ಕನ್ನಡ ಸವಿಗನ್ನಡ
ಕನ್ನಡ ಭಾಷೆ ದ್ರಾವಿಡ ಭಾಷಾ ಬಳಗಕ್ಕೆ ಸೇರುತ್ತದೆ. ಇದು ಭಾರತದಲ್ಲಿ ಪ್ರಚಲಿತವಿರುವ ಭಾಷೆಗಳಲ್ಲಿ ಎರಡನೇ ಅತಿ ಹಳೆಯ ಭಾಷೆಯೂ ಹೌದು. ಕನ್ನಡ ಸಾಹಿತ್ಯ ಭಾರತದಲ್ಲಿ ಮೂರನೇ ಅತಿ ಹಳೆಯ ಸಾಹಿತ್ಯಕ ಸಂಪ್ರದಾಯ, ಸಂಸ್ಕೃತ ಸಾಹಿತ್ಯ (ಮತ್ತು ಅದರ ಉಪಭಾಷೆಗಳಾದ ಪ್ರಾಕೃತ ಇತ್ಯಾದಿ).
ಕನ್ನಡದಲ್ಲಿ ಬರವಣಿಗೆಯ ಪ್ರಪ್ರಥಮ ಉದಾಹರಣೆ ದೊರಕಿರುವುದು ತಾಳಗುಂದದ ಸಿಂಹಕಟಾಂಜನ ಶಾಸನದಲ್ಲಿ (ಸು. ಕ್ರಿ.ಶ ೩೭೦ ರಿಂದ ೪೫೦). ಪ್ರಸಿದ್ಧವಾದ ಬಾದಾಮಿ ಶಾಸನಗಳು ಪುರಾತನ ಕನ್ನಡ ಬರವಣಿಗೆಯ ಮತ್ತಷ್ಟು ಉದಾಹರಣೆಗಳನ್ನು ನೀಡುತ್ತವೆ. ಉಪಲಬ್ಧವಾಗಿರುವ ಪ್ರಥಮ ಕನ್ನಡ ಪುಸ್ತಕ ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ಕವಿರಾಜಮಾರ್ಗ. ಈ ಪುಸ್ತಕ ಕನ್ನಡ ಕಾವ್ಯ, ಕನ್ನಡ ನಾಡು, ಮತ್ತು ಕನ್ನಡಿಗರ ಬಗ್ಗೆ ಬರೆಯಲ್ಪಟ್ಟ ಒಟ್ಟಾರೆ ಸಾರಾಂಶವೆನ್ನಬಹುದು. ಇದಕ್ಕೂ ಮೊದಲು ಬರೆಯಲಾದ ಕೆಲವು ಕನ್ನಡ ಪುಸ್ತಕಗಳ ಉಲ್ಲೇಖವು ಇಲ್ಲಿ ಬಂದಿರುವ ಆಧಾರದ ಮೇಲೆ ಕನ್ನಡ ಸಾಹಿತ್ಯದ ಉಗಮ ಸುಮಾರು ಕ್ರಿ.ಶ. ೬-೭ನೇ ಶತಮಾನಗಳಲ್ಲಿ ಆದದ್ದಿರಬಹುದು. ಆದರೆ ಕವಿರಾಜಮಾರ್ಗದ ಹಿಂದಿನ ಯಾವ ಕೃತಿಗಳೂ ಇದುವರೆಗೆ ದೊರಕಿಲ್ಲ. ಕನ್ನಡ ಸಾಹಿತ್ಯದ ಚರಿತ್ರೆಯನ್ನು ಮೂರು ಘಟ್ಟಗಳಾಗಿ ವಿಂಗಡಿಸ ಬಹುದು: ಹಳೆಗನ್ನಡ, ನಡುಗನ್ನಡ ಹಾಗೂ ಆಧುನಿಕ ಕನ್ನಡ.
ಹಳೆಗನ್ನಡ: ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹತ್ತನೇ ಶತಮಾನದಿಂದ ಸುಮಾರು ಹನ್ನೆರಡನೇ ಶತಮಾನದ ವರೆಗಿನ ಕಾಲಘಟ್ಟವನ್ನು ಹಳೆಗನ್ನಡ ಎಂದು ಗುರುತಿಸಬಹುದು. ಈ ಕಾಲದ ಸಾಹಿತ್ಯ ಮುಖ್ಯವಾಗಿ ಜೈನಧರ್ಮವನ್ನು ಅವಲಂಬಿಸಿದೆ. ಆದಿಕವಿ ಎಂದು ಪ್ರಸಿದ್ಧವಾದಂಥ ಕವಿ ಪಂಪ(ಕ್ರಿ.ಶ. ೯೦೨-೯೭೫)ನ ವಿಕ್ರಮಾರ್ಜುನ ವಿಜಯ ಅಥವಾ ಪಂಪ ಭಾರತ ಇಂದಿಗೂ ಮೇರು ಕೃತಿಯೆಂದೇ ಪರಿಗಣಿತವಾಗಿದೆ. ಅವನ ಇನ್ನೊಂದು ಮುಖ್ಯಕೃತಿ ಆದಿಪುರಾಣ. ‘ಮಾನವ ಕುಲ ತಾನೊಂದೇ ವಲಂ’ ಎಂದು ವಿಶ್ವಮಾನವ ತತ್ವವನ್ನು ಸಾರಿದ ಜಗದ ಕವಿ ಪಂಪ.ಇದೇ ಕಾಲದ ಇನ್ನೂ ಕೆಲ ಪ್ರಮುಖ ಲೇಖಕರೆಂದರೆ ಶಾಂತಿನಾಥ ಪುರಾಣವನ್ನು ರಚಿಸಿದ ಪೊನ್ನ (೯೩೯-೯೬೬), ಹೆಸರಾಂತ ಕವಿ ರನ್ನ (೯೪೯). ರನ್ನನ ಪ್ರಮುಖ ಕೃತಿಗಳು ಜೈನ ಧರ್ಮೀಯವಾದ ಅಜಿತ ತೀರ್ಥಂಕರ ಪುರಾಣ ಮತ್ತು ಗದಾಯುದ್ಧ ಅಥವಾ ಸಾಹಸಭೀಮ ವಿಜಯ. ಇದು ಇಡೀ ಮಹಾಭಾರತದ ಒಂದು ಸಿಂಹಾವಲೋಕನ ದೃಷ್ಟಿ. ಮಹಾಭಾರತ ಯುದ್ಧದ ಕೊನೆಯ ದಿನದಲ್ಲಿ ಸ್ಥಿತವಾಗಿದ್ದರೂ ಸಿಂಹಾವಲೋಕನ ಕ್ರಮದಲ್ಲಿ ಇಡಿಯ ಮಹಾಭಾರತವನ್ನು ಪರಿಶೀಲಿಸುತ್ತದೆ. ಈ ಎಲ್ಲ ಕಾವ್ಯಗಳು ಚಂಪೂ ಶೈಲಿಯಲ್ಲಿವೆ.
ನಡುಗನ್ನಡ: ಈ ಸಾಹಿತ್ಯ ಕಾಲದಲ್ಲಿ ಅನೇಕ ಹೊಸ ಸಾಹಿತ್ಯ ಪ್ರಕಾರಗಳು ಬೆಳಕಿಗೆ ಬಂದವು. ಇವುಗಳಲ್ಲಿ ಮುಖ್ಯವಾದವು ರಗಳೆ, ಸಾಂಗತ್ಯ ಮತ್ತು ದೇಸಿ. ಈ ಕಾಲದ ಸಾಹಿತ್ಯ ಜೈನ, ಹಿಂದೂ ಹಾಗೂ ಜಾತ್ಯತೀತ ಬೋಧನೆಗಳ ಮೇಲೆ ಆಧಾರಿತವಾಗಿದೆ. ಈ ಘಟ್ಟದ ಪ್ರಮುಖ ಲೇಖಕರಲ್ಲಿ ಇಬ್ಬರು ಪ್ರಮುಖರು
ಹರಿಹರ ಮತ್ತು ರಾಘವಾಂಕ. ಇಬ್ಬರೂ ತಮ್ಮದೇ ಶೈಲಿಯಲ್ಲಿ ಕನ್ನಡ ಸಾಹಿತ್ಯದ ದಾರಿಯನ್ನು ಬೆಳಗಿದವರು. ಹರಿಹರನು ರಗಳೆ ಎಂಬ ಪ್ರಕಾರದ ಸಾಹಿತ್ಯ ರಚನೆಯನ್ನು ಪರಿಚಯಿಸಿದನು. ರಾಘವಾಂಕನ ಮುಖ್ಯ ಕೃತಿ ಹರಿಶ್ಚಂದ್ರ ಕಾವ್ಯ, ಪೌರಾಣಿಕ ಪಾತ್ರವಾದ ಹರಿಶ್ಚಂದ್ರನ ಜೀವನವನ್ನು ಕುರಿತದ್ದು. ಇದೇ ಕಾಲದ ಇನ್ನೊಬ್ಬ ಪ್ರಸಿದ್ಧ ಜೈನ ಕವಿ ಜನ್ನ. ಈತನ ಕೃತಿಗಳು ಯಶೋಧರ ಚರಿತೆ ಮತ್ತು ಅನಂತನಾಥ ಪುರಾಣ. ಕನ್ನಡ ವ್ಯಾಕರಣದ ಬಗೆಗಿನ ಮುಖ್ಯಕೃತಿಯಾದ
ಕೇಶಿರಾಜನ ಶಬ್ದಮಣಿದರ್ಪಣದ ಕಾಲವೂ ಇದೇ. ವಚನಕಾರರಾದ ಬಸವೇಶ್ವರ, ಅಕ್ಕಮಹಾದೇವಿ ಮೊದಲಾದ ಶರಣರ ನಂತರದ ಕವಿಯಾದ ಸರ್ವಜ್ಞನ ಕಾಲವೂ ಇದೇ. ಈ ವಚನಗಳು, ತ್ರಿಪದಿಗಳು ಅಂದಿನ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಕನ್ನಡಿ. ವಚನ ಸಾಹಿತ್ಯವು ಅಂದಿನ ಸಾಮಾಜಿಕ ಕ್ರಾಂತಿಯ ಪ್ರಕ್ರಿಯೆಗೆ ಕನ್ನಡಿಯಾಗಿದೆ. ಬಸವಣ್ಣನವರಿಂದ ಆರಂಭವಾದ ಈ ಕ್ರಾಂತಿ ಜಾತಿ, ಮತ, ಧರ್ಮಗಳ ಯೋಚನೆಗಳ ಕ್ರಾಂತಿಕಾರಿ ಮರು-ಪರಿಶೀಲನೆಗೆ ದಾರಿ ಮಾಡಿಕೊಟ್ಟಿತು.ವಚನ ಸಾಹಿತ್ಯದಿಂದ ಬಂದ ಮುಖ್ಯ ಬೋಧನೆಗಳೆಂದರೆ ಕಾಯಕವೇ ಕೈಲಾಸ ಮತ್ತು ಅಧ್ಯಾತ್ಮಿಕತೆಯ ಬಗ್ಗೆ ಹೊಸ ನೋಟ.
ಕುಮಾರವ್ಯಾಸ ಕೂಡ ನಡುಗನ್ನಡದ ಅತ್ಯಂತ ಪ್ರಸಿದ್ಧ ಕವಿ. ಅವನ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದು ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಹೊಂದಿದೆ. ನಂತರದ್ದು ದಾಸ ಸಾಹಿತ್ಯ.
ದಾಸ ಸಾಹಿತ್ಯವು ೧೫ನೇ ಶತಮಾನದಲ್ಲಿ ಆರಂಭಗೊಂಡಿತು. ಇದು ಸಾಹಿತ್ಯ ಸಂಗೀತ ಪದ್ಧತಿಗಳಲ್ಲೊಂದಾದ ಕರ್ನಾಟಕ ಸಂಗೀತಕ್ಕೆ ಬುನಾದಿಯಾಗಿದೆ. ದಾಸರ ಪದಗಳಿಗೆ ದೇವರನಾಮಗಳೆಂದೂ ಹೆಸರು. ಈ ಪ್ರಕಾರದ ಮುಖ್ಯ ಕನ್ನಡಕವಿಗಳೆಂದರೆ ಪುರಂದರದಾಸರು. (೧೪೯೪-೧೫೬೪) ಮತ್ತು ಕನಕದಾಸರು (೧೫೦೯-೧೬೦೯). ಇವರನ್ನು ದಾಸ ಸಾಹಿತ್ಯದ ಅಶ್ವಿನಿದೇವತೆಗಳೆಂದು ಕರೆಯಲಾಗಿದೆ.
ಆಧುನಿಕ ಕನ್ನಡ ಎಂದರೆ ನವೋದಯ ಕಾಲ. ೧೯ನೇ ಶತಮಾನದ ಕೊನೆಗೆ ಹಾಗು ಇಪ್ಪತ್ತನೆ ಶತಮಾನದ ಆರಂಭದಲ್ಲಿ ಹೊಸ ಹುಟ್ಟು ಪಡೆಯಿತು. ಬಿಎಂಶ್ರೀ, ಕುವೆಂಪು, ದರಾ ಬೇಂದ್ರೆಯವರೇ ಮೊದಲಾದವರು ಈ ಕಾಲದ ಶ್ರೇಷ್ಠ ಲೇಖಕರು. ಈ ಕಾಲದ ಸಾಹಿತ್ಯ ಪ್ರಕಾರಗಳು ಇಂಗ್ಲಿಷ್ ಕಾವ್ಯ ಮತ್ತು ಗ್ರೀಕ್ ರುದ್ರ ನಾಟಕಗಳಿಂದ ಪ್ರಭಾವಿತರಾದವು.
ಈಗ ಕನ್ನಡ ಸಾಹಿತ್ಯವು ಅತ್ಯಂತ ಉಚ್ಛ್ರಾಯ ಘಟ್ಟವನ್ನು ತಲುಪಿದ್ದು ಜಗತ್ತಿನಲ್ಲಿ ಅತ್ಯುತ್ತಮ ಸಾಹಿತ್ಯ ಪ್ರಕಾರವಾಗಿ ಗಣಿಸಲ್ಪಡುತ್ತದೆ.