ಮೂರು ಮೊಳದ ತಲೆಯ ರಾಮು
ಆರು ಅಡಿ ಉದ್ದದ, ಉದ್ದಕ್ಕೆ ತಕ್ಕ ದಪ್ಪನಾದ ಮೂಗಿನ ಮೇಲೆ ಕನ್ನಡಕವೇರಿಸಿದ, ತಲೆಯ ಆಕಾರ ದೇಹಾಕೃತಿಗೆ ಹೊಂದದ, ಸಡಿಲಾದ ಪ್ಯಾಂಟು ಶಟ೯ ಇನ್ ಶಟ೯ ಮಾಡಿದ ಮೂವತ್ತರ ಆಸುಪಾಸಿನ ಹುಡುಗ ನನ್ನೆಡೆಗೆ ನೋಡಿ, ಕಿಸಕ್ಕನೆ ನಕ್ಕರೆ ನನಗೆ ಹೇಗಾಗಿರಬೇಡ? ಮೋದಲೇ ಹೆಣ್ಣು ಹೆಂಗಸು. ಗುತು೯ ಪರಿಚಯವಿಲ್ಲದ ಯಾವುದೋ ಗಂಡು ನನ್ನೆಡೆಗೆ ದಿಟ್ಟಿಸಿದರೆ ಏನಾಗಿರಬಾರದು ನನ್ನ ಅವಸ್ಥೆ . ನಕ್ಕಿದ್ದಷ್ಟೇ ಅಲ್ಲ, ದಿಟ್ಟಿಸಿದ್ಧೂ ಆಷ್ಟೇ ಅಲ್ಲ, ನನ್ನ ಪಕ್ಕದಲ್ಲೇ ಬಂದು ನಿಲ್ಲಬೇಕೇ? ನನಗಾದರೋ ಕೈ ಮುಷ್ಟಿ ಬಗಿಯತೊಡಗಿತು, ಚಪ್ಪಲಿಗಳು ಕ್ಕೆಯ್ಯಲ್ಲಿ ಬರಲು ಹವಣಿಸತೊಡಗಿದವು, ಸರಿ ಇನ್ನೇನು ಬಗ್ಗಬೇಕು ಅನ್ನುವಷ್ಟರಲ್ಲೇ, ‘ಅಕ್ಕಾ ಗುತು೯ ಹತ್ತಲಿಲ್ಲೇನು ಎಂಬ ಧ್ವನಿಯ ಕಡೆಗೇ ಏಕಚಿತ್ತದಿಂದ ನೋಡಿದೆ. ತಲೆಯ ಆಕಾರವೊಂದು ನನ್ನಲ್ಲಿ ನೆನಪಿನ ಬುಗ್ಗೆ ಮೂಡಿಸಿತು. ಆದರೂ ಇಷ್ಟು, ಟಿಪ್ ಟಾಪ್ ಇರುವವ ಆತನಾಗಿರಬಹುದೇ.
ಎಂಬ ಸಂಶಯ ಬಂದು ಮುಖದ ಮೇಲೆ ಮುಗುಳ್ನಗೆಯನ್ದು ಬಲವಂತದಿಂದ ತರಿಸಿಕೊಂಡು ಆ ಯುವಕನೆಡೆಗೇ ದಿಟ್ಟಿಸಿದೆ. ಆತನೂ ನನ್ನೆಡೆಗೆ ಮೂವತ್ತೆರಡರ ದಂತಪಂಕ್ತಿಯನ್ನು ಆ ಕಿವಿಯಿಂದ ಈ ಕಿವಿಯವರೆಗೂ ಅಗಲಿಸಿ , ‘ಹೇ ಗುರ್ತನ ಸಿಗಲಿಲ್ಲ ಕಾಣಸ್ತದ …… ನಾನು ರಾಮು, ಉದ್ದತಲೀ ರಾಮು, ದೊಡ್ಡ ತಲೀ ರಾಮು ಅಂತ ಚುಡಾಯಿಸ್ತಿದ್ದಿಯಲ್ಲಾ . . . . ಹೈ ….. ಹ್ಹಾಂ. . . . ಅಂತ ಜೋರಾಗಿ ನಗತೊಡಗಿದ. ಬಾಯಿಯಲ್ಲಿಯ ಮೇಲ್ಪಂಕ್ತಿಯ ಎಡಬದಿಯ ಚೂಪು ಹಲ್ಲು ಗೋಚರಿಸಿದಾಗ ಫಕ್ಕನೆ ಫ್ಲ್ಯಾಶ್ ಬ್ಯಾಕಿನ ರೀಲಿನಂತೆ ಸುರುಳಿ ಹಿಂದೆ ಸರಿಯತೊಡಗಿತು.
ನಾವೆಲ್ಲ ಚಿಕ್ಕವರಿದ್ದಾಗ ನಮಗೆ ರಜೆ ಬಂತೊ ಎಂದರೆ ನಮ್ಮ ಸೋದರತ್ತೆಯ ಮನೆಗೆ ಮಕ್ಕಳಲ್ಲಿ ರವಾನೆಯಾಗುತ್ತಿದ್ದೆವು. ಅಲ್ಲಿಯ ಸಂಬಂಧಿಕರ ಮಕ್ಕಳು, ಕಕ್ಕನ ಮಕ್ಕಳು, ಓಣಿಯ ಹುಡುಗರೆಲ್ಲ ಸೇರಿ ಸಾಕಷ್ಟು ಗೊಂದಲ ಮಾಡುತ್ತಿದ್ದೆವು. ಅದು ಹಳ್ಳಿಯ ಊರಾದ್ದರಿಂದ ಕೆಲವೇ ಕುಟುಂಬಗಳು ಅನುಕೂಲಸ್ಥರು ಅವರಲಿ ದೇಸಾಯಿಯವರ ಮನೆ ತನ ಬಹಳ ಫೇಮಸ್ಸು ಅವರ ಮನೆತನದ ಜೊತೆಗೇನೆ ಇನ್ನೊಂದು ಹೆಸರು ಅವರಿಗೆ ಅಂಟಿಕೊಂಡಿತ್ತು ಅವರ ಮನೆತನದಲ್ಲಿಯೇ ಎಲ್ಲರ ತಲೆಯೂ ಕೊಂಚ ಜಾಸ್ತಿ ಎನ್ನುವಂತೆ ಉದ್ದವಾಗಿದ್ದವು ಹೀಗಾಗಿ ಯಾರಿಗೂ ಸಿಂಪಲ್ಲಾಗಿ ರಾಮು, ಸವಿತಾ ಎಂದರೆ ತಿಳಿಯುತ್ತಿರಲಿಲ್ಲ . ಆದರೆ ಮೂರು ಮೊಳದ ತಲೀ ರಾಮು, ಅರು ಮೊಳದ ಸವಿ ಎಂದರೆ ಎಲ್ಲರಿಗೂ ನಕ್ಕಿ ತಿಳಿಯುವುದು. ಇಷ್ಟೆಲ್ಲ ನೆನಪಾಗುತ್ತಿದ್ದಂತೆಯೇ ನನ್ನ ಮುಖದಲ್ಲಿ ನಗೆ ಚಿಮ್ಮಿ ‘ಅಲ್ಲೋ ರಾಮು, ಗುರ್ತನ ಸಿಗದ್ಹಾಂಗ ಆಗೀಪಾ, ಈಗೇನು ಮಾಡ್ತೀ?’ ಎಂದೆ, ಮನಸ್ಸು ನಿರಾಳವಾಗಿತ್ತು.
‘ಅಕ್ಕಾ ನಾನು ಡಾಕ್ಟರ್ ಆಗೀನಿ’ ಎಂದು ಎದೆಯುಬ್ಬಿಸಿ ಎರಡು ಹೆಜ್ಜೆ ನನ್ನ ಜೊತೆಗೇನೆ ಹಾಕಿದ. ನನಗಂತೂ ಇದು ನಂಬಲಾರದ ಸತ್ಯವಾಗಿ ಗೋಚರಿಸತೊಡಗಿತು. ಡಾಕ್ಟರ್ ಆಗಬೇಕಾದರೆ ಸಾಮಾನ್ಯವೇ ಎಂದು ಮನಸ್ಸಿನಲ್ಲಿಯೇ ಲೆಕ್ಕ ಹಾಕುತ್ತಿದ್ದೆ. ಈತ ನೋಡಿದರೆ ಮ್ಯಾಟ್ರಿಕ್ ಆಗಲಿಕ್ಕೇ ಮೂರು ಚಾನ್ಸ ತೊಗೊಂಡಾಂವ , ಏಪ್ರಿಲ್ ನಲ್ಲಿ ಪರೀಕ್ಷೆ ಬರೆದ, ಮುಂದೆ ದಾಟಲಿಲ್ಕ, ಗಣಿತ ಸಾಯನ್ಸ ಇಂಗ್ಲೀಷನಲ್ಲಿ ಗೋತಾ ಹೊಡೆದು ಅಕ್ಟೋಬರ್ ಚಾನ್ಸನಲ್ಲಿ ಕುಳಿತು, ಇಂಗ್ಲೀಷ್ ಪಾಸ ಆದ ಹೇಗೋ, ಆದರೆ ಗಣಿತ, ಸಾಯನ್ಸ ಕೈ ಕೊಟ್ಟಿದ್ದವು. ಮತ್ತೆ ಏಪ್ರಿಲ್ ನಲ್ಲಿ ಕುಳಿತು ಹಾಗೂ ಹೀಗೂ ಈ ಕುತ್ತಿನಿಂದ ಪಾರು ಆದ, ಆತನ ಪರೀಕ್ಷೆಯ ತಯಾರಿಯ ವೈಖರಿ ಹೇಳಿದರೆ ಅದೇ ಒ೦ದು ದೊಡ್ದ ಕಥೆಯಷ್ಟಾಗುತ್ತದೆ. ಎಲ್ಲರೂ ಪರೀಕ್ಷೆ ಹತ್ತಿರ ಬಂದಾಗ ಓದುವುದು ಹೆಚ್ಚಾದರೆ ಈತನದು ಬರೆಯುವುದು ಹೆಚ್ಚಾಗುತ್ತಿತ್ತು ಅದೂ ಎಂಥದು ಅಂತೀರಿ? ಚಿಕ್ಕ ಚಿಕ್ಕ ಚೀಟಿಗಳಲ್ಲಿ . . ಮತ್ತು ಎಲ್ಲರ ನೊಟುಬುಕ್ಕು, ಪುಸ್ತಕ ಹೊಳ್ಳಿಸಿ ಹೊಳ್ಳಿಸಿ ಹಳತಲಾದರೆ ಈತ ಡಬ್ಬಲ್ ಅಗಿರುತ್ತಿದ್ದ ! ಹ್ಯಾಗೆ ಅಂತೀರಿ. ಪರೀಕ್ಷೆಗೆ ಹರಿದ, ಬರೆದ ಚೀಟಿ ಚಿಪ್ಪಾಡಿಗಳೆಲ್ಲ ಟೊಂಕದ ಸುತ್ತಲೂ ಸ್ಥಾಪಿತವಾಗುತ್ತಿದ್ದವು! ಚಿಕ್ಕ ಚಿಕ್ಕ ಚೀಟಿಗಳೆಲ್ಲ ಸಾಕ್ಸಿನಲ್ಲಿ ಅವಿತುಕೊಂಡು ಆ ಸಾಕ್ಸಿನ ವಾಸನೆ ತಡೆಯದೆ ಹೊರಗಿಣುಕಿ ಹೊರಬೀಳಲು ಹವಣಿಸುತ್ತಿದ್ದವು ಅಂಥವುಗಳನ್ನೇ ಹೆಕ್ಕಿ ತೆಗೆದು ಅದರಲ್ಲಿ ತನಗೆ ಯಾವುದು ….. ಉತ್ತರಕ್ಕೆ ಯಾವುದು ಬೇಕು ಎಂಬ ಗೊಂದಲ, ಗಾಬರಿಯಿಂದ ತಡವರಿಸುತ್ತಾ ಯಾವುದೋ ಪ್ರಶ್ನೆಗೆ ಯಾವುದೋ ಉತ್ತರ ಬರೆದು ನಿರಾಳತೆಯಿಂದ ಹೊರಬರುತ್ತಿದ್ದ ಒ೦ದು ಸಲ ಪರೀಕ್ಷೆಯಲ್ಲಿ ಟೊಂಕಕ್ಕೆ ಸಿಕ್ಕಿಸಿಕೊಂಡಿದ್ದ. ಗೈಡನ್ನು ಹೂರಗೆಳೆಯಲು ಪ್ರಯತ್ನಿಸುತ್ತಿರುವಾಗಲೇ ಪ್ಯಾಂಟಿನ ಹುಕ್ಕು ಕಿತ್ತು ಬಂದಿತು. ಆ ಟೆನ್ಶನ್ ನಲ್ಲಿಯೂ ಗೈಡನ್ನು ಹೊರಗೆಳೆಯುವಲ್ಲಿಯಶಸ್ವಿಯಾಗಿದ್ದ! ಅದನ್ನೆಲ್ಲ ತಮಾಷೆಯೆಂಬಂತೆ ದೂರದಿಂದಲೇ ನೋಡುತ್ತಿದ್ದ. ಸುಪರ್ ವೈಜರ್ ಸ್ಕ್ಯಾಡ್ ಬಂದಿದ್ದು ಗಮನಕ್ಕೆ ಬಂದಿರಲಿಲ್ಲಿ . ಪಕ್ಕದ ಕಿಟಕಿಯಲ್ಲಿಯೇ ಬೂಟಿನ ಶಬ್ದವಾದಾಗ ಗಾಬರಿಯಿರಿದ ರಾಮುನ ಹತ್ತಿರವಿದ್ದ ಗೈಡನ್ನು ಹೂರಕ್ಕೆಳೆದು ಮುಚ್ಚಿಟ್ಟು ಆತನನ್ನು ಡಿಬಾರ್ ಆಗುವುದರಿಂದ ಪಾರು ಮಾಡಿದ್ಬ ! ಹಾಗೆ ತನ್ನ ನೌಕರಿಯನ್ನು ಉಳಿಸಿಕೊಂಡಿದ್ದ! ಆತನನ್ನು ಉಳಿಸುವುದರಲ್ತಿ ತನ್ನ ಸ್ವಾಥ೯ವೂ ಇತ್ತೆನ್ನೆಬಹುದು.ಬಹಳ ಕಾಲದಿಂದ ಪೀಡಿಸುತ್ತಿದ್ದ ತಂದೆಯ ದಮ್ಮು ತಮ್ಮನ ಶಿಕ್ಷಣ, ಮನೆಯಲ್ಲಿ ನಡೆಯುತ್ತಿದ್ದ ಅಕ್ಕನ ಬಾಣಂತನ, ತಂಗಿಯ ಮದುವೆಯ ಖರ್ಚು ಹಾಗೂ ಅಡಚಣೆಯಿಂದುಂಟಾದ ತಾಯಿಯ ಬಡಬಡಿಕೆ, ಎಲ್ಲದಕ್ಕೂ ದೇಸಾಯಿಯವರ ಅಂದರೆ ರಾಮುನ ತಂದೆಯ ಸಹಾಯಹಸ್ತವಿದ್ದೇ ಇತ್ತು. ಯಾವತ್ತಿಗೂ ಬಾಗಿಲಿಗೆ ಹೋದರೆ ಹಾಗೇ ಬಂದದ್ದೇ ಇಲ್ಲ. ಆಂಥದ್ದರಲ್ಗಿ ಆತನನ್ನು ಉಳಿಸುವುದು ತನ್ನ ಕರ್ತವ್ಯವೆಂಬಂತೆ ನಡೆದುಕೊಂಡಿದ್ದರು. ಪ್ರಹ್ಲಾದ ಮಾಸ್ತರರು, ಹಾಗೂ ಹೀಗೂ ಮ್ಯಾಟ್ರಕ್ ಪಾಸು ಅಗಿ ಕಾಲೇಜು ಮೆಟ್ಟಿಲು ಹತ್ತಿದ್ದೇ ಬಂತು, ಮುಂದೆ ನನ್ನ ಮದುವೆಯಾಗಿ ಗಂಡನ ಮನೆ ಸೇರಿದ ಮೇಲೆ ಆತನ ವಿಷಯ ಅಷ್ಟಾಗಿ ತಿಳಿದಿರಲಿಲ್ಲ. ಆವಾಗೀವಾಗ ಊರಿಗೆ ಹೋಗಿ ಬರುತ್ತಿದ್ದರೂ ಉದ್ದತಲೀ ರಾಮುನ ವಿಷಯ ಸಹಜವಾಗಿಯೇ ಮರೆಯಾಚಿತ್ತು. ಈಗ ನೋಡಿದರೆ ಎದುರಿಗೆ ಉದ್ದ ತಲೀ ರಾಮು. ಈಗ ಮೈ ಕೈ ತುಂಬಿಕೊಂಡಿದ್ದರಿಂದಾಗಿಯೇ ಆತನ ಮುಖ ಗೋಲಾಕಾರವಾಗಿದೆ. ಒರಿಜಿನಲ್ ತಲೆಯ ಗಾತ್ರ ಮಾತ್ರ ಹಾಗೇ ಉಳಿದುಕೊಂಡಿರುವುದು ಚಿಕ್ಕಂದಿನಿಂದ ಆತನನ್ನು ನೋಡುತ್ತ ಬಂದಿರುವುದರಿಂದ ನಮಗೆ ಗೊತ್ತಾಗುತ್ತಿತ್ತು. ಹಾಗೆ ಒಮ್ಮೆಗೇ ಬೆರಗುಗೆಣ್ಣಿನಿಂದ ಅತನೆಡೆಗೆ ದಿಟ್ಟೆಸಿದೆ. ಅತ ಡಾಕ್ಟರ್ ಹೇಗಾದ ಎಂಬುದೇ ನನ್ನ ಮುಂದೆ ಬೃಹದಾಕಾರವಾಗಿ ಬೆಳೆದು ನಿಂತ ಪ್ರಶ್ನೆ. ಅತನನ್ನು ಕೇಳಬೇಕೋ , ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದಾಗಲೇ ಆತ ಹೇಳಿದ, ‘ಅಕ್ಕಾ, ನಾ ಡಾಕ್ಟರ ಹ್ಯಾಂಗ ಆದೇ ಅನ್ನೂ ಗಾಬರಿ ಏನು ನಿನಗೆ?”
‘ಹೇ ಹಂಗೇನಿಲ್ಲಪಾ….’ ಮೇಲೆ ಮುಗುಳ್ನಕ್ಕರೂ ಒಳಗಿನ ಮನಸ್ಸಿನಲ್ಲಿ ಅದೇ ಇತ್ತು. ಆದರೂ ಕೆದಕುವ ಕುತೂಹಲ. ನನಗೆ ಸುಮ್ಮನೇ ಕೂಡಗೊಡಲಿಲ್ಲ. ‘ಹೌದು, ನೀನು ಯಾವ ಕಾಲೇಜಿನಿಂದ ಎಂ.ಬಿ.ಬಿ.ಎ. ಮಾಡೀ’. ಮನಸ್ಸನ್ಯಾಗ ಬಹುಶಃ ಯಾವುದೋ ಫ್ರಾಡ್ ಕಾಲೇಜ ಇರಬೇಕು. ರೊಕ್ಕ ಕೊಟ್ಟು ಸರ್ಟಿಫಿಕೇಟು ತೆಗೆದುಕೊಂಡಿರಬೇಕು ಎಂದು ವಿಚಾರ ಮಾಡುತ್ತಿದ್ದೆ. ನನ್ನ ಮನಸ್ಸನ್ನು exactly ಓದಿದವರಂತೆಯೇ, ‘ಛೇ ಎಂ.ಬಿ.ಬಿ.ಎಸ್. ಎಲ್ಲಿದವಾ. ಅದಕ್ಕ ರೊಕ್ಕಾನೂ ಭಾಳ ಬೇಕು, ಪರ್ಸಂಟೇಜೂ ಭಾಳ ಬೇಕು, ಎಲ್ಲೆರೆ ಫ್ರಾಡ್ ಸರ್ಟಿಫಿಕೇಟ್ ತಂದು ಪ್ರ್ಯಾಕ್ಟೀಸ್ ಮಾಡಿದರ ಇಂದಿಲ್ಲ ನಾಳೆ ಆದರೂ ಹಿಡ್ಯಾವರ, ಎಷ್ಟ ಸಲಾ ಕುತ್ತರೂ ಸೆಕೆಂಡ್ ಇಯರ್ ಪಾಸ್ ಆಗಲೇ ಇಲ್ಲ. ಹೀಂಗಾಗಿ ಅದರ ಉಸಾಬರಿ ಬಿಟ್ಟು ಆರ್. ಎಮ್. ಪಿ. ಮಾಡಿಕೊಂಡೀನಿ’ ವಿಸ್ತಾರವಾಗಿ ಹೇಳಿದ ರಾಮು. ನನಗೆ ಮಾತ್ರ ಒಳಗಿಂದೊಳಗೆ ಇಂವಾ ಏನರೇ ಮತ್ತೊಬ್ಬರ ಮನಸ್ಸಾನ್ಯಾಗಿಂದ ಓದಲಿಕ್ಕೇನರೇ ಕಲ್ತು ಕೊಂಡಾನೇನೋ ಎನ್ನುವ ಅನುಮಾನ ಕಾಡುತ್ತಿತ್ತು ಮತ್ತೆ ಇದನ್ನೂ ನನಗೇ ರಿವರ್ಸ್ ತಿರುಗಿಸಿದರೆ….. ಎನ್ನುತ್ತಾ ಆತನಿಗೆ ‘ಎಲ್ಲಿ ಹಾಕೀ ಅಪಾ ದವಾಖಾನೀ’ ಎಂದೆ. ಆಗ ಆತ, ‘ಇಲ್ಲೇ ಸ್ಲಮ್ ಏರಿಯಾದೊಳಗೆ ಎಂದ’. ಎಲ್ಲಾ ಬಿಟ್ಟು ಅಷ್ಟು ದೂರ ಕೊಳಚೀ ಒಳಗ ಅಲ್ಲೇ ಯಾಕ ಹಾಕೀ?
‘ಅಕ್ಕಾ ಅಲ್ಲೆ ಪೇಶಂಟ್ಸ್ ಭಾಳ ಇರ್ತಾರ, ಅದಕ್ಕ’ ಎಂದ. ಮತ್ತೆ ನಾನು ಗೊಂದಲದಲ್ಲಿ ಬಿದ್ದೆ. ಸಂಶಯ ಅನ್ನೂ ಗುಂಗೀಹುಳ ತೇಲಾಡ್ಲಿಕತ್ತಿತ್ತು ಎಂಥಾ ಪೇಶಂಟ್ಸು ಇವನ ಕಡೆ ಬರ್ತಾರೆ, ಎದರೊಳಗರೇ ಸ್ಪೆಶಲೈಜೇಶನ್ನು ಮಾಡ್ಯಾನೋ ಎಂದು ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕುತ್ತಿದ್ದೆ ಆಗ ಆತ, ‘ಅಕ್ಕಾ ನಾನು ಏಡ್ಸ ನಿವಾರಣಾ ಕೇಂದ್ರ ತಗದೀನಿ’ ಎಂದ. ಅವಕ್ಕಾಗಿ, ‘ಏನು ಏಡ್ಸ ನಿವಾರಣಾ ಕೇಂದ್ರನ ಏಡ್ಸ್ ರೋಗಾನ ಹೋಗಿಸ್ತೀ ಏನೋ’ ಎಂಥೆಂಥಾ ರಿಸರ್ಚು ಮಾಡುತ್ತಿದ್ದರೂ ಇನ್ನೂ ಔಷಧ ಕಂಡು ಹಿಡಿಲಿಕ್ಕೇ ಆಗಿಲ್ಲ. ಅಂಥಾದ್ರಲ್ಲಿ ಈತನ ಯಾವ ಮಾಜಿಕ್ಕಿನಿಂದ ನಿಜ ಗೋಳ್ಯಾ ಆಗಿ ಬರತಾರೋ? ಎಂದುಕೊಂಡೆ ಯಥಾ ಪ್ರಕಾರ ಮನಸ್ಸಿನಲ್ಲಿಯೇ.
‘ಹೆಸರಿನ್ಯಾಗ ಅದವಾ ಮಹಿಮಾ. . . . . .’ ಅಂತ ರಾಮು ನಗುತ್ತಾ. ‘ಎಂಥಾ ಹೆಸರೋ…. ಎಂಥಾ ಮಹಿಮಾ…. ಎಂದೆ
‘ನನ್ನ ಕ್ಲಿನಿಕ್ಕಿನ ಹೆಸರು, ಶ್ರೀ ಶ್ರೀ ಶ್ರೀ, ಸತ್ಯನಾರಾಯಣ ತೀರ್ಥಂಕರ ಕೇಪಾ’ ಎಂದಿಟ್ಟಾಗಿನಿಂದ ಮಂದೀ ಮುಗೀ ಬೀಳ್ಳಿಕತ್ತ್ಯಾರ ನೋಡ ಎಂದು ರಾಮು ಹೇಳಿದಾಗ ನನಗೆ ತಳಾನೂ ತಿಳಿಯದೇ, ಬುಡಾನೂ ತಿಳಿಯದೇ ಗೊಂದಲಕ್ಕೊಳಗಾಗಿ ಅವನೆಡೆಗೇ ನೋಡತೊಡಗಿದೆ. ಏಡ್ಸ ರೋಗಕ್ಕೂ, ಶ್ರೀ ಶ್ರೀ ಶ್ರೀ ಸತ್ಯನಾರಾಯಣ ತೀರ್ಥಂಕರ ಕ್ಲಿನಿಕ್ಕಿಗೂ ಏನು ಸಂಬಂಧ, ಎತ್ತಣ ಮಾಮರ ಎತ್ತಣ ಕೋಗಿಲೆ ಎಂದಂತೆ, ಹಾಗೇ ನಾನು ಅವನನ್ನು ಅಭಿನಂದಿಸುತ್ತಾ ನನ್ನ ಮನೆಯ ಹಾದಿ ಹಿಡಿದೆ. ಆತ ತನ್ನ ಕ್ಲಿನಿಕ್ಕಿಗೆ ತೆರಳಿದ. ಮುಂದೆ ಕೆಲವು ವರ್ಷಗಳಾದ ನಂತರ ಆತ ಬಂಗಲೆ ಕಾರು ತೆಗೆದುಕೊಂಡಿದ್ದಾನೆ ಎಂಬ ಸುದ್ದಿ ತೇಲಿ ಬಂತು.
ಅಂತೂ ಮೂರು ಮೊಳದ ತಲೀ ರಾಮು ಮೂರು ಸಲ ಕುತ್ತು ಮ್ಯಾಟ್ರಿಕ್ ಪಾಸಾದ, ಯಾತಕ್ಕೂ ಉಪಯೋಗಕ್ಕೆ ಬಾರದಂಥವ, ಬರೀ ತಿನ್ನಲಿಕ್ಕೆ ಅಷ್ಟ ದಂಡ ಅಂತ ನೂರಾ ಎಂಟು ಸಲ ಮನೀ ಮಂದಿ ಕಡೆಗೆ ಒದರಿಸಿಕೊಂಡು ಕೊನೆಗೂ ಲೈಫ್ ನಲ್ಲಿ ಸೆಟಲ್ ಆದ ತನ್ನ ಮೂರು ಮೊಳದ ತಲೀ ಉಪಯೋಗಿಸಿಕೊಂಡು.