯುವ ಮೊದಲಿನ ಕೆಲ ತಿಂಗಳು ಬಿಟ್ಟರೆ ತನ್ನ ಬಟ್ಟೆ ತಾನೇ ಒಗೆದು ಒಣಗಿಸಿ, ಇಟ್ಟುಕೊಳ್ಳುತ್ತಿದ್ದ. ಎಂದಿಗೂ ತನ್ನ ಕೆಲಸ ಮಾಡಿಕೊಂಡರೇನೆ ಅವನಿಗೆ ತೃಪ್ತಿ.
ಹೀಗೆ ಸರಳ, ಸಹಜ, ಆಡಂಬರರಹಿತ, ಪರೋಪಕಾರದ ಬದುಕು ಬದುಕಿ ನಮಗೆ ದೃಷ್ಟಾಂತವಾದ ನಮ್ಮ ಅಪ್ಪನ ನೆನಪು ಒಂದೇ ದಿನವಲ್ಲ. ನಾವಿರುವವರೆಗೂ ನಿರಂತರ..