ಆ ಮೊಸಳೆಗೆ ವಯಸ್ಸಾಗಿತ್ತು; ತನ್ನ ಆಹಾರವನ್ನು ತಾನೇ ಸಂಪಾದಿಸಿಕೊಳ್ಳಲು ಕೂಡ ಅದಕ್ಕೆ ಶಕ್ತಿ ಇಲ್ಲವಾಗಿತ್ತು. ಆಗ ಅದಕ್ಕೊಂದು ಯೋಚನೆ ಬಂತು. ನರಿಗೆ ಆಹ್ವಾನ ಕಳುಹಿಸಿತು. ‘ನೀನು ನನಗೆ ಸಹಾಯ ಮಾಡಿದರೆ ಅದರಿಂದ ನಿನಗೂ ಲಾಭವಾಗುತ್ತೆ’ ಎಂದು ಹೇಳಿ ಒಪ್ಪಂದ ಮಾಡಿಕೊಂಡಿತು. ಕಾಡಿನಲ್ಲಿರುವ ಪ್ರಾಣಿಗಳನ್ನು ಜಾಣತನದಿಂದ ಮೊಸಳೆಯ ಸಮೀಪಕ್ಕೆ ನರಿ ಕರೆದು ತರಬೇಕು – ಇದು ಒಪ್ಪಂದ. ಹೀಗೆ ಮೊಸಳೆಯ ಹತ್ತಿರಕ್ಕೆ ಯಾವುದಾದರೊಂದು ಪ್ರಾಣಿ ಬಂದಕೂಡಲೇ ಮೊಸಳೆ ಅದನ್ನು ಕೊಲ್ಲುತ್ತಿತ್ತು. ತಾನು ಆ ಪ್ರಾಣಿಯ ಮಾಂಸವನ್ನು ತಿಂದ ಮೇಲೆ, ಉಳಿದುದನ್ನು ನರಿಗೂ ಒಂದು ಪಾಲು ಕೊಡುತ್ತಿತ್ತು.ಹೀಗೆ ಬಹಳ ದಿನಗಳು ನಡೆದವು. ನರಿಗೆ ಮೊಲವೊಂದರ ಬಗ್ಗೆ ದ್ವೇಷ ಇತ್ತು. ಹೇಗಾದರೂ ಅದನ್ನು ಮೊಸಳೆಯ ಬಾಯಿಗೆ ಬೀಳಿಸಬೇಕು ಎಂಬುದು ನರಿಯ ಸಂಚು. ಒಂದು ದಿನ ಮೊಲವನ್ನು ಬೇಟಿಯಾಯಿತು ಆ ನರಿ. ‘ನಿನ್ನನ್ನು ಮೊಸಳೆ ನೋಡಬೇಕಂತೆ. ನಿನ್ನ ಬಗ್ಗೆ ಅದಕ್ಕೆ ತುಂಬಾ ಪ್ರೀತಿ’ ಎಂದು ಪುಸಲಾಯಿಸಿತು. ಆದರೆ ಮೊಲಕ್ಕೆ ಇದರಲ್ಲಿ ಏನೋ ಸಂಚಿದೆ ಎನ್ನುವ ವಾಸನೆ ಸಿಕ್ಕಿತು. ‘ನನ್ನಂಥವನ ಬಗ್ಗೆ ಮೊಸಳೆಗೆ ಏಕಾದರೂ ಪ್ರೀತಿ ಹುಟ್ಟೀತು? ಮೊಸಳೆಯಂಥ ಅಪಾಯಕರ ಪ್ರಾಣಿಯ ಹತ್ತಿರ ನಾನು ಧೈರ್ಯವಾಗಿ ಬರಲಾದೀತೆ?’ ಎಂದು ಹೇಳಿ ಮೊಲ ಅಲ್ಲಿಂದ ಓಡಿತು. ಆದರೆ ನರಿ ಮಾತ್ರ ತನ್ನ ಪ್ರಯತ್ನವನ್ನು ಬಿಡಲಿಲ್ಲ. ಹೇಗಾದರೂ ಅದನ್ನು ಮುಗಿಸಲೇಬೇಕೆಂದು ತೀರ್ಮಾನಿಸಿತು. ಮೊಸಳೆಯೊಂದಿಗೆ ಸೇರಿ ಒಂದು ಉಪಾಯವನ್ನು ಮಾಡಿತು. ಮೊಸಳೆ ಸತ್ತುಬಿದ್ದಿರುವಂತೆ ನಟಿಸುವುದು. ಮೊಲ ಹತ್ತಿರ ಬರುತ್ತಿದ್ದಂತೆ ಅದನ್ನು ನುಂಗುವುದು. ಇದು ಉಪಾಯ. ಮೊಲದ ಹತ್ತಿರ ಬಂತು ನರಿ. ‘ಮಿತ್ರಾ! ಮೊಸಳೆ ಸತ್ತುಹೋಯಿತು. ಅದು ಕೊನೆಯ ವರೆಗೂ ನಿನ್ನ ಬಗ್ಗೆಯೇ ಕನವರಿಸುತ್ತಿತ್ತು. ಅದು ಬದುಕಿರುವಾಗಲಂತೂ ನೀನು ಅದನ್ನು ನೋಡಲು ಬರಲಿಲ್ಲ. ಈಗ ಅದರ ಕೊನೆಯ ದರ್ಶನವನ್ನಾದರೂ ಪಡೆ. ಅದರ ಆತ್ಮಕ್ಕೆ ಶಾಂತಿ ಸಿಗಬಹುದು’ ಎಂದು ನರಿ ಕಣ್ಣೀರು ಹಾಕಿತು. ನರಿಯ ಮಾತುಗಳನ್ನು ಮೊಲ ನಂಬಿತು. ‘ನಡೆ, ಹೋಗೋಣ’ ಎಂದು ಮೊಸಳೆ ಇದ್ದ ಕೊಳದ ಸಮೀಪ ಬಂತು. ಹತ್ತಿರ ಬಂದಾಗ ಮೊಲಕ್ಕೆ ಯಾಕೋ ಸಂಶಯ ಬಂತು. ಆಗ ಅದು ನರಿಯನ್ನು ಕುರಿತು ‘ನರಿಯಣ್ಣ! ನರಿಯಣ್ಣ!! ನನ್ನ ತಾತ ಹೇಳುತ್ತಿದ್ದ – ಮೊಸಳೆಗಳು ಸತ್ತಮೇಲೆ ಅದರ ಬಾಲವನ್ನು ಆಡಿಸುತ್ತಿರುತ್ತವೆಯಂತೆ’. ಮೊಸಳೆಯು ಮೊಲದ ಮಾತುಗಳನ್ನು ಕೇಳಿಸಿಕೊಂಡಿತು. ಕೂಡಲೇ ಅದು ತನ್ನ ಬಾಲವನ್ನು ಅಲ್ಲಾಡಿಸಲು ತೊಡಗಿತು. ಮೊಲಕ್ಕೆ ಪರಿಸ್ಥಿತಿ ಅರ್ಥವಾಯಿತು. ‘ಸತ್ತ ಮೊಸಳೆಯ ಅಂತ್ಯಕ್ರಿಯೆಯನ್ನು ನೀನು ಚೆನ್ನಾಗಿ ಮಾಡು’ ಎಂದು ನರಿಗೆ ಕೂಗಿ ಹೇಳಿ, ಕಾಡಿನ ಒಳಕ್ಕೆ ಓಡಿತು. ಮೋಸದಿಂದ ಎಲ್ಲರನ್ನೂ ಬಲೆಗೆ ಕೆಡವಬಹುದು ಎಂದು ಅಂದುಕೊಳ್ಳುತ್ತೇವೆ. ನಮಗಿಂತಲೂ ಬುದ್ಧಿವಂತರು ಇರುತ್ತಾರೆ; ಅವರು ನಮ್ಮ ಸಂಚನ್ನು ಅರ್ಥಮಾಡಿ ಕೊಳ್ಳಬಲ್ಲವರು – ಎಂದು ಅರ್ಥವೇ ಮಾಡಿಕೊಳ್ಳುವುದಿಲ್ಲ. ನಾವೊಬ್ಬರೇ ಬುದ್ಧಿವಂತರು ಎಂದು ಬೀಗುತ್ತಿರುತ್ತೇವೆ. ಬುದ್ಧಿ ಎಂದರೆ ಅದು ಮೋಸಮಾಡಲಿಕ್ಕೆ ಸಿಕ್ಕ ‘ಲೈಸೆನ್ಸ್’ಎಂಬಂತೆ ನಡೆದುಕೊಳ್ಳುತ್ತೇವೆ. ಆದರೆ ಮೋಸದ ಬಣ್ಣ ಎಂದಿಗಾದರೂ ಬಯಲಾಗುವುದು ಖಂಡಿತ. ಬುದ್ಧಿವಂತನಾದ ಮೊಸಗಾರನಿಗೆ ಯಾವುದಾದರೊಂದಾದರೂ ಬಲಹೀನತೆ ಇದ್ದೇ ಇರುತ್ತದೆ. ಆ ಬಲಹೀನತೆಯೇ ಅವನಿಗೆ ಶತ್ರುವಾಗುತ್ತದೆ; ಅವನ ಅಂತ್ಯವನ್ನು ಮಾಡುತ್ತದೆ.
“author”: “ಭಾನುಶ್ರೀ”,
courtsey:prajavani.net
https://www.prajavani.net/artculture/short-story/cheet-not-all-win-660091.html