ಕರ್ಮಸಂನ್ಯಾಸಕ್ಕಿಂತ ಕರ್ಮಯೋಗವು ವಿಶೇಷ
ಕರ್ಮಯೋಗವನ್ನೂ ಫಲತ್ಯಾಗವನ್ನೂ ತನ್ಮೂಲಕ ಜ್ಞಾನಪ್ರಾಪ್ತಿಯನ್ನೂ ಕೃಷ್ಣನು ನಾಲ್ಕನೆಯ ಅಧ್ಯಾಯದಲ್ಲಿ ಹೇಳುತ್ತಿದ್ದನು. ಅರ್ಜುನನು ಮತ್ತೆ ಕೇಳುತ್ತಾನೆ; ‘ಹೇ ಕೃಷ್ಣ! ನೀನು ಕರ್ಮಸಂನ್ಯಾಸದ ಬಗ್ಗೆಯೂ (ಕರ್ಮವನ್ನು ಬಿಡುವುದರ ಬಗ್ಗೆಯೂ) ಹೇಳುತ್ತಿರುವೆ; ಕರ್ಮಯೋಗವನ್ನು (ಯೋಗಸ್ಥನಾಗಿ ಕರ್ಮವನ್ನು ಮಾಡುವ) ಮಾಡುವ ಬಗ್ಗೆಯೂ ಹಳುತ್ತಿರುವೆ. ಇವೆರಡರಲ್ಲಿ ಯಾವುದು ಶ್ರೇಯಸ್ಕರವೋ, ಒಂದನ್ನು ನಿಶ್ಚಿತವಾಗಿ ಹೇಳು.’ (ಭ.ಗೀ.: 5.1)
‘ಕರ್ಮವನ್ನು ಯಾರೂ ಬಿಡಲಾರರು. ಭೋಗಾತುರವಿಲ್ಲದೆ, ನಿರ್ಲಿಪ್ತವಾಗಿ ಯಜ್ಞಭಾವದಲ್ಲಿ ಕರ್ಮ ಮಾಡುವುದೇ ವರ’ ಎನ್ನುವುದನ್ನು ಕೃಷ್ಣನು ಪರಿಪರಿಯಾಗಿ ಹೇಳುತ್ತಲೇ ಬಂದಿದ್ದಾನೆ. ಆದರೂ ಅರ್ಜುನನಿಗೆ ಕಹಿಯಾದ ಕರ್ತವ್ಯಕರ್ಮದಿಂದ ಕಳಚಿಕೊಳ್ಳುವ ಆಸೆ ಉಳಿದೇ ಇದೆ! ಆದ್ದರಿಂದಲೇ ಅದೇ ಪ್ರಶ್ನೆಯ ಮೂಲಕ ‘ಕರ್ಮವನ್ನು ಬಿಡುವ ಆಯ್ಕೆಯನ್ನೂ’ ಮತ್ತೆ ಇಲ್ಲಿ ಪ್ರಸ್ತಾಪಿಸುತ್ತಿದ್ದಾನೆ! ಕರ್ಮಯೋಗದ ಬಗ್ಗೆ ಇಷ್ಟೆಲ್ಲ ಕೇಳಿದ್ದರೂ ಅರ್ಥವಾಗಿದ್ದರೂ ಅರ್ಜುನನಿಗೆ ಸ್ವಜನಮೋಹವನ್ನು ಮೆಟ್ಟಿ ಯುದ್ಧಕ್ಕೆ ನಿಲ್ಲುವ ನಿರ್ಲಿಪ್ತಿ ಹಾಗೂ ಧೈರ್ಯ ಬರುತ್ತಿಲ್ಲ! ಹಾಗಾಗಿಯೇ ಹೀಗೆ ಕೇಳುತ್ತಿದ್ದಾನೆ. ಕೃಷ್ಣನು ಸ್ಪಷ್ಟೀಕರಿಸುತ್ತಾನೆ; ‘ಕರ್ಮಸಂನ್ಯಾಸವೂ ಕರ್ಮಯೋಗವೂ ಇವೆರಡೂ ಶ್ರೇಯಸ್ಕರವೇ. ಆದರೆ ಕರ್ಮಸಂನ್ಯಾಸಕ್ಕಿಂತ ಕರ್ಮಯೋಗವು ವಿಶೇಷವೆನಿಸಿದೆ.’
‘ಕರ್ಮಸಂನ್ಯಾಸ’ವೆಂದರೆ ‘ಕರ್ಮತ್ಯಾಗ’ ಎಂದರ್ಥ. ಗೀತೆಯಲ್ಲಿ ಕೃಷ್ಣನು ಹೇಳುತ್ತಿರುವ ‘ಕರ್ಮಸಂನ್ಯಾಸ’ವು ‘ಕಾವಿಯುಟ್ಟು ದೀಕ್ಷೆ ತೆಗೆದುಕೊಳ್ಳುವ ತ್ಯಾಗ’ದ ಬಗ್ಗೆ ಅಲ್ಲ. ಯಾರು ‘ಸಂನ್ಯಾಸೀ’ ಎನ್ನುವುದನ್ನು ಕೃಷ್ಣನ ಮುಂದಿನ ಮಾತುಗಳಲ್ಲೇ ನೋಡೋಣ; ‘ಯಾವನು ದ್ವೇಷ, ಆಸೆ ಹಾಗೂ (ತನ್ನವರು ಬೇರೆಯವರು ಎಂಬಿತ್ಯಾದಿ) ದ್ವಂದ್ವಭಾವಗಳನ್ನು ಬಿಟ್ಟಿರುತ್ತಾನೋ, ಅಂಥವನನ್ನು ನಿತ್ಯಸಂನ್ಯಾಸೀ ಎಂದು ತಿಳಿ. ಅಂತಹವನು ಸುಖವಾಗಿ (ಕರ್ಮದ) ಬಂಧಗಳಿಂದ ಬಿಡುಗಡೆ ಹೊಂದುತ್ತಾನೆ.’
ಕರ್ಮತ್ಯಾಗವು ‘ಮಾಡುವ ಕೆಲಸವಲ್ಲ’, ಅದು ‘ಮೂಡುವ ಪಕ್ವಸ್ಥಿತಿ’. ಭಾವುಕತೆಯ ಭರದಲ್ಲೋ ಅವಸರದಲ್ಲೋ ತೋರಾಣಿಕೆಗಾಗಿಯೋ ಪೀಠ-ಸ್ಥಾನಮಾನಗಳ ಪ್ರಾಪ್ತಿಗಾಗಿಯೋ ‘ತ್ಯಾಗ’ ಮಾಡಿ ಕಾವಿಯುಡುವುದು ‘ಕರ್ಮಸಂನ್ಯಾಸ’ವಲ್ಲ. ಅಂತರಂಗದಲ್ಲಿ ಯೋಗವನ್ನೈದಿರದೇ, ಬಾಹ್ಯದಲ್ಲಿ ಮಾಡುವ ಕರ್ಮತ್ಯಾಗವನ್ನು ಕೃಷ್ಣನು ‘ಮಿಥ್ಯಾಚಾರ’ ಎಂದು ಕರೆದಿದ್ದನ್ನು ಸ್ಮರಿಸಬಹುದು. ಹಾಗೆ ಅಪಕ್ವ ಮನಃಸ್ಥಿತಿಯಲ್ಲಿ ಮಾಡುವ ತ್ಯಾಗವು ಅಂತರಂಗದಲ್ಲಿ ಗೊಂದಲ-ಕೊರಗು- ಅತೃಪ್ತಕಾಮಗಳ ಬಗ್ಗಡವನ್ನು ಮೂಡಿಸುತ್ತದೆ. ಅಂಥ ವ್ಯಕ್ತಿಯು ‘ಅಂತರಂಗದಲ್ಲಿ ರಕ್ತ, ಬಾಹ್ಯದಲ್ಲಿ ವಿರಕ್ತ’ ಎಂಬಂತಹ ಆಷಾಢಭೂತಿಯಾಗುತ್ತಾನೆ. ತ್ಯಾಗದಲ್ಲಿ ಅವಸರವಾಗಲಿ ಬಲವಂತವಾಗಲಿ ಅಸಹಜತೆಯಾಗಲಿ ಇರಬಾರದು. ‘‘ತೆಂಗಿನಗರಿಯನ್ನು ನಾವಾಗಿ ಕೀಳುವುದೂ ಕಷ್ಟ, ಕಿತ್ತರೂ ಅದು ಅರ್ಧಮರ್ಧ ಕಿತ್ತುಬರುತ್ತದೆ, ಅಲ್ಲೇ ಕೆಟ್ಟ ಗುರುತನ್ನೂ ಶಾಶ್ವತವಾಗಿ ಉಳಿಸುತ್ತದೆ. ಅಂತೆಯೇ ಕರ್ಮವನ್ನು ನಾವಾಗಿಯೇ ‘ಬಿಡ’ಹೊರಟರೆ ಒದ್ದಾಟ. ಅದು ನಮ್ಮ ಅಂತರಂಗದ ಪಾಕದಿಂದ ತಾನಾಗಿಯೇ ಕಳಚಿ ಬೀಳಬೇಕು’’ ಎಂದು ಉಪಮಿಸುತ್ತಾರೆ ರಾಮಕೃಷ್ಣರು.
ಮಲಗಿದೋದುಗನ ಕೈಹೊತ್ತಿಗೆಯು ನಿದ್ದೆಯಲಿ
ಕಳಚಿ ಬೀಳ್ವುದು; ಪಕ್ವಫಲವಂತು ತರುವಿಂ |
ಇಳೆಯ ಸಂಬಂಧಗಳು ಸಂಕಲ್ಪನಿಯಮಗಳು
ಸಡಿಲುವುವು ಬಾಳ್ ಮಾಗೆ – ಮಂಕುತಿಮ್ಮ || 902 ||
ನಿದ್ರೆಗೆ ಜಾರಿದವನ ಕೈಯಿಂದ ಪುಸ್ತಕವು ಜಾರಿ ಬೀಳುವಂತೆ, ಮಾಗಿದ ಹಣ್ಣು ಮರದಿಂದ ಕಳಚಿಬೀಳುವಂತೆ, ನಾವು ಪಕ್ವರಾದಾಗ, ನಮ್ಮ ಕರ್ಮಗಳೂ ಸಡಿಲಿಸುತ್ತವೆ. ದ್ವೇಷ, ಲೋಕಸಂಬಂಧಿಯಾದ ಆಕಾಂಕ್ಷೆಗಳು ಹಾಗೂ ತಾರತಮ್ಯದ ಭಾವಗಳು ಲೇಶಮಾತ್ರದಷ್ಟು ಉಳಿದಿರುವ ತನಕ, ನಾವು ಪಕ್ವರಾಗುವುದಿಲ್ಲ, ಕರ್ಮವು ನಿಲ್ಲುವುದಿಲ್ಲ. ದ್ವೇಷ-ಆಕಾಂಕ್ಷೆ ಹಾಗೂ ದ್ವಂದ್ವಗಳೇ ನಮ್ಮಲ್ಲಿ ಲೌಕಿಕ ಸಂಕಲ್ಪಗಳನ್ನು ಮೂಡಿಸುವಂತಹವು. ಆ ಸಂಕಲ್ಪಗಳೇ ಕರ್ಮದ ಬೀಜಗಳು. ಹೊಸ ಸಂಕಲ್ಪದ ಬೀಜಗಳು ಹುಟ್ಟದಂತೆ ನಿರ್ಲಿಪ್ತಿಯನ್ನು ಬೆಳೆಸಿಕೊಳ್ಳಬೇಕು. ಆದರೆ ಈಗಾಗಲೇ ಮೊಳೆತು ನಿಂತಿರುವ ಕರ್ಮಬೀಜಗಳನ್ನು ಅಳಿಸಲಾಗದು. ಮಾಡಿಯೇ ತೀರಬೇಕು.
ಇಲ್ಲಿ ಕೃಷ್ಣನು ಹೇಳುತ್ತಿರುವುದು ‘ಸಂನ್ಯಾಸ’ವೆಂಬ ದೀಕ್ಷೆಯನ್ನಲ್ಲ. ಸಂನ್ಯಾಸವೆಂಬ ‘ಪಕ್ವ ಮನಃಸ್ಥಿತಿಯ’ ಬಗ್ಗೆ. ಲೋಕಕರ್ಮಗಳಲ್ಲಿ ನಿರತವಾಗಿದ್ದರೂ ‘ನಿತ್ಯಸಂನ್ಯಾಸಿ’ಯಾಗಿರಬಲ್ಲವನ ಕುರಿತಾಗಿ. ‘ನಿತ್ಯಸಂನ್ಯಾಸಿ’ಯು ಲೋಕವ್ಯವಹಾರದಲ್ಲಿದ್ದರೂ ಅವನೊಳಗೆ ಲೌಕಿಕವು ಪ್ರವೇಶಿಸದು. ‘ದೋಣಿ ನೀರ ಮೇಲೆ ತೇಲುತ್ತಿದ್ದರೆ ಸುರಕ್ಷಿತ. ಆದರೆ ನೀರು ದೋಣಿಯಲ್ಲಿ ಪ್ರವೇಶಿಸಿದರೆ ಅಪಾಯ. ಲೋಕದಲ್ಲಿ ಮನುಷ್ಯನಿದ್ದರೆ ಚಿಂತೆಯಿಲ್ಲ, ಲೌಕಿಕವು ಮನುಷ್ಯನೊಳಗೆ ಪ್ರವೇಶಿಸಿದರೆ ಅಪಾಯ’ ಎಂದು ಉಪಮಿಸುತ್ತಾರೆ ರಾಮಕೃಷ್ಣರು! ಲೋಕದಲ್ಲಿ ನಾವು ಕರ್ತವ್ಯಬದ್ಧರು. ಆದರೆ ಲೌಕಿಕವು ನಮ್ಮೊಳಗೆ ಪ್ರವೇಶಿಸದಂತೆ ತಡೆಯುವ ಇಚ್ಛಾಶಕ್ತಿಯನ್ನು ಪರಮಾತ್ಮ ನಮಗೆ ನೀಡಿದ್ದಾನೆ. ಅದನ್ನು ನಾವು ಬಳಸಿ ಪಕ್ವತೆಯನ್ನು ಸಾಧಿಸುತ್ತ ಹೋಗಬೇಕೆನ್ನುವುದು ತಾತ್ಪರ್ಯ.
ಅಷ್ಟಕ್ಕೂ ನಮ್ಮನ್ನು ಲೋಕಕ್ಕೆ ಬಂಧಿಸುವುದು ಕರ್ಮವಲ್ಲ. ಕರ್ಮದಲ್ಲಿ ತೊಡಗಿದಾಗ ಹೆಡೆಯಾಡುವ ರಾಗ-ದ್ವೇಷ, ಭೋಗಾಕಾಂಕ್ಷೆ ಹಾಗೂ ತನ್ನವರು-ಪರರು, ಬೇಕು-ಬೇಡ ಎಂಬಿತ್ಯಾದಿ ದ್ವಂದ್ವಗಳು. ಇವುಗಳನ್ನು ತಡೆಯುವ ಧೀರನನ್ನೇ ಕೃಷ್ಣನು ‘ನಿತ್ಯಸಂನ್ಯಾಸೀ’ ಎಂದು ಹೆಸರಿಸುತ್ತಿದ್ದಾನೆ. ವಾಸ್ತವಿಕವಾಗಿ ‘ಸಂನ್ಯಾಸ’ವೆಂದರೆ ಇದೇ! ಇದನ್ನು ಸಾಧಿಸಿದ ಮೇಲೆ ಕಾವಿಯುಟ್ಟರೂ ಸರಿ, ಉಡದಿದ್ದರೂ ಸರಿ! ಇದನ್ನು ಸಾಧಿಸಲಾಗದಿದ್ದರೇ ಕಾವಿಗೆ ಅರ್ಥವೇ ಇಲ್ಲ!
ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ