ಲೋಕದಲ್ಲಿದ್ದರೂ ಲೌಕಿಕವನ್ನು ಗೆಲ್ಲು
‘‘ದ್ವೇಷ ಆಕಾಂಕ್ಷೆ ಹಾಗೂ ದ್ವಂದ್ವಭಾವಗಳನ್ನು ಗೆದ್ದವನು ನಿತ್ಯಸಂನ್ಯಾಸಿ. ಅವನು ಮಾತ್ರವೇ ಕರ್ಮಬಂಧನದಿಂದ ಸುಖವಾಗಿ ಕಳಚಿಕೊಳ್ಳಬಲ್ಲ’’ ಎಂದು ಕೃಷ್ಣನು ವಿವರಿಸುತ್ತಿದ್ದನಷ್ಟೆ?
ಗುರುಮುಖೇನ ವಿಧಿವತ್ತಾಗಿ ಸಂನ್ಯಾಸದೀಕ್ಷೆಯನ್ನು ಪಡೆದು, ಮಠದಲ್ಲೋ ಕಾಡಿನಲ್ಲೋ ವಾಸಿಸುವುದು ‘ಆಂತರಿಕ ತ್ಯಾಗ’ದ ಸಂಕೇತ, ಅಷ್ಟೆ. ಇಂತಹ ಸಂನ್ಯಾಸಿಯು ಕರ್ಮವನ್ನೂ ಫಲವನ್ನೂ ದ್ವೇಷಾಕಾಂಕ್ಷೆಗಳನ್ನೂ ತ್ಯಾಗ ಮಾಡುವುದು ಕಡ್ಡಾಯ. ಏಕೆಂದರೆ ಹಾಗೆಂದು ಅವರೇ ಜಗತ್ತಿನ ಮುಂದೆ ಪ್ರತಿಜ್ಞೆ ಮಾಡಿಯಾಯಿತಲ್ಲ! ಏಕಾಂತದಲ್ಲಿರುತ್ತಲೋ ತನ್ನಂತಹ ತ್ಯಾಗಿಗಳ ಸಂಗದಲ್ಲಿರುತ್ತಲೋ ಜಪ-ತಪ-ಬ್ರಹ್ಮಚರ್ಯ-ತತ್ತ ್ವಂತನೆಯಲ್ಲಿ ತೊಡಗಿರುವುದು ಅವರ ಸಹಜ ದಿನಚರಿ. ಲೋಕವ್ಯವಹಾರಗಳನ್ನು ಸಂಪೂರ್ಣ ಬಿಟ್ಟೇ ಬಿಡುವ ಅಥವಾ ಕೇವಲ ಲೋಕಕಲ್ಯಾಣಕ್ಕಾಗಿ ಒಂದಷ್ಟು ಬೋಧನೆ ಮಾರ್ಗದರ್ಶನಗಳನ್ನು ಮಾಡುವ ಜೀವನ ಅವರದು.
ಈ ಜೀವನಶೈಲಿಯು ಕಷ್ಟಕರವೇ. ತನುಮನಗಳನ್ನು ಅನುಕ್ಷಣವೂ ಶುದ್ಧವಾಗಿಟ್ಟುಕೊಳ್ಳುವುದು ಸುಲಭದ ಮಾತಲ್ಲ. ಲೋಕದಿಂದ ದೂರವಿದ್ದುಬಿಡುವುದು ಸುಲಭ. ಆದರೆ ಲೌಕಿಕವನ್ನು ಕೊಡವಿಕೊಳ್ಳುವುದು ಅಷ್ಟು ಸುಲಭವಲ್ಲ! ಲೋಕಶಿಕ್ಷಣದಲ್ಲಿ ತೊಡಗಿದರೆ, ಜನಧನಗಳ ಸಂಗವು ಅಂಟಿಕೊಂಡು ದಾರಿ ತಪ್ಪಿಸೀತು. ಹೀಗೆ ಅವರ ಕಷ್ಟ ಅವರಿಗೇ! ತ್ಯಾಗಕ್ಕೆ ಮುಂದಾಗುವವರೇ ವಿರಳರು, ಅವರಲ್ಲೂ ಚೆನ್ನಾಗಿ ನೆಲೆ ನಿಲ್ಲಬಲ್ಲವರು ಕೆಲವರೇ. ಅವರಲ್ಲೂ ಸಿದ್ಧಿಗೇರಬಲ್ಲವರು ಬೆರಳೆಣಿಕೆಯವರು ಮಾತ್ರವೇ. ಆದರೂ ಈ ಬಾಹ್ಯಸಂನ್ಯಾಸದಲ್ಲಿ ಕೆಲವು ಅನುಕೂಲಗಳುಂಟು. ಭಯ-ಭಕ್ತಿ-ಗೌರವಗಳಿಂದಾಗಿ ಜನಸಾಮಾನ್ಯರು ಅವರಿಂದ ಅಂತರವನ್ನು ಕಾಪಾಡಿಕೊಳ್ಳುತ್ತಾರೆ ಎನ್ನುವುದೇ ಆ ಅನುಕೂಲ.
ಆದರೆ ಮನೆಯಲ್ಲೇ ಉಳಿದು ‘ಆಂತರಿಕ ತ್ಯಾಗ’ ಮಾಡುವವರಿಗೆ ಈ ಅನುಕೂಲ ಇರದು. ಮನೆಯಲ್ಲಿರುವವನು ‘ನನಗೆ ವ್ಯವಹಾರ ಬೇಡ’, ‘ಒಡನಾಟ ಬೇಡ’, ‘ಕೇವಲ ಸಾಧುಸಜ್ಜನರ ಸಂಗದಲ್ಲೇ ಇರುತ್ತೇನೆ’ ಎಂದರೂ ಆಗದ ಮಾತು. ಗೃಹಸ್ಥನೆಂದ ಮೇಲಂತೂ ಅನುಕೂಲಿಗಳಾಗಲಿ ಪ್ರತಿಕೂಲಿಗಳಾಗಲಿ ಮನೆಮಂದಿಯೊಂದಿಗೂ,
ಅಕ್ಕಪಕ್ಕದವರೊಂದಿಗೂ, ಬಂಧು – ಮಿತ್ರ – ಸಹೋದ್ಯೋಗಿಗಳೊಂದಿಗೂ ಸಾರ್ವಜನಿಕ ವ್ಯವಹಾರಗಳಲ್ಲೂ ಬಗೆಬಗೆಯ ಜನರ ಒಡನಾಟದಲ್ಲಿ ಇರಲೇಬೇಕಾಗುತ್ತದೆ! ಬಗೆಬಗೆಯ ಮನೋವೃತ್ತಿಯ ಜನರ ಸಂಪರ್ಕವು ಇವರ ಮೇಲೆ ಹೆಚ್ಚಾಗಿಯೇ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ.
ಕಟ್ಟಿಕೊಂಡ ಕರ್ತವ್ಯವನ್ನೂ ಪರಿವಾರವನ್ನೂ ಉದ್ಯೋಗವನ್ನೂ ಬೇಕು-ಬೇಡ ಎಂದು ಬಗೆಯುವುದು ಸಾಧುವೂ ಅಲ್ಲ, ಸಾಧ್ಯವೂ ಇಲ್ಲ (ಅತ್ಯುನ್ನತ ವೈರಾಗ್ಯವನ್ನು ಸಂಪಾದಿಸಿದ ಮಹಾಯೋಗಿಗಳಿಗೆ ಈ ನಿರ್ಬಂಧಗಳು ಅನ್ವಯಿಸುವುದಿಲ್ಲ – ಆತ್ಮಾರ್ಥೇ ಪೃಥಿವೀಂ ತ್ಯಜೇತ್). ಹೀಗಿರುವಾಗ ‘ಆಂತರಿಕ ತ್ಯಾಗ’ ಮಾಡುವುದು ಬಹಳ ಕಷ್ಟವೇ. ಬೇಕೋ ಬೇಡವೋ ಕುಲ-ಮತ-ಪಂಥಗಳ ಪಟ್ಟಿಗಳು ತಗುಲಿಕೊಂಡೇ ಇರುತ್ತವೆ. ಹೊನ್ನು-ಹೆಣ್ಣು-ಮಣ್ಣುಗಳ ಆಕರ್ಷಣೆಯು ಕಣ್ಣಮುಂದೆ ಸುಳಿದಾಡುತ್ತಿರುತ್ತದೆ. ಇವೆಲ್ಲದರ ನಡುವೆ ನಿರ್ಲಿಪ್ತವಾಗಿದ್ದು ‘ನಿತ್ಯಸಂನ್ಯಾಸಿ’ ಎನಿಸುವುದು ಆಸಿಧಾರಾವ್ರತವೇ ಸರಿ! (ಆಸಿಧಾರಾವ್ರತ ಎಂದರೆ ಕತ್ತಿಯ ಅಲಗಿನ ಮೇಲೆ ನಡೆದಷ್ಟು ಅಪಾಯಕಾರಿ ಹಾಗೂ ಕಷ್ಟದ ವ್ರತ ಎಂದರ್ಥ.) ಬಾಹ್ಯತ್ಯಾಗವನ್ನು ಮಾಡಿಬಿಡಬಹುದು, ಆದರೆ ಆಂತರಿಕ ತ್ಯಾಗವು ಕಷ್ಟತರವಾದದ್ದು.
ಕಾಷಾಯವೇಂ ತಪಸು? ಗೃಹಲೋಕನಿರ್ವಾಹ |
ವೇಷತಾಳದ ತಪಸು, ಕಠಿನತರ ತಪಸು ||
ಲೇಸಿನಿಂದದು ಸಾಗೆ ಬೇಕು ಶಮ ದಮ ಸಮತೆ |
ಆಸಿಧಾರವ್ರತವೊ ಮಂಕುತಿಮ್ಮ ||
ಆದರೆ ‘ಆಂತರಿಕ ತ್ಯಾಗವೊಂದೇ ದಾರಿ’ ಎನ್ನುವುದನ್ನೇ ಕೃಷ್ಣನು ಮೊದಲಿನಿಂದಲೂ ಒತ್ತಿಹೇಳುತ್ತಿದ್ದಾನೆ. ಕರ್ಮಯೋಗದ ಮರ್ಮವನ್ನರಿಯದವರು ಬಾಹ್ಯದ ವ್ಯಕ್ತಿ-ವಸ್ತು-ಸಂದರ್ಭಗಳಿಗೆ ಅಂಟಿಕೊಂಡು ಮೋಹವಶರಾಗುತ್ತಾರೆ, ವಿವೇಕವನ್ನು ಕಳೆದುಕೊಂಡು ಕರ್ಮಬಂಧನಕ್ಕೆ ಬೀಳುತ್ತಾರೆ. ಆದರೆ ಕರ್ಮಯೋಗದ ನಯವನ್ನರಿತವರು ಜಾಣರು! ಯಾವ ಪರಿವಾರ-ಲೋಕವ್ಯವಹಾರಗಳಲ್ಲಿ ಅಜ್ಞರು ಸಿಲುಕಿ ಒದ್ದಾಡುತ್ತಾರೋ, ಕರ್ಮಯೋಗಿಗಳು ಅದೇ ಪರಿವಾರ-ಲೋಕವ್ಯವಹಾರಗಳನ್ನೇ ಬಳಸಿ ಕರ್ಮಬಂಧನದಿಂದ ಕಳಚಿಕೊಳ್ಳುತ್ತಾರೆ! ಯಾವುದಕ್ಕೂ ಯಾರಿಗೂ ಅಂಟಿಕೊಳ್ಳದೆ, ಮೋಹವನ್ನು ದೂರವಿಡುತ್ತ ಮತಿ-ಮನಗಳನ್ನು ಶುದ್ಧವೂ ಶಕ್ತವೂ ಆಗಿರುವಂತೆ ಕಾಪಾಡಿಕೊಳ್ಳುವುದರಲ್ಲಿ ಅವರು ಚತುರರು.
ಲೋಕವು ತನ್ನ ಪಾಡಿಗೆ ತಾನಿರುತ್ತದೆ. ಅದು ಬಂಧಿಸುವುದೂ ಇಲ್ಲ, ಬಿಡುಗಡೆ ಮಾಡುವುದೂ ಇಲ್ಲ. ಆದರೆ ಲೋಕದಲ್ಲಿ ತೊಡಗುವ ನಮ್ಮ ಮತಿಮನಗಳೇ ನಮ್ಮನ್ನು ಅಲ್ಲಿಗೆ ಕಟ್ಟಿಹಾಕುವುದು ಅಥವಾ ಬಿಡಿಸುವುದು ಎನ್ನುವುದು ಇದರಿಂದಲೇ ಸ್ಪಷ್ಟವಾಗುತ್ತದೆ. ಸುಮ್ಮನೆ ಜಗತ್ತನ್ನೂ ಸಂಸಾರವನ್ನೂ ಹಳಿಯುವ ಬದಲು, ಅದರಿಂದಲೇ ‘ಕಲಿಯಲು’, ‘ಕಳಿಯಲು’ ಜಾಣರಾಗುವಂತೆ ಗೀತಾಚಾರ್ಯನು ಪ್ರೇರಣೆಯೀಯುತ್ತಿದ್ದಾನೆ.
ನಾವು ಕಲಿಯಲು ಸಿದ್ಧರಾದರೆ ಸಾಕು – ಸಂಸಾರದ ಏಳು-ಬೀಳು, ಆಶೆ-ನಿರಾಶೆ, ಸಂಯೋಗ-ವಿಯೋಗಗಳೆಲ್ಲ ನಮಗೆ ಬೇಕಾದಷ್ಟು ಪಾಠ ಕಲಿಸುತ್ತವೆ! ಜೀವನ-ಜಗತ್ತುಗಳ ಅನಿಶ್ಚಿತ ಗತಿಯೇ ಮೂರ್ತಜಗತ್ತಿನ ಅನಿತ್ಯತೆಯನ್ನೂ, ನಿತ್ಯತತ್ತ ್ವ ಹೊಳಹನ್ನೂ ನಮ್ಮೊಳಗೆ ಕ್ರಮೇಣ ಮೂಡಿಸುವುದರಲ್ಲಿ ಸಂದೇಹವೇ ಇಲ್ಲ! ಕಗ್ಗದ ಪದ್ಯ ಹೇಳುತ್ತದೆ;
ಮನೆಯೆ ಮಠವೆಂದು ತಿಳಿ, ಬಂಧು ಬಳಗವೆ ಗುರುವು |
ಅನವರತಪರಿಚರ್ಯುಯವರೊರೆವ ಪಾಠ ||
ನಿನಗುಳಿದ ಜಗವ ಮುಟ್ಟಿಪ ಸೇತು ಸಂಸಾರ |
ಮನಕೆ ಪುಟಸಂಸ್ಕಾರ – ಮಂಕುತಿಮ್ಮ ||
ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ