ಕನಸುಗಳು ಬೇಕೇ?
ಕಾಲೇಜು ಕಲಿಯುತ್ತಿರುವ ಹದಿಹರೆಯದ ಮಗನಿಗೆ ಅವ್ವನದೊಂದು ಪತ್ರ…
ಸವಿಗನಸುಗಳು ಬೇಕು ಸವಿಯಲೀ ಬದುಕು
ಪ್ರೀತಿಯ ಸುಮೀತ್,
ನಿನಗೆ ನನ್ನ ಒಲವಿನ ನೆನಹುಗಳು.
ನೀನು ನಿನ್ನೆ ನನಗೊಂದು ಪ್ರಶ್ನೆ ಕೇಳಿದ್ದೆ… “ಅವ್ವಾ, ಕನಸು ಕಾಣಬಾರದೇ? ಅದು ತಪ್ಪಂತೆ… ನನ್ನ ಸಹಪಾಠಿಗಳೆಲ್ಲರೂ ಹೇಳ್ತಾರೆ… ನಮ್ಮ ಭಾಷಾ ಶಿಕ್ಷಕರೂ ಹಾಗೇ ಹೇಳ್ತಾರೆ” ಅಂತ… ಅದಕ್ಕೆ ಉತ್ತರ ಫೋನಿನಲ್ಲಿ ಕೊಡುವುದು ನನಗೇಕೋ ಅಷ್ಟೊಂದು ಸಮಂಜಸವೆನ್ನಿಸಲಿಲ್ಲ… ಅದಕ್ಕೇ ಇವೊತ್ತು ನಿನಗೊಂದು ಪತ್ರವನ್ನೇ ಬರೆಯುತ್ತಿದ್ದೇನೆ. ನಿನಗೆ ನೆನಪಾದಾಗಲೊಮ್ಮೆ ಮತ್ತೆ ಮತ್ತೆ ಓದಬಹುದು… ಬೇರೆಯ ಗೆಳೆಯಂದಿರೊಂದಿಗೆ ಕೂಡ ಈ ವಿಷಯವನ್ನು ಹಂಚಿಕೊಳ್ಳಬಹುದು. ಹಾಗೆಂದು ಇದೇನು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಅವರ ತಂದೆ ಮಾಜಿ ಪ್ರಧಾನಿ ಶ್ರೀಯುತ ಜವಾಹರಲಾಲ ನೆಹರುರವರು ಬರೆದ ಪತ್ರಗಳಂತೆ ಅಷ್ಟೊಂದು ಮಹತ್ವದ್ದಲ್ಲ. ಆದರೂ ನಿನ್ನ ಬೌದ್ಧಿಕ ವಿಕಾಸದಲ್ಲಿ ಒಂದು ಉಪಯೋಗಕಾರಿ ಮೆಟ್ಟಿಲಾದೀತು ಎಂದು ನನ್ನ ಅನಿಸಿಕೆ.
ಬದುಕಿಗೆ ಕನಸುಗಳು ಅತ್ಯಂತ ಅಗತ್ಯ ಎಂದೇ ನನಗೆನ್ನಿಸುತ್ತದೆ. ಸುಂದರ ಬದುಕಿನ ಬಗ್ಗೆ ಕನಸುಗಳನ್ನು ಕಾಣುವದು ತಪ್ಪೇನಲ್ಲ. ಕನಸುಗಳು ನಮ್ಮ ಗುರಿ ಮುಟ್ಟುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕನಸುಗಳಿದ್ದರೇನೇ ಜೀವನ ಸಾರ್ಥಕ. ಜೀವನ ಬದುಕಿನ ಒಂದು ಮಾರ್ಗ. ನಾವು ಅದರ ಬಗ್ಗೆ ಯೋಚಿಸಲಿ ಬಿಡಲಿ, ಅದು ತನ್ನಷ್ಟಕ್ಕೆ ತಾನೇ ಕ್ರಮಿಸುತ್ತಲಿರುತ್ತದೆ. ಆದರೆ ಬದುಕು ಜೀವನಕ್ಕಿಂತ ದೊಡ್ಡದು. ಅದು ಸಾರ್ಥಕವಾಗಬೇಕಾದರೆ ಅದಕ್ಕೊಂದು ಸುಂದರ ನೆಲೆಗಟ್ಟು ಬೇಕೇ ಬೇಕು. ಅದು ನಾವು ಕಾಣುವ ಕನಸುಗಳಿಂದಲೇ ಸಾಧ್ಯ. ನಮ್ಮ ಸಾಧನೆ ಹಾಗೂ ನಮ್ಮ ಕನಸುಗಳು ಒಂದೇ ಮಾರ್ಗದಲ್ಲಿ ಸಾಗಿದಾಗಲೇ ನಮ್ಮ ಬದುಕು ನಾವು ಕಟ್ಟಿಕೊಂಡ ಸಾರ್ಥಕತೆ ನಮ್ಮಲ್ಲಿ ಮೂಡುತ್ತದೆ. ಒಮ್ಮೊಮ್ಮೆ ಎಡರು ತೊಡರುಗಳೂ ಬರುತ್ತವೆ. ಆಗ ನಾವು ನಮ್ಮ ಕನಸುಗಳನ್ನು ಕೈಗೂಡಿಸಿಕೊಳ್ಳುವುದರ ಬಗ್ಗೆ ಅಚಲವಾದ ಮನೋಸ್ಥೈರ್ಯ ಹೊಂದಿದಾಗ ನಮ್ಮ ಗುರಿಯಿಂದ ನಮ್ಮನ್ನು ಯಾರೂ ಅಲುಗಿಸಲಾರರು. ಇಲ್ಲದೆಹೋದರೆ ನಮ್ಮ ಬದುಕು ಚುಕ್ಕಾಣಿಯಿಲ್ಲದ ಹಡಗಿನಂತೆ ಆದೀತು. ಆದ್ದರಿಂದಲೇ, ನಮ್ಮ ಜೀವನ ಸುಖಮಯವಾಗಬೇಕಾದರೆ ಸುಂದರವಾದ ಕನಸುಗಳನ್ನು ನಾವು ಕಾಣಲೇಬೇಕು. ಅಲ್ಲದೆ ಅವು ಕೇವಲ ಕನಸುಗಳಾಗಿ ಉಳಿಯದಂತೆ ಅವುಗಳನ್ನು ಸಾಕಾರಗೊಳಿಸಿಕೊಳ್ಳವ ಪ್ರಯತ್ನವನ್ನೂ ಮಾಡಬೇಕು. ಕನಸುಗಳು ಯಾವಾಗಲೂ ಒಂದು ಸುಂದರ ಅನುಭವ ಕೊಡಬಲ್ಲವು. ಅದರಿಂದಾಗಿ ಮನಸ್ಸು ಹೊಸ ಉಲ್ಹಾಸವನ್ನು ಹೊಂದುತ್ತದೆ. ಮನಸ್ಸು ಸೋಲಿನ ದಾರಿಯಲ್ಲಿ ಬಸವಳಿದಾಗ ಈ ಕನಸುಗಳೇ ನಮಗೆ ಹೊಸ ಜೀವನೋತ್ಸಾಹ ತುಂಬಬಲ್ಲವು. ಬದುಕಿನ ದಾರಿಯಲ್ಲಿ ಮುನ್ನಡೆಯುವಂತೆ ಪ್ರಚೋದಿಸಬಲ್ಲವು. ಈ ಪ್ರಚೋದನೆ ನಮಗೆ ಹೊರಗಿನಿಂದ ದೊರೆಯುವಂಥದಲ್ಲ. ಆಂತರಿಕವಾಗಿ ನಮಗೆ ಪ್ರೇರಣೆ ದೊರೆಯುವುದೇ ಈ ಕನಸುಗಳಿಂದ. ಆದರೆ ಕೇವಲ ಕನಸುಗಳನ್ನು ಕಾಣುವುದರಿಂದ ಏನೂ ಆಗದು. ಅವುಗಳನ್ನು ಸಾಕಾರಗೊಳಿಸಿಕೊಳ್ಳುವಲ್ಲಿ ಪ್ರಯತ್ನವನ್ನೂ ಮಾಡಬೇಕು. ಆ ಪ್ರಯತ್ನದಲ್ಲಿ ಬರುವ ಅಡೆ ತಡೆಗಳನ್ನೂ ಎದುರಿಸಿ ಮುನ್ನಡೆಯುವ ಆತ್ಮಸ್ಥೈರ್ಯವನ್ನೂ ಛಲವನ್ನೂ ಮೈಗೂಡಿಸಿಕೊಳ್ಳಬೇಕು. ಆದರೆ ನಮ್ಮ ಕನಸುಗಳು ತಿರುಕನ ಕನಸಿನಂತೆ ಆಗಬಾರದು. ಕೇವಲ ಅವುಗಳನ್ನು ಕಂಡು ಸುಖಿಸಿದರೆ ಆಗದು. ಅವುಗಳನ್ನು ಸಾಕಾರಗೊಳಿಸಿಕೊಳ್ಳುವಲ್ಲಿ ಸತತ ಪರಿಶ್ರಮವೂ ಬೇಕು. ಈ ದಾರಿಯಲ್ಲಿ ಅನೇಕ ಎಡರು ತೊಡರುಗಳು ಬಂದಾಗ ಅವುಗಳನ್ನು ಎದುರಿಸುವ ಛಲವೂ ಕೂಡ ನಮ್ಮ ಕನಸುಗಳಿಂದಲೇ ನಮಗೆ ಪ್ರಾಪ್ತಿಯಾಗುತ್ತದೆ. ಉದಾಹರಣೆಗೆ ಸತ್ಯವಂತನಾಗಬೇಕೆಂದು ಕನಸು ಕಂಡವನಿಗೆ ಸತ್ಯದ ಮಾರ್ಗದಲ್ಲಿ ಸಾಗುವಾಗ ಕಷ್ಟಗಳು ಬರುವುದು ಸಹಜ. ಆಗ ನಮ್ಮ ಕನಸುಗಳು ನಮ್ಮ ಮಾರ್ಗವನ್ನು ಬಿಡದಂತೆ ನಮಗೆ ಸ್ಪೂರ್ತಿಯಾಗುತ್ತವೆ.
ಆದರೆ ಒಂದು ಮಾತು ನೆನಪಿನಲ್ಲಿರಿಸಿಕೋ ಮಗೂ… ಕನಸು ಕಾಣುತ್ತಲೇ ಕುಳಿತುಬಿಡುವುದೂ ಜೀವನವಲ್ಲ. ಅದರಲ್ಲೂ ಹಗಲುಗನಸುಗಳು ಜೀವನವನ್ನು ರೂಪಿಸುವುದರ ಜೊತೆಗೇ ಅದೇ ಒಂದು ಚಟವಾದಾಗ ಜೀವನವನ್ನು ಹಾಳೂ ಮಾಡುತ್ತವೆ. ಇದು ತಪ್ಪು. ಕನಸುಗಳು ಮೆಟ್ಟಿಲುಗಳೇ ಹೊರತು ಅವೇ ಗುರಿಗಳಲ್ಲ. ಹೀಗೆ ಯಾವಾಗಲೂ ಹಗಲುಗನಸು ಕಾಣುತ್ತ ಕುಳಿತುಕೊಳ್ಳುವುದರಿಂದ ನಮ್ಮ ಕರ್ತೃತ್ವ ಶಕ್ತಿ ಕುಂದುತ್ತದೆ. ಅಷ್ಟೇ ಅಲ್ಲ, ನಾವು ಖಿನ್ನತೆಗೆ ಒಳಗಾಗುವ ಸಂಭವವೂ ಇರುತ್ತದೆ. ಅದರಲ್ಲೂ ನಿನ್ನಂಥ ಎಳೆಹರೆಯದ ಮಕ್ಕಳಿಗಂತೂ ಈ ಕನಸು ಕಾಣುವ ಚಟವು ಒಮ್ಮೊಮ್ಮೆ ಓದುವ, ಜೀವನದಲ್ಲಿ ಮುಂದೆ ಬರುವ ಮಾರ್ಗಗಳನ್ನೇ ಮುಚ್ಚಿಬಿಡುತ್ತದೆ.
ಓದಲೆಂದು ನೀವು ಏಕಾಂತವನ್ನು ಬಯಸುವ ದಿನಗಳಿವು. ಅಂಥ ಸಮಯದಲ್ಲಿ ಪುಸ್ತಕವನ್ನು ಮುಂದಿರಿಸಿಕೊಂಡು ಮನನ ಮಾಡಿಕೊಳ್ಳುವವರಂತೆ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳುವ ನೀವು ಕನಸಿನ ಲೋಕದಲ್ಲಿ ವಿಹರಿಸುತ್ತಿರುವುದನ್ನು ಊಹಿಸಲೂ ಅಸಾಧ್ಯ. ಇದು ನಿಮ್ಮ ಪ್ರಗತಿಗೇ ಮಾರಕವಾದಿತು. ಕನಸಿನಲ್ಲಿ ರ್ಯಾಂಕ್ ಬಂದಂತೆ, ನಿಮಗೆ ಸನ್ಮಾನ ಮಾಡಿದಂತೆ, ನೀವು ಬಯಸಿದ ಕಾಲೇಜಿನಲ್ಲಿ ನಿಮಗೆ ಸೀಟು ಸಿಕ್ಕಂತೆ, ನೀವು ದೊಡ್ಡ ಡಾಕ್ಟರೋ, ಇಂಜಿನಿಯರೋ ಆದಂತೆ, ಮುಂದೆ ಇನ್ನೂ ಮುಂದುವರೆದು ದೊಡ್ಡ ಶ್ರೀಮಂತನಾದಂತೆ, ಕಾರು, ಬಂಗಲೆ…. ಹೀಗೆಯೇ ತಾಸುಗಟ್ಟಲೆ ಮುಂದುವರೆದಂತೆ ನಿಮ್ಮ ಸಮಯವೂ ಹಾಳು. ಅಲ್ಲದೆ ಕಣ್ಣು ಬಿಟ್ಟಾಗ ಅದೇ ಹೊರಜಗತ್ತು… ಅವೇ ಪುಸ್ತಕಗಳು.. ಅವೇ ಪರೀಕ್ಚೆಯ ಟೆನ್ಶನ್ನು… ಮನಸ್ಸು ಮುದುಡುತ್ತದೆ. ನಿರಾಶೆ ಕವಿಯುತ್ತದೆ. ಹಾಗಾಗಲು ಅವಕಾಶ ಕೊಡಬಾರದು. ನಮ್ಮ ಕನಸು ನಮ್ಮ ಇತಿಮಿತಿಯಲ್ಲಿರಬೇಕು. ಅದರಿಂದ ನಾವು ಒಂದು ರೀತಿಯ ಧನಾತ್ಮಕ ಬಲವನ್ನು ಪಡೆಯಬೇಕು.
ಒಂದೇ ಕನಸು ನಿಮಗಿರಲಿ. ಅದರ ನೆನಪೂ ನಿಮಗಿರಲಿ. ಆ ದಾರಿಯಲ್ಲಿ ಸಾಗುವ ಗುರಿಯೊಂದೇ ನಿಮ್ಮ ಮುಂದಿರಲಿ. ಜೀವನದ ದಾರಿಯಲ್ಲಿ ಎಡರುತೊಡರುಗಳು ಬಂದಾಗ ಆ ಕನಸು ನಿಮ್ಮ ಮುಂದೆ ಸುಳಿದು ನಿಮ್ಮನ್ನು ನಿಮ್ಮ ಗುರಿಯಿಂದ ವಿಚಲಿತಗೊಳಿಸದಿರಲಿ. ನಿಮ್ಮ ಮನದಲ್ಲಿ ಆರೋಗ್ಯಕರ ಕನಸುಗಳೇ ಒಡಮೂಡಲಿ. ಸಾಧನೆಯ ಮಾರ್ಗದಲ್ಲಿ ನಿಮ್ಮ ಕನಸುಗಳು ಸ್ಪೂರ್ತಿಯ ಸೆಲೆಗಳಾಗಲಿ. ನಿದ್ರೆಯ ಆಶೆಯಲ್ಲಿ ಕಾಣುವ ಕನಸುಗಳು ಸಾಧನೆಯ ಮಾರ್ಗದಲ್ಲಿಯ ಅಡಚಣೆಗಳಾಗುವ ಸಂಭವವೂ ಇದೆ. ಹಾಗಾಗದಂತೆ ನಿಮ್ಮ ಮನಸ್ಸನ್ನು ಹತೋಟಿಯಲ್ಲಿರಿಸುವುದನ್ನು ಕಲಿಯಿರಿ. ಹೀಗೆ ನಿಮ್ಮ ಕನಸುಗಳು ನಿಮ್ಮ ಜೀವನದ ದಾರಿದೀಪಗಳಾಗಲಿ…
ಶುಭಾಶಯಗಳು.
ಇಂತಿ ನಿನ್ನ ಅವ್ವ
ಪತ್ರಕ್ಕೆ ಮಾರುತ್ತರ.. ಮಗನಿಂದ…
ಒಲವಿನ ಅವ್ವಾ,
ನಮಸ್ಕಾರÀಗಳು.
ಇಂದು ನಿಮ್ಮ ಪತ್ರ ಕೈಸೇರಿತು.
“ಮನೆಯೆ ಮೊದಲ ಪಾಠಶಾಲೆ…. ಜನನಿ ತಾನೆ ಮೊದಲ ಗುರುವು” ಎಂಬ ಮಾತು ಸುಳ್ಳಲ್ಲ. ನನ್ನ ಬಾಲ್ಯದಿಂದಲೂ ನನ್ನನ್ನು ಒಳ್ಳೆಯ ಮಾರ್ಗದಲ್ಲಿ ಮುಂದುವರೆಯುವಂತೆ ಮಾರ್ಗದರ್ಶನ ಮಾಡಿದವರು ನೀವು ಹಾಗೂ ಅಪ್ಪ. ಹಾಗೆಂದು ನಮ್ಮ ಕೂಡುಕುಟುಂಬದಲ್ಲಿರುವ ಅಜ್ಜಿ ಅಜ್ಜ, ಅಕ್ಕ ಇವರ ಪಾತ್ರವೇನು ಕಡಿಮೆಯದಲ್ಲ. ನಿಮ್ಮನ್ನೆಲ್ಲ ಬಿಟ್ಟು ನಾನು ಪಿಯುಸಿಗಾಗಿ ದೂರದ ಊರಿನಲ್ಲಿ ಇರಬೇಕಾದ ಸಂದರ್ಭದಲ್ಲಿ ನಾನು ಅತ್ತಾಗಲೂ ನೀವೇ ಧೈರ್ಯ ಹೇಳಿದ್ದಿರಿ. ಕಂಡ ಕನಸು ನನಸಾಗಬೇಕಾದರೆ ನೀನು ಇಂದಿನ ನಿನ್ನ ಸುಖವನ್ನು ತ್ಯಜಿಸಬೇಕಾಗುವುದು ಅನಿವಾರ್ಯ ಎಂದು ಹೇಳಿದ ಆ ಮಾತು ಇಂದಿಗೂ ನನ್ನ ಕಿವಿಗಳಲ್ಲಿ ರಿಂಗುಣಿಸುತ್ತಲಿದೆ. ಅದೇ ಕನಸನ್ನೇ ಸಾಕಾರಗೊಳಿಸುವಲ್ಲಿ ನಾನು ದಿನರಾತ್ರಿ ಪರಿಶ್ರಮ ಪಡುತ್ತಿದ್ದೇನೆ. ಇನ್ನು ಕೇವಲ ಕೆಲವೇ ದಿನಗಳಲ್ಲಿ ನನ್ನ ವಾರ್ಷಿಕ ಪರೀಕ್ಷೆ. ಅದಕ್ಕಾಗಿ ನಾವೆಲ್ಲ ಸ್ನೇಹಿತರೂ ಕಷ್ಟಪಟ್ಟು ಓದುತ್ತಲಿದ್ದೇವೆ.
ನಿಮ್ಮ ನುಡಿಗಳು ಇಂಥ ಸಮಯದಲ್ಲಿ ನಮಗೆಲ್ಲ ದಾರಿದೀಪವಾಗಿವೆ. ನನ್ನ ಸ್ನೇಹಿತರೂ ಕೂಡ ನಿಮ್ಮ ಈ ಪತ್ರವನ್ನು ಓದಿ ನಿಮ್ಮಂಥ ತಾಯಿ ಎಲ್ಲರಿಗೂ ಮಾರ್ಗದರ್ಶಿ ಎಂದು ಹೇಳಿ ನಿಮಗೆ ತಮ್ಮ ಕೃತಜÐತೆಯನ್ನು ತಿಳಿಸಿದ್ದಾರೆ. ಇಂದು ನಮ್ಮ ಭಾಷಾ ಗುರುಗಳಿಗೂ ಈ ಪತ್ರವನ್ನು ತೋರಿಸಿದೆ. ಅವರೂ ಕೂಡ ನಿಮ್ಮ ಅಭಿಪ್ರಾಯವನ್ನು ಸ್ವಾಗತಿಸಿದರು. ಅಲ್ಲದೆ ನಿಮ್ಮ ವಿಚಾರಗಳನ್ನು ಶ್ಲ್ಯಾಘಿಸಿದರು.
ಅವ್ವಾ, ನಾನು ಕಂಡ ಕನಸನ್ನು ನನಸು ಮಾಡುವತ್ತಲೇ ನನ್ನ ಎಲ್ಲ ಪ್ರಯತ್ನ ಮುಂದುವರೆಸುತ್ತೇನೆ. ಮನೆಯಲ್ಲಿ ಅಪ್ಪ, ಅಜ್ಜ, ಅಜ್ಜಿ ಎಲ್ಲರಿಗೂ ನನ್ನ ನಮಸ್ಕಾರಗಳು. ಅಕ್ಕನಿಗೆ ನನ್ನ ನೆನಹುಗಳು.
ಇಂತಿ ನಿಮ್ಮ ಮಗ
ಸುಮೀತ