ಕಿನ್ನರಿ ಜೋಗಿ…!
ಜಾನಪದ ಕಲಾಪ್ರಕಾರಗಳಲ್ಲಿ ಒಂದಾದ ಕಿನ್ನರಿ ನುಡಿಸುವುದು ಬದಲಾದ ಕಾಲ ಘಟ್ಟದಲ್ಲಿ ಅಪರೂಪವಾಗುತ್ತಿದೆ. ಮನೆಮನೆಗೆ ಹೋಗಿ ತಮ್ಮ ವೃತ್ತಿ ಕಲೆಯನ್ನು ಪ್ರದರ್ಶಿಸುವ ಕಿಂದರಿ ಜೋಗಿಗಳು ಕಿನ್ನರಿ ಬಾರಿಸುತ್ತಾ ಪುರಾಣದ ಕಥಾನಕಗಳನ್ನು ಇಂಪಾಗಿ ಹಾಡುವರು. ಹಿಂದೆಲ್ಲಾ ಜೋಗಿಗಳ ಕಿನ್ನರಿ ನುಡಿ ದೊಡ್ಡ ಮನರಂಜನೆಯಾಗಿತ್ತು. ಕಿನ್ನರಿ ಎನ್ನುವುದು ಒಂದು ಅಪೂರ್ವ ಜಾನಪದ ವಾದ್ಯ. ಕಿನ್ನರಿ, ಕಿನ್ನುಡಿ ಎನ್ನುವ ಹೆಸರುಗಳಿಂದಲೂ ಕರೆಯಲ್ಪಡುವ, ಬೆರಳುಗಳಿಂದ ನುಡಿಸಬಹುದಾದ ಈ ತಂತಿವಾದ್ಯದ ನಾದ ಅತ್ಯಂತ ಮುಧುರ ಮೋಹಕ, ಜನಪದ ಸಾಹಿತ್ಯದಲ್ಲಿ ಇದರ ಪ್ರಸ್ತಾಪ ಬಹಳಷ್ಟು ಕಡೆ ಬರುತ್ತದೆ. ಬೆಟ್ಟದ ಮ್ಯಾಗಳ ಜಲ್ಲೇ ಬಿದಿರು… ಬೇಲಿ ಮ್ಯಾಗಳ ಸೋರೆ ಬುರುಡೆ ಲೋ…! ಕಿನ್ನರಿ ನುಡಿಸೋರಯ್ಯ…! ಎಂಬ ಜನಪದರ ಹಾಡು ಬಹಳ ಜನಪ್ರಿಯ ಜಾನಪದದಲ್ಲಿ ಕಿನ್ನರಿಯ ನಾದಕ್ಕೆ ಮನಸೋತೆ ಹೆಣ್ಣು, ತನ್ನೆಲ್ಲ ಬಂಧು- ಬಾಂಧವರನ್ನು ತೊರೆದು ಕಿನ್ನರಿ ನುಡಿಸುವವನ ಹಿಂದೆ ಹೋಗಿ ಬಿಡುವ ಪ್ರಸಂಗ ರೋಚಕವೆನಿಸುವಂತೆ ಚಿತ್ರಿತವಾಗಿದೆ. ಕುವೆಂಪು ಅವರು ಮಕ್ಕಳಿಗಾಗಿ ಬರೆದ ‘ಕಿಂದರಿ ಜೋಗಿ…!” ಎನ್ನುವ ಪದ್ಯ ಕೂಡಾ ಮಕ್ಕಳನ್ನಷ್ಟೇ ಅಲ್ಲ, ದೊಡ್ಡವರನ್ನೂ ರಂಜಿಸುತ್ತದೆ.
ಹೊಸ್ಮನೆ ಮುತ್ತು