ಕರ್ಮಯೋಗ ಜ್ಞಾನ ಬೇರೆಬೇರೆಯಲ್ಲ
ನಿತ್ಯಸಂನ್ಯಾಸಿಯ ಲಕ್ಷಣಗಳನ್ನು ಹೇಳುತ್ತಿದ್ದ ಕೃಷ್ಣನು ಕರ್ಮತ್ಯಾಗ, ಕರ್ಮಯೋಗಗಳ ಬಗ್ಗೆ ಮತ್ತಷ್ಟು ಸ್ಪಷ್ಟೀಕರಿಸುತ್ತಾನೆ;
‘ಸಂನ್ಯಾಸವೂ ಕರ್ಮಯೋಗವೂ ಬೇರೆಬೇರೆಯೆಂದು (ಬೇರೆ ಬೇರೆ ಪರಿಣಾಮಗಳನ್ನು ಕೊಡುತ್ತವೆ ಎಂದು) ಹೇಳುವವರು ಮೂರ್ಖರು. ತಿಳಿದವರಾದ ಪಂಡಿತರು ಹಾಗೆ ಹೇಳುವುದಿಲ್ಲ. ಇವೆರಡರಲ್ಲಿ (ಸಂನ್ಯಾಸ ಹಾಗೂ ಕರ್ಮಯೋಗಗಳಲ್ಲಿ) ಯಾವ ಒಂದರಲ್ಲಾದರೂ ಚೆನ್ನಾಗಿ ನೆಲೆ ನಿಂತವರು ಎರಡರ ಫಲವನ್ನೂ (ಎರಡರ ಆತ್ಯಂತಿಕ ಫಲವಾದ ಭಗವತ್ಪ್ರಾಪ್ತಿ / ಮೋಕ್ಷವನ್ನು) ಪಡೆಯುತ್ತಾರೆ (ಭ.ಗೀ.: 5.4).’; ‘ಸಾಂಖ್ಯದಿಂದ (ಜ್ಞಾನದಿಂದ) ಪಡೆಯುವಂತಹ ಪರಮಫಲವನ್ನೇ ಯೋಗದವರು (ಕರ್ಮಯೋಗದವರೂ) ಪಡೆಯುತ್ತಾರೆ. ಸಾಂಖ್ಯವನ್ನೂ ಯೋಗವನ್ನೂ ಯಾರು ಒಂದೆಂದು ಕಾಣುತ್ತಾರೋ ಅವರು ಮಾತ್ರವೇ ‘ಕಾಣುತ್ತಾರೆ’ (ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ) (5.5).; ‘ಹೇ ಅರ್ಜುನ! ಅಯೋಗರು (ಯೋಗವನ್ನು ಸಿದ್ಧಿಸಿಕೊಳ್ಳುವ ಸಾಮರ್ಥ್ಯವಿಲ್ಲದವರು) ಸಂನ್ಯಾಸದಿಂದ (ಕರ್ಮತ್ಯಾಗದಿಂದ) ದುಃಖವನ್ನೇ ಪಡೆಯುತ್ತಾರೆ. ಆದರೆ ಯಾರು ಯೋಗಯುಕ್ತನೋ (ಕರ್ಮಯೋಗವನ್ನು ಸಿದ್ಧಿಸಿಕೊಂಡಿರುವನೋ) ಅಂತಹವನು ‘ಮುನಿ’ ಎನಿಸುತ್ತಾನೆ, ಬ್ರಹ್ಮವನ್ನು ಬೇಗನೆ ಹೊಂದುತ್ತಾನೆ. (5.6).
ತ್ಯಾಗವು ಪಕ್ವಮನಸ್ಸಿನ ಸಹಜ ಸ್ಥಿತಿ. ಸಂನ್ಯಾಸದೀಕ್ಷೆಯು ಆ ಪಕ್ವತೆಯ ಸಂಕೇತ. ಆದರೆ ‘ಎಲ್ಲ ಬಾಹ್ಯಕರ್ಮಗಳನ್ನೂ ಬಿಟ್ಟು ಕೂರುವುದು ಸಂನ್ಯಾಸ’ವೆಂದೂ, ‘ಸುಮ್ಮನೆ ಕೆಲಸವನ್ನು ಮಾಡುತ್ತಲೇ ಇರುವುದು ಕರ್ಮಯೋಗ’ವೆಂದೂ ಬಾಲಿಶ ಗ್ರಹಿಕೆಗಳು ಬೆಳೆದಿವೆ. ಆ ಭ್ರಾಂತಿಯನ್ನೇ ಕೃಷ್ಣನು ‘ಮೂರ್ಖತನ’ ಎಂದು ಕರೆಯುತ್ತಿದ್ದಾನೆ. ತಿಳಿದವರು ಜ್ಞಾನ ಹಾಗೂ ಕರ್ಮಯೋಗಗಳೆರಡರಲ್ಲೂ ಭೇದವೆಣಿಸುವುದಿಲ್ಲ. ಏಕೆಂದರೆ ಇವೆರಡರ ಆತ್ಯಂತಿಕ ಪರಿಣಾಮವೂ ಮೋಕ್ಷಪ್ರಾಪ್ತಿಯೇ. ಅದಲ್ಲದೆ ‘ಯೋಗ್ಯತೆಯನ್ನು ಸಿದ್ಧಿಸಿಕೊಳ್ಳದೆ ತ್ಯಾಗ ಮಾಡಿದರೆ ದುಃಖವೇ ಗತಿ’ ಎಂದು ಎಚ್ಚರಿಸುತ್ತಿದ್ದಾನೆ ಕೃಷ್ಣ! ಕೇವಲ ಬಾಹ್ಯದಲ್ಲಿ ಮಾಡುವ ತ್ಯಾಗವು ವಿಫಲವಾಗುತ್ತದೆ. ತ್ಯಾಗದೀಕ್ಷೆಯಂಥ ಉನ್ನತ ನಿರ್ಧಾರ ಕೈಗೊಳ್ಳುವ ಮೊದಲು ಸಾಕಷ್ಟು ಆತ್ಮನಿರೀಕ್ಷಣೆ ಬೇಕು. ದೈವಭಕ್ತಿ, ಗುರುಭಕ್ತಿ, ಪರಂಪರಾನಿಷ್ಠೆಗಳಿದ್ದರೆ ಸಾಲದು. ಪ್ರಖರ ವೈರಾಗ್ಯವಿರಬೇಕು. ಭಾವುಕತೆಯ ಭರದಲ್ಲೋ, ಯಾರದೋ ಪ್ರೇರಣೆಯ ಬಿಸಿಯಲ್ಲೋ, ಬಲವಂತವಾಗಿಯೋ ಮಾಡುವ ತ್ಯಾಗವು ತಾತ್ಕಾಲಿಕಭಾವವಷ್ಟೆ. ಅದು ಕ್ರಮೇಣ ಮಾಸುತ್ತದೆ. ಅಂಥ ‘ತ್ಯಾಗಿ’ ಅತೃಪ್ತಕಾಮನಾಗಿ ಒಳಗೊಳಗೇ ದುಃಖ ಅನುಭವಿಸುತ್ತಾನೆ ಅಥವಾ ಕಪಟತನದಿಂದ ಕಾಮನೆಗಳನ್ನು ಪೂರೈಸಿಕೊಳ್ಳಲೆಳೆಸುತ್ತಾನೆ.
ವೈರಾಗ್ಯ ಎನ್ನುವುದನ್ನು ಬಾಹ್ಯದ ಒಂದು ‘ಕ್ರಿಯೆ’ ಎಂದು ಭ್ರಮಿಸಿದ್ದೇವೆ. ಜೀವನದ ದುಃಖ-ದುಗುಡಗಳಿಂದ ನೊಂದು ಮನೆಬಿಟ್ಟು ಹೋಗಿ, ಅಶ್ರಮದಲ್ಲಿ ಶಾಂತಿ ಪಡೆಯಲೆಣಿಸುಸುವವರನ್ನೂ ಅಥವಾ ಯೋಗಿಗಳ ಅಸಾಧಾರಣ ಜೀವನ-ತಪಶ್ಚರ್ಯೆಗಳ ಬಗ್ಗೆ ಓದಿ ಕೇಳಿ ‘ನಾವೂ ಅವರಂತಾಗಿಬಿಡಬೇಕು’ ಎಂಬ ಅತ್ಯುತ್ಸಾಹದಲ್ಲಿ ಥಟ್ಟನೆ ತ್ಯಾಗಕ್ಕೆ ನಿಲ್ಲುವವರನ್ನೂ ‘ವಿರಕ್ತರು’ ಎನ್ನುವುದುಂಟು. ಇನ್ನು ತಮ್ಮ ಮಠ, ಮಂದಿರ, ಚರ್ಚು, ಮಸೀದಿಗಳಿಗೆ ತೇಜಸ್ವಿ ಯುವಜನರನ್ನು ಆಕರ್ಷಿಸುವವರ ಪ್ರೇರಕ ನುಡಿಗಳಿಗೆ ಮನಸೋತು ಅನುಯಾಯಿಗಳಾಗುವವರನ್ನೂ ‘ವಿರಕ್ತರು’ ಎನ್ನುವುದುಂಟು. ಇಲ್ಲಿ ತ್ಯಾಗ ಮಾಡುವುದೇನೋ ತಪ್ಪಲ್ಲ. ಆದರೆ ‘ಇವರಲ್ಲಿ ನಿಜಕ್ಕೂ ಪ್ರಖರ ವೈರಾಗ್ಯ ಬಲಿತಿದೆಯೆ?’ ಎನ್ನುವುದು ಪ್ರಶ್ನೆ. ಯಾರಿಗೂ ಯಾವುದಕ್ಕೂ ಎಂದೂ ಬದ್ಧವಾಗದೆ ಬದುಕುವ ಶಕ್ತಿ ಬರುವುದು ವೈರಾಗ್ಯವೊಂದರಿಂದಲೇ. ಅದಕ್ಕೇ ಕೃಷ್ಣನು ಹೇಳುತ್ತಿರುವುದು ‘ಅಯೋಗನು (ಕರ್ಮಯೋಗದ ಮೂಲಕ ನಿರ್ಲಿಪ್ತಿ ಸಿದ್ಧಿಸಿಕೊಳ್ಳದವನು) ಸಂನ್ಯಾಸಕ್ಕೆ (ಕರ್ಮತ್ಯಾಗಕ್ಕೆ) ಹೊರಟರೆ, ಅದು ದುಃಖದಲ್ಲಿ ಪರಿಣಮಿಸುತ್ತದೆ’ ಎಂದು.
ಅಕಾಲ ವೈರಾಗ್ಯವನ್ನು ತಾಳಿದವರು ಲೋಕದಲ್ಲಿ ಅಪಹಾಸ್ಯಕ್ಕೆ ಗುರಿಯಾಗುತ್ತಾರೆ. ‘ಉದರವೈರಾಗ್ಯ, ಸ್ಮಶಾನವೈರಾಗ್ಯ, ಪ್ರಸವವೈರಾಗ್ಯ, ಅರ್ಜುನಸಂನ್ಯಾಸಿ’ ಎಂಬಂತಹ ಅಪಹಾಸದ ಪರಿಭಾಷೆಗಳೇ ಹುಟ್ಟಿಬಿಟ್ಟಿವೆ! ‘‘ಮನವರಿಯದ ಕಳ್ಳತನವಿಲ್ಲವಲ್ಲ ಬಿಡು ಬಿಡು ಬಾಹ್ಯದೊಳು ಡಂಭವ¬’’ ಎಂದು ಶರಣರೂ, ‘‘ಉದರನಿಮಿತ್ತಂ ಬಹುಕೃತವೇಷಂ’’ ಎಂದು ಆಚಾರ್ಯ ಶಂಕರರೂ, ‘‘ಉದರವೈರಾಗ್ಯವಿದು¬…’’ ಎಂದು ಪುರಂದರದಾಸರೂ ಇಂತಹ ಅರೆಬರೆ ತ್ಯಾಗವನ್ನು ಕಡೆಗಣಿಸುವುದನ್ನು ಕಾಣಬಹುದು.
ಮೋಕ್ಷ, ಯೋಗಸಿದ್ಧಿಗಳ ವಿಷಯದಲ್ಲಿ ಆತುರಕ್ಕಾಗಲಿ ಭಾವುಕತೆಗಾಗಲಿ ಪರಕೀಯ ಪ್ರಭಾವಕ್ಕಾಗಲಿ ಅರ್ಥವೇ ಇಲ್ಲ. ಅದೆಷ್ಟೋ ಬಾಹ್ಯಾಂತರಿಕ ಸಂಸ್ಕರಣವಾದ ಮೇಲೆಯೇ ನಾವು ನಿಜವಾಗಿಯೂ ತ್ಯಾಗಕ್ಕೆ ಸಿದ್ಧರಾಗುವುದು. ಕಗ್ಗದ ಮುನಿ ಹೇಳುವಂತೆ,
ಮೋಕ್ಷದಾಶೆಯೊಳಮತ್ಯಾತುರತೆಯೊಳಿತಲ್ಲ |
ಶಿಕ್ಷೆ ಬಹುಕಾಲ ನಡೆಯದೆ ಮೋಕ್ಷವಿಲ್ಲ ||
ಲಕ್ಷ ್ಯ ತಪ್ಪದೆ ಚರಿಸು ಸಾಮಾನ್ಯಧರ್ಮಗಳ |
ಮೋಕ್ಷ ಸ್ವತಸ್ಸಿದ್ಧ – ಮಂಕುತಿಮ್ಮ || 903 ||
ಭಾವುಕತೆ-ಆತುರಗಳಿಲ್ಲದೆ, ಕರ್ಮಯೋಗದ ಮೂಲಕ, ಹಂತಹಂತವಾಗಿ ತನ್ನ ಇತಿಮಿತಿಗಳನ್ನು ಗೆಲ್ಲುತ್ತ, ಪಕ್ವತೆ ಪಡೆದು ನಿರ್ಲಿಪ್ತನಾಗಬಲ್ಲವನು ‘‘ನಿಜವಾದ ತ್ಯಾಗಿ’’ ಎನ್ನುವುದು ತಾತ್ಪರ್ಯ. ‘ಎಳನೀರಿನ ಚಿಪ್ಪನ್ನು ಕಿತ್ತು ಬಿಡಿಸುವುದು ಕಷ್ಟ. ಆದರೆ ಚಿಪ್ಪು ಒಣಗಿ ಅದರೊಳಗೆ ಕಾಯಿ ಬಲಿತಾಗ ಬಿಡಿಸುವುದು ಅಷ್ಟು ಕಷ್ಟವಲ್ಲ. ಆದರೆ ಅದೇ ಕಾಯಿ ಸಂಪೂರ್ಣ ಒಣಗಿ ತನ್ನಿಂತಾನೆ ಚಿಪ್ಪಿನಿಂದ ಬೇರಾಗಿ ಕೊಬ್ಬರಿಯಾಗುತ್ತದಲ್ಲ, ಆಗ ಅದು ಚಿಪ್ಪಿನೊಳಗೇ ಇದ್ದೂ ಅದಕ್ಕೆ ಅಂಟಿಕೊಳ್ಳುವುದಿಲ್ಲ! ಹಿಡಿದು ಆಡಿಸಿದರೆ ‘ಟಕಟಕ’ ಎಂದು ಕೇಳಿಸುತ್ತದೆ! ಮುಕ್ತಪುರುಷನೂ ಹಾಗೆ! ದೇಹದಲ್ಲಿದ್ದೂ ಸಂಸಾರದಲ್ಲಿದ್ದೂ ಒಣಗಿದ ಕೊಬ್ಬರಿಗಿಟುಕಿನಂತೆ ಅಂಟದೆ ಇರುತ್ತಾನೆ’ ಎಂದು ಉಪಮಿಸುತ್ತಾರೆ ರಾಮಕೃಷ್ಣರು!
ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ