ಕುಣಿಯಬೇಕೆಂದರೆ- ತನು ದಣಿಯಬೇಕು

 

ದೇಹದ ಕಣಕಣವೂ ನೃತ್ಯಕ್ಕೆ ಸ್ಪಂದಿಸಬೇಕೆಂದರೆ ದೇಹ-ಮನಸಿನ ನಡುವೆ ಆ ಸಮನ್ವಯತೆಯನ್ನು ಸಾಧಿಸಬೇಕು. ಅದಕ್ಕಾಗಿ ತಿನ್ನುವ ಆಹಾರ, ತಳಿಯುವ ಆಲೋಚನೆ, ದೇಹದ ಚಲನವಲನದಲ್ಲೂ ಶಿಸ್ತು ಮೂಡಬೇಕು ಎನ್ನುವ ‘ನಿದಂ’ ನೃತ್ಯಶಾಲೆಯ ನಿರ್ದೇಶಕಿ, ನಾಟ್ಯಕಲಾವಿದೆ ಪೂರ್ಣಿಮಾರಜಿನಿ, ನಾಟ್ಯಶಾಸ್ತ್ರದ ಪ್ರಮುಖ ಆಯಾ ಮಗಳಾದ ಯೋಗ-ಧ್ಯಾನ-ದೇಹದಂಡನೆಯ ಬಗ್ಗೆ ಮಾತಾಡಿದ್ದಾರೆ. ಕುಣಿಯಬೇಕೆಂದರೆ ಸುಮ್ಮನೇ ಅಲ್ಲರಿ. ತನುವೂ-ಮನವೂ ಬೆರೆಯಬೇಕು. ಉಲ್ಲಾಸವೂ-ಉತ್ಸಾಹವೂ ಮೈದುಂಬಬೇಕು. ದೇಹದ ಕಣಕಣದಲ್ಲೂ ಲಾವಣ್ಯ ತುಂಬಬೇಕು; ನಡಿಗೆ, ಕಣ್ಣೋಟ, ಕೈಬೆರಳು, ಕತ್ತಿನ ತಿರುಪಿನಲ್ಲೂ ಲಾಲಿತ್ಯ ಮೂಡಬೇಕು. ಅದಕ್ಕಾಗಿ ನೃತ್ಯಶಾಸ್ತ್ರದ ಆರಂಭದ ಅಧ್ಯಾಯದಲ್ಲಿಯೇ ಯೋಗ-ಧ್ಯಾನ-ವ್ಯಾಯಾಮ-ಆಹಾರದ ಬಗ್ಗೆ ಉಲ್ಲೇಖವಿದೆ. ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಭರತಮುನಿ ತಿಳಿಸಿಕೊಟ್ಟ ಈ ಪಾಠವನ್ನೇ ನಾವಿಂದು ಆಧುನಿಕ ಭಾಷೆಯಲ್ಲಿ ‘ಫಿಟ್‌ನೆಸ್‌’ ಮತ್ತು ‘ಡಯಟ್’ ಎನ್ನುತ್ತೇವೆ. ನೃತ್ಯ ಪ್ರಕಾರ ಯಾವುದಾದರೂ ಇರಲಿ- ಭರತನಾಟ್ಯ, ಮೋಹಿನಿ ಆಟ್ಟಂ, ಕಥಕ್ಕಳಿ, ವೆಸರ್ನ್ ಶೈಲಿ, ಬೆಲ್ಲಿ ಡಾನ್ಸ್ ಯಾವುದಕ್ಕೂ ಮೈಮನ ಅರಳಬೇಕು, ಬೇಕೆಂದ ಹಾಗೆ ಬಳುಕಬೇಕು. ಇದೆಲ್ಲಾ ತನ್ನಿಂದ ತಾನೇ ಆಗುವಂಥದ್ದಲ್ಲ. ನಮ್ಮನ್ನು ನಾವೇ ದಣಿಸಿಕೊಳ್ಳಬೇಕು. ಅದರಲ್ಲೂ 35 ದಾಟಿದ ಮೇಲೆ ಕಲಾವಿದರು ತುಸು ಹೆಚ್ಚೇ ಮೈಮುರಿಯಬೇಕು. ಊಟ ತಿಂಡಿಯಲ್ಲೂ ತಾಳ್ಮೆ ಬೇಕು. ನಾಲಿಗೆ ಬಯಸಿದ್ದನ್ನೂ, ಮನಸು .ಕೇಳಿದ್ದನ್ನು ಒದಗಿಸಲಾಗದು. ನಮ್ಮ ಉಸಿರಾಟದಿಂದ ಹಿಡಿದು ಬೆರಳು-ಮಂಡಿಯ ಕೀಲುಗಳೂ, ಕಣ್ಣಿನ ಚಲನೆ, ಹುಬ್ಬಿನ ಏರಿಳಿದವರೆಗೂ ದೇಹದ ಎಲ್ಲಾ ಭಾಗಗಳೂ ನಾವು ಹೇಳಿದ ತಕ್ಷಣ ನಮ್ಮ ನಿರ್ದೇಶನವನ್ನು ಪಾಲಿಸಬೇಕು. ನೃತ್ಯದ ಎಲ್ಲಾ ಮೂಡ್ ಗಳಿಗೂ ಕ್ಷಣಾರ್ಧದಲ್ಲಿ ಸ್ವಿಚ್ ಓವರ್ ಆಗುವುದೆಂದರೆ ಸುಮ್ಮನೇ ಅಲ್ಲ. ಈ ಕ್ಷಣಕ್ಕೆ ರಾವಣನಾಗಿದ್ದವರು, ಮರು ಕ್ಷಣಕ್ಕೆ ರಾಮನೂ ಆಗಬೇಕು, ಸೀತೆಯೂ ಆಗಬೇಕಲ್ಲ… ಆ ಪಾತ್ರಗಳ ಆಂಗಿಕ ಹಾವಭಾವ, ನಡೆನುಡಿ, ಲಾಲಿತ್ಯ, ಗಾಂಭೀರ್ಯಗಳನ್ನು ತಕ್ಷಣಕ್ಕೆ ಮೈಮೇಲೆ ಎಳೆದುಕೊಳ್ಳಬೇಕು. ಇದನ್ನೆಲ್ಲಾ ಮಾಡಲು ದೇಹ-ಮನಸ್ಸು ಎರಡೂ ನಮ್ಮ ಮಾತು ಕೇಳುವಂತಿರಬೇಕು. ಭರನಾಟ್ಯದ ಕೆಲವು ಝಲಕ್ ಗಳಲ್ಲಿ ಅರೆಮಂಡಿಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಬೆನ್ನುಹುರಿಯನ್ನು ನೇರವಾಗಿಟ್ಟು ಕೊಂಡು, ಕಾಲಬೆರಳಿನ ಮೇಲೆಯೇ ಇಡೀ ದೇಹದ ಭಾರ ಹೇರಿ ಕೂರಬೇಕು. ಇದಕ್ಕಾಗಿ ಬಹಳ ಹೆಚ್ಚಿನ ತ್ರಾಣಶಕ್ತಿಯ ಅಗತ್ಯಬೀಳುತ್ತದೆ. ಹಿಮ್ಮಡಿಯ ಎಲುಬುಗಳಲ್ಲಿ, ಕಾಲಿನ ನರಗಳಲ್ಲಿ, ಬೆನ್ನಿನ ಹುರಿಯಲ್ಲಿ ಕಸುವಿರಬೇಕು. ಇದನ್ನೆಲ್ಲಾ ಸಾಧಿಸಲು ಕೆಲವು ನಿರ್ದಿಷ್ಟ ವ್ಯಾಯಾಮಗಳಿರುತ್ತವೆ. ಯೋಗ-ಧ್ಯಾನ-ವ್ಯಾಯಾಮಗಳು ನೃತ್ಯಾಭ್ಯಾಸದ ಪ್ರಮುಖ ಆಯಾಮಗಳು. ಇದಿಲ್ಲದೇ ನೃತ್ಯದ ಪಾಠಗಳು ಆರಂಭವಾಗುವುದೇ ಇಲ್ಲ. ನೃತ್ಯಪಟುಗಳಿಗೆ ದೇಹವೇ ಒಂದು ವಾದ್ಯ. ಅದರಿಂದ ನಮಗೆ ಬೇಕಾದ ತರಂಗಗಳನ್ನು ಹೊರಡಿಸಬೇಕೆಂದರೆ ಮೊದಲು ಅದನ್ನು ಸುಸ್ಥಿತಿಯಲ್ಲಿಡಬೇಕು. ತ್ರಾಣಶಕ್ತಿ ಉದ್ದೀಪನಕ್ಕೂ ವ್ಯಾಯಾಮ ಒಂದು ವೇದಿಕೆಯ ಮೇಲೆ ನಿಂತು ನಿರಂತರವಾಗಿ ಎರಡು ಗಂಟೆ ಪ್ರದರ್ಶನ ನೀಡುವುದೆಂದರೆ ಸುಮ್ಮನೇ ಅಲ್ಲ. ಆ ಎರಡು ಗಂಟೆಯಲ್ಲಿ ನಾವು ನಾಲ್ಕಾರು ಪಾತ್ರಗಳ ಪರಕಾಯ ಪ್ರವೇಶ ಮಾಡಬೇಕು. ಮನಸ್ಸೂ-ದೇಹವೂ ಆಯಾಯ ಪಾತ್ರಕ್ಕೆ ಕ್ಷಣಮಾತ್ರದಲ್ಲಿ ಸ್ವಿಚ್ ಆಗಬೇಕು. ಅದಕ್ಕಾಗಿ ನೃತ್ಯ ಕಲಾವಿದರಿಗೆ ಮಾಂತ್ರಿಕ ರೀತಿಯ ಸಾಮರ್ಥ್ಯ, ದೇಹಬಲ, ಮನೋಬಲ, ಸಹನಶಕ್ತಿ, ಚೈತನ್ಯ ಬೇಕು. ಅದರಲ್ಲೂ ಮಹಿಳಾ ಕಲಾವಿದರು ಈ ಸೃಷ್ಟಿ ತಮಗಾಗಿ ಕೊಟ್ಟ ವಿಶೇಷ ಸ್ಥಿತಿಗಳಲ್ಲಿಯೂ ದಣಿವು-ಆಯಾಸ-ಅನನುಕೂಲಗಳಂತಹ ವೈಪರಿತ್ಯಗಳನ್ನು ಸಹಿಸಿಯೂ ಮತ್ತದೇ ತ್ರಾಣಶಕ್ತಿಯೊಂದಿಗೆ ವೇದಿಕೆಗೆ ಬಂದು ನಿಲ್ಲುವ ದಾರ್ಢ್ಯ, ತಾಕತ್ತನ್ನು ಬೆಳೆಸಿಕೊಳ್ಳಬೇಕು. ಇದನ್ನು ಸಾಧಿಸಲು ಊಟೋಪಚಾರದ ಮೇಲೂ ಅಷ್ಟೇ ಹಿಡಿತವಿರಬೇಕು. ದೇಹವನ್ನು ಪುಷ್ಟಿಗೊಳಿಸಲು, ದೇಹದ ಪ್ರಕ್ರಿಯೆಗಳನ್ನು ನಿಯಂತ್ರಿಸಲು ಶಕ್ತಿದಾಯಕ ಆಹಾರಗಳನ್ನು ಸೇವಿಸಬೇಕು. ಕಾರ್ಬೋಹೈಡ್ರೇಟ್, ಕೊಬ್ಬು, ಪ್ರೋಟೀನ್ ಹಾಗೂ ವಿಟಮಿನ್ ಗಳ ಪರಿಪೂರ್ಣ ಆಹಾರಪದ್ಧತಿ ಇರಬೇಕು. ಮಕ್ಕಳಿಗೂ ಫಿಟ್‌ನೆಸ್‌ ಪಾಠ ಥೈಯ್ಯಾಥೈದ ಆರಂಭದಲ್ಲಿಯೇ ಮಕ್ಕಳಿಗೆ ಯೋಗ, ಧ್ಯಾನ, ಪ್ರಾಣಾಯಾಮ, ಮುದ್ರಾ, ಶಿಸ್ತು, ಏಕಾಗ್ರತೆಯಂತಹ ಅಧ್ಯಾಯಗಳನ್ನು ಕಲಿಸುವುದೂ ಇದೇ ಕಾರಣಕ್ಕೆ. ಮಕ್ಕಳಿರುವಾಗಲೇ ಅವರು ತಮ್ಮ ದೇಹ ಹಾಗೂ ಮನಸ್ಸಿನ ಸಮನ್ವಯತೆಯ ಅಗತ್ಯವನ್ನು ಅರ್ಥಮಾಡಿಕೊಂಡು, ಅದಕ್ಕೆ ಬೇಕಾದ ಕ್ರಮಗಳನ್ನು ಅನುಸರಿಸಿದರೆ ನೃತ್ಯ ಅವರಿಗೆ ಬಹುಬೇಗ ಒಲಿಯುತ್ತದೆ, ಆವರಿಸಿಕೊಳ್ಳುತ್ತದೆ. ದೈಹಿಕ-ಆಂಗಿಕ-ಮಾನಸಿಕ ಸ್ಥಿತಿಯನ್ನು, ಅಂದರೆ ಫಿಟ್ ನೆಸ್ ಸಾಧಿಸುವುದನ್ನು ಒಮ್ಮೆ ಕಲಿತರೆಂದರೆ ಅದು ಅವರೊಂದಿಗೆ ಬೆಳೆಯುತ್ತ ಹೋಗುತ್ತದೆ. ಇದೊಂದು ಸಮಗ್ರ ವಿಧಾನ. ನೃತ್ಯ ಮತ್ತು ಫಿಟ್ನೆಸ್ ಅನ್ನು ಬೇರೆಬೇರೆಯಾಗಿ ನೋಡಬೇಕಾಗಿಲ್ಲ. ಅವರೆಡೂ ಒಂದೇ. ನಾಟ್ಯಶಾಸ್ತ್ರದ ಭಾಗ ವ್ಯಾಯಾಮ ಇತರರ ಪಾಲಿಗೆ ಫಿಟ್‌ನೆಸ್‌ ಎನ್ನುವುದು ಒಂದು ವ್ಯಾಯಾಮ. ನೃತ್ಯಗಾರರಿಗೆ ಅದು ಸಮಗ್ರ ಅಧ್ಯಾಯದ ಒಂದು ಭಾಗ. ನಾಟ್ಯಶಾಸ್ತ್ರದಲ್ಲಿ ಈ ಬಗ್ಗೆ ಉಲ್ಲೇಖವಿದೆ. ಒಂದೊಂದು ಅಂಗಾಂಗಕ್ಕೂ, ಒಂದೊಂದು ಭಾವಕ್ಕೂ ಒಂದೊಂದು ವ್ಯಾಯಾಮವಿದೆ. ಆಂಗಿಕವು ಅಂಗ, ಉಪಾಂಗ ಮತ್ತು ಪ್ರತ್ಯಂಗಗಳ ಚಲನೆಯಿಂದ ಕೂಡಿದೆ. ಇವೆಲ್ಲ ತಮ್ಮ ತಮ್ಮ ಚಲನೆಗಳ ಸಾಧ್ಯತೆಗಳ ಅನುಸಾರ ಬೇರೆ ಬೇರೆ ‘ವ್ಯಾಯಾಮ’ಗಳೆಂದು ಲಕ್ಷಣೀಕೃತವಾಗಿವೆ. ನಾಟ್ಯಶಾಸ್ತ್ರವು ಇದನ್ನೆಲ್ಲ ಆಯಾ ಅಂಗೋಪಾಂಗಾನುಸಾರ ಶಿರೋಭೇದ, ಗ್ರೀವಾಭೇದ, ನೇತ್ರಭೇದ, ದೃಷ್ಟಿಭೇದ ಎಂಬಿತ್ಯಾದಿ ಸಂಜ್ಞೆಗಳಿಂದ ವರ್ಣಿಸಿದೆ.

“author”: “ಸುಶೀಲಾ ಡೋಣೂರ”,

courtsey:prajavani.net

https://www.prajavani.net/health/fitness-658880.html

Leave a Reply