ಕ್ರಮದಿಂದ ಯೋಗಸಿದ್ಧಿಗೆ ಏರು
ಡಾ. ಆರತೀ ವಿ. ಬಿ.
ಯತಾತ್ಮರೂ ಸರ್ವಜೀವರ ಹಿತಸಾಧಕರೂ ಆದ ಮೋಹರಹಿತರು ಬ್ರಹ್ಮನಿರ್ವಾಣ ಹೊಂದುತ್ತಾರೆ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನಷ್ಟೆ? ಮುಂದೆ ಹೇಳುತ್ತಾನೆ; ‘‘ಕಾಮಕ್ರೋಧಾದಿಗಳು ಇಲ್ಲದವರೂ, ಯತಿಗಳೂ, ಯತಚಿತ್ತರೂ, ಆತ್ಮವನ್ನು ತಿಳಿದವರೂ ಆದವರ ಪಾಲಿಗೆ ಸುತ್ತಲೂ ಬ್ರಹ್ಮನಿರ್ವಾಣವೇ ಇರುತ್ತದೆ!’’ (5.26)
ಕಾಮಕ್ರೋಧಗಳೇ ನಮ್ಮನ್ನು ಅನಿತ್ಯ ವಸ್ತು, ವ್ಯಕ್ತಿ, ಸ್ಥಾನಮಾನಾದಿಗಳ ಹುಚ್ಚಿನಲ್ಲಿ ಭ್ರಮಿಸುವಂತೆ ಮಾಡುವುದು. ಅನಿತ್ಯದಲ್ಲಿ ‘ಶಾಶ್ವತ ಸುಖ’ ಅರಸುವ ವ್ಯರ್ಥಪ್ರಯತ್ನದಲ್ಲಿ ಅಲೆಸುವುದು. ಈ ಕಾಮಾದಿಗಳು ಅಳಿದು ಯೋಗಕ್ಕೇರುವ ಯತ್ನವನ್ನೇ ‘ಯಮ / ಸಂಯಮ’ ಎನ್ನುವುದು. ಯಮದಿಂದ ಕಾಮಾದಿಗಳನ್ನು ಗೆದ್ದವನು ‘ಯತಿ’ ಅಥವಾ ‘ಯತಚಿತ್ತ’.
ಕಾಮಕ್ರೋಧಾದಿಗಳನ್ನು ಗೆದ್ದ ಸಂಯಮಿಗೆ ಯೋಗವು ಸಿದ್ಧಿಸಿ, ಆತ ಆತ್ಮದಲ್ಲಿ ನೆಲೆನಿಲ್ಲುತ್ತಾನೆ. ಆತ್ಮವನ್ನು ಅರಿತವನು ಅದರ ಸರ್ವವ್ಯಾಪಕತ್ವವನ್ನೂ ಅರಿಯುತ್ತಾನೆ. ‘ತಾನು’ ಕೇವಲ ‘ದೇಹ-ಮನಸ್ಸು-ಬುದ್ಧಿಗಳ ಗೂಡು’ ಎಂಬ ಭ್ರಮೆ ಅಳಿಯುತ್ತದೆ. ‘ತಾನು’ ಎನ್ನುವ ಈ ಕ್ಷಣಿಕ ಅಸ್ತಿತ್ವವು, ಪರಮಾತ್ಮವೆಂಬ ನಿತ್ಯ ಅಸ್ತಿತ್ವದಲ್ಲಿ ನೆಲೆಗೊಂಡಿದೆ ಎನ್ನುವ ಬೋಧೆಯಾಗುತ್ತದೆ. ‘ಬ್ರಹ್ಮವಿದ್ ಬ್ರಹ್ಮೆ ೖವ ಭವತಿ’ ಎಂಬಂತೆ ಜೀವನು ಅಳಿದು ಪರಮಾತ್ಮವೇ ಉಳಿಯುತ್ತದೆ. ಇಂತಹ ಸ್ಥಿತಿಗೇರಿದ ವ್ಯಕ್ತಿಯು ದೇಹಧಾರಣೆ ಮಾಡಿದ್ದರೂ, ಜಗತ್ತಿನಲ್ಲಿ ವ್ಯವಹರಿಸುತ್ತಿದ್ದರೂ, ತನ್ನೊಳಗೂ ಹೊರಗೂ ಕೇವಲ ಬ್ರಹ್ಮದ ಲೀಲೆಯನ್ನೇ ದರ್ಶಿಸುತ್ತಾನೆ! ಕಣ್ಣುಮುಚ್ಚಿ ಗಾಢಧ್ಯಾನದಲ್ಲಿ ಕಾಣುವ ಬ್ರಹ್ಮಚೈತನ್ಯವನ್ನೇ ಕಣ್ದೆರೆದು ವ್ಯವಹರಿಸುವಾಗಲೂ ಸುತ್ತಲ್ಲೂ ದರ್ಶಿಸುತ್ತಾನೆ! ಇದನ್ನೇ ‘ಜೀವನ್ಮುಕ್ತ’ನ ಸ್ಥಿತಿ ಎನ್ನುವುದು.
ಕೃಷ್ಣ ಮುಂದುವರಿಸುತ್ತಾನೆ; ‘‘ಬಾಹ್ಯಸ್ಪರ್ಶಗಳನ್ನು (ಇಂದ್ರಿಯಾನುಭವ) ಬಾಹ್ಯದಲ್ಲೇ ಬಿಟ್ಟು, ದೃಷ್ಟಿಯನ್ನು ಭ್ರೂಮಧ್ಯದಲ್ಲಿ ಕೀಲಿಸಿ, ಪ್ರಾಣಾಪಾನಾದಿ ಪಂಚಪ್ರಾಣಗಳನ್ನು ಸಮಸ್ಥಿತಿಗೆ ತರಿಸಿಕೊಂಡು, ಮೂಗಿನಲ್ಲಿ ಸಂಚರಿಸುವ (ಶ್ವಾಸೋಚ್ಛಾ್ವಸಗಳನ್ನು) ನಿಯಮಿಸಿ, ಇಂದ್ರಿಯ, ಮನಸ್ಸು, ಬುದ್ಧಿಗಳನ್ನು ಸಂಯಮದಲ್ಲಿರಿಸಿಕೊಂಡು, ಇಚ್ಛಾ, ಭಯ, ಕ್ರೋಧಗಳನ್ನು ಕಳಚಿಟ್ಟು, ಮೋಕ್ಷಪರಾಯಣನಾಗುವ ಮುನಿಯು ‘ಮುಕ್ತ’ನೇ ಸರಿ!’’ (5.27-28)
ಇಂದ್ರಿಯಗಳ ಮೂಲಕ ಹಾದುಹೋಗಿಬರುತ್ತಿರುವ ಮನೋಬುದ್ಧಿಗಳನ್ನು ನಿಯಮಿಸುವುದು ಅತಿ ಮುಖ್ಯ. ಇಂದ್ರಿಯಗಳನ್ನು ಹಿಡಿತದಲ್ಲಿರಿಸಿಕೊಂಡರೆ ಆ ಬಳಿಕ ಮನಸ್ಸು ಬುದ್ಧಿಗಳೆಲ್ಲ ಸಮಸ್ಥಿತಿಗೆ ಬರುತ್ತವೆ. ಇಂದ್ರಿಯಗಳನ್ನು ಹಿಡಿತಲ್ಲಿರಿಸಿಕೊಳ್ಳುವುದು ಎಂದರೆ ಕಣ್ಣು, ಕಿವಿ ನಾಲಗೆ ಮುಂತಾದವುಗಳಿಗೆ ಭೋಗಗಳನ್ನೊದಗಿಸದೆ ಸ್ವಲ್ಪ ಸಂಯಮವನ್ನು ಪಾಲಿಸುವುದು. ಬೇಕೆಂಬಾಗ ಭೋಗವೊದಗಿಸುವುದು. ಕಷ್ಟಪಟ್ಟು ಹೇಗೋ ಕಣ್ಣು-ಕಿವಿ-ನಾಲಗೆ ಮುಂತಾದವುಗಳನ್ನು ಉಪವಾಸವಿರಿಸಬಹುದು. ಆದರೆ ಮನಸ್ಸು-ಬುದ್ಧಿಗಳನ್ನು? ಊಹೂಂ! ಅಷ್ಟು ಸುಲಭವಲ್ಲ. ಅದಕ್ಕಾಗಿಯೇ ‘ಚಿತ್ತ-ವೃತ್ತಿ-ನಿರೋಧ’ದ ವ್ಯವಸ್ಥಿತ ಕ್ರಮಗಳನ್ನೇ ಯೋಗಶಾಸ್ತ್ರಗಳು ತಿಳಿಸುತ್ತವೆ. ನಮ್ಮ ಉಸಿರಾಟ, ಆಲೋಚನೆ, ಜೀರ್ಣಾದಿ ದೈಹಿಕಕ್ರಿಯೆಗಳನ್ನೆಲ್ಲ ನಿಯಮಿಸುವುದು ಪ್ರಾಣಾದಿ ಪಂಚರೂಪಗಳಲ್ಲಿ ಪ್ರವರ್ತಿಸುವ ಪ್ರಾಣಶಕ್ತಿ. ಇದನ್ನು ಸಮಸ್ಥಿತಿಗೆ ತರಲು ಯಮ, ನಿಯಮಾದಿ ಅಷ್ಟಸೋಪಾನಗಳನ್ನು ವಿಧಿಸಲಾಗಿದೆ. ಇದನ್ನೇ ಈ ಶ್ಲೋಕದಲ್ಲಿ ಕೃಷ್ಣನು ಸೂಚಿಸುತ್ತಿದ್ದಾನೆ. ‘ಇಂದ್ರಿಯಗಳನ್ನು ಯಮನಿಯಮಗಳ ಮೂಲಕ ಹಿಡಿತದಲ್ಲಿರಿಸಿ, ಆ ಬಳಿಕ ಪ್ರಾಣಾಯಾಮಾದಿಗಳ ಮೂಲಕ ಪಂಚಪ್ರಾಣಗಳನ್ನು ಸಮಸ್ಥಿತಿಗೆ ತರಿಸಿ, ಉಸಿರಾಟವನ್ನು ನಿಯಮಿಸಿ, ನಾಸಾಗ್ರದಲ್ಲಿ (ಮೂಗಿನಂಚಿನಲ್ಲಿ) ದೃಷ್ಟಿಯನ್ನು ಕೀಲಿಸಿ ಆತ್ಮಾನುಸಂಧಾನವನ್ನು ಮಾಡುವ ಕ್ರಮಯುತ ಅಭ್ಯಾಸ ಮಾಡಬೇಕು’ ಎನ್ನುವುದನ್ನು ಸೂಚಿಸುತ್ತಿದ್ದಾನೆ.
‘ಕೇವಲ ಭಕ್ತಿ, ತರ್ಕ, ಸೇವೆ ಕೈಂಕರ್ಯ ಸಾಲದೆ? ಈ ಯೋಗ, ಪ್ರಾಣಾಯಾಮಗಳೇಕೆ?’ ಎಂದೆಲ್ಲ ವಾದಿಸಬಹುದು. ಆದರೆ ನಮ್ಮದೇ ದೇಹ, ಮನಸ್ಸು, ಬುದ್ಧಿಗಳೂ ಪಂಚಪ್ರಾಣಗಳೂ ಉಸಿರಾಟವೂ ನಮ್ಮ ಮಾತು ಕೇಳದೆ, ತಪಸ್ಸಿಗೆ ವಿಘ್ನವನ್ನು ತಂದೊಡ್ಡುತ್ತಿದ್ದರೆ ಏನು ಮಾಡಲಾದೀತು? ದುರ್ಬಲ ದೇಹಿಗಳಿಗೆ ಭಕ್ತಿ, ಪೂಜೆ, ತರ್ಕ, ಧ್ಯಾನ, ಸೇವೆ ಕೈಂಕರ್ಯ ಮುಂತಾದ ಎಲ್ಲ ಪಥಗಳೂ ಕಷ್ಟವೇ! ದೇಹವನ್ನು ಘಂಟೆಗಳ ಕಾಲ ಸ್ಥಿರಸುಖಾಸನದಲ್ಲಿ ಕುಳ್ಳಿರಿಸಲು ಸಾಧ್ಯವಾದರೆ, ಆ ಬಳಿಕ ಲೌಕಿಕ ಹಾಗೂ ಲೋಕೋತ್ತರ ಸಾಧನೆಗಳೆಲ್ಲವೂ ಸಹಜವಾಗಿಯೇ ಸುಲಭವಾಗುತ್ತವೆ. ದುರ್ಬಲ ಮನವು ಭಕ್ತಿಗೆ ತೊಡಗಿದರೆ ತತ್ವವನ್ನು ಮರೆತು ಮೂಢನಂಬಿಕೆಗೆ ಜಾರುತ್ತದೆ. ದುರ್ಬಲ ಬುದ್ಧಿಯು ತರ್ಕಕ್ಕೆ ಇಳಿದರೆ ಅಹಮಿಕೆಯನ್ನು ಮೆರೆಯುತ್ತ ವಾಕ್ಕಲಹಕ್ಕಿಳಿಯುತ್ತದೆ. ದುರ್ಬಲ ವ್ಯಕ್ತಿಯು ಧ್ಯಾನಕ್ಕೆಂದು ಕಣ್ಣು ಮುಚ್ಚಿ ಕುಳಿತರೂ ಆತನ ಮನಸ್ಸು ವಿಶ್ವಪರ್ಯಟನ ಮಾಡುತ್ತದೆ! ಅಪಕ್ವಮತಿಯ ವ್ಯಕ್ತಿಯು ಉಪವಾಸ-ನೇಮಗಳನ್ನೆಲ್ಲ ಆಚರಿಸಿದರೂ, ಹವಿಶ್ಯಾನ್ನವನ್ನೇ ತಿನ್ನುತ್ತಿದ್ದರೂ, ಅಂತಮುಖವಾಗಲಾರ. ಅದರ ಬದಲು, ಹವಿಶ್ಯಾನ್ನವನ್ನು ತಿನ್ನದವರನ್ನೂ ಲೌಕಿಕರನ್ನೂ ಕಂಡು ಅಸಹ್ಯಪಡುತ್ತ, ಮೂದಲಿಸುತ್ತ, ಗೊಣಗಾಡುತ್ತ ತಮ್ಮ ‘ಅಹಮಿಕೆ’ಯನ್ನು ತಣಿಸಿಕೊಳ್ಳುತ್ತಾನೆ!
ಅನಿಯತ ದೇಹ-ಮನ-ಬುದ್ಧಿಗಳಿಂದ ಸಾಧನೆಗಿಳಿದವರು ‘ಧರ್ಮಧ್ವಜ’ರನ್ನು ನಾವು ಜಗತ್ತಿನಲ್ಲಿ ನೋಡುತ್ತೇವೆ. ಹಾಗಾಗದಂತೆ, ಮನುಷ್ಯನು ದೇಹವನ್ನೂ ಮನಸ್ಸು-ಬುದ್ಧಿಗಳನ್ನೂ ಕ್ರಮವರಿತು ನಿಯಂತ್ರಿಸಿಕೊಳ್ಳಲೆಂದೇ ಶಾಸ್ತ್ರೋಕ್ತಪದ್ಧತಿಗಳಿರುವುದು. ಅದನ್ನು ಅನುಸರಿಸಬೇಕೆಂದು ಸೂಚಿಸುವುದರ ಮೂಲಕ ಶಾಸ್ತ್ರೀಯತೆಯ ಪ್ರಾಮುಖ್ಯತೆಯನ್ನು ಕೃಷ್ಣನು ಪುಷ್ಟೀಕರಿಸುತ್ತಿದ್ದಾನೆ ಎನ್ನಬಹುದು.