ಮಹಿಳಾ ಸಾಹಿತ್ಯ… ಅಂದು-ಇಂದು…
ಪ್ರಾಚೀನ ಕಾಲದಿಂದಲೂ ಮಹಿಳೆ ಇಡೀ ಜಗತ್ತಿನಲ್ಲಿಯೇ ಎರಡನೆಯ ದರ್ಜೆಯ ಪ್ರಜೆ ಎಂದು ಗುರುತಿಸಲ್ಪಟ್ಟವಳು. ಆಯಾ ಕಾಲದಲ್ಲಿ ರಚಿಸಲ್ಪಟ್ಟ ಧರ್ಮಗ್ರಂಥಗಳನ್ನು ಅನುಸರಿಸಿ “ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಾ”, ನ ಸ್ತ್ರೀ ಸ್ವಾತಂತ್ರ್ಯಮರ್ಹತಿ” ಮುಂತಾದ ಮಾತುಗಳನ್ನು ಅನುಸರಿಸುತ್ತ ಅವುಗಳಲ್ಲಿಯ ನಿಯಮಗಳನ್ನು ತಮ್ಮ ಮನಬಂದಂತೆ ತಿರುಚುತ್ತ ಈ ಪಿತೃಪ್ರಧಾನ ಕುಟುಂಬ ಪದ್ಧತಿ ತನ್ನ ದೌರ್ಜನ್ಯವನ್ನು ಅವಳ ಂಏಲೆ ಹೇರುತ್ತಲೇ ಬಂದಿದೆ.
ವೇದಕಾಲದಲ್ಲಿ ಸ್ತ್ರೀಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿತ್ತು ಎಂದು ಹೇಳಿ ಮೈತ್ರಿ, ಗಾರ್ಗಿ ಮುಂತಾದ ಕೆಲವೇ ಕೆಲವು ಬೆರಳೆಣಿಕೆಯಷ್ಟು ಹೆಸರುಗಳನ್ನು ಸೂಚಿಸುವರಾದರೂ ನಂತರದ ಯುಗದಲ್ಲಿ ಪುರುಷ ಮೇಲು, ಮಹಿಳೆ ಕೀಳು ಎಂಬ, ಅವಳು ಅವನು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕಾದವಳು. ಅವಳಿಗೇಕೆ ಶಿಕ್ಷಣ? ಅವಳು ಕೇವಲ ಭೋಗದ ವಸ್ತುವಾಗಿ ಬದುಕಬೇಕೆಂಬ ಧಾಷ್ಟ್ರ್ಯದ ನಡೆವಳಿಕೆ ಪುರುಷಲೋಕದಲ್ಲಿ ಕಂಡುಬಂದಿತು. ಹೀಗಾಗಿ ಸ್ತ್ರೀ ಸಾಹಿತ್ಯರಚನೆಯಲ್ಲಿ ಹಿಂದೆ ಬಿದ್ದಳು. ಅವಳು ಶಿಕ್ಷಣದಿಂದ ಅದರ ಮೂಲಕವಾದ ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ವಂಚಿತಳಾದಳು.
ಸಾವಿರದೈನೂರು ವರ್ಷಗಳ ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದಲ್ಲಿ 20ನೆಯ ಶತಮಾನದ ವರೆಗೂ ಮಹಿಳೆಯರು ರಚಿಸಿದ ಮಹಿಳಾ ಸಾಹಿತ್ಯದಲ್ಲಿ ವಿಶೇಷವಾದದ್ದೇನೂ ಕಂಡುಬರಲಿಲ್ಲ. ಶಿಕ್ಷಣವಂಚಿತಳಾದ ಸ್ತ್ರೀ ಪುರುಷ ಪ್ರಧಾನ ಜಗತ್ತಿನ ಸಾಮಾಜಿಕ ವ್ಯವಸ್ಥೆಯಲ್ಲಿ ಸಾರ್ವಜನಿಕ ಜೀವನದಲ್ಲಿ ಭಾಗಿಯಾಗುವ ಹೆಚ್ಚಿನ ಅವಕಾಶಗಳಿಂದ ವಂಚಿತಳಾದಳು. ಕನ್ನಡ ಸಾಹಿತ್ಯಚರಿತ್ರೆಯನ್ನು ಗಮನಿಸಿದಲ್ಲಿ 20ನೆಯ ಶತಮಾನದ ವರೆಗೂ ಯಾವುದೇ ಮಹಿಳೆ ತನ್ನ ಮನದ ತುಮುಲಗಳನ್ನು ಸಾಹಿತ್ಯದ ಮೂಲಕ ಹಂಚಿಕೊಂಡಿರುವ ಉದಾಹರಣೆಯಿಲ್ಲ. ಹದಿಬದೆಯ ಧರ್ಮದ ಸಂಚಿಯ ಹೊನ್ನಮ್ಮನೇ ಇರಲಿ, ಹೆಳವನಕಟ್ಟೆಯ ಗಿರಿಯಮ್ಮನೇ ಇರಲಿ, ಜಾನಪದ ಲೋಕದ ಗರತಿಯರೇ ಇರಲಿ, ಎಲ್ಲರೂ ಬರೆದಿರುವುದು ಕೇವಲ ತ್ಯಾಗದ ಉಪದೇಶ, ದೇವತೆಯಾಗಿ ಪರಿವರ್ತಿತವಾಗುವ ಹೆಣ್ಣಿನ ವ್ಯಕ್ತಿತ್ವ ಇತ್ಯಾದಿಗಳ ಬಗ್ಗೆಯೇ. ಹೆಣ್ಣೂ ಗಂಡಿನಂತೆಯೇ ಮನುಷ್ಯಜೀವಿ. ಅವಳಿಗೂ ಭಾವನೆಗಳಿವೆ, ಬೇಕು ಬೇಡಗಳಿವೆ, ಇಷ್ಟಾನಿಷ್ಟಗಳಿವೆಯೆಂಬುದನ್ನು ಅರಿಯುವ, ಅರುಹುವ ಅವಕಾಶವನ್ನೇ ಕೊಡಲಿಲ್ಲ. ಸಮಯವನ್ನೂ ನೀಡಲಿಲ್ಲ.
ಸುಮಾರು ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಮಹಿಳಾ ವಚನಕಾರ್ತಿಯಾಗಿ ಅಕ್ಕಮಹಾದೇವಿ ಮಾತ್ರ ಸ್ತ್ರೀ ಜಗತ್ತಿನ ತಲ್ಲಣಗಳಿಗೆ ದ್ವನಿಯಾಗಿ ನಿಲ್ಲುತ್ತಾಳೆ. ಅಕ್ಕಮಹಾದೇವಿಯನ್ನು ಕಾಡಿದ ಒಂದು ಪ್ರಧಾನಾಂಶವೆಂದರೆ ಜೈವಿಕತೆಯ, ಭೋಗದ ನೆಲೆಯಲ್ಲಿ ಮನುಷ್ಯರನ್ನು ಗಂಡಾಗಿ, ಹೆಣ್ಣಾಗಿ ಕಾಣುವಿಕೆ. ಇದನ್ನು ಆಕೆ ಮನದ ಸೂತಕವೆಂದೇ ಹೇಳುತ್ತಾಳೆ. ಅಂದಿನ ಕಾಲಘಟ್ಟ ಹಾಗೂ ಸಮಾಜವನ್ನು ದೃಷ್ಟಿಯಲ್ಲಿರಿಸಿಕೊಂಡು ನೋಡಿದಾಗ ಅಕ್ಕಮಹಾದೇವಿಯಿಂದ ಇಂಥ ವಿಭಿನ್ನ ಧ್ವನಿ ಹೊರಟಿರುವುದು ಗಮನಾರ್ಹ. ಹೆಣ್ಣನ್ನು ದೇಹವಾಗಿ ಕಾಣುತ್ತ ಅವಳ ವ್ಯಕ್ತಿತ್ವದ ಇತರ ಆಯಾಮಗಳನ್ನು ಅಲ್ಲಗಳೆಯುತ್ತ ಸಾಗಿದ್ದ ಚರಿತ್ರೆಗೆ ಅಕ್ಕನ ಬದುಕು ಒಂದು ಉತ್ತರವಾಗಿದೆ. ಹೆಣ್ಣು ದೇಹದೊಂದಿಗೆ ಹೆಣ್ಣಿನ ವ್ಯಕ್ತಿತ್ವವನ್ನು ಸಮೀಕರಿಸುವುದನ್ನು ಆಕೆ ವಿರೋಧಿಸುತ್ತಾಳೆ. ಆಕೆ ಹೆಣ್ತನಕ್ಕೆ ಲೋಕ ಹೊರಿಸಿದ ಮಿತಿಗಳನ್ನು ಮೀರುವ, ಮೀರಿದ್ದನ್ನು ಹೇಳುವ ಒಂದು ಪ್ರಯತ್ನವನ್ನು ಮಾಡುತ್ತಾಳೆ. ಇವೆಲ್ಲವುಗಳ ಜೊತೆಗೇ ಅದುವರೆಗಿನ ಸಮಾಜಕ್ಕೆ ಅಷ್ಟೇನೂ ಪರಿಚಿತವಲ್ಲದ ಸ್ತ್ರೀ ಬದುಕಿನ ಒಂದು ನೂತನ ಆಯಾಮವನ್ನು ಸ್ಥಾಪಿಸುವಲ್ಲಿ ಅಕ್ಕನ ಸತತ ಪ್ರಯತ್ನವಿದೆ. ಹೋರಾಟ ಸಾಧನೆಗಳಿವೆ.
ನಂತರದ ಸಂಚಿಯ ಹೊನ್ನಮ್ಮ ಪುರುಷಪ್ರಾಧಾನ್ಯತೆಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿರುವ, ಪುರುಷನ ಸಂತೋಷಕ್ಕಾಗಿ ಹೆಣ್ಣು ದುಡಿಯಬೇಕು, ಅಂದರೇ ಕುಟುಂಬದಲ್ಲಿ ಶಾಂತಿ ನೆಮ್ಮದಿಗಳು ಸಿಗುತ್ತವೆಂಬ ಅಭಿಪ್ರಾಯವನ್ನು ಹೊಂದಿ ಹದಿಬದೆಯ ಧರ್ಮವನ್ನು ರಚಿಸಿದಳಾದರೂ ಆಕೆಯಲ್ಲಿಯೂ ಹೆಣ್ಣಿನ ಮೇಲಾಗುವ ಅನ್ಯಾಯಗಳಿಗೆ ವಿರುದ್ಧವಾಗಿ ಒಂದು ಸಣ್ಣ ಪ್ರತಿಭಟನೆಯ ಎಳೆಯನ್ನು ನಾವು ಆಕೆಯ ಕೆಲವು ನುಡಿಗಳಲ್ಲಿ ಕಾಣುತ್ತೇವೆ. ಉದಾಹರಣೆಗಾಗಿ, “ಕುವರನಾದೊಡೆ ಬಂದ ಗುಣವೇನದರಿಂದ.. ಕುವರಿಯಾದೊಡೆ ಕುಂದೇನು… ಹೆಣ್ಣು ಹೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು..” ಎಂಬ ಮೆಲುದನಿಯನ್ನು ಎತ್ತುತ್ತಾಳೆ.
ಜನಪದ ಗೀತೆಗಳ ರಚನೆಯ ಗರತಿಯರದೂ ಕೂಡ ಹೆಣ್ಣು ಪತಿಯ ಅನ್ಯಾಯಗಳಿಗೆ ಪ್ರತಿಯಾಗಿ ಕ್ಷಮಾಗುಣವನ್ನು ರೂಢಿಸಿಕೊಂಡು ಬಾಳಿದರೇ ಅವಳ ಬಾಳು ಹಸನು ಎಂಬ ಮಾತಿಗೇ ಹೆಚ್ಚಿನ ಒತ್ತು.
19ನೆಯ ಶತಮಾನದ ಸಾಂಸ್ಕೃತಿಕ ವಾತಾವರಣದಲ್ಲಿ ಮತ್ತೆ ಸ್ತ್ರೀಪರ ಆಲೋಚನೆಗಳು ಕಾಣಿಸಿಕೊಳ್ಳತೊಡಗಿದವು. ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಶಾಲಾಶಿಕ್ಷಣ ಪಡೆದ, ಸಾಹಿತ್ಯದಲ್ಲಿ ಒಂದಿಷ್ಟು ಆಸಕ್ತಿ ಹೊಂದಿದ ಸ್ತ್ರೀಯರು ಅಲ್ಲಲ್ಲಿ ಕಾಣಸಿಕ್ಕರೂ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡುವ ಧೈರ್ಯ ಮಾಡಿರಲಿಲ್ಲ. ಮಹಿಳೆಯರ ಪರವಾಗಿ ಪುರುಷರೇ ಬರೆಯಬೇಕಾದ ಸಂದರ್ಭ. ಮಹಿಳೆ ಹಾಗೂ ಪುರುಷರ ಜೀವನಾನುಭವಗಳು ವಿಭಿನ್ನ. ಪುರುಷನಿಗೆ ಮಾತೃತ್ವ, ಲೈಂಗಿಕತೆಯಂಥ ಸ್ತ್ರೀತ್ವದ ಅನುಭವಗಳ ಪರಿಚಯವಿರುವುದಿಲ್ಲ. ಅವನಿ ಬರೆಯುವುದು ಸ್ತ್ರೀಲೋಕದ ಅರಿವಿಲ್ಲದ ಸಾಹಿತ್ಯ. ಆಕೆಯ ಅಂತರಂಗದ ಖಾಸಗಿ ವಿಚಾರ, ಆಶೋತ್ತರ, ಮಹಿಳಾ ಅಭಿವ್ಯಕ್ತಿಇವು ಅವನಿಂದ ಬಹಳ ದೂರ. ಹೆಣ್ಣುತನಕ್ಕೆ ಅಂಟಿಸಿದ ಮಾದರಿಯ ಆತಂಕಗಳು ಬಹುಶಃ ಪುರುಷರನ್ನು ಕಾಡಿರಲಿಕ್ಕಿಲ್ಲವೇನೋ. ಇದೇ ಕಾರಣದಿಂದಾಗಿ ಆರಂಭಕಾಲದ ಮಹಿಳೆಯರು ತಮ್ಮ ಅನುಭವಗಳನ್ನು ನೇರವಾಗಿ ತೆರೆದುಕೊಂಡದ್ದು ತೀರಾ ಕಡಿಮೆಯೆನೋ. ತಮ್ಮ ಅಂತರಂಗದ ಆಳಕ್ಕಿಳಿದು ತಮ್ಮ ನಿಜವಾದ ಅನಿಸಿಕೆಗಳನ್ನು ಮುಟ್ಟಲು, ತೆರೆದಿಡಲು ಇದ್ದ ಹಿಂಜರಿಕೆ, ಪೀಳಿಗೆಯಿಂಧ ಪೀಳಿಗೆಗೆ ಹರಿದುಬಂದ ನೂರಾರು ಅನುಭವಗಳು ಅಭಿವ್ಯಕ್ತಗೊಳ್ಳಲು ಅವರಿಗೆ ಅದು ಸೂಕ್ತವಾದ ಸಮಯವೆನ್ನಿಸಿರಲಿಕ್ಕಿಲ್ಲವೇನೋ. ಮುಂದೆ 20 ನೆಯ ಶತಮಾನದಲ್ಲಿ ಮಹಿಳೆಗೆ ಶಿಕ್ಷಣದ ಬಾಗಿಲು ತೆರೆಯಿತು. ತಮ್ಮ ಬರಹದ ಧಾಟಿಯನ್ನು, ಧೋರಣೆಯನ್ನು ಬದಲಿಸಿಕೊಳ್ಳಲು ಮೊದಲ ಅವಕಾಶವೂ ದೊರೆಯಿತೆನ್ನಬಹುದು. ಆ ಕಾಲದಲ್ಲಿ ತಿರುಮಲಾಂಬಾ, ಸರಸ್ವತಿದೇವಿ ಗೌಡರ, ಶಾಂತಾಬಾಯಿ ನೀಲಗಾರ ಇವರು ಸಾಹಿತ್ಯ ರಚನೆಕಾರರಲ್ಲಿ ಪ್ರಮುಖರು. ಸಾಂತಾಬಾಯಿ ನೀಲಗಾರರು ಸದ್ಗುಣಿ ಕೃಷ್ಣಾಬಾಯಿ ಎಂಬ ಕಾದಂಬರಿಯನ್ನು ಬರೆದರು. ಅದು ಒಬ್ಬ ಉತ್ತಮ ಗೃಹಿಣಿಯಲ್ಲಿರಬೇಕಾದ ಗುಣಗಳನ್ನು ಪ್ರತಿನಿಧಿಸುವ ಕಾದಂಬರಿ. ಇವರು 20ನೆ ಯ ಶತಮಾನದ ಮೊದಲ ಕಾದಂಬರಿಕಾರ್ತಿ. ಇದರಲ್ಲಿ ಸ್ತ್ರೀಗೆ ವಿದ್ಯೆಯ ಮಹತ್ವದ ಬಗ್ಗೆ ಹೇಳಿದ್ದರೂ ಅವಳು ಪುರುಷನಿಗೆ ವಿದ್ಯೆಯ ಮೂಲಕವಾಗಿ ಹೇಗೆ ಸಹಕಾರಿಯಾಗಬಲ್ಲಳೆಂಬುವದಕ್ಕೇ ಹೆಚ್ಚಿನ ಒತ್ತನ್ನು ಕೊಡಲಾಗಿದೆ. ನಂತರ ತಿರುಮಲೆ ರಾಜಮ್ಮ, ಭಾರತಿ ಎಂಬ ಕಾವ್ಯನಾಮದಿಂದ ಅನೇಕ ನಾಟಕ, ವ್ಯಕ್ತಿಚಿತ್ರಗಳು, ರೂಪಕಗಳನ್ನು ಬರೆದರು. ಸಾಮಾಜಿಕ ವಾತಾವರಣ ಬದಲಾದಂತೆ ಸ್ತ್ರೀಯರು ತಮ್ಮ ಲೇಖನದ ಧಾಟಿಯನ್ನು ಬದಲಾಯಿಸಿಕೊಂಡರು. ಅದುವರೆಗೆ ಅದಿಗೆಮನೆಯಿಂಧ ಹೊರಬಾರದವರು ಈಗ ಸ್ವಾತಂತ್ರ್ಯ ಚಳುವಳಿಗಳಲ್ಲಿ ಸಕ್ರಿಯವಾಗಿ ಧುಮುಕಿದರು. ಸಮಾಜವೆಂಧರೆ ಕೇವಲ ಪುರುಷನಲ್ಲ, ಸತ್ರೀಯೂ ಆತನ ಹೆಗಲೆಣೇಯಾಗಿ ಬದುಕಬೇಕಾದಂಥ ಛಾತಿಯುಳ್ಳವಳು ಎಂಬ ಅರಿವು ಮೂಡತೊಡಗಿತು. ಈಗ ತಮ್ಮ ಮನದ ತುಮುಲಗಳನ್ನು ಅಭಿವ್ಯಕ್ತಗೊಳಿಸಲು ಈಗ ಅವರು ಹಿಂದೆ ಮುಂದೆ ನೋಡಲಿಲ್ಲ. ನಂತರದ ಪಿಳಿಗೆಯವರು ಶ್ಯಾಮಲಾದೇವಿ. ಇವರ ನಂತರ ಕೊಡಗಿನ ಗೌರಮ್ಮ, ಗಿರಿಬಾಲೆ ಅಂದರೆ ಸರಸ್ವತಿದೇವಿ ರಾಜವಾಡೆ, ಎಚ್ ವಿ ಸಾವಿತ್ರಮ್ಮನವರು ಬರುತ್ತಾರೆ. ಗಿರಿಬಾಲೆ ಹೆಸರಿನಿಂದ ಬರೆದ ಸರಸ್ವತಿದೆವಿ ರಾಜವಾಡೆಯವರು, ಕ್ರೌರ್ಯ, ಸ್ವಾರ್ಥ, ಬಡತನ, ಡಾಂಭಿಕತೆ, ಮೌಢ್ಯಗಳನ್ನು ಕಟುವಾಗಿ ಖಂಡಿದಿದವರು. ಅನ್ಯಾಯದ ವಿರುದ್ಧ ಬಂಡೇಳುವ ಗಟ್ಟಿತನವನ್ನು ನಾವಿಲ್ಲಿ ಕಾಣುತ್ತೇವೆ. ಮುಂದೆ ಶ್ಯಾಮಲಾದೇವಿ ಬೆಳಗಾಂವಕರರದು ಸಾಮಾಜಿಕ ಸಮಸ್ಯೆಗಳಿಗೆ ಕಲಾತ್ಮಕ ರೂಪವನ್ನೀಯುವ ಹವಣಿಕೆ. ಸಂಕಷ್ಟ ಪರಿಸ್ಥಿತಿಯಲ್ಲಿ ಪುರುಷರ ಪಲಾಯನವಾದ, ಸ್ವಾರ್ಥ, ಅವಿಶ್ವಾಸಗಳನ್ನು ಈ ಕೃತಿಗಳು ಗಮನಕ್ಕೆ ತಂದವು. ಹೆಣ್ಣಿನ ಮುಕ್ತಿಗೆ, ಸುಖಕ್ಕೆ ಗಂಡ-ಮನೆ-ಮಕ್ಕಳು ಮಾತ್ರವಲ್ಲ, ಅದರಿಂದಾಚೆಗೆ ಇನ್ನೂ ಒಂದು ವಿಶಾಲ ಜಗತ್ತಿದೆ ಎಂಬುದನ್ನು ಕಾತ್ಯಾಯಿನಿ ಎಂಬ ಲೇಖಕಿ ತಮ್ಮ ಒಂದೇ ಒಂದು ಕೃತಿಯಿಂದ ಹೇಳಿದರು. ನಂತರದಲ್ಲಿ ಶಾಂತಾದೇವಿ ಮಾಳವಾಡ, ಸರಸ್ವತಿದೇವಿ ಗೌಡರ, ಜಯದೇವಿತಾಯಿ ಲಿಗಾಡೆ, ಗೀತಾ ಕುಲಕರ್ಣಿ ಮುಂತಾದವರು ಸ್ತ್ರೀಯನ್ನು ಸಮಾನಭಾವದಿಂದ ಕಾಣಬೇಕೇ ಹೊರತು ಕನಿಕರದಿಂದಲ್ಲ ಎಂದು ಪ್ರತಿಪಾದಿಸಿ ಕಾದಂಬರಿ, ಕಥೆಗಳನ್ನು ಬರೆದರು. ಇದನ್ನು ಸಾಹಿತ್ಯಲೋಕದ ಒಂದು ಮೈಲಿಗಲ್ಲೆಂದೇ ಹೇಳಬಹುದು.
ನಂತರದಲ್ಲಿ ಬಂದವರು ಎಮ್. ಕೆ. ಇಂದಿರಾ, ತ್ರಿವೇಣಿ. ಎಮ್. ಕೆ ಇಂದಿರಾರವರು ವೇಶ್ಯಾಸಮಸ್ಯೆಯ ಬಗ್ಗೆ ಬರೆದ ಗೆಜ್ಜೆಪೂಜೆ ಕಾದಂಬರಿ ಮಹಿಳಾ ಮನೋಲೋಕದಲ್ಲಿ ಒಂದು ವಿಪ್ಲವವನ್ನೇ ತಂದಿತು. ತ್ರಿವೇಣಿಯವರು ಮನೋವೈಜ್ಞಾನಿಕ ಸಮಸ್ಯೆಗಳನ್ನು ತಮ್ ಕಾದಂಬರಿಗಳಲ್ಲಿ ಚರ್ಚಿಸಿದರು. ನಂತರದಲ್ಲಿ ಇವರದೇ ದಾರಿಯಲ್ಲಿ ಆದರೂ ಆಧುನಿಕತೆಯ ಪ್ರಭಾವವನ್ನು ಹೊತ್ತ ಕಾದಂಬರಿಕಾರ್ತಿಯರು ಎಚ್. ಜಿ. ರಾಧಾದೇವಿ, ಸಾಯಿಸುತೆ, ಅನುಪಮಾ ನಿರಂಜನ, ಉಷಾ ನವರತ್ನ ರಾಮ್. ಇವರೆಲ್ಲರ ಕಾದಂಬರಿಗಳಲ್ಲಿ ಆಧುನಿಕ ಮನೋಭಾವ ಹೊಂದಿರುವ ಮಹಿಳೆಯರ ಸಮಸ್ಯೆಗಳು, ಮಹಿಳಾ ಸ್ವಾತಂತ್ರ್ಯದ ಮಹತ್ವ, ಸ್ವೇಚ್ಛೆಗೂ ಸ್ವಾತಂತ್ರ್ಯಕ್ಕೂ ಇರುವ ಅಂತರದ ಬಗ್ಗೆ ವಿವರಿಸಿದವು. ಮಹಿಳೆಗೆ ಆಧುನಿಕತೆಯ ಜೊತೆಗೇ ಸಹನೆಯ ಮನೋಭಾವ, ಅನುಸರಿಸಿಕೊಂಡು ಹೋಗುವ ಸ್ವಭಾವಗಳ ಮಹತ್ವವನ್ನು ಇವರೆಲ್ಲರ ಕಾದಂಬರಿಗಳು ವಿವರಿಸಿದವು. ಇತ್ತೀಚಿನ ದಿನಗಳಲ್ಲಿ ಸಾರಾ ಅಬೂಬಕ್ಕರ್, ಸುಧಾ ಮೂರ್ತಿ, ನೇಮಿಚಂದ್ರ, ವೀಣಾ ಶಾಂತೇಶ್ವರ ಮುಂತಾದವರು ಮಹಿಳಾ ಕಾದಂಬರಿಗಾರ್ತಿಯರಲ್ಲಿ ಅಗ್ರಗಣ್ಯರು. 90ರ ದಶಕದ ನಂತರ ಮಹಿಳಾ ಲೇಖಕಿಯರು ಸಾಮಾಜಿಕ ಅಸ್ವಸ್ಥತೆಯನ್ನು ಹೋಗಲಾಡಿಸುವುದಕ್ಕಾಗಿ ಹೆಣಗಾಡುತ್ತಿದ್ದಾರೆ. ಆದರೂ ಒಲೆ ಬದಲಾಗಿದೆಯೇ ಹೊರತು ಬೆಂಕಿ ಮಾತ್ರ ಅದೇ ಪ್ರಖರತೆಯನ್ನು ಹೊಂದಿದೆ. ಇಂದಿಗೂ ಜಗತ್ತಿನ ಜನಸಂಖ್ಯೆಯ ಸುಮಾರು ಅರ್ಧದಷ್ಟು ಸಮಾನ ಸಂಖ್ಯೆಯನ್ನು ಹೊಂದಿರುವ ಮಹಿಳೆಯರು ಇಂದು ಕೂಡ ಯಾವುದೋ ಒಂದು ರೂಪದಲ್ಲಿ ಕೌಟುಂಬಿಕ, ಸಾಮಾಜಿಕ, ಆರ್ಥಿಕ, ನೈತಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಹಿಳೆ ಯಾವುದೇ ದೇಶದಲ್ಲಿರಲಿ, ಅವಳ ಸಮಸ್ಯೆಗಳು ಒಂದಿಷ್ಟು ಭಿನ್ನವೇ ಆಗಿರಲಿ, ಆದರೆ ಇದೆಲ್ಲಕ್ಕೂ ಮೂಲಕಾರಣ ಮಾತ್ರ ಲಿಂಗಭೇದ ಎನ್ನುವುದು ಮಾತ್ರ ಸತ್ಯಸ್ಯ ಸತ್ಯ. ಅವಳ ರೂಪ, ಬಣ್ಣ, ಯಾವುದೇ ಆಗಿರಲಿ, ಅವಳು ಅನುಭವಿಸಬೇಕಾಗಿರುವ ಹಿಂಸೆ, ಯಾತನೆ ಮಾತ್ರ ಒಂದೇ. ಅವರೆಲ್ಲರ ಕಣ್ಣೀರೂ ಉಪ್ಪೇ! ಹೆಣ್ಣು ಅನುಭವಗಳನ್ನು ತೆರೆದಿಡಲು ಬಾಲ್ಯದಲ್ಲಿ ಅಪ್ಪನ ಭಯ.. ನಂತರ ಗಂಡನ ಭಯ.. ಯಾರಾದರೂ ನಿಮ್ಮದೇ ಅನುಭವವೇ? ಎಂದು ಕೇಳಿಬಿಟ್ಟರೆ? ಇಂಥ ಸಂಕೋಚ, ಮುಜುಗರ, ಸಾರ್ವಕಾಲಿಕ ಎಂಬ ಭಾವನೆ ಹೆಣ್ಣಿಗೆ ಬಾರದಿದ್ದರೂ ಬರಲೇಬೇಕೆಂಬ ಕಟ್ಟಳೆಯ ಬರಹವನ್ನೇ ಜನರು ಹೆಣ್ಣಿನಿಂದ ನಿರೀಕ್ಷಿಸುವುದನ್ನೇ ಮಹಿಳೆ ಹೇಳಿದಳು. ಗಂಡಿನ ಮಾದರಿಗಳಿಗೆ, ಅವನ ನಿರೀಕ್ಷೆಗಳಿಗೆ ತಕ್ಕಂತೆಯೇ ಬರೆದಳು. ಗಟ್ಟಿಯಾಗಿ ನಿಂತವರು ಕೆಲವೇ ಲೇಖಕಿಯರು ಮಾತ್ರ. ಇನ್ನೂ ಬದಲಾಗಬೇಕಾದದ್ದು ಬಹಳಷ್ಟಿದೆ ಎಂದು ನನ್ನ ಭಾವನೆ.