ಕಮಂಡಲದ ಕಥನ…!
ಕಮಂಡಲ; ಯತಿಗಳು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಒಂದು ವಿಧವಾದ ಪಾತ್ರೆ ಅಥವಾ ಸಾಧನ, ಹಿಂದೂ ಧರ್ಮದಲ್ಲಿ ಇದಕ್ಕೊಂದು ಪವಿತ್ರ ಸ್ಥಾನವಿದೆ. ಕಮಂಡಲ ವೈರಾಗ್ಯದ ಸಂಕೇತ. ದಂಡ, ಕಮಂಡಲ ಕಾವಿ ಬಟ್ಟೆ, ರುದ್ರಾಕ್ಷಿ, ಜಪಮಾಲೆ ಇವೆಲ್ಲಾ ತಪಸ್ವಿಗಳ ಬಳಿ ಕಾಣುವಂತಹುದು , ಹೀಗಾಗಿ ಈ ಲಾಂಛನಗಳಿಗೊಂದು ಪೂಜನೀಯ ಸ್ಥಾನವೂ ಇದೆ. ಋಷಿ-ಮುನಿಗಳು, ಸಾಧು ಸಂತರು, ಯೋಗಿಗಳು, ಸನ್ಯಾಸಿಗಳು, ಸಾಧು- ಸಂತರು, ಯೋಗಿಗಳು, ಸನ್ಯಾಸಿಗಳು, ತಪಸ್ವಿಗಳು ಕಮಂಡಲವನ್ನು ಬಳಸುತ್ತಾರೆ, ಬ್ರಹ್ಮ, ಶಿವ, ದತ್ತಾತ್ರೇಯ, ವಾಮನ ಇನ್ನೂ ಹಲವಾರು ದೇವರುಗಳ ಬಳಿ ಕಮಂಡಲವನ್ನು ಕಾಣಬಹುದು. ಈ ಕಮಂಡಲವನ್ನು ಕಾಣಬಹುದು, ಈ ಕಮಂಡಲ ತನ್ನದೇ ಆದ ಮೌಲ್ಯ ಹೊಂದಿದೆ. ಜೈನ ಧರ್ಮದಲ್ಲಿ ಕೂಡಾ ಈ ವಸ್ತುವಿಗೆ ವಿಶೇಷ ಹಾಗೂ ಪವಿತ್ರ ಸ್ಥಾನಮಾನವಿದೆ.
ಈ ಕಮಂಡಲದ ನೀರು ವಿರಾಗಿಗಳಿಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚಾರ ಮಾಡುವಾಗ ಜಪ-ತಪ, ಪೂಜೆ- ಪುನಸ್ಕಾರಗಳನ್ನು ಕೈಗೊಳ್ಳಲಿಕ್ಕೂ, ಕೆಲ ಸಂದರ್ಭಗಳಲ್ಲಿ ಕುಡಿಯಲಿಕ್ಕೂ ಕೂಡಾ ಬಳಕೆಯಾಗುತ್ತದೆ. ಈ ಕಮಂಡಲದ ಮತ್ತೊಂದು ವಿಶೇಷತೆ ಎಂದರೆ, ಈ ಕಮಂಡಲದಲ್ಲಿ ತುಂಬಿಟ್ಟ ನೀರು ಬಿಸಿಲಿನಲ್ಲಿ ತಂಪಾಗಿಯೂ, ಥಂಡಿ ಸಮಯದಲ್ಲಿ ಬೆಚ್ಚಗೂ ಇರುತ್ತದೆಂಬುದಲ್ಲದೇ, ಅದರಲ್ಲಿರುವ ನೀರು ಹಲವಾರು ದಿನ ಕೆಡದೇ ಇರುವುದೆಂಬುದು. ಕಮಂಡಲದಲ್ಲಿರುವ ನೀರನ್ನು ಪವಿತ್ರ ತೀರ್ಥ ಎನ್ನುವುದಲ್ಲದೇ, ಅಮೃತ ಸಮಾನ ಎಂಬ ನಂಬಿಕೆಯೂ ಇದೆ. ಪುರಾಣ, ಪುಣ್ಯ ಕಥೆಗಳಲ್ಲಿ ಋಷಿ -ಮುನಿಗಳು ಶಾಪ ಕೊಡಲೂ ವರ ನೀಡಲೂ ಕಮಂಡಲದ ನೀರು ಬಳಸುವುದನ್ನು ಓದಿ/ಕೇಳಿ ತಿಳಿದಿದ್ದೇವೆ.
ಈ ಕಮಂಡಲದ ತಯಾರಿಕೆ ಕೂಡಾ ವಿಶಿಷ್ಟವಾದುದೇ, ಜೇಡಿ ಮಣ್ಣಿನಿಂದಲ್ಲದೇ, ಒಂದು ಬಗೆಯ ವಿಶಿಷ್ಟ ಮರ (ಕಮಂಡಲ ತಾರಾ) ದಿಂದಲೂ ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುವ ಒಂದು ಬಗೆಯ ಆಫ್ರಿಕನ್ ಕೊಕೊನಟ್ ಎಂಬ ಮರದಲ್ಲಿ ದೊರೆಯುವ ದೊಡ್ಡ ಕಾಯಿಯಿಂದಲೂ ತಯಾರಿಸುತ್ತರೆಂಬುದು ಗಮನಿಸುವಂತಹುದು. ಆಧ್ಯಾತ್ಮ ಸಾಧಕರ ಅನುಷ್ಠಾನಕ್ಕೆ ನೆರವಾಗುವ ಕಮಂಡಲದಂಥ ಹಲವು ವಸ್ತುಗಳು, ಆಧ್ಯಾತ್ಮ ಜ್ಞಾನ, ಪರಂಪರೆಗಳ ಬಗ್ಗೆ ನಿರಾಸಕ್ತಿ ಕವಿದಂತೆ ಕಾಲದ ಕಗ್ಗತ್ತಲ ತಿರುವುಗಳಲ್ಲಿ ಮರೆಯಾಗುತ್ತವೆ.
ಹೊಸ್ಮನೆ ಮುತ್ತು