ಖಾಸನೀಸರ ಕಥಾ ಪರಿಚಯ

ಖಾಸನೀಸರ ಕಥಾ ಪರಿಚಯ

ಖಾಸನೀಸರ ಕಥಾ ಪರಿಚಯ

ಬಾಳಿನಲ್ಲಿ ಯಾವುದೂ ಕೇವಲ ಆಕಸ್ಮಿಕವಲ್ಲ ; ಎಲ್ಲವೂ ಪೂರ್ವ ನಿಯೋಜಿತವಾಗಿದೆ ಎಂದು ಖಾಸನೀಸರು ತಮ್ಮ ಐದು ಸುದೀರ್ಘ ಕಥೆಗಳಿಂದ ಓದುಗರನ್ನು ನಂಬಿಸಿಯೇ ಬಿಡುತ್ತಾರೆ.

ಇಂತಹ ಮಹಾನ್ ಲೇಖಕರ ಪುಸ್ತಕ ಪರಿಚಯ ಹಳೆಯ ಹಾಗು ಹೊಸ ತಲೆಮಾರಿನ ಓದುಗರಿಗೆ ಇದ್ದೆ ಇರುತ್ತದೆ, ಇವರ ಕಥೆಗಳನ್ನು ವಿಮರ್ಶೆ ಮಾಡಲು ನನಗೆ ಅರ್ಹತೆಯೂ ಇಲ್ಲ, ಆದ್ದರಿಂದ ನಾನು ಓದಿದೆ ಹೊತ್ತಿಗೆಯ ಅನುಭವವನ್ನು ನಿಮ್ಮ ಮುಂದೆ ಇಡಲು ಈ ಪೋಸ್ಟ್ ಮೂಲಕ ಪ್ರಯತ್ನಿಸುತ್ತಿದ್ದೇನೆ…

ಪ್ರಸಿದ್ಧಿ ಇಂದ ದೂರ ಉಳಿದ ಕನ್ನಡ ಸಾಹಿತಿಗಳ ಪೈಕಿ ರಾಘವೇಂದ್ರ ಖಾಸನೀಸರು ಒಬ್ಬರು. ಇವರು ಕನ್ನಡದ ‘ರುದ್ರವೀಣೆ ‘ಎಂದು ಶ್ರೀ ಕಿ. ರಂ. ನಾಗರಾಜರವರು ಹೇಳುತ್ತಾರೆ. ಇವರ ಕಥೆಗಳಲ್ಲಿ ಆಳವಾದ ಅರ್ಥವಿದೆ, ತಮ್ಮದೇ ಆದ ವಿಭಿನ್ನ ಕಥಾ ಶೈಲಿಯಿದೆ ಎಂದು ಅವರ ಅಭಿಪ್ರಾಯ . ಇವರ ಪ್ರತಿಭೆಯ ತೂಕಕ್ಕೆ ತಕ್ಕಂತೆ ಸಂದ ಬೇಕಾದ ಗೌರವ, ಪ್ರಖ್ಯಾತಿ, ಪ್ರಶಸ್ತಿ ತುಂಬಾ ಸಿಗಲಿಲ್ಲ ಏಕೆಂದರೆ ಇವರು ಪ್ರಚಾರ ಪ್ರಿಯರಾಗಿರಲಿಲ್ಲ ಎಂದು ಅವರ ಒಡನಾಡಿಗಳ ಅಂಬೋಣ.

ಪುಸ್ತಕ : ಖಾಸನೀಸರ ಕಥೆಗಳು

ಪ್ರಕಾಶಕರು : ಅಂಕಣ ಪ್ರಕಾಶನ

ಮೊದಲ ಮುದ್ರಣ 1984

1) ಅಪಘಾತ,  2) ತಬ್ಬಲಿಗಳು 3) ಅಲ್ಲಾ ಉದ್ದೀನನ ಅದ್ಭುತ ದೀಪ  4 ) ಹೀಗೂ ಉಂಟೆ..?  5) ಮೋನಾ ಲೀಸಾ..

ಈ ಪುಸ್ತಕವನ್ನು ನನ್ನ ತಂದೆಯ ಸಂಗ್ರಹದ್ದು, ಇದನ್ನು ಮೂರು ನಾಲ್ಕು ಸಾರಿ ಬೇರೆ ಬೇರೆ ವಯಸ್ಸಿನಲ್ಲಿ ಓದಿದ್ದೇನೆ. ಪ್ರತಿ ಸಾರಿ ಓದಿದಾಗಲು ಬದುಕಿನ ಕಟು ಸತ್ಯಗಳ ಹೊಸ ಹೊಸ ಆಯಾಮಗಳನ್ನು ತೋರಿಸುತ್ತ ಹೋಗುತ್ತವೆ. ಅದಕ್ಕೆ ಇಂತಹ ಕ್ಲಾಸಿಕ್ಸ್ ಗಳನ್ನು, ನಿಮ್ಮ ಸಂಗ್ರಹದಲ್ಲಿ ಜಪ್ಪಿಸಬೇಕು, ಆಗಾಗ ಓದುತ್ತಿರಬೇಕು, ಕೆಲವೊಂದು ಸಾಲುಗಳನ್ನು ಹೈಲೈಟರ್ ನಿಂದ ಮಾರ್ಕ್ ಮಾಡಬೇಕು ಎಂದು ನನ್ನ ಅನಿಸಿಕೆ.

ಶ್ರೀಯುತ ರಾಘವೇಂದ್ರ ಖಾಸನೀಸರು ಕನ್ನಡ ಸಾಹಿತ್ಯ ಲೋಕಕ್ಕೆ ಬರೀ ಒಂಭತ್ತು ಕಥೆಗಳನ್ನು ನೀಡಿದ್ದಾರೆ, ಆ ಎಲ್ಲ ಕಥೆಗಳು ಕ್ಲಾಸಿಕ್ಸ್ ಪಟ್ಟಿಗೆ ಸೇರ್ಪಡೆಯಾಗಿವೆ. ಕಥಾ ಸಂಕಲನದ ‘ತಬ್ಬಲಿಗಳು’ ಆಂಗ್ಲ ಹಾಗೂ ಹಿಂದಿ ಭಾಷೆಗೆ ಅನುವಾದಿಸಲ್ಪಟ್ಟಿದೆ. ಶತಮಾನದ ಶ್ರೇಷ್ಠ ಕಥೆಗಳಲ್ಲಿ ಇವರ ಕಥೆಯು ಇದೆ ಎನ್ನವುದು ಹೆಮ್ಮೆಯ ವಿಷಯ.

ಉತ್ತರ ಕರ್ನಾಟಕದ ಐತಿಹಾಸಿಕ ಗುಂಬಜ್ ನಗರಿ ಬಿಜಾಪುರದಲ್ಲಿ ಹುಟ್ಟಿ ಬೆಳೆದ ಲೇಖಕರಾದ ರಾಘವೇಂದ್ರ ಖಾಸನೀಸರ ಕಥೆಗಳಲ್ಲಿ ಉತ್ತರ ಕರ್ನಾಟಕ ಭಾಷಾ ಸೊಗಡು ಸಂಭಾಷಣೆ ರೂಪದಲ್ಲಿ ಸಿಗುತ್ತವೆ. ಈ ಭಾಷಾ ಶೈಲಿ ಇವರ ಕಥಾಲೋಕದಲ್ಲಿ ವಿಹರಿಸಲು ನನಗೆ ಇನ್ನಷ್ಟು ಹುರುಪು ನೀಡುತ್ತದೆ.

ಈ ಕಥೆಗಳ ಉಗಮವಾದಾಗ, ಅಥವಾ ಸಮಕಾಲಿನ ಕಥೆಗಳನ್ನು ನೋಡಿದಾಗ ಪುರುಷ ಪ್ರಾಧಾನ್ಯತೆ ಹೆಚ್ಚಿತ್ತು. ಪುರುಷರ ದಬ್ಬಾಳಿಕೆಯಲ್ಲಿ ನಲುಗಿದ ಸ್ತ್ರೀ ಪಾತ್ರಗಳನ್ನು ಓದಿದ್ದೇವೆ. ಅವುಗಳಿಗೆ ಸಹಾನುಭೂತಿ ತೋರಿಸಿದ್ದೇವೆ, ಅಯ್ಯೋ ಪಾಪ..! ಎಂದು ಹೆಣ್ಣಿನ ಅಸಹಾಯಕತೆಯ ಬಗ್ಗೆ ಅನುಕಂಪದ ಸಂತಾಪ ಸೂಚಿಸಿದ್ದೇವೆ, ಮಹಿಳಾ ಸಬಲೀಕರಣವಾಗಬೇಕು ಎಂದು ಕ್ರಾಂತಿಕಾರಿ ಉದ್ಘೋಷಗಳನ್ನು ಮಾಡಿದ್ದೇವೆ.

ಆದರೆ ರಾಘವೇಂದ್ರರ ಕಥೆಗಳಲ್ಲಿ ಸ್ತ್ರೀ ಪಾತ್ರಗಳಿಗೆ  ಕಿಂಚಿತ್ತೂ ಸಹಾನುಭೂತಿ ಮೂಡುವುದಿಲ್ಲವೇ… ಅಲ್ಲಿನ ಪ್ರಮುಖ ಸ್ತ್ರೀ ಪಾತ್ರಕ್ಕೆ , ಕೆಥೆಯಲ್ಲಿ ಬರುವ ಇತರೆ ಪಾತ್ರಗಳೊಂದಿಗೆ ನಾವೂ ಕೂಡ ನಮ್ಮ ಅಸಹನೆಯನ್ನು ವ್ಯಕ್ತ ಪಡಿಸಲು ಉದ್ಯುಕ್ತವಾಗುತ್ತೆವೆ. ಹೆಣ್ಣಿನ ಸ್ವಾರ್ಥ, ಮೋಹ, ಮದ ಮಾತ್ಸ್ಯರ, ಹಟ, ಭಂಡತನದಿಂದ ಸುಖಿಯಾಗಿ ಇರಬೇಕಾದ ಸಂಸಾರ ಮೂರಾಬಟ್ಟಿ ಆದ ನಿದರ್ಶನಗಳನ್ನು ಇವರ ಕಥೆಗಳಲ್ಲಿ ನೋಡುತ್ತೇವೆ. ಇಲ್ಲಿ ಯಾವುದು ಅತಿಶಯೋಕ್ತಿ ಅನಿಸುವುದಿಲ್ಲ. ನೈಜತೆ ಎದ್ದು ತೋರುತ್ತದೆ. ವಿಭಿನ್ನ ನಿರೂಪಣಾ ಶೈಲಿ, ಪುಸ್ತಕ ಕೆಳಗಿಡದಂತೆ ಓದಿಸಿಕೊಂಡು ಹೋಗುತ್ತದೆ….

ಇಬ್ಬರು ಸ್ತ್ರೀಯರ ಮಧ್ಯದಲ್ಲಿ ಸದಾ ನಡೆಯುವ ಘರ್ಷಣೆಯಿಂದ ಹೊತ್ತುವ ಕಿಡಿ, ಹೇಗೆ ಬೆಂಕಿಯಾಗಿ ಧಗ ಧಗ ಉರಿಯಲು ಪ್ರಾರಂಭಿಸುತ್ತದೆ ಎಂದು ಈ ಕಥೆಗಳಲ್ಲಿ ಅಲಲ್ಲಿ ಕಾಣಬಹುದು.

ಅವರ ಕಥೆಗಳಲ್ಲಿ ರೈಲು ಹಾಗು ರೈಲು ನಿಲ್ದಾಣಗಳ ಬ್ಯಾಕ್ ಡ್ರಾಪ್ ನೋಡಬಹುದು. ನಿಲ್ದಾಣದ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿ, ಕಥೆಯ ಘಟನಾವಳಿಗಳನ್ನು ಇನ್ನೂ ಆಪ್ತವಾಗುವಂತೆ ಮಾಡುತ್ತಾರೆ. ಒಂದೊಂದು ಕಥೆಗಳಲ್ಲಿ ಒಂದೊಂದು ಪ್ರಖ್ಯಾತ ಊರಿನ ವರ್ಣನೆ ಆ ಸ್ಥಳವನ್ನು ಕೂಡ ಹೀರೋ ಆಗಿ ಮಾಡಿಬಿಡುತ್ತದೆ. ಜಡವಸ್ತುಗಳಾದ ಗೋಡೆ, ನದಿ, ನಿಯೋನ್ ದೀಪಗಳು, ಬ್ರಿಡ್ಜ್, ಸಿನಿಮಾ ಪೋಸ್ಟರ್, ರೈಲಿನಲ್ಲಿ ಚಕ್ರ, ಮಠದ ರಥ, ನೆಗ್ಗಿದ ತಂಬಿಗೆ ಮುಂತಾದವುಗಳನ್ನು ಕೂಡ ಕಥೆಗೆ ನಂಟು ಬೆಳಿಸಿದ ವೈಖರಿ ಬಹು ಅಪರೂಪದ್ದಾಗಿದ್ದೆ. ಅವರ ‘ಹೀಗೂ ಉಂಟೆ’ ಕಥೆ ದೂರದರ್ಶನದ ಕಥೆಗಾರ ಮಾಲಿಕೆಯಲ್ಲಿ ಪ್ರಕಟವಾಗಿತ್ತು.

1) ಮೊದಲ ಕಥೆ ಅಪಘಾತ ಕೊನೆಯವರೆಗೂ ತನ್ನ ರೋಚಕತೆ ಕಾಪಾಡಿಕೊಳ್ಳುತ್ತದೆ. ಮುಂಬೈ ಲೋಕಲ್ ಟ್ರೈನ್, ಅಲ್ಲಿ ಗಿಜಗುಡುವ ಜನಸಂದಣಿ, ಹೇಗೆ ತನ್ನದೇ ಗುಂಗಿನಲ್ಲಿ ಇರುತ್ತದೆ, ಯಾರಿಗೂ ಪುರ್ಸೊತ್ತಿಲ್ಲ, ಅಲ್ಲಿ ಸಾವಿಗೂ ಅರ್ಥವಿಲ್ಲ ಎಂದು ಲೇಖಕರು ಕಥಾನಾಯಕ ರಾಮನಾಥನ ದೃಷ್ಟಿಕೋನದಲ್ಲಿ ಹೇಳುತ್ತಾ ಹೋಗುತ್ತಾರೆ. ದೇವರು ಒಂದು ಕಸಿದುಕೊಂಡರೂ ಇನ್ನೊಂದನ್ನು ಕೊಟ್ಟಿರುತ್ತಾನೆ ಎಂದು ಕಥೆಯ ಮುಕ್ತಾಯದ ಹಂತದಲ್ಲಿ ಓದುಗರನ್ನು ಚಕಿತವಾಗುವಂತೆ ಮಾಡುತ್ತಾರೆ. ಸ್ತ್ರೀಯರು ಒಬ್ಬಬೊಬ್ಬರೇ ಪ್ರವಾಸ ಮಾಡಬಾರದು ಎಂಬ ಕಾಲದಲ್ಲಿ, ಪುರಷರೂ ಹುಷಾರಿರಬೇಕು, ನಿಮ್ಮ ಇಂದ್ರಿಯಗಳನ್ನು ನಿಮ್ಮ ವಶದಲ್ಲಿ ಇಡುವುದುದರಿಂದ ಆಗುವ ಅಪಘಾತಗಳನ್ನು ತಡೆಯಬಹುದು ಎಂದು ‘ಅಪಘಾತ’ ಎಂಬ ರೋಚಕ ಕಥೆಯ ಮೂಲಕ ಸಂದೇಶ ರವಾನಿಸುತ್ತಾರೆ.

2) ತಬ್ಬಲಿಗಳು : ಇದು ಸಣ್ಣ ಕಥಾ ಲೋಕದಲ್ಲಿ ಎಂದೂ ಅಳಿಯದ ಛಾಪು ಮೂಡಿಸಿದ ಕಥೆ. ಈ ಕಥೆ ಕನ್ನಡ ಕಥೆಗಳ ‘ಮಾಣಿಕ್ಯ’ ಎನ್ನಬಹುದು. ಇದಕ್ಕೆ 50 + ವರ್ಷಗಳು ತುಂಬಿವೆ. ಈ ಕಥೆಯಲ್ಲಿ ಯಾವ ಪಾತ್ರಕ್ಕೂ ಲೇಖಕರು ಹೆಸರಿಟ್ಟಿಲ್ಲ, ಒಂದೇ ಮನೆಯಲ್ಲಿ ತಾಯಿ, ತಂದೆ, ತಮ್ಮ, ತಂಗಿ ಸೋ ಕಾಲ್ಡ್ ರಕ್ತ ಸಂಬಂಧಿಗಳು ಹೇಗೆ ತಮ್ಮವರ ಬಗ್ಗೆ ಹೇಳಲಾರದ ಜಿಗುಪ್ಸೆ ಬೆಳಿಸಿಕೊಳ್ಳುತ್ತಾರೆ. ಅವರನ್ನೆಲ್ಲ some ಬಂಧಗಳು ಬಂಧಿಸಿರುತ್ತವೆ. ಆ ಬಂಧನದಿಂದ ‘ಸಾವು’ ಮಾತ್ರ ಮುಕ್ತಿ ದೊರಕಿಸಿ ಕೊಡಬಹುದು ಎಂಬ ನಿರ್ಲಿಪ್ತತೆಗೆ ಬಂದು ಬಿಟ್ಟಿರುತ್ತಾರೆ. ಒಂದೇ ಪರಿವಾರದವರಾದರು ಕೂಡ ಮಂತ್ರಾಲಯದ ಜನ ಜಾತ್ರೆಯಲ್ಲಿ, ರಥೋತ್ಸವದ ಭಕ್ತ ಸಾಗರದಲ್ಲಿ, ಧೋ ಎಂದು ಸುರಿಯುವ ಮಳೆಯಲ್ಲಿ, ಮಾನಸಿಕವಾಗಿ ಜರ್ಜರಿತವಾದ ತಂಗಿ,ತಂದೆ, ತಾಯಿ, ತಮ್ಮ ಒಬ್ಬರನ್ನೊಬರು ಆಗಲಿ ತಬ್ಬಲಿಗಳಾಗುತ್ತಾರೆ. ಮಂತ್ರಾಲಯದ ತುಂಗಾ ನದಿ, ಅಲ್ಲಿನ ಬಂಡೆಗಳು, ಸ್ನಾನಕ್ಕೆ ಧಾವಿಸಿ, ಪರದಾಡುವ ಜನರಿದ್ದ ದೃಶ್ಯಾವಳಿಗಳು ಮನದಲ್ಲಿ ಮಂತ್ರಾಲಯ ತುಂಗಾ ತಟದ ನೆನಪು ತರುತ್ತವೆ. ಅತ್ತೆಯ ಹಟ, ಬಂಗಾರದ ಮೋಹ, ಗಂಡ ಹೆಂಡಿರನ್ನು ಕೂಡಿರಲು ಬಿಡದ ವಿಚಿತ್ರ ಮನಸ್ಥಿತಿಯಿಂದ, ಮಗ ತಾಯಿಯನ್ನೇ ವೈರಿಯಂತೆ ಕಾಣುವ ಪರಸ್ಥಿತಿ ನಿರ್ಮಾಣವಾಗುತ್ತದೆ. ಇದನೆಲ್ಲ ನೋಡಿ ತಂಗಿಗೆ ಮತಿ ಭ್ರಮಣೆ ಆಗುತ್ತದೆ. ಹುಚ್ಚು ಹಿಡದ ತಂಗಿಯ ಮಾನಸಿಕ ತುಮುಲಗಳನ್ನು ಅಕ್ಷರಗಳಲ್ಲಿ ಹಿಡಿದಿಟ್ಟ ಖಾಸನೀಸಿರ ಪರಿ ಅದ್ಭುತವಾಗಿದೆ. ಅದೇ ಪ್ಯಾರಾವನ್ನು ಮೂರು ನಾಲ್ಕು ಬಾರಿ ಓದಿ ಓದಿ, ಆ ವಿಷಾದತೆ ಅನುಭವಿಸಿದಾಗ ನನ್ನ ಮನಸ್ಸು ಭಾರವಾಯಿತು. ಈ ಕಥೆಯ ಗುಂಗು ಮನದಿಂದ ಬೇಗ ಹೋಗುವುದೇ ಇಲ್ಲ. ತಂಗಿಯ ಆಕ್ರಂಧನ ನಮ್ಮ ಕರಳು ಕಿವುಚಿದಂತೆ ಮಾಡುತ್ತದೆ.

ಜನರ ಮೌಢ್ಯ, ಮಾನಸಿಕ ಅಸಮತೋಲನವನ್ನು ದೆವ್ವ ಭೂತದ ಹೆಸರು ಕೊಟ್ಟು ರೋಗಿಯನ್ನು ಇನ್ನಷ್ಟು ಹಿಂಸಿಸುವಂತೆ ಮಾಡುತ್ತಿತ್ತು. ದುರ್ಬಲ ಮನಸ್ಸಿನ ತಾಕಲಾಟವನ್ನು ಖಾಸನೀಸರ ಕಥೆಗಳಲ್ಲಿ ನೋಡಿ ಅನುಭವಿಸಬೇಕು. ಕಥೆಯಲ್ಲಿ ಬರೀ ಘಟನೆಗಳು ಪಾತ್ರಗಳಿಂದ ಗಜಿಬಿಜಿಗೊಳ್ಳದೆ, ಮನಸ್ಸಿನ ಹೋಯ್ದಾಟವನ್ನೇ ಕೇಂದ್ರಿಕರಿಸಿ ಬರೆದಂಥ ಕಥೆಯಿದು.

3) ಅಲ್ಲಾವುದ್ದಿನ ಅದ್ಭುತ ದೀಪ….

..ಎಂಬ ವಿಶಿಷ್ಟ ಶೀರ್ಷಿಕೆ ಹೊಂದಿದ ಕಥೆ, ಪುಣೆ ನಗರವನ್ನು ತನ್ನ ಬೇಸ್ ಗ್ರೌಂಡ್ ಮಾಡಿಕೊಂಡಿದೆ. ಲೇಖಕರು ಪುಣೆ- ಮುಂಬೈಯಲ್ಲಿ ವಾಸವಾಗಿದ್ದರಾದ್ದರಿಂದ, ಪುಣೆಯ ಚಿತ್ರಣ ಸೋಗಸಾಗಿ ಬಂದಿದೆ. ಪುಣೆ ನಗರವನ್ನು ಹತ್ತಿರದಿಂದ ಬಲ್ಲವರು, ಕಥೆಯಲ್ಲಿ ಬರುವ ಮುಳಾ ಮಠ ನದಿ, ಅಲ್ಕಾ ಟಾಕೀಜ್, ಅಲ್ಲಿನ ಹೌಸಿಂಗ್ ಸೊಸೈಟಿ, ವಿಧ ವಿಧ ಜನ ಎಲ್ಲ ಬಣ್ಣ ಬಣ್ಣದ ಬಾಯಿಸ್ಕೋಪ್ ಚಿತ್ರದಂತೆ ಕಣ್ಣು ಮುಂದೆ ಹಾಯ್ದು ಹೋಗುತ್ತವೆ. ಇಲ್ಲಿ ಒಂದೂ ಸಾಲು ನಿರರ್ಥಕವಾಗಿಲ್ಲ, ಪ್ರತಿಯೊಂದು ಸಾಲು ಮೂಲ ಕಥೆಗೆ ಏನೋ ಒಂದು ಬೆಸುಗೆ ಏರ್ಪಡಿಸುತ್ತವೆ. ಹಳ್ಳಿ ಹೈದ ‘ಸತ್ಯಬೋಧ’ ತನ್ನ ಕಕ್ಕ ಅಂದರೆ ಕಾಕಾನನ್ನು (ಚಿಕ್ಕಪ್ಪನನ್ನು) ಹುಡುಕಿಕೊಂಡು ಪುಣೆ ನಗರದಲ್ಲಿ ಅಲೆದಾಡುವ ಕಥೆಯಿದು. ಏನೂ ಅರಿಯದ ಹಳ್ಳಿ ಮುಗ್ಧನಿದ್ದವನಿಗೆ, ಆ ಪಟ್ಟಣ ಎಲ್ಲ ಸತ್ಯದ ಅರಿವು ಮುಡಿಸುತ್ತದೆ. ದೊಡ್ಡ ನಗರದ ಚಿತ್ರ ವಿಚಿತ್ರ ಆಕರ್ಷಣೆಗಳನ್ನು ಮೊದಮೊದಲು ತನ್ನ ಬೊಗಸೆಯಲ್ಲಿ ಇಟ್ಟು ಕೊಂಡ್ರೆ, ದಿನಗಳೆದಂತೆ ಆ ಸಿಟಿ ಜೀವನ ತನ್ನ ಕಟು ವಾಸ್ತವದ ಅನಾವರಣವನ್ನು ಮಾಡಿಸುತ್ತದೆ. ಹಸಿದ ಹೊಟ್ಟೆ, ನಿದ್ದೆ ಇಲ್ಲದೆ ಬಸವಳಿದ ಸತ್ಯಬೋಧನ ಅರೆನಿದ್ದೆ ಅವನು ಬಂದ ಉದ್ದೇಶದ ಸತ್ಯದ ಸಾಕ್ಷಾತ್ಕಾರ ಮಾಡಿಸುತ್ತದೆ. ಸಾವು ನಿಶ್ಚಿತವೆಂದ ಮೇಲೆ ನಮಗೆ ಯಾಕೆ ದುಡ್ಡಿನ, ಆಸ್ತಿಯ ಅಧಿಕಾರದ, ಆಭರಣದ ವ್ಯಾಮೋಹ ಎಂದು ತಾನು ಅತಿಯಾಗಿ ಪ್ರೀತಿಸುವ ತಾಯಿಯ ಬಗ್ಗೆ ತಾತ್ಸಾರ ಮೂಡುವಂತೆ ಮಾಡುತ್ತದೆ. ಮತ್ತೆ ಈ ಕಥೆಯಲ್ಲಿಯೂ ‘ಅಂಬಕ್ಕ’ ಎಂಬ ಪಾತ್ರ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಮೆಟ್ಟಿಲು ಏರಿ ಹೊರಟಾಗ, ಯಾರದೂ ಸತ್ತ ಹಸುಗೂಸಿನ ಚಿತ್ರಣ ಮನ ಮುಟ್ಟುವಂತೆ, ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುವಂತೆ ಲೇಖಕರು ಕಥೆಯ ಸುರುಳಿಯನ್ನು ಬಿಚ್ಚುತ್ತಾರೆ. ವಾಸು ಹುಡುಕುತ್ತಿದ್ದ ಸತ್ಯಬೋಧ ಕಕ್ಕ ಸಿಕ್ಕನೆ…? ಎಂದು ತಿಳಿಯಲು ನೀವು ಕಥೆ ಓದಲೇ ಬೇಕು.

4) ಹೀಗೂ ಉಂಟೆ..?

ಇದು ಒಂದು ಮರ್ಡರ್ ಮಿಸ್ಟ್ರಿ. ಇದರಲ್ಲಿಯೂ ಓದುತ್ತಾ ಹೋದಂತೆ ಕಥೆಯಲ್ಲಿ ಕೊಲೆಗಾರ ಯಾರಿರಬಹುದು ಎಂದು ಲೆಕ್ಕಾಚಾರ ಹಾಕಲು ಶುರುವಿಟ್ಟುಕೊಳ್ಳುತ್ತೇವೆ. ಆಗಿನ ಕಾಲದಲ್ಲಿಯೂ, ಹಳ್ಳಿಯಲ್ಲಿಯೂ, infidelity ಕೇಸ್ ಘಟಿಸಿದರೆ ಪುರುಷ ಅದನ್ನು ಸಹಿಸದೆ ಕೊಲೆ, ಆತ್ಮಹತ್ಯೆಯಂಥ ಪ್ರಕರಣಗಳು ಮಾಡುತ್ತಿದ್ದ ಎಂದು ಕಥೆ ಓದಿದಾಗ ಸ್ಪಷ್ಟವಾಗುತ್ತದೆ.

ಖಾಸನೀಸರ ಕಥೆ ಐವತ್ತು ವರ್ಷಾಗಳಾಗಿದ್ದರೂ, ಇನ್ನೂ ಪ್ರಸ್ತುತವಾಗಿವೆ, ಇನ್ನೂ ಇಂಥ ಘಟನೆಗಳನ್ನು ಪತ್ರಿಕೆಯಲ್ಲಿ ನೋಡುತ್ತೇವೆ. ಕೊಲೆ ಎಕೆ ನಡೆಯಿತು, ತಪ್ಪಿತಸ್ಥ ಯಾರಿರಬಹುದು ಎಂದು ತಿಳಿದುಕೊಳ್ಳಲು ಹೀಗೂ ಉಂಟೆ! ಕಥೆ ಓದಿ. ಕಥೆಗಾರ ಮಾಲಿಕೆ  ಯೂಟ್ಯೂಬ್ ಅಲ್ಲಿ ಲಭ್ಯವಿದೆ. ಈ ಕಥೆಯ ಎಪಿಸೋಡ್ ನೋಡಬಹುದು…

5) ಮೊನಾಲಿಸಾ :

ಲೇಖಕರು ಪುಣೆ, ಮಂತ್ರಾಲಯ ಮುಂಬೈ ಪರಿಚಯಿಸಿದಂತೆ ಫ್ರಾನ್ಸ್ ರಾಜಧಾನಿ, ಪ್ರಣಯದೂರು ಪ್ಯಾರಿಸ್ ಅನ್ನು ಕೂಡ ಅತ್ಯದ್ಭುತವಾಗಿ ಈ ಕಥೆಯಲ್ಲಿ ಪರಿಚಯಿಸಿರುತ್ತಾರೆ. ಪ್ಯಾರಿಸ ನ್ ಸೀನ್ ನದಿ ಅಡ್ಡವಾಗಿ ಎಲ್ಲಿ ಹೋದರೂ ತೊಡುರುತ್ತದೆ ಎನ್ನುತ್ತಾರೆ. ಪುನರ್ಜನ್ಮ ಇದೇನಾ…? ಎಂದು ನಿಮಗೆ ಪ್ರಶ್ನೆ ಇದ್ದರೆ ಮೋನಾಲೀಸಾ ಕಥೆ ಓದಲೇ ಬೇಕು. ಡಾವಿನ್ಸಿಯ ಪ್ರಸಿದ್ಧ ತೈಲ ಚಿತ್ರ ಮೊನಾಲಿಸಾ 400 ವರ್ಷಗಳ ಹಿಂದೆ ತನ್ನ ಹೆಂಡತಿಯಾಗಿದ್ದಳು ಎಂದು ಹೇಳುತ್ತಾ, ಕೊನೆಗೆ ಅವನು ಜೈಲು ಪಾಲಾಗಿ, ಕ್ರಿಮಿನಲ್ ಆಗುತ್ತಾನೆ ಎನ್ನುವ ವಿಶಿಷ್ಟವಾದ ಕಥೆ ‘ಮೋನಾಲಿಸಾ’. ಪುನರಪಿ ಮರಣ ಪುನರಪಿ ಜನನಂ ಇದು ಭಾರತದಲ್ಲಿ ಅಷ್ಟೇ ಅಲ್ಲ ಮುಂದುವರೆದ ರಾಷ್ಟ್ರಗಳಲ್ಲಿಯೂ ಇದೆ. ಕೆಲವರಿಗೆ ಹಿಂದಿನ ಜನ್ಮದ ನೆನಪುಗಳು ಮರುಕಳಿಸುತ್ತವೆ, ಆದರೆ ಹಿಂದಿನದು ಬಿಟ್ಟು ಇಂದಿನದ್ದು ಯೋಚಿಸಬೇಕಲ್ಲವೇ…ಇಲ್ಲವಾದಲ್ಲಿ ನಿಮ್ಮ ಜೀವನವು ಅಧೋಗತಿಗೆ ಈಡಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ತಿಳಿದುಕೊಳ್ಳಬಹುದು. ಈ ಕಥೆಗಳು ನಮ್ಮ ಯೋಚನಾಶಕ್ತಿಗೆ ಚುರುಕು ಮುಟ್ಟಿಸುತ್ತವೆ. ಅದೇ ಪ್ರಬುದ್ಧ ಓದುಗರು ಬಯಸುತ್ತಾರೆ ಅಲ್ಲವೇ…ಯಾವುದೋ ಘಳಿಗೆಯಲ್ಲಿ, ಯಾರನ್ನೋ ನೋಡಿ, ನಿಮ್ಮ ಹಿಂದಿನ ಜನ್ಮದ ನೆನಪು ತಾಜಾ ಆಗಿ ನಿಮ್ಮನ್ನು ಕೂತರು, ನಿಂತರೂ ಸತಾಯಿಸಿದರೆ ಏನಾಗಬಹುದು ಎಂದು ಈ ಕಥೆಯನ್ನು ಓದಿ ಕಲ್ಪಿಸಿಕೊಳ್ಳಿ. ಕೂತಲ್ಲೇ ನಡುಗುತ್ತೀರಾ… ಈ ಎಲ್ಲ ಕಥೆಗಳನ್ನು ಓದಿ ಮುಗಿಸಿ, ಪುಸ್ತಕ ಮುಚ್ಚಿಟ್ಟರು, ಆ ಕಥೆಗಳಲ್ಲಿ ಇರುವ ವಿಷಾದ ಭಾವ ನಿಮ್ಮ ನ್ನು ಅದೇ ಗುಂಗಿನಲ್ಲಿ ಇರುವಂತೆ ಮಾಡುತ್ತದೆ…ಕಥೆಯ ಆಗುಹೋಗುಗಳು ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸುತ್ತವೆ.

ಅತೀ ಸಾಮಾನ್ಯ lower than average ಓದುಗಳಾದ ನಾನು, ಖಾಸನೀಸರ ಕಥಾ ಪರಿಚಯ ಎಂಬು ಶೀರ್ಷಿಕೆ ಅಡಿಯಲ್ಲಿ ಈ ಅದ್ಭುತ ಕಥೆಗಳ ಬಗ್ಗೆ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಹಾನ್ ಲೇಖರರ ಬಗ್ಗೆ ಎನು ತಾನೇ ಹೇಳಲು ಸಾಧ್ಯ….ಪುಸ್ತಕ ಓದಿ, ಓದಿದ್ದರೆ ಇನ್ನೊಮ್ಮೆ ಮತ್ತೊಮ್ಮೆ ಓದಿ, ಖಾಸನೀಸರ ಪ್ರಬುದ್ಧ ಬರವಣಿಗೆಯ ರಸಾಸ್ವಾದ ಮಾಡಿ ಎಂದಷ್ಟೇ ಹೇಳಬಲ್ಲೆ…

ಮೃಣಾಲಿನಿ ಅಗರಖೇಡ

Leave a Reply