ಸುಮಾರು ಐವತ್ತೈದು ವರ್ಷಗಳ ಹಿಂದಿನ ಮಾತಿದು. ದಕ್ಷಿಣ ಕನ್ನಡದ ಕಾರ್ಕಳ ತಾಲ್ಲೂಕಿನ ಒಂದು ಸಣ್ಣ ಹಳ್ಳಿ ಕಾಂತಾವರ. 1965ರ ನವೆಂಬರ್ ಒಂದರಂದು ತರುಣ ವೈದ್ಯಾಧಿಕಾರಿಯೊಬ್ಬ, ‘ಕಾಂತಾವರಕ್ಕೆ ಹೇಗೆ ಹೋಗುವುದು’ ಎಂದು ಅಲ್ಲಲ್ಲಿ ವಿಚಾರಿಸಿಕೊಂಡು ಆ ಊರಿಗೆ ಇನ್ನೂ ಬಸ್ ಸಂಚಾರ ಸಹ ಆರಂಭವಾಗದೇ ಇದ್ದ ಹೊತ್ತಿನಲ್ಲಿ ಸುಮಾರು ಐದು ಮೈಲುಗಳ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸುತ್ತಾ ಆ ಹಳ್ಳಿಯನ್ನು ಸೇರಿದ್ದರು. ಸಾಮಾನ್ಯ ಸೌಲಭ್ಯಗಳೂ ಇರದ ಆ ಹಳ್ಳಿಯ ಸಹೃದಯ ಜನರು ಹೀಗೆ ವೃತ್ತಿ ನಿಮಿತ್ತ ಬಂದು ಸೇರಿಕೊಂಡ ವೈದ್ಯನನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಅದು, ಆ ಕ್ಷಣ, ಕಾಂತಾವರದ ಭವಿಷ್ಯ ಬರೆದ ಅಮೃತಗಳಿಗೆಯಾಗಿತ್ತು. ಆ ವೈದ್ಯ, ಅಕ್ಷರ ಮೋಹಿ. ರಣ ಬಿಸಿಲಿನ, ‘ಧೋ’ ಎಂದು ಸುರಿಯುವ ಗುಡ್ಡಗಾಡಿನಂಥ ಹಳ್ಳಿಯಲ್ಲಿ ಔಷಧಿಯನ್ನು ನೀಡುತ್ತಾ ಅಕ್ಷರವನ್ನು ಬಿತ್ತಲಾರಂಭಿಸಿದರು. ಬಿತ್ತಿದ್ದು ಅಕ್ಷರವನ್ನಲ್ಲವೇ? ಅದು ಎಂಥ ಹುಲುಸಾದ ಹಸಿರನ್ನು ಮೂಡಿಸಿತು ನೋಡಿ! ಕಾಂತಾವರ ಎನ್ನುವ ಹಳ್ಳಿ ಅಕ್ಷರದ ಊರಾಯಿತು. ಅಲ್ಲಿ ಕನ್ನಡದ ಕಹಳೆ ಮೊಳಗಿತು. ಕಾಲಚಕ್ರ ತಿರುಗುತ್ತಾ ತಿರುಗುತ್ತಾ 2019ರ ಈ ಹೊತ್ತಿಗಾಗುವಾಗ ಕನ್ನಡ ನಾಡಿನ ಅಕ್ಷರ ದಾಸೋಹಿಗಳು, ನಾಡಿನ ಮೂಲೆಮೂಲೆಯ ಸಾಹಿತಿಗಳು ಕಾಂತಾವರವನ್ನು ಹುಡುಕಿಕೊಂಡು ಹೋಗುವಂತಾಯಿತು. ಈ ಮಹತ್ವಪೂರ್ಣ ಬದಲಾವಣೆಗೆ ಕಾರಣಕರ್ತರು ಕಳೆದ ಐವತ್ತನಾಲ್ಕು ವರ್ಷಗಳಿಂದ ಕಾಂತಾವರದಲ್ಲಿ ಕನ್ನಡದ ತೇರನ್ನು ಎಳೆಯುತ್ತಿರುವ, ಆಗಸ್ಟ್ 27ಕ್ಕೆ ಬದುಕಿನ ದೀರ್ಘ ಎಪ್ಪತ್ತೈದು ವರ್ಷಗಳನ್ನು (ಹುಟ್ಟಿದ್ದು 1944) ದಾಟುತ್ತಿರುವ ಡಾ. ನಾರಾಯಣ ಮೊಗಸಾಲೆ ಅವರು. ಕಾಂತಾವರ, ಹಳ್ಳಿ. ಕಲ್ಲು ಮುಳ್ಳುಗಳ ಹಾದಿ. ಅಲ್ಲಿ ತೇರನ್ನು ಎಳೆಯುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಮೊಟ್ಟಮೊದಲಿಗೆ ತೇರು ಎಳೆಯಲು ದಾರಿಯೇ ಇರಲಿಲ್ಲ. ದಾರಿಯನ್ನೂ ನಿರ್ಮಿಸುತ್ತಾ ಸಾಗಿದ ಮೊಗಸಾಲೆಯವರು ಇಂದು ಅನೇಕರಿಗೆ ದಾರಿ ತೋರುತ್ತಿದ್ದಾರೆ. 1965ರ ಕಾಲದಲ್ಲಿ ಕಾಂತಾವರ ಎನ್ನುವ ಹಳ್ಳಿಗೆ ಅರೆಕಾಲಿಕ ವೈದ್ಯಾಧಿಕಾರಿ ಬೇಕೆಂದು ತೀರ್ಮಾನವಾದಾಗ ಆಗಷ್ಟೇ ವೈದ್ಯ ಪದವಿ ಮುಗಿಸಿ ಕೆಲಸಕ್ಕಾಗಿ ಅಲೆದಾಡುತ್ತಿದ್ದ ಆದರೆ ಅಷ್ಟೊತ್ತಿಗಾಗಲೇ ಕತೆಗಾರನಾಗಿ ಹೆಸರು ಮಾಡಿದ್ದ ವೈದ್ಯ ನಾ. ಮೊಗಸಾಲೆಯವರು, `ಯಾವ ಹಳ್ಳಿಯಾದರೂ ಸರಿ’ ಎಂದು ಸರ್ಕಾರ ತೋರಿದ ಕಾಂತಾವರಕ್ಕೆ ಬಂದು ಸೇರಿದರು. ಕೋಳ್ಯೂರೆಂಬ ಹಳ್ಳಿಯ ಮೊಗಸಾಲೆಯವರು ಬಂದು ಸೇರಿದ್ದು ಇನ್ನೊಂದು ಅಂಥದ್ದೇ ಹಳ್ಳಿಯನ್ನು. ಸಹಜವಾಗಿ ಅವರಲ್ಲಿದ್ದುದು ಕೃಷಿ ಸಂಸ್ಕೃತಿಯ ಪ್ರಭಾವ. ಕೃಷಿ ಸಂಸ್ಕೃತಿಯ ಅತ್ಯಂತ ಸಹಜ ಲಕ್ಷಣವೆಂದರೆ ನಿರಂತರವಾಗಿ ತೊಡಗಿಕೊಳ್ಳುವುದು. ಕೃಷಿ ಸಂಸ್ಕೃತಿಯಲ್ಲಿ ವಿರಾಮ ಅಥವಾ ವಿರಮಿಸುವ ಎನ್ನುವ ಯಾವುದೇ ನಡೆ ಇಲ್ಲವೇ ಇಲ್ಲ. ಅದೇ ಗುಣ ಮೊಗಸಾಲೆಯವರಲ್ಲೂ ಆವಾಹನೆಯಾಯಿತು. ಕಳೆದ ಐವತ್ತನಾಲ್ಕು ವರ್ಷಗಳಿಂದ ನಿರಂತರ ಕನ್ನಡದ ಧ್ವಜ ಹಿಡಿದು ನಡೆಯುತ್ತಿರುವ ಮೊಗಸಾಲೆಯವರು ಅಲ್ಲೊಂದು ಕನ್ನಡ ಸಂಸ್ಕೃತಿಯ ಲೋಕವನ್ನು ಕಟ್ಟಿದರು. ಈ ಸಂಸ್ಕೃತಿಯ ಲೋಕದ ಪ್ರಮುಖ ಸ್ತಂಬಗಳು, 1976ರಲ್ಲಿ ಆರಂಭವಾದ ಕಾಂತಾವರ ಕನ್ನಡ ಸಂಘ, 2010ರಲ್ಲಿ ಆರಂಭವಾದ ಅಲ್ಲಮ ಪ್ರಭು ಪೀಠ. ಅಷ್ಟೇ ಅಲ್ಲದೇ ಕನ್ನಡ ಸಾಹಿತ್ಯ ಲೋಕದಲ್ಲಿ ಮಹತ್ವದ ಪ್ರಶಸ್ತಿಗಳೆಂದು ಸಾರಸ್ವತ ಲೋಕದಲ್ಲಿ ಗೌರವ ಪಡೆದಿರುವ ಮುದ್ದಣ ಕಾವ್ಯ ಪ್ರಶಸ್ತಿ ಮತ್ತು ಮೂಡಬಿದ್ರೆಯ ವರ್ಧಮಾನ ಪ್ರಶಸ್ತಿ ಪೀಠದ ಪ್ರಶಸ್ತಿಗಳು. ಕಾಂತಾವರ ಕನ್ನಡ ಸಂಘದ ದಕ್ಷಿಣ ಕನ್ನಡ ಕಾವ್ಯ ಮತ್ತು ದಕ್ಷಿಣ ಕನ್ನಡದ ಶತಮಾನದ ಕಾವ್ಯ ಅಲ್ಲದೇ ನಾಡಿಗೆ ನಮಸ್ಕಾರ ಎನ್ನುವ 280ಕ್ಕೂ ಹೆಚ್ಚು ಸರಣಿ ವ್ಯಕ್ತಿ ಚಿತ್ರಣದ ಸಾಹಿತ್ಯಿಕ ಹೊತ್ತಗೆಗಳನ್ನು ಸಂಘ ಹೊರ ತರುವ ಮೂಲಕ ಕನ್ನಡ ಸಂಘ ಅತ್ಯಂತ ಗಮನಾರ್ಹ ಕೊಡುಗೆಗಳನ್ನು ಸಾಹಿತ್ಯಲೋಕಕ್ಕೆ ನೀಡುತ್ತಲೇ ಬಂದಿದೆ. ಕನ್ನಡ ಸಂಘದ ‘ನುಡಿ ನಮನ’ ಕಾರ್ಯಕ್ರಮ ಮತ್ತು ನುಡಿ ನಮನದ ಉಪನ್ಯಾಸಗಳ ಸಂಪುಟೀಕರಣ ಮತ್ತು ಅಲ್ಲಮ ಪ್ರಭು ಪೀಠದ ತಿಂಗಳ ಕಾರ್ಯಕ್ರಮ `ಅನುಭವದ ನಡೆ ಅನುಭಾವದ ನುಡಿ’ ಹಾಗೂ ಆ ಉಪನ್ಯಾಸಗಳನ್ನು ಕರಣ ಕಾರಣ ಎನ್ನುವ ಹೆಸರಿನಿಂದ ಸಂಪುಟೀಕರಣಗೊಳಿಸಿದ ಮಹತ್ಕಾರ್ಯ ಈ ಎಲ್ಲದರ ಹಿಂದೆ ನಾ. ಮೊಗಸಾಲೆಯವರ ಕನಸು ನನಸಾದ ಧನ್ಯತೆಯಿದೆ. ಹೀಗೊಂದು ಹೊಸ ಕನಸು ಸದಾ ಕನ್ನಡದ ಕೆಲಸ ಮಾಡುವ ಕನಸನ್ನು ನೋಡುತ್ತಾ ಅದನ್ನು ನನಸು ಮಾಡುವ ಹುಮ್ಮಸ್ಸಿನಿಂದ ದುಡಿಯುವ ಮೊಗಸಾಲೆಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನನ್ನ ನಂತರವೂ ಈ ಕಾಂತಾವರದಲ್ಲಿ ಕನ್ನಡದ ಚಟುವಟಿಕೆಗಳು ಅವಿಚ್ಛಿನ್ನವಾಗಿ ಮುಂದುವರೆಯಬೇಕು, ಈಗಿರುವ ಕನ್ನಡದ ಕಾಂತಶಕ್ತಿ ಮುಂದೆಯೂ ಇರಬೇಕು ಎಂದು ಆಶಯ ಹೊತ್ತು ಅಲ್ಲೊಂದು ಸಾಂಸ್ಕೃತಿಕ ಗ್ರಾಮವನ್ನು ನಿರ್ಮಾಣ ಮಾಡುವ ಕನಸನ್ನೂ ಕಂಡಿದ್ದಾರೆ. ಕಂಡ ಕನಸನ್ನು ನನಸು ಮಾಡಿಯೇ ತೀರುವ ಈ ಭಗೀರಥ, ಅದರ ಕೆಲಸವನ್ನು ಆರಂಭಿಸಿಯೂ ಬಿಡುತ್ತಾರೆ. ಸಾಹಿತಿಗಳು, ಕಲಾವಿದರು, ಪರಿಸರಾಸ್ತಕರು ಮಾತ್ರ ನಿವೇಶನ ಖರೀದಿಸಿ ನೆಲೆಸಬಹುದೆನ್ನುವ ಆಶಯದಿಂದ ಆರಂಭವಾದ ಈ ಯೋಜನೆಗೆ ಪ್ರಾರಂಭದಲ್ಲಿ ತಣ್ಣಗಿನ ಪ್ರತಿಕ್ರಿಯೆ ದೊರೆಯಿತು. ಸತ್ಕಾರ್ಯಗಳಿಗೆ ನೆರವು ದೊರಕುತ್ತದೆ ಎನ್ನುವ ಮಾತಿನಂತೇ`ಪ್ರಜಾವಾಣಿ’ ಪತ್ರಿಕೆಯಲ್ಲಿ ಈ ಯೋಜನೆಯ ಕುರಿತು ಸುದ್ದಿಯೊಂದು ಪ್ರಕಟವಾಯ್ತು. ಈ ಯೋಜನೆಗೆ ನಂತರ ಅಭೂತಪೂರ್ವ ಪ್ರತಿಕ್ರಿಯೆ ಲಭಿಸಿತು ಎಂದು ಧನ್ಯತೆಯಿಂದ ಮೊಗಸಾಲೆಯವರು ಸ್ಮರಿಸುತ್ತಾರೆ. ಹೀಗೆ ಕಾಂತಾವರದ ಮಡಿಲಲ್ಲಿ `ಅಲ್ಲಮನ ಹಳ್ಳಿ’ ಎದ್ದೇಳುವ ಎಲ್ಲ ತಯಾರಿಗಳು ಸಾಂಗವಾಗಿ ನಡೆಯುತ್ತಿವೆ. ಒಬ್ಬ ಅಕ್ಷರ ಮೋಹಿ ವೈದ್ಯ, ಬಂದಿದ್ದು ಖಾಲಿ ಜೋಳಿಗೆಯೊಂದಿಗೆ. ಆದರೆ, ಈಗ ಮನದ ಜೋಳಿಗೆ ತುಂಬ ಧನ್ಯತೆಯ ಸಿಹಿ ತುಂಬಿಕೊಂಡಿದ್ದಾರೆ. ನಾರಾಯಣ ಮೊಗಸಾಲೆ ಅವರ ಬಯಲಿನಂತಹ ಬದುಕಿಗೆ ಚೌಕಟ್ಟು ಕಟ್ಟಿದವರು ಪತ್ನಿ ಪ್ರೇಮಾ. ಮೂರು ಮಕ್ಕಳು, ನಿರಂಜನ, ಸುದರ್ಶನ ಮತ್ತು ಡಾ ಪ್ರಸನ್ನ. ಪತ್ನಿ ಮತ್ತು ಮೂರೂ ಮಕ್ಕಳು ಮೊಗಸಾಲೆಯವರ ಈ ಬೆಟ್ಟದಂತಹ ಕನಸಿಗೆ ನೀರೆರೆದವರು. ಸಾಹಿತ್ಯ ಕೃಷಿ, ಸಂಘಟನೆಯ ಕಾಯಕ ಎರಡರ ನಡುವೆ ಸಮನ್ವಯ ತೋರುತ್ತಾ ಬದುಕುತ್ತಿರುವ ನಾ. ಮೊಗಸಾಲೆಯವರಿಗೆ ಒಮ್ಮೊಮ್ಮೆ ಸಂಘಟಕ ಮೊಗಸಾಲೆಯವರ ಮುಂದೆ ಸಾಹಿತಿ ಮೊಗಸಾಲೆಯನ್ನು ಸಾಹಿತ್ಯಲೋಕ ಮರೆಯುತ್ತದೇ ಎನ್ನುವ ಮನುಷ್ಯ ಸಹಜ ವಿಷಾದದ ಸಣ್ಣ ಎಳೆ ಹಾಗೇ ಹಾದು ಹೋಗುವುದೂ ಇದೆ. ಆಗ ಮತ್ತದೇ ಕೃಷಿ ಸಂಸ್ಕೃತಿಯ ನಡೆಯನ್ನು ಜ್ಞಾಪಿಸಿಕೊಳ್ಳುತ್ತಾರೆ. `ಕೃಷಿ ಸಂಸ್ಕೃತಿಯಲ್ಲಿ ಅತೀ ನಿರೀಕ್ಷೆ ಅತೀ ನಿರಾಶೆ ಎರಡೂ ಇಲ್ಲ. ಮಳೆ ಬೆಳೆ ಎನ್ನುವ ದೇವರಿಗಿಂತ ಆಚೆ ಯಾವ ದೇವರೂ ಇಲ್ಲ’ ಎನ್ನುತ್ತಾ ತಮ್ಮ ಎಂದಿನ ಮುಕ್ತ ನಗೆಯನ್ನು ಚೆಲ್ಲುತ್ತಾರೆ. ಹದಿನೇಳು ಕಾದಂಬರಿಗಳು, ಆರು ಕಥಾ ಸಂಕಲನಗಳು, ಹತ್ತು ಕವನ ಸಂಕಲನಗಳು ನೂರಾರು ಲೇಖನಗಳು ಮೊಗಸಾಲೆಯವರ ಸೃಜನಶೀಲ ಮನಸ್ಸಿನ ಪ್ರತಿಫಲನವಾಗಿವೆ. `ಉಲ್ಲಂಘನೆ’, `ಮುಖಾಂತರ’, `ಧಾತು’ ಕಾದಂಬರಿಗಳು ಅಲ್ಲದೇ `ಬಯಲಬೆಟ್ಟ’ ಎನ್ನುವ ಆತ್ಮಕಥನ ಅಲ್ಲದೇ `ಕಾಮನೆಯ ಬೆಡಗು’, `ಇಹಪರದ ಕೊಳ’, `ದೇವರು ಮತ್ತೆ ಮತ್ತೆ’ ಕವನ ಸಂಕಲನಗಳು ಕನ್ನಡ ಸಾಹಿತ್ಯ ಲೋಕದ ಎಲ್ಲ ಕಾಲದ ಶ್ರೇಷ್ಠ ಸಾಹಿತ್ಯದ ಮೊದಲ ಸಾಲಿನಲ್ಲೇ ಭದ್ರವಾಗಿವೆ. ಮೂರು ಬಾರಿ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ರಾಜ್ಯೋತ್ಸವ, ಮಾಸ್ತಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಕಾರಂತ ಪ್ರಶಸ್ತಿಗಳಿಂದ ಸಮ್ಮಾನಿತರಾದ ಮೊಗಸಾಲೆಯವರ ಕೃತಿಗಳ ಕುರಿತು ಪಿಎಚ್.ಡಿ ಅಧ್ಯಯನಗಳು ನಡೆಯುತ್ತಿವೆ. ಅವರ ಬತ್ತದ ಉತ್ಸಾಹದ ಬಗ್ಗೆಯೂ ಅಧ್ಯಯನ ನಡೆಸಬಹುದು. ಮೊಗಸಾಲೆಯವರಿಗೆ ಎಪ್ಪತ್ತೈದು. ವಿರಾಮವಿಲ್ಲದೇ ಕನ್ನಡದ ಕಾಯಕ ನಡೆಸಿದ ಈ ಜಂಗಮನಿಗೆ ಈಗ ಕಾಂತಾವರ, ಅವರು ಕೊಟ್ಟ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿ ರಿಟರ್ನ್ ಗಿಫ್ಟ್ ಕೊಡುವಂತೆ ಅವರ ಎಪ್ಪತ್ತೈದರ ಸಂಭ್ರಮವನ್ನು ಅರ್ಥಪೂರ್ಣವಾಗಿ ನಡೆಸುತ್ತಿದೆ. ಕೊಡುವುದೇನು, ಕೊಂಬುದೇನು ಒಲವು, ಸ್ನೇಹ, ಪ್ರೇಮ ಅಷ್ಟೇ! ಬೇಂದ್ರೆಯಜ್ಜನ ಈ ಸಾಲುಗಳು ಕಾಂತಾವರದ ಈ ಜಂಗಮನಿಗೆ ಸೊಗಸಾಗಿ ಒಪ್ಪುತ್ತವೆ. ಕಾಂತಾವರದ ಅಯಸ್ಕಂತವಾದ ಮೊಗಸಾಲೆಯವರು ನೂರ್ಕಾಲ ಬಾಳಲಿ
author”: “ದೀಪಾ ಫಡ್ಕೆ”,
https://www.prajavani.net/artculture/article-features/nmogasaale-660038.html
courtsey:prajavani.net