ಮೋಕ್ಷ
ಮೋಕ್ಷವೆಂಬ ಪದ ಬಹಳ ಪರಿಚಿತವಾದರೂ, ಮೋಕ್ಷವು ಯಾರೋ ಕೆಲವು ಅಧ್ಯಾತ್ಮಪರರಾದ ವ್ಯಕ್ತಿಗಳಿಗೆ ಮೀಸಲಾದ ವಿಷಯವಲ್ಲ. ಆದರೆ, ಇದು ಎಲ್ಲರಿಗೂ ಅಗತ್ಯವೇ ಎನ್ನುವ ಪ್ರಶ್ನೆಯೂ ಸಹಜವಾಗೇ ಕಾಡುತ್ತದೆ.
ಮೋಕ್ಷ ಪದದ ಅರ್ಥವೇ ಬಿಡುಗಡೆ. ಆದರೆ ಯಾವುದರಿಂದ ಬಿಡುಗಡೆ? ಅಧ್ಯಾತ್ಮ ದೃಷ್ಟಿಕೋನದಲ್ಲಿ ಮೋಕ್ಷವೆಂದರೆ, ಅವಿದ್ಯಾ, ಕಾಮ, ಕರ್ಮ ಸಂಕೋಲೆಯ ಬಂಧನದಿಂದ ಬಿಡುಗಡೆ. ಇಲ್ಲಿ ಅವಿದ್ಯೆ ಎಂದರೆ ಅಜ್ಞಾನ; ಅದರಿಂದಾಗಿ ಬಗೆಬಗೆಯಾದ ಕಾಮನೆಗಳುಂಟಾಗಿ ಅವುಗಳನ್ನು ಪೂರ್ಣಗೊಳಿಸಿಕೊಳ್ಳುಲು ಕರ್ಮಗಳಲ್ಲಿ ತೊಡಗಬೇಕಾಗುತ್ತದೆ. ಈ ಕರ್ಮಗಳೇ ನಮ್ಮ ಜೀವನವನ್ನು ಬಂಧಿಸುತ್ತವೆ. ಉದಾಹರಣೆಗೆ, ನಾವು ಅಂತರ್ಮಗ್ನರಾಗಿ ಸುಮ್ಮನೆ ಇಚ್ಛೆ ಇರುವಷ್ಟು ಕಾಲ ಕುಳಿತಿರೋಣ ಎಂದುಕೊಳ್ಳುತ್ತೇವೆ ಎಂದುಕೊಂಡರೆ ಹೀಗೆ ಕುಳಿತಿರಲು ಸಾಧ್ಯವೇ? ಏಕೆಂದರೆ ನಮ್ಮ ಜೀವನೋಪಾಯದ ಕೆಲಸ-ಕಾರ್ಯಗಳು ನಮ್ಮನ್ನು ಎಚ್ಚರಿಸುತ್ತವೆ. ಅವು ನಮ್ಮನ್ನು ಸ್ವತಂತ್ರರಾಗಿ ನಮ್ಮ ಇಚ್ಛೆಗನುಸಾರವಾದ ರೀತಿಯಲ್ಲಿರಲು ಬಿಡುವುದಿಲ್ಲ. ಹೀಗೆ ಇನ್ನೂ ಅನೇಕಾನೇಕ ಕಾಮ-ಕರ್ಮಗಳ ಅವಶ್ಯಕತೆಗಳಿಗೆ ಅನುಸಾರವಾಗಿ ನಾವು ನಮ್ಮ ಜೀವನಕ್ರಮವನ್ನು ಅನುಸರಿಸಬೇಕಾಗುತ್ತದೆ.
ಮೋಕ್ಷ ಎಂದರೆ ಎಲ್ಲಾ ರೀತಿಯ ಸಾಂಸಾರಿಕ ಬಂಧನಗಳಿಂದ ಮುಕ್ತಿ. ಬಂಧನಗಳು ನೂರಾರು. ಅವು ನಮ್ಮನ್ನು ಸಂಸಾರದೊಂದಿಗೆ ಬಂಧಿಸಿರುತ್ತವೆ. ನಮ್ಮಲ್ಲಿ ಸಾಂಸಾರಿಕ ಸುಖಾಪೇಕ್ಷೆ ಹಾಗೂ ಅನೇಕ ವಿಧದ ಆರಾಮದಾಯಕ ವಸ್ತುಗಳ ಕಡೆಗೆ ಆಸಕ್ತಿಯನ್ನು ಹುಟ್ಟಿಸುತ್ತವೆ. ಇದರಿಂದಾಗಿ ನಮ್ಮ ಜೀವನವು ನಾನು ಹಾಗೂ ನನ್ನದು ಇವುಗಳಿಗೇ ಸೀಮಿತವಾಗಿ ಬಿಡುತ್ತದೆ. ಈ ಆಸಕ್ತಿಯ ಕಾರಣದಿಂದಾಗಿ ನಾವು ನಾನಾ ರೀತಿಯ ಚಿಂತೆ, ದುಃಖ, ಅಶಾಂತಿ, ಅಭಾವ, ನಿರಾಶೆ, ಹತಾಶೆ, ಜೀವನದ ಬಗ್ಗೆ ನಿರಾಸಕ್ತಿ, ಹಾಗೂ ಔದಾಸೀನ್ಯಗಳಲ್ಲಿ ಮುಳುಗಿ ಹೋಗುತ್ತೇವೆ. ದುಃಖ, ಚಿಂತೆ ಇವು ನಮ್ಮನ್ನು ಜೀವನಪರ್ಯಂತವೂ ಕಾಡುತ್ತಲೇ ಇರುವಂಥವು. ಇವುಗಳಿಂದ ಮುಕ್ತವಾಗುವ ಏಕೈಕ ಸಾಧನವೆಂದರೆ ಜ್ಞಾನದ ಪ್ರಾಪ್ತಿ. ಯಾಕೆಂದರೆ ಇವೆಲ್ಲದರ ಮೂಲವೇ ಅಜ್ಞಾನ.
ಜನ್ಮ, ವೃದ್ಧಿ, ಜರಾ, ಮರಣ ಈ ನಾಲ್ಕು ಲಕ್ಷಣಗಳನ್ನು ಹೊಂದಿರುವ ತತ್ವವೇ ವ್ಯಕ್ತ ತತ್ವ. ಇವೆಲ್ಲ ವಿಕಾರಗಳನ್ನೂ ಹೊಂದಿರದೇ ಇರುವುದೇ ಅವ್ಯಕ್ತ ತತ್ವ. ವೇದ ಹಾಗೂ ಸಿದ್ಧಾಂತ ಪ್ರತಿಪಾದಕ ಶಾಸ್ತ್ರಗಳಲ್ಲಿ ಅವ್ಯಕ್ತದಲ್ಲೂ ಎರಡು ಭೇದಗಳನ್ನು ಹೇಳಲಾಗಿದೆ- ಜೀವಾತ್ಮ ಹಾಗೂ ಪರಮಾತ್ಮ ಎಂದು. ಜೀವಾತ್ಮವು ಅವ್ಯಕ್ತವಾಗಿಯೂ ಕೂಡ ವ್ಯಕ್ತದ ಸಂಪರ್ಕದಿಂದಾಗಿ ಜನ್ಮ, ವೃದ್ಧಿ, ಜರಾ, ಮರಣ ಎಂಬ ಈ ನಾಲ್ಕು ಲಕ್ಷಣಗಳನ್ನು ಹೊಂದಿದ್ದು, ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷ ಈ ನಾಲ್ಕು ಪುರುಷಾರ್ಥಗಳೊಂದಿಗೆ ಸಂಬಂಧವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
ಭಗವದ್ಗೀತೆಯ ಹದಿನೆಂಟನೆಯ ಅಧ್ಯಾಯದ ಹೆಸರೇ ಮೋಕ್ಷ ಸನ್ಯಾಸ ಯೋಗ. ನಮ್ಮ ಭಾರತೀಯ ತತ್ವಜ್ಞಾನದ ಪ್ರಕಾರ ನಮ್ಮ ಜೀವನದ ಪರಮ ಉದ್ದೇಶವೇ ಮೋಕ್ಷದ ಸಾಧನೆ. ಎಂದರೆ ನಮ್ಮ ಈ ಹುಟ್ಟು ಸಾವುಗಳ ಚಕ್ರದಿಂದ ಬಿಡುಗಡೆ. ಮನುಷ್ಯನು ತನ್ನ ಪ್ರಯತ್ನದಿಂದ ಪ್ರಾಪ್ತಿಗೊಳಿಸಿಕೊಳ್ಳತಕ್ಕಂಥ ಚತುರ್ವಿಧ ಪುರುಷಾರ್ಥಗಳಿಂದಾಗಿಯೇ ಮೋಕ್ಷವು ಸಾಧಿಸುತ್ತದೆ.
ಕಾಮನೆಯು ದೈಹಿಕ ಸುಖದ ಅಪೇಕ್ಷೆಗೆ ಸೀಮಿತವಾಗಿದ್ದು ನಾವು ಮಾಡುವ ಕರ್ಮವು ಪುಣ್ಯ ಫಲ, ಸ್ವರ್ಗದ ಅಪೇಕ್ಷೆ ಇವುಗಳಿಗೆ ಸೀಮಿತವಾಗಿದ್ದರೆ ಅಲ್ಲಿ ಅಹಂಕಾರ ತಲೆಯೆತ್ತುತ್ತದೆ. ಆದರೆ ನಾಹಂ ಕರ್ತಾ ಎಂದು ಹೇಳಿ ನಮ್ಮ ಕರ್ಮಫಲಗಳನ್ನು ಅಪೇಕ್ಷೆ ಮಾಡದೆ ನಿಷ್ಕಾಮ ಕರ್ಮವನ್ನು ಮಾಡಿದರೆ ಅದು ಮೋಕ್ಷಕ್ಕೆ ಸೋಪಾನವಾಗುತ್ತದೆ.
ಮೋಕ್ಷವು ಅಂತ್ಯವಿಲ್ಲದ ಆನಂದಮಯ ಸ್ಥಿತಿ. ಯಾವುದೇ ಕಾಮನೆಯಿಲ್ಲದೆ ಭಗವಂತನನ್ನು ಆರಾಧಿಸಿ ಅವನು ಕೊಟ್ಟದ್ದರಲ್ಲಿಯೇ ತೃಪ್ತಿಯಿಂದ ಇದ್ದರೆ ಮಾತ್ರವೇ ಅದು ಮೋಕ್ಷಕ್ಕೆ ಸೋಪಾನ. ಭೋಗಸಾಧನವಾದ ಶರೀರ, ಭೋಗವಿಷಯಕವಾದ ವಸ್ತುಗಳು, ಇವುಗಳಿಗೆ ಸಾಧನವಾದ ಇಂದ್ರಿಯಗಳು ಇವುಗಳ ಮೋಹವನ್ನು ತ್ಯಜಿಸುವುದೇ ಮೋಕ್ಷ. ಎಂದಮೇಲೆ ಇಲ್ಲಿ ಕಾಮನೆಯೇ ಇಲ್ಲ. ಲಾಭ, ಅಲಾಭ, ಜಯ, ಅಪಜಯ ಎಲ್ಲವೂ ನಮ್ಮವಲ್ಲ.. ಕರ್ತವ್ಯ ದೃಷ್ಟಿಯಿಂದ ಮಾಡುತ್ತ ಹೋಗುವ ಕರ್ಮವೇ ಮುಕ್ತಿಗೆ ದಾರಿ.
ಅರ್ಜುನನು ಸನ್ಯಾಸದ ಹಾಗೂ ತ್ಯಾಗದ ತತ್ವಗಳನ್ನು ಬೇರೆಬೇರೆಯಾಗಿ ತಿಳಿದುಕೊಳ್ಳಲು ಬಯಸಿದಾಗ, ಹೃಷೀಕೇಶನು ಹೀಗೆ ಹೇಳಿದ್ದಾನೆ:
ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸನ್ಯಾಸಂ ಕವಯೋ ವಿದುಃ
ಸರ್ವಕರ್ಮಫಲತ್ಯಾಗಂ ಪ್ರಾಹುಸ್ತ್ಯಾಂಗಂ ವಿಚಕ್ಷಣಾಃ
ಎಲ್ಲ ಕರ್ಮಗಳ ಫಲವನ್ನು ತ್ಯಜಿಸುವುದೇ ತ್ಯಾಗವಾಗಿದೆ. ಎಷ್ಟೋ ಪಂಡಿತರು ಕಾಮ್ಯ ಕರ್ಮಗಳ ತ್ಯಾಗವನ್ನು ಸನ್ಯಾಸವೆಂದು ತಿಳಿಯುತ್ತಾರೆ. ಇಲ್ಲಿ ಕಾಮ್ಯಕರ್ಮಗಳೆಂದರೆ ಹೆಂಡತಿ, ಮಕ್ಕಳು, ಹುದ್ದೆಗಳು, ಸಂಪತ್ತು ಈ ಎಲ್ಲವುಗಳನ್ನು ಪಡೆಯುವುದಕ್ಕಾಗಿ ಅಷ್ಟೇ ಅಲ್ಲ, ರೋಗ ರುಜಿನಗಳಿಮದ ಮುಕ್ತರಾಗಲೆಂದು ಬಯಸಿ ದೇವರನ್ನು ಮೆಚ್ಚಿಸುವುದಕ್ಕಾಗಿ ಯಜ್ಞ ಯಾಗಾದಿಗಳನ್ನೂ, ಜಪ-ತಪಾದಿಗಳನ್ನೂ ಹಾಗೂ ದೇವರ ಉಪಾಸನೆಯನ್ನೂ ಮಾಡುತ್ತಾರೆ. ಅಲ್ಲದೆ ಈಶ್ವರನಲ್ಲಿ ಭಕ್ತಿ, ದೇವತಾರಾಧನೆ, ಮಾತಾ-ಪಿತ-ಗುರುಗಳ ಸೇವೆ, ಯಜ್ಞ-ಯಾಗಾದಿಗಳು, ಹಾಗೂ ತಮ್ಮ ವೃತ್ತಿಯ ಮೂಲಕ ಗೃಹಕೃತ್ಯಗಳ ನಿರ್ವಹಣೆ ಮತ್ತು ಶರಿರ ಸಂಬಂಧಿ ಆಹಾರ ಪಾನಿಯಗಳಾದಿ ಕರ್ತವ್ಯ ಕರ್ಮಗಳ ಇಹ-ಪರ ಎಲ್ಲಾ ಆಸೆಗಳ ಪೂರ್ಣ ತ್ಯಾಗವೇ ಎಲ್ಲಾ ಕರ್ಮಗಳ ಫಲ ತ್ಯಾಗ ಎಂದು ಹೇಳುತ್ತಾರೆ.
ಕಾಮನೆಗಳಿಂದ ಪ್ರವೃತ್ತವಾದ ಕರ್ಮಗಳನ್ನು ಬಿಡುವುದೇ ಸನ್ಯಾಸವೆಂದು ಜ್ಞಾನಿಗಳು ಅಭಿಪ್ರಾಯಪಡುತ್ತಾರೆ. _ ಎಂದು ಹೇಳಿದ ಗೀತಾಚಾರ್ಯನು ಸನ್ಯಾಸ, ತ್ಯಾಗಗಳ ವಿಷಯಕವಾಗಿ ತನ್ನ ಅಭಿಪ್ರಾಯವನ್ನು ಹೇಳುತ್ತಾನೆ: ತ್ಯಾಗವು ಸಾತ್ವಿಕ, ರಾಜಸ ಹಾಗೂ ತಾಮಸ ಎಂಬುದಾಗಿ ಮೂರು ಪ್ರಕಾರದ್ದಾಗಿದ್ದು, ಯಜ್ಞ, ದಾನ ಮತ್ತು ತಪಸ್ಸುಗಳ ರೂಪದಲ್ಲಿಯ ಕರ್ಮವನ್ನು ತ್ಯಜಿಸುವುದು ಯೋಗ್ಯವಲ್ಲ. ಅದು ಅವಶ್ಯಕ ಕರ್ತವ್ಯ. ಏಕೆಂದರೆ ಈ ಮೂರೂ ಫಲ ಮತ್ತು ಆಸಕ್ತಿಯನ್ನು ತ್ಯಜಿಸಲು ಕೇವಲ ಭಗವಂತನ ಕಾರಣದಿಂದಾಗಿ ಕರ್ಮ ಮಾಡುವವನಾದಂಥ ಮನುಷ್ಯನನ್ನು ಪವಿತ್ರಗೊಳಿಸುವಂಥವು. ಆದ್ದರಿಂದ ಕರ್ಮಗಳನ್ನು ಆಸಕ್ತಿ ಹಾಗೂ ಫಲಗಳ ಆಶೆಯನ್ನು ತ್ಯಜಿಸಿ ಮಾಡಬೇಕು. ನಿಷಿದ್ಧ ಕರ್ಮಗಳನ್ನು ತ್ಯಜಿಸಬೇಕು.. ನಿಯತ ಕರ್ಮಗಳನ್ನಲ್ಲ. ಶರೀರಧಾರಿಯಾದ ಯಾವನೇ ಆಗಲಿ, ಪೂರ್ಣವಾಗಿ ಕರ್ಮಗಳನ್ನು ತ್ಯಾಗ ಮಾಡುವುದು ಅಸಾಧ್ಯ. ಕರ್ಮದ ಫಲಗಳನ್ನು ತ್ಯಾಗಮಾಡಿರದ ವ್ಯಕ್ತಿಗೆ ಮರಣದ ನಂತರ ಒಳ್ಳೆಯ, ಮಿಶ್ರ ಹಾಗೂ ಕೆಟ್ಟ ಫಲಗಳು ಅವನ ಕರ್ಮಾನುಸಾರವಾಗಿ ದೊರೆಯುತ್ತವೆ. ಆದರೆ ಕರ್ಮಫಲಗಳನ್ನು ತ್ಯಜಿಸಿರುವವನಿಗೆ ಕರ್ಮಗಳ ಫಲಗಳು ಎಂದೂ ಸಿಗಲಾರವು. ಯಾವುದೇ ವ್ಯಕ್ತಿಯ ಮನದಲ್ಲಿ ನಾಹಂ ಕೃತೋ ಭಾವ ಇರುವುದಿಲ್ಲವೋ, ಯಾರ ಬುದ್ಧಿಯು ಸಾಂಸಾರಿಕ ಪದಾರ್ಥಗಳಲ್ಲಿ ಹಾಗೂ ಕರ್ಮಗಳಲ್ಲಿ ಅಂಟಿಕೊಂಡಿರುವದಿಲ್ಲವೋ ಅವರಲ್ಲಿ ಸ್ವಾರ್ಥಭಾವವಿರುವುದಿಲ್ಲ. ಅವರು ಹಿಂಸೆಯನ್ನು ಕೂಡ ಲೋಕಕಲ್ಯಾಣಾರ್ಥವಾಗಿಯೇ ಮಾಡುವುದರಿಂದ ಅವರ ಕರ್ಮವು ವಾಸ್ತವವಾಗಿ ಕರ್ಮವಲ್ಲ. ಅವರು ಪಾಪಿಗಳಲ್ಲ. ಯಾವುದೇ ಜ್ಞಾನವಿರಲಿ, ಮನುಷ್ಯನು ಎಲ್ಲ ಪ್ರಾಣಿಗಳಲ್ಲಿಯೂ ಅವಿನಾಶಿಯಾದ ಪರಮಾತ್ಮನನ್ನೇ ಕಾಣುವ ಜ್ಞಾನವು ಸಾತ್ವಿಕ ಜ್ಞಾನ. ಆದರೆ ಅವನು ಸಮಸ್ತ ಜೀವಿಗಳಲ್ಲಿ ವಿವಿಧ ಪ್ರಕಾರದ ಅನೇಕ ಭಾವಗಳನ್ನು ಬೇರೆಬೇರೆಯಾಗಿ ತಿಳಿದರೆ ಆ ಜ್ಞಾನವು ರಾಜಸ ಜ್ಞಾನವಾಗಿರುತ್ತದೆ. ಆದರೆ ಮನುಷ್ಯನು ಈ ವಿನಾಶವಾಗುವಂಥ ಕ್ಷಣಿಕ ಶರೀರವನ್ನೇ ಆತ್ಮವೆಂದು ಭಾವಿಸಿ ಅದನ್ನೇ ಸರ್ವಸ್ವವೆಂದು ತಿಳಿದು ಅದರಲ್ಲೇ ಆಸಕ್ತನಾಗಿರುವುದು ತಾಮಸಿಕ ವೃತ್ತಿ. ಸಾತ್ವಿಕ ವೃತ್ತಿಯಿಂದಲೇ ಮುಕ್ತಿಮಾರ್ಗಕ್ಕೆ ಸೋಪಾನವು ತೆರೆದುಕೊಳ್ಳುತ್ತದೆ.
ಪರಮಾತ್ಮನನ್ನು ಅವ್ಯಕ್ತಭಾವದಲ್ಲಿ ಆರಾಧಿಸುವುದು ಸ್ವಲ್ಪ ಕ್ಲಿಷ್ಟವಾದದ್ದೆಂದು ಗೀತೆಯು ಒಪ್ಪುತ್ತದೆ. ಆದ್ದರಿಂದಲೇ ಅವನನ್ನು ಮನಸ್ಸಿನಲ್ಲಿ ಆರಾಧಿಸುತ್ತ ನಮ್ಮ ಸಮಸ್ತ ಕರ್ಮಗಳನ್ನೂ ಆತನಲ್ಲಿ ಅರ್ಪಿಸಿ ನಮ್ಮ ನಡೆ, ನುಡಿ ಎಲ್ಲವೂ ಆತನ ಪೂಜೆಯೇ ಎಂದು ಭಾವಿಸಿ ನಾವು ಕರ್ಮದಲ್ಲಿ ನಿರತರಾದರೆ ಅವನು ಖಂಡಿತವಾಗಿ ನಮ್ಮ ಮನದ ಎಲ್ಲ ಕಲ್ಮಶಗಳನ್ನೂ ಎಮದರೆ ಎಲ್ಲ ಮೋಹಗಳನ್ನೂ ನಿವಾರಿಸಿ, ನಮ್ಮನ್ನು ಸಂರಕ್ಷಿಸುತ್ತಾನೆ. ನಮ್ಮ ಮನದ ಎಲ್ಲಾ ಕೀಳುಕಾಮನೆಗಳಿಗೆ ಕಡಿವಾಣ ಹಾಕುವಂಥ ಆತ್ಮನಿಗ್ರಹವನ್ನು ನಮಗೆ ದಯಪಾಲಿಸುತ್ತಾನೆ.
ಮಚ್ಚಿತ್ತಾ ಮದ್ಗತಪ್ರಾಣಾ ಬೋಧಯಂತಃ ಪರಸ್ಪರಂ
ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ ಚ
ಸತತವಾಗಿ ನನ್ನ ಧ್ಯಾನದಲ್ಲಿರುವವರೂ, ತಮ್ಮ ಜೀವನವನ್ನು ನನಗಾಗಿಯೇ ಮೀಸಲಾಗಿರಿಸಿರುವವರೂ, ಸದಾ ನನ್ನ ವಿಷಯವಾಗಿಯೇ ಚರ್ಚಿಸುತ್ತ ನನ್ನ ಬಗೆಗಿನ ಅರಿವನ್ನು ಪಡೆಯುತ್ತಿರುವವರೂ ಅಂಥ ನನ್ನಲ್ಲಿ ಐಕ್ಯಭಾವವನ್ನು ಹೊಂದಿರುವಂಥ ನನ್ನ ಭಕ್ತರಿಗೆ ಜ್ಞಾನಯೋಗವನ್ನು ನಿಡಿ ನಾನು ಅವರಿಗೆ ಮುಕ್ತಿಯನ್ನು ದಯಪಾಲಿಸುತ್ತೇನೆ ಎಂದು ಭಗವಂತನು ಆಶ್ವಾಸನೆಯನ್ನಿತ್ತಿದ್ದಾನೆ.
ಕೊನೆಯದಾಗಿ ಈ ಒಂದು ಶ್ಲೋಕವು ಈ ಕಲಿಯುಗದಲ್ಲಿ ಮನುಷ್ಯನು ಮುಕ್ತಿಯನ್ನು ಪಡೆಯುವುದಕ್ಕಾಗಿ ಅಂಥ ಆತ್ಯಂತಿಕವಾದಂಥ ಶ್ರಮವನ್ನು ಪಡಬೇಕಾಗಿಲ್ಲವೆಂಬುದನ್ನು ಒತ್ತಿಹೇಳುವಂತಿದೆ.
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ
ಎಲ್ಲಾ ಆಚಾರಗಳನ್ನೂ, ಎಲ್ಲಾ ಧರ್ಮಗಳನ್ನೂ ಒತ್ತಟ್ಟಿಗಿರಿಸಿ ಸರ್ವಸಮರ್ಪಣ ಬುದ್ಧಿಯಿಂದ ನನಗೆ ಶರಣಾಗು. ನಾನು ನಿನ್ನ ಎಲ್ಲ ಪಾಪಗಳನ್ನೂ ಕಳೆಯುತ್ತೇನೆ. ಶೋಕಿಸದಿರು.
ಇದರ ಅರ್ಥವೆಂದರೆ, ನಮ್ಮ ಪಾಪದ ಹೊರೆಯು ಎಷ್ಟೇ ಪ್ರಬಲವಾಗಿದ್ದರೂ ಅದಕ್ಕಾಗಿ ಮನಸಾ ಪಶ್ಚಾತ್ತಾಪವನ್ನು ಪಡುತ್ತ ಆತನ ಅನುಗ್ರಹಕ್ಕಾಗಿ ಅನನ್ನಯಶರಣಂ ನಾಸ್ತಿ ಎಂಬ ಭಾವದಿಂದ ಅವನನ್ನೇ ಆಶ್ರಯಿಸುವುದಾದರೆ ಆ ಭಗವಂತನು ನಮ್ಮನ್ನು ರಕ್ಷಿಸುವುದರಲ್ಲಿ ಸಂಶಯವಿಲ್ಲ..!
ಇಂದಿನ ನಮ್ಮ ಜೀವನದಲ್ಲಿ ನಾವು ನಮ್ಮ ಪ್ರತಿನಿತ್ಯದ ಆಚಾರಗಳನ್ನು ನಡೆಸುತ್ತ, ನಮ್ಮ ಮನಸ್ಸನ್ನು ಸ್ವಾಧೀನದಲ್ಲಿರಿಸಿಕೊಂಡು ನಾವು ಮಾಡುವ ಎಲ್ಲಾ ಕರ್ಮಗಳೂ ಆ ಭಗವಂತನ ಆರಾಧನೆಯೆಂದು ಭಾವಿಸಿದರೆ ಸಾಕು. ಎಲ್ಲ ಜೀವಿಗಳೂ ಪರಮಾತ್ಮನ ಸೃಷ್ಟಿ.. ಅವುಗಳಲ್ಲಿ ಪರಮಾತ್ಮನು ಅವಿನಾಭಾವದಿಂದ ನೆಲೆಸಿದ್ದಾನೆ ಎಂದು ತಿಳಿದು ಸರ್ವ ಜೀವಿಗಳಂತೆಯೇ ತಾನೂ ಅವನದೇ ಸೃಷ್ಟಿಯಾಗಿರುವುದರಿಂದ ತನಗೂ ಆ ಜೀವಿಗಳಿಗೂ ಏನೂ ಅಂತರವಿಲ್ಲವೆಂದು ತಿಳಿಯಬೇಕು. ಇದು ಜ್ಞಾನದ ಸೋಪಾನ. ಈ ಜ್ಞಾನವನ್ನು ಸಾಧಕನು ಅರಿಯಬೇಕು ಎಂದು ನಮ್ಮ ಗೀತೆಯು ತಿಳಿಸುತ್ತದೆ. . ಆತ್ಮಜ್ಞಾನದ ಸಂಪಾದನೆಯಿಂದಲೇ ಭಗವಂತನ ಸೃಷ್ಟಿಯೆಲ್ಲವೂ ಸಮಾನವೆಂಬ ಭಾವವು ಉಗಮಿಸುತ್ತದೆ. ಅಜ್ಞಾನದ ಕತ್ತಲೆಯಿಂದ ಬಿಡುಗಡೆಯೂ ಈ ಅವಿನಾಭಾವದ ಜ್ಞಾನದ ಸಂಪಾದನೆಯಿಂದಲೇ.
ಮೋಕ್ಷವೆಂದರೆ ತಾತ್ಕಾಲಿಕವಾದ ಬಿಡುಗಡೆಯಲ್ಲ. ಅದೊಂದು ಈ ಲೋಕದ ಎಲ್ಲ ಮೋಹಗಳಿಂದಲೂ ಶಾಶ್ವತವಾದ ಬಿಡುಗಡೆ. ನಮ್ಮಲ್ಲಿ ಪದೇ ಪದೇ ಪುಟಿದೇಳುತ್ತಿರುವ ಕಾಮನೆಗಳ ತೃಪ್ತಿಯಿಂದ ತಾತ್ಕಾಲಿಕ ಬಿಡುಗಡೆ ಉಂಟಾಗುತ್ತದೆ. ಹೀಗಾಗಿ ಈ ಎಲ್ಲ ಕಾಮನೆಗಳನ್ನು ಈಡೇರಿಸಿಕೊಂಡೇ ಬಿಡುಗಡೆಯನ್ನು ಪಡೆಯುವೆನೆಂದರೆ ಅದು ಸಾಧ್ಯವಿಲ್ಲ. ಅವುಗಳನ್ನು ಈಡೇರಿಸುವ ಪ್ರಯತ್ನದಲ್ಲಿ ಮತ್ತಷ್ಟು ಕಾಮನೆಗಳು ಹುಟ್ಟಿಕೊಳ್ಳುತ್ತವೆ. ಅದರಿಂದಾಗಿ ಮತ್ತಷ್ಟು ಕರ್ಮಗಳು ಉಂಟಾಗುತ್ತವೆ. ಆದುದರಿಂದ ಕಾಮನೆಗಳ ಸಮೂಹವನ್ನು ಉತ್ಪತ್ತಿ ಮಾಡುವ ಅಜ್ಞಾನವನ್ನೇ ತೊಡೆದು ಹಾಕುವುದರಿಂದ ಶಾಶ್ವತವಾದ ಬಿಡುಗಡೆ ಹೊಂದಬಹುದು. ಅಂದರೆ ಆತ್ಯಂತಿಕ ಮೋಕ್ಷವನ್ನು ಪಡೆಯಬಹುದು.
ಕಾಮನೆಗಳನ್ನು ಧರ್ಮದ ಚೌಕಟ್ಟಿನಲ್ಲಿ ಅನುಭವಿಸಿದಾಗ ಅವು ಪೂರ್ಣಗೊಳ್ಳುತ್ತವೆ. ಜೀವನದ ನಾಲ್ಕು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷಗಳಲ್ಲಿ, ಅರ್ಥ, ಕಾಮಗಳು ಧರ್ಮ-ಮೋಕ್ಷಗಳ ಚೌಕಟ್ಟಿನಲ್ಲಿವೆ. ಧರ್ಮಮಾರ್ಗದಲ್ಲಿ ಜೀವನ ಮಾಡಿದಾಗ ಬಹುತೇಕ ಕಾಮನೆಗಳು ಪೂರ್ಣಗೊಂಡು ತೃಪ್ತಿಯಿಂದ ಮೋಕ್ಷದ ಹಾದಿಯಲ್ಲಿರಬಹುದು. ವಿವೇಕದಿಂದ ಕಾಮನೆಗಳನ್ನು ಇತಿಮಿತಿಗೊಳಿಸಿಕೊಂಡು ಧರ್ಮದಿಂದೊಡಗೂಡಿ ತೃಪ್ತ ಜೀವನ ನಡೆಸುತ್ತಿದ್ದರೆ ಒಂದು ದಿನ ಆತ್ಮ ಸಾಧನೆಯಲ್ಲಿ ಅಭಿರುಚಿಯುಂಟಾಗಿ ಆತ್ಯಂತಿಕ ಮೋಕ್ಷವೇ ದೊರಕುವುದು ಅಸಾಧ್ಯವೇನಲ್ಲ. ಹೀಗೆ ಎಲ್ಲರೂ ಮೋಕ್ಷದ ಹಾದಿಯಲ್ಲಿದ್ದು ಕಾಲಕ್ರಮದಲ್ಲಿ ಆತ್ಯಂತಿಕ ಮೋಕ್ಷವನ್ನೇ ಪಡೆಯಬೇಕು.