ಮತ್ತೆ ಯುಗಾದಿ
ಬದಲಾವಣೆ ಎಂದರೆ ಹೊಸತು…, ಹೊಸತು ಎಂದರೆ ಸೌಂದರ್ಯ. ಸೌಂದರ್ಯ ಎಂದರೆ ಉಲ್ಲಾಸ. ಉಲ್ಲಾಸ ಅಂದರೆ ಬದುಕು… ಬದುಕು ಅಂದರೆ ಬದಲಾವಣೆ… ಎಲೆ ಉದುರಿದ ಮರ ಮತ್ತೆ ಚಿಗುರಿನಿಂದ ಕಂಗೊಳಿಸಲು ತಯಾರಾಗುತ್ತದೆ. ಮತ್ತೆ ಚಿಗುರನ್ನು ಎಲೆಯಾಗಿಸಿ, ಎಲೆ ಹಣ್ಣಾಗಿಸಿ, ಉದುರಿಸಿಕೊಳ್ಳಲೂ ಕೂಡಾ….. ಮತ್ತೆ, ಮತ್ತೆ ಯುಗಾದಿ. ಇದೇ ನಿಸರ್ಗ ಮಾನವ ಬದುಕಿಗೆ ಶಾಶ್ವತವಾಗಿ ನೀಡುತ್ತಿರುವ ಸಂದೇಶ ಹಾಗೂ ಸಂತೋಷ. ಇದು ಪ್ರಕೃತಿಯಲ್ಲಿ ನಿತ್ಯ ಪವಾಡದಂತೆ ನಡೆಯುತ್ತದೆ. ಪ್ರಕೃತಿಯು ಹಸುರಿನಿಂದ ಸಜ್ಜಾಗುವ ಈ ಸುಂದರ ಕ್ಷಣ ಯುಗಾದಿ. ಚಿಗುರೊಂದು ಮುಂದೆ ಹಣ್ಣಾಗಿ ಪೂರ್ಣತೆಯನ್ನು ಪಡೆಯುವ ಆರಂಭದ ಕ್ಷಣ. ಹೀಗೆ ಉದುರುವಿಕೆ-ಅರಳುವಿಕೆ, ಅಗಲುವಿಕೆ-ಚಿಗುರುವಿಕೆ ಸಮಗ್ರವೂ, ಪರಿಪೂರ್ಣವೂ ಆದ ಕಾಲಚಕ್ರದ ಬೇರೆ, ಬೇರೆ ಗತಿಗಳಷ್ಟೇ. ನಮ್ಮ ಬದುಕಿನಲ್ಲಿ ಬರುವ ನಗು-ಅಳು, ಸುಖ-ದುಃಖಗಳು ಜೀವನ ಸಾರ್ಥಕತೆಗೆ ಒದಗಿದ ಪೂರಕ ಪರಿಭ್ರಮಣವೇ ಹೊರತು, ಅವು ಶಾಶ್ವತವಲ್ಲ. ನಮ್ಮ ಬದುಕಿನಲ್ಲಿ ಅನಿವಾರ್ಯವಾಗಿ ಒದಗಿ ಬರುವ ಈ ಸುಖ-ದುಃಖಗಳನ್ನು ನಾವು ಹೀಗೆಯೇ ಪ್ರಕೃತಿ ಅರುಹಿದಂತೆ ಸ್ವೀಕರಿಸಿದ್ದೇವೆಂದು ಸಾಂಕೇತಿಕವಾಗಿ ಬೇವು-ಬೆಲ್ಲಗಳನ್ನು ಮೆಲ್ಲುವುದರಲ್ಲಿ ಕಾಣಬಹುದು. ಇದು ಯುಗಾದಿ ಹಬ್ಬದ ಮೂಲ ತತ್ವ. ಯುಗಾದಿಯ ಹಾರ್ದಿಕ ಶುಭಾಶಯಗಳು….. ನನ್ನೆಲ್ಲಾ ಅಕ್ಕರೆಯ ಬಂಧುಗಳಿಗೆ…. ಬೇವು ಇದೆ, ಬೆಲ್ಲವೂ ಇದೆ…, ಇವೆರಡರ ಅಗತ್ಯ ಕೂಡಾ……
ಹೊಸ್ಮನೆ ಮುತ್ತು