ಮಹಿಳೆ ನಡೆದು ಬಂದ ದಾರಿ-3

ಮಹಿಳೆ ನಡೆದು ಬಂದ ದಾರಿ-3
ಸ್ವಾತಂತ್ರ್ಯಾನಂತರ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವಿವಿಧ ರಾಜಕೀಯ ಪಕ್ಷಗಳನ್ನು ಸೇರಿಕೊಂಡರು. ಅವರಲ್ಲಿ ಕೆಲವರು ಮುಖ್ಯ
ಮಂತ್ರಿಗಳು, ಸಂಪುಟ ದರ್ಜೆಯ ಸಚಿವರು, ಉಪಸಚಿವರು ಹಾಗೂ ರಾಜ್ಯದ ಸಚಿವರುಗಳಾಗಿ ಸ್ಥಾನಗಳನ್ನು ಗಳಿಸಿದರು.
ಈಗ ಎಲ್ಲ ರಾಜಕೀಯ ಪಕ್ಷಗಳೂ ಒಂದೊಂದು ಮಹಿಳಾ ವಿಭಾಗಗಳನ್ನು ಹೊಂದಿದ್ದು, ಕೆಲವು ಮಹಿಳಾ ಮುಂದಾಳುಗಳು ಪಕ್ಷದ ಸೆಕ್ರೆಟರಿ ಅಥವಾ ಅಧ್ಯಕ್ಷರಾಗಿ ಪ್ರಮುಖ ಸ್ಥಾನಗಳಲ್ಲಿದ್ದಾರೆ. ವಿವಿಧ ಪಕ್ಷಗಳ ಮಹಿಳೆಯರು ಚುನಾವಣಾ ಸಮಯದಲ್ಲಿ ಪ್ರಚಾರದಲ್ಲಿ, ಸಭೆಗಳನ್ನು ಸಂಘಟಿಸುವುದರಲ್ಲಿ ಸಕ್ರಿಯವಾಗಿ ಪಾತ್ರ ವಹಿಸುತ್ತಾರೆ. ಕುಟುಂಬಗಳೂ ಕೂಡ ಯಾವಾಗಲೂ ಮಹಿಳೆಯರಿಗೆ ರಾಜಕೀಯದಲ್ಲಿ ಸುಲಭವಾದ ಪ್ರವೇಶ ಸಿಗಲೆಂದು ಸಹಾಯಮಾಡುತ್ತವೆ. ಈಗ ರಾಜಕೀಯವು ಕೇವಲ ಪುರುಷರದೇ ಸಾಮ್ರಾಜ್ಯವಾಗಿ ಉಳಿದಿಲ್ಲ.
ಭಾರತೀಯ ಮಹಿಳೆಯ ಸಾಮಾಜಿಕ ಜೀವನದ ದೃಷ್ಟಿಯಲ್ಲಿ ಅನೇಕ ಬದಲಾವಣೆಗಳು ಆಗಿವೆ. ನಗರದ ಈ ‘ಹೊಸ ಜೀವನವು’ ಕೌಟುಂಬಿಕ ಸಂಬಂಧಗಳನ್ನು ಬದಲಾಯಿಸಿದೆ. ಮಹಿಳೆಯ ಸಾಮಾಜಿಕ ಜೀವನವು ಬದಲಾಗಲು ಗಂಡ-ಹೆಂಡತಿಯರು ಸಾಮಾನ್ಯ ಸಾಮಾಜಿಕ ಜೀವನದಲ್ಲಿ ಪಾಲುಗಾರರಾಗುತ್ತಿದ್ದಾರೆ. ಇದು ಮೊದಲಿನ ಪಾರಂಪರಿಕ ಕುಟುಂಬಗಳಲ್ಲಿ ಇರಲಿಲ್ಲ.
ಲೈಂಗಿಕ ಪ್ರತ್ಯೇಕತೆಯ ಬಗೆಗಿನ ಧೋರಣೆಯೂ ಕೂಡ ಇತ್ತೀಚೆಗೆ ಬದಲಾಗುತ್ತಿದೆ. ಸಹಶಿಕ್ಷಣವು ಹುಡುಗ ಹಾಗೂ ಹುಡುಗಿಯರು ಪರಸ್ಪರ ಬೆರೆಯುವುದಕ್ಕೆ ಸಂದರ್ಭಗಳನ್ನು ಸೃಷ್ಟಿಸಿವೆ. ವಿಶ್ರಾಂತಿಯ ಸಮಯದಲ್ಲಿ ಮಹಿಳೆಯರು ತಮ್ಮ ಗೆಳತಿಯರನ್ನು ಭೆಟ್ಟಿಯಾಗಲು ಹೋಗುತ್ತಾರೆ. ಹುಡುಗರು ಹುಡುಗಿಯರನ್ನು ತಮ್ಮ ಜೊತೆಗೆ ಸಿನೆಮಾಕ್ಕೆ, ರೆಸ್ಟುರಾಂಟುಗಳಿಗೆ ಹಾಗೂ ಪಿಕ್ನಿಕ್ಕುಗಳಿಗೆ ಮನರಂಜನೆಗೆಂದು ಕರೆದೊಯ್ಯುತ್ತಾರೆ.
ಔದ್ಯೋಗಿಕತೆಯು ಕೇವಲ ಅವಿಭಕ್ತ ಕುಟುಂಬ ಪದ್ಧತಿಯನ್ನಷ್ಟೇ ಅಲ್ಲ, ಗಂಡ-ಹೆಂಡಿರ ನಡುವಿನ ಸಂಬಂಧಗಳ ಮೇಲೂ ಪರಿಣಾಮ ಬೀರಿದೆ. ಮಹಿಳೆಯ ಸ್ಥಾನವು ಒಬ್ಬ ಸಲಹೆಗಾರಳಾಗಿ ಬಹಳಷ್ಟು ಕುಟುಂಬಗಳಲ್ಲಿ ಕಂಡುಬರುತ್ತಿದೆ. ಅವಳು ಅನೇಕ ಕೌಟುಂಬಿಕ ವಿಷಯಗಳಲ್ಲಿ ತಂದೆ ಅಥವಾ ಗಂಡನೊಂದಿಗೆ ಪ್ರಮುಖ ತೀರ್ಪುಗಾರಳಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಾಳೆ. ಈಗ ಅಧಿಕಾರವು ಕೇವಲ ಕುಟುಂಬದ ಹಿರಿಯ ಪುರುಷನಷ್ಟೇ ಅಲ್ಲ, ಮಹಿಳೆಯ ಮೇಲೆಯೂ ಇದೆ.
ಭಾರತದ ಸ್ವಾತಂತ್ರ್ಯ ಚಳುವಳಿಯು ಮಹಿಳೆಯರಲ್ಲಿ ಅವರ ಸಾಮಾಜಿಕ ಹಕ್ಕು ಹಾಗೂ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಪ್ರಮಾಣದ ಜಾಗೃತಿಯನ್ನು ಹುಟ್ಟಿಸಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಈ ದೊಡ್ಡ ಸಾಮಾಜಿಕ ವ್ಯವಸ್ಥೆಯಲ್ಲಿ, ಉಂಟಾದ ಒಂದು ಪರಿಣಾಮವೆಂದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮಹಿಳೆಯರಲ್ಲಿ ಒಂದು ಹೊಸ ಸೃಜನಶೀಲ ಪ್ರಚೋದನೆಯ ಅಭಿವ್ಯಕ್ತಿಯು ಕಂಡುಬಂದಿತು. ಮಹಿಳೆಯ ಸ್ಥಾನಮಾನ ಹಾಗೂ ಅವರ ಸಾಮಾಜಿಕ ಸಂಬಂಧವು ಸಾಮಾಜಿಕ ಬದಲಾವಣೆಯ ವಾಡಿಕೆಯ ಅಂಶಗಳ ಮೂಲಕ ಸಮಾಜದಲ್ಲಿಯ ಹೊಸ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಸಂಘಟನೆಗಳ ಅಗತ್ಯವನ್ನು ಹೊಂದಿದಂತೆ ಹೊರಹೊಮ್ಮಿತು.
ನಿಸ್ಸಂದೇಹವಾಗಿ 1947ಕ್ಕಿಂತಲೂ ಮೊದಲಿನ ಸಮಯದಲ್ಲಿ, ಭಾರತೀಯ ಮಹಿಳೆಯ ಆಲೋಚನಾ ಶೈಲಿ, ಅವಳ ದೃಷ್ಟಿಕೋನ ಹಾಗೂ ಅವಳ ಮೌಲ್ಯಗಳಲ್ಲಿ ಒಂದು ಗಮನಾರ್ಹ ಬದಲಾವಣೆಯಿತ್ತು. ನಂತರ, ಭಾರತೀಯ ಮಹಿಳೆಯು ನಿಧಾನವಾಗಿ ಸ್ವಾವಲಂಬನೆ ಹಾಗೂ ಸ್ವಾತಂತ್ರ್ಯಗಳತ್ತ ಚಲಿಸಿದಳು. ದಶಕಗಳು ಸರಿದಂತೆ ಬದಲಾಯಿಸುತ್ತ ನಡೆದ ಅವಳ ಸ್ಥಾನಮಾನವು, 19ನೆಯ ಶತಮಾನದ ಮೊದಲ ಭಾಗ ಹಾಗೂ ಮಧ್ಯ ಕಾಲದಲ್ಲಿ ಕಳೆದುಹೋಗಿತ್ತು. ಅದನ್ನು ನಂತರ ಹೇಗೋ ಮತ್ತೆ ಸಂಪಾದಿಸಿಕೊಂಡಿದ್ದಳು. ನಂತರ ಭಾರತದಲ್ಲಿ, ಮಹಿಳೆಯ ಸ್ಥಾನಮಾನವು ಹೆಚ್ಚಿದಂತೆ ತೋರುತ್ತದೆ.
ಆದರೂ, ಹಳ್ಳಿಗಳಲ್ಲಿಯ ಅಥವಾ ಕೆಳಜಾತಿಗಳಲ್ಲಿಯ ಸಾಕಷ್ಟು ಸಂಖ್ಯೆಯ ಮಹಿಳೆಯರು ಈಗಲೂ ಅನ್ಯಾಯ ಹಾಗೂ ಅಸಮಾನತೆಗಳನ್ನು ಎದುರಿಸುತ್ತಲೇ ಇದ್ದು, ಅವರ ನಿಜವಾದ ಪರಿಸ್ಥಿತಿಯು ಈಗಲೂ ಶೋಚನೀಯವೇ ಆಗಿದೆ.
ನಾವು ಅವರತ್ತ ದೃಷ್ಟಿ ಹರಿಸಿದಲ್ಲಿ, ನಮಗೆ ಗೋಚರವಾಗುವಂಥ ಸತ್ಯವೆಂದರೆ, ಇಂದಿಗೂ ಹಳ್ಳಿಗಳಲ್ಲಿ ವಾಸಿಸುವ ಮಹಿಳೆಯರ ಜೀವನದಲ್ಲಿ ಸಾಮಾಜಿಕ ಬದಲಾವಣೆಗೆ ಮಹತ್ವವೇ ಇಲ್ಲದಿರುವುದು. ಸಾಕಷ್ಟು ಸಂಖ್ಯೆಯ ಮಹಿಳೆಯರಿಗೆ ಶಿಕ್ಷಣವೇ ಇಲ್ಲದಿರುವುದರಿಂದ ಅವರಲ್ಲಿ ಮೂಢನಂಬಿಕೆಗಳು ಬಲವಾಗಿವೆ. ಅವರು ದೇಶದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಜೀವನದಲ್ಲಿ ಭಾಗವಹಿಸಲು ಹಿಂಜರಿಯುತ್ತಾರೆ. ಗ್ರಾಮೀಣ ಮಹಿಳೆಯರು ಸಂಪ್ರದಾಯಗಳು, ಅನಕ್ಷರತೆ, ಅಜಾÐನ, ಮೂಢನಂಬಿಕೆ ಮುಂತಾದ ಸಾಮಾಜಿಕ ಅನಿಷ್ಟಗಳಿಂದಾಗಿ ಹಾಗೂ ಅನೇಕ ಇನ್ನಿತರ ಅಂಶಗಳಿಂದಲೂ ಹಿಂದುಳಿದಿದ್ದಾರೆ. ಆದ್ದರಿಂದ ದೇಶದ ಸಾಮಾಜಿಕ ಉನ್ನತಿಗಾಗಿ ಗ್ರಾಮೀಣ ಭಾರತದ ಮಹಿಳೆಯರು ಈ ಅನಿಷ್ಟಗಳಿಂದ ವಿಮೋಚನೆ ಹೊಂದುವುದು ಅವಶ್ಯವಾಗಿದೆ.
ಮುಂದುವರೆಯುತ್ತದೆ.

Leave a Reply