ಮನಸಾಗಿ ಕಾಡಿತ್ತು “ಮಾಯೆ”…

ಮನಸಾಗಿ ಕಾಡಿತ್ತು “ಮಾಯೆ”…
“ಸುತ್ತಲೂ ಯಾರಿಲ್ಲದೇ ಒಬ್ಬಂಟಿಯಾಗಿದ್ದಾಗ
ಬಾ ಅಂದಿದ್ದೆ ನಿನಗೆ.
ಈಗೇಕೆ ಬಂದೆ?”
ಕೇಳಿದೆ ಕಣ್ಣೀರಿಗೆ…

“ಗುಂಪಿನಲ್ಲಿಯೂ
ಒಬ್ಬಂಟಿಗಳಾಗಿಯೇ
ಕಂಡೆ ನೀನೆನಗೆ”
ತಣ್ಣಗೇ ಹೇಳಿತು
ಕಣ್ಣೀರೆನಗೆ.

ಇದು ವಾಸ್ತವ. ವಿಷಯಗಳು ಮೇಲ್ಕಂಡಂತೆ ಇರುವುದಿಲ್ಲ. ಅಥವಾ “ಜನ ದಿಸ್ತ… ತಸ ನಸ್ತ…” ಈ ಹೇಳಿಕೆಗಳ ಅರ್ಥವೂ ಇದೇ.
ವಾಸ್ತವಕ್ಕೂ ಕಲ್ಪನೆಗೂ ಇರುವ ವ್ಯತ್ಯಾಸವೇ ಅದು. ಇಂಗ್ಲಂಡಿನ ರಾಣಿಯಾಗುವುದು ಬಹುಶಃ ಕೈ ಗೆಟುಕದು ಎನ್ನುವಂಥ ಕನಸು. ಆದರೆ ಪ್ರಿನ್ಸೆಸ್ ಡಯಾನಾ ತನ್ನ ಉಡಿಯಲ್ಲಿದ್ದ ಪಟ್ಟವನ್ನು ಇನ್ನಿಲ್ಲದಂತೆ ಒದರಿ ಹೊರಬಂದಳು. ನಮ್ಮವನೇ ಆದ ಸಿದ್ಧಾರ್ಥ ಮಾಡಿದ್ದೂ ಅದನ್ನೇ.. ಯಾವ ನಟರನ್ನು ನೋಡಲು ಕನಸುಕಾಣುತ್ತೇವೋ ಅಂಥವರ ಹೆಂಡಂದಿರು ಅವರಿಂದ ವಿಚ್ಛೇದನ ಪಡೆದು ಬೇರೆಯಾಗುತ್ತಾರೆ. ಶರಂಪರ ಕಿತ್ತಾಡುತ್ತಾರೆ. ಮನೆಯ ಕಥೆಗಳಿಗೆ ಹೆಚ್ಚಿಸುತ್ತಾರೆ. ಇದೆಲ್ಲ ಮನಸೆಂಬ ಮಂಗನ ದೊಂಬರಾಟವೇ..
ಇಂಥವೇ ಉದಾಹರಣೆಗಳನ್ನು ಕೊಡಲೂ ಕಾರಣವಿದೆ. ಇವರೆಲ್ಲ ಸಪನೋಂಕಾ ಸೌದಾಗರ್ ಗಳು. ಕನಸುಗಳನ್ನು ಮಾರುವವರು ಅಷ್ಟೇ. ಅವರ ಸ್ವಂತ ಕನಸುಗಳು ಭಯಂಕರವಾಗಿರುವದೇ ಹೆಚ್ಚು.
ಇದಕ್ಕೆಲ್ಲ ಕಾರಣ ಅವರವರ ಮನಸ್ಥಿತಿ. ಮನಸ್ಸು ಹುಚ್ಚುಖೋಡಿ. ಬಹಳ ಚಂಚಲ. ಅದರ ವೇಗವನ್ನು ಗಾಳಿಯ ವೇಗವೂ ಹಿಮ್ಮೆಟ್ಟಿಸಲಾರದು. ಆ ಮಂಗ ಮನಸ್ಸಿಗೆ ಕಡಿವಾಣವಿಲ್ಲ. ಅಂತೆಯೇ ಅದರ ನಿಯಂತ್ರಣವೂ ಆಗದ ಮಾತು.
ನನ್ನ ಗೆಳತಿಯೊಬ್ಬಳು ಫೇಸ್ ಬುಕ್ಕಿನಿಂದ ಬಹುದೂರ ಕಾರಣ ಕೇಳಿದಾಗ ಹೆಳಿದ್ದು, “ ಆರಾಮಾಗಿದ್ದೀಯಾ ಇರಬಾರದೇ. ಅದೆಲ್ಲ ಓದಿ ಮರೆಯುವ ಮನಸ್ಸಿದ್ದವರಿಗೆ ನಿನ್ನಂಥ ಭಾವುಕ ಮನದವರಿಗಲ್ಲ ಎಲ್ಲರೂ ಅದರಲ್ಲಿ ತಾವಿರುವದಕ್ಕಿಂತ ಭಿನ್ನ ಚಿತ್ರಣವನ್ನೇ ಕೊಟ್ಟಿರುತ್ತಾರೆ. ಅರ್ಧಕ್ಕಿಂತ ಹೆಚ್ಚು ವಾಸ್ತವ ಹಾಗಿರುವದಿಲ್ಲ ಅದನ್ನೇ ನಿಜವೆಂದೂ ನಿಮ್ಮನ್ನು ಅದಕ್ಕೆ ಹೋಲಿಸಿಕೊಂಡು ಒದ್ದಾಡುವ ಮನಸ್ಸಿನವರಿಗೆ ಖಂಡಿತ ಸಲ್ಲದು ಎಂದು ಅವಳ ಮಕ್ಕಳ ಅಭಿಪ್ರಾಯ” ಎಂದಾಗ ಮರು ಮಾತಾಡಲು ಹೊಳೆಯಲೇ ಇಲ್ಲ. ಇದು ನಿಜವೋ… ಸುಳ್ಳೋ… ನಿಜ/ಸುಳ್ಳುಗಳ ಪ್ರಮಾಣವೆಷ್ಟು ಅದು ಬೇರೆಯೇ ವಿಷಯ. ಆದರೆ ಹುಚ್ಚು ಮನಸ್ಸಿಗೆ ಹತ್ತು ಮುಖಗಳಿರಬಹುದೆಂಬುದು ಯಾರೂ ಅಲ್ಲಗಳೆಯಲಾರರು. ಸಮಯ/ ಸಂದರ್ಭಕ್ಕೆ ಊಸರವಳ್ಳಿಯಂತೆ ಬದಲಾಗುವದೂ ಅಷ್ಟೇ ಸತ್ಯ ಅಂದಮೇಲೆ ಅದನ್ನು ನಂಬುವದಾದರೂ ಹೇಗೆ? ಹೀಗಾಗಿ ಪೇಟೆಯಲ್ಲಿ ಮುಖವಾಡಗಳ ಸಂತೆ ವ್ಯಾಪಾರ ಹೆಚ್ಚಿರುವದೂ ಇದೇ ಕಾರಣಕ್ಕೆ. ಅದು ಸೃಷ್ಟಿಸುವ ಜಗತ್ತು ಬೇರೆಯೇ ರೂಪದ್ದು.
ಆದರೆ ಹೀಗೆಯೇ ಇರುವದು ಅನಿವಾರ್ಯವೇನೋ! ಮನಸ್ಸು ಬತ್ತಲಾದರೆ ಆಗುವ ಆಘಾತ ಕಲ್ಪನಾತೀತ. ಉರಿವ ಸೂರ್ಯನನ್ನು ಬರಿಗಣ್ಣಿನಿಂದ ನೋಡಲಾದೀತೆ? ಸತ್ಯದ ಪ್ರಖರತೆ ಅದನ್ನೂ ಮೀರಿದ್ದು. ಹರಿಶ್ಚಂದ್ರನನ್ನೇ ನಲುಗಿಸಿದ ಸಂಗತಿಯದು. ಅಂದಮೇಲೆ ನಮ್ಮಂಥವರ ಪಾಡೇನು? ಅಪಾಯದ ಗಂಟೆ ಬಾರಿಸಿತೋ ಮನಸ್ಸಿನದೊಂದು ನಾಗಾಲೋಟ. ಬಣ್ಣ ಬದಲಿಸಿ ಸುಳ್ಳಿನ ಸೆರಗಿನಲ್ಲಿ ಮರೆಮಾಚಿಕೊಂಡೇ ಬಿಡುತ್ತದೆ.
ನಾವು ಕೇವಲ ಮನುಷ್ಯರು. “ಮನ ದರಪನ ಕಹಲಾಯೆ. ಭಲೆ ಬುರೆ ಸಾರೇ ಕರಮೊಂಕೊ ದೇಖೆ. ಔರ ದಿಖಾಯೆ” ಎಂಬ ಗೀತೆಯಲ್ಲಿ ಮನಸ್ಸು ಬೆಳಗಿದರೆ ಜಗತ್ತೇ ಬೆಳಗುತ್ತದೆ ಎಂಬದೊಂದು ಅರ್ಥವಿದೆ. ಜಗತ್ತಿನಿಂದ ಓಡಿ ಹೋಗಬಹುದು. ನಮ್ಮ ಮನಸ್ಸಿನಿಂದೆಂದೂ ಓಡಿಹೋಗಲಾರೆವೆಂಬುದೂ ಒಂದು ನಿರ್ದಯ ಸತ್ಯವನ್ನು ನಮಗೆ ಬೇಕಾಗಲೀ ಬೇಡವಾಗಲೀ ಒಪ್ಪಿಕೊಳ್ಳುವದು ಅನಿವಾರ್ಯ ಎಂದಾಗ, ಆ ಮನಸ್ಸುನ್ನು ಮಮತೆಯಿಂದ ಅದಷ್ಟು ಮಣಿಸಿ, ಮನವೊಲಿಸಿ, ಮನಃಪೂರ್ವಕ ಆದರಿಸಿ ಮನಸ್ಸಂತೋಷ ನಮ್ಮದಾಗುವಂತೆ ಬದುಕುವದರಲ್ಲಿ ಸಂತಸವಿದೆ ಎಂಬುದನ್ನು ಒಪ್ಪಿ ಅಪ್ಪಿಕೊಳ್ಳೋಣ…

Leave a Reply