ಜ್ಞಾನ–ವಿಜ್ಞಾನಗಳಿಂದ ತೃಪ್ತನಾದವನು ಯೋಗಿ’ ಎಂದು ಲಕ್ಷಣೀಕರಿಸಿದ ಕೃಷ್ಣನು ಮುಂದುವರಿಸುತ್ತ ಮತ್ತೊಂದು ಯೋಗಿಲಕ್ಷಣವನ್ನು ಹೆಸರಿಸುತ್ತಾನೆ– ‘ಕೂಟಸ್ಥ’ ಎಂದು.
‘ಕೂಟ’ ಎಂದರೆ ಶಿಖರ/ ಅತ್ಯುಚ್ಚ ಎಂದರ್ಥ. ಕೂಟಸ್ಥನೆಂದರೆ ‘ಅತ್ಯುಚ್ಚವಾದ ತತ್ವದ ನೆಲೆಯಲ್ಲಿ ನಿಂತವನು’ ಎಂದರ್ಥ. ಪರತತ್ವದಲ್ಲಿ ನೆಲೆನಿಂತ ಮೇಲೆ ವ್ಯಾವಹಾರಿಕ ಬದುಕಿನ ಯಾವ ವಿವರವೂ ಅವನನ್ನು ವಿಚಲಿತಗೊಳಿಸಲಾರವು. ಹಾಗಾಗಿ ಆತ ‘ಕೂಟಸ್ಥ’. ‘ಕಂಬವನ್ನು ಹಿಡಿದು ಸುತ್ತುತ್ತ ಆಟವಾಡುವ ಮಗುವು, ಕಂಬವನ್ನು ಬಿಗಿಯಾಗಿ ಹಿಡಿದಿರುವವರೆಗೂ ಬೀಳದು. ಹಾಗೆಯೇ ತತ್ವವೆಂಬ ಕಂಬವನ್ನು ಹಿಡಿದ ಜ್ಞಾನಿಯು ಜಗತ್ತಿನಲ್ಲಿ ವ್ಯವಹರಿಸುತ್ತಿದ್ದರೂ ಮೋಹಕ್ಕೆ ಬೀಳನು’ ಎಂಬ ದೃಷ್ಟಾಂತವನ್ನೀಯುತ್ತಾರೆ ರಾಮಕೃಷ್ಣರು.
‘ಕೂಟಸ್ಥ’ನಾದ ಯೋಗಿಯ ಪರಿಯನ್ನು ಸಂಕೇತಿಸುವಂತಹದ್ದೇ ಧ್ಯಾನಸ್ಥ ಶಿವನ ಭಂಗಿ. ಭಾರತೀಯ ಚಿತ್ರ-ಶಿಲ್ಪಕಲೆಗಳಲ್ಲಿ ಯೋಗೀಶ್ವರನ ‘ಸಮತ್ವ’ವನ್ನು ಮನೋಜ್ಞವಾಗಿ ಸಂಕೇತಿಸಲಾಗಿದೆ- ಹಿಮಾಲಯದ ಶಿಖರಾಗ್ರದಲ್ಲಿ, ಚಳಿ-ಗಾಳಿ-ಬಿಸಿಲುಗಳ ನಡುವೆ ಕುಳಿತ ಯೋಗಿ ಶಿವನ ತಲೆಯ ಮೇಲೆ ನಿರಂತರ ಶೀತಲ ಗಂಗೆಯ ಅಭಿಷೇಕ! ಚಿತಾಭಸ್ಮವೂ ಘಟಸರ್ಪಗಳೂ ಮೈಮೇಲೆಲ್ಲ! ಕೈಯಲ್ಲಿ ಬ್ರಹ್ಮಕಪಾಲ! ಕೊರಳಲ್ಲಿ ರುಂಡಮಾಲೆ! ಸೊಂಟಕ್ಕೆ ಆನೆಯ ಚರ್ಮ! ಮನೆಯೋ ಉರಿಯುತ್ತಿರುವ ಚಿತೆಗಳ ಅಮಂಗಲದ ಸ್ಮಶಾನ! ಕ್ರೂರ ಮೃಗ-ಪಕ್ಷಿಗಳಿಂದ ಆವೃತನಾದ ಪಶುಪತಿಗೆ ನಿತ್ಯವೂ ಭೂತ-ಪಿಶಾಚ-ಗಣದ ವಿಕಟ ನರ್ತನ-ಕೂಗು. ಈ ವಿಲಕ್ಷಣ-ವೈಪರೀತ್ಯಗಳ ನಡುವೆ ಶಿವನು ‘ಶಿವನಾಗಿ’ ಕುಳಿತಿದ್ದಾನೆ! (ಶಿವ ಎಂದರೆ ಮಂಗಲಕರ!)
ಇದೆಲ್ಲ ಒಂದೆಡೆಯಾದರೆ, ಮತ್ತೊಂದೆಡೆ ಮಡಿಲೇರಿ ವಿರಾಜಿಸುವ ತ್ರಿಪುರಸುಂದರಿಯೂ ಶೃಂಗಾರಲಹರಿಯೂ ಆದ ಮುದ್ದಿನ ಮಡದಿಯ ಅನುಪಮ ಸ್ನೇಹವೂ ಅವನಿಗೆ ಪ್ರಿಯ! ಪುತ್ರರಾದ ಗಣೇಶ-ಸುಬ್ರಹ್ಮಣ್ಯರತ್ತಲೂ ಅವನ ವಾತ್ಸಲ್ಯ! ಶ್ರೀಪಾದಗಳಲ್ಲಿ ನಮಿಸಿ ವೇದ, ಆಗಮ, ತಂತ್ರ-ಮಂತ್ರಗಳಿಂದ ಅರ್ಚಿಸುವ ದೇವ ದಾನವ, ಮಾನವ, ಯಕ್ಷ, ಗಂಧರ್ವ ಗಣಗಳ ಆರಾಧನೆಯೂ ಗ್ರಾಹ್ಯ! ಗೀತ, ನೃತ್ಯ, ಕಲೆಕಾವ್ಯಾದಿಗಳಿಂದ ನುತಿಸುವ ಅಪ್ಸರಾದಿಗಳ ನಿವೇದನೆಯೂ ಆಸ್ವಾದ್ಯ! ಬಯಕೆಗಳನ್ನು ಈಡೇರಿಸೆಂದು ಹಗಲಿರುಳೂ ಗೋಗರೆಯುವ ಲೋಕಜನರ ಮೊರೆಯೂ ಶ್ರಾವ್ಯ! ಎಲ್ಲ ಲೋಕಗಳ ಎಲ್ಲರ ಜೀವರ ಅಂತರಂಗದ ಎಲ್ಲ ಸುಖದುಃಖಗಳೂ, ರಸಭಾವಗಳೂ ಅವನಿಗೆ ಏಕಕಾಲದಲ್ಲಿ ವೇದ್ಯ! ಇಷ್ಟೆಲ್ಲದರ ನಡುವೆ, ಅವನ ಮುಂದೆ ಮಂಡಿಯೂರಿ ಕುಳಿತು ಸಕಲ ಲೋಕಗಳ ಸಕಲ ಜೀವರ ಧರ್ವಧರ್ಮಗಳ ವರದಿಯನ್ನು ಮೌನದಲ್ಲೇ ನಿರಂತರವಾಗಿ ಒಪ್ಪಿಸುವ ನಂದೀಶ್ವರನತ್ತ ಪೂರ್ಣಧ್ಯಾನ! ಎಲ್ಲವನ್ನೂ ನೋಡುವವನೂ ಮಾಡುವವನೂ ಮಾಡಿಸುವವನೂ ತಾನೇ ಆದರೂ ಎಲ್ಲಕ್ಕೂ ಅತೀತನಾಗಿ ನಿಂತ ‘ನಿರ್ಲಿಪ್ತನು’ ಶಿವನು. ಎಲ್ಲದರಲ್ಲೂ ‘ಇದ್ದೂ ಇಲ್ಲದಂತಿರುವ’ ಆತ್ಮಧ್ಯಾನನಿರತನು. ಶಾಂತರಸವೇ ತಾನಾದ ಅವನಲ್ಲಿ ಎಲ್ಲ ರಸಗಳೂ, ಶುಭಾಶುಭಗಳೂ ತನ್ಮಯವಾಗುತ್ತವಾದರೂ, ಅವನಲ್ಲಿ ಯಾವ ಪ್ರಕ್ಷುಬ್ಧತೆಯಿಲ್ಲ, ಅಲೆಗಳಬ್ಬರವಿಲ್ಲ!
ಮನೆ, ಜನ, ಧನಗಳನ್ನು ‘ಬಿಟ್ಟು ಹೊರಟ’ ಮಾತ್ರಕ್ಕೆ ಯೋಗಿ ಎನ್ನುವುದು ಬಾಲಿಶ ಅಭಿಪ್ರಾಯ. ‘ಅಂತರಂಗದಲ್ಲಿ ಕೂಟಸ್ಥ-ಸ್ಥಿತಿಯನ್ನು ಸಿದ್ಧಿಸಿಕೊಳ್ಳುವುದು ಯೋಗ’ ಎನ್ನುವುದು ಪ್ರೌಢವಾದ ಅರಿವು. ಇಂತಹ ಆಂತರಿಕ ಸಮತ್ವವನ್ನು ಸಿದ್ಧಿಸಿಕೊಳ್ಳುವತ್ತ ಗಮನ ಹರಿಯಿಸಬೇಕೆನ್ನುವುದು ಗೀತಾಚಾರ್ಯನ ನಿರ್ದೇಶ. ಮುಂದಿನ ಲಕ್ಷಣವನ್ನು ಹೇಳುತ್ತಾನೆ, ವಿಜಿತೇಂದ್ರಿಯಃ. ಯೋಗಸ್ಥನಾಗಲು ಇಂದ್ರಿಯಜಯವೇ ಪ್ರಾಥಮಿಕ ಸಾಧನ ಎನ್ನುವುದನ್ನು ಈಗಾಗಲೇ ಸವಿವರವಾಗಿ ಹೇಳಿರುವ ಕೃಷ್ಣನು ಅದನ್ನೇ ಪುನರುಚ್ಚರಿಸುವುದರ ಮೂಲಕ ಅದರ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಿದ್ದಾನೆ.
ಮುಂದೆ ಕೃಷ್ಣನು, ಯೋಗಿಯನ್ನು ‘ಸಮ-ಲೋಷ್ಟಾಶ್ಮಕಾಂಚನ’ ಎಂದು ಲಕ್ಷಣೀಕರಿಸುತ್ತಾನೆ. ‘ಲೋಷ್ಠ’ ಎಂದರೆ ಮಣ್ಣಿನ ಮುದ್ದೆ. ‘ಅಶ್ಮ’ ಎಂದರೆ ಕಲ್ಲು. ‘ಕಾಂಚನ’ ಎಂದರೆ ಚಿನ್ನ. ಲೋಕದಲ್ಲಿ ಕಲ್ಲು, ಮಣ್ಣು, ಚಿನ್ನಗಳಿಗೆ ಕಟ್ಟುವ ಮೌಲ್ಯವು ಬೇರೆಬೇರೆಯಷ್ಟೆ? ಚುಕ್ಕೆ ಚಿನ್ನಕ್ಕೂ ಅಪಾರ ಮನ್ನಣೆ ಕೊಡುವ ಜನರು ಮಣ್ಣು-ಕಲ್ಲುಗಳಿಗೆ ಆ ಮಟ್ಟದ ಗೌರವವನ್ನು ಕೊಡುವುದಿಲ್ಲ! ಆದರೆ ಅದೇ ಕಲ್ಲು ಮಣ್ಣುಗಳಿಂದ ಒಂದಿಷ್ಟು ‘ಚಿನ್ನ’ ಸಿಗುವುದಾದರೆ (ಹಣಸಂಪಾದನೆ ಆಗುವುದಾದರೆ) ಆಗ ಮಾತ್ರ ಅದಕ್ಕೆ ಬೆಲೆ! ಮಾರಿ ಹಣಗಳಿಸಬಹುದಾದರೆ ಸರಿ, ತಕ್ಷಣ ಆ ಕಲ್ಲುಮಣ್ಣುಗಳ ಭೂಮಿಗೂ ‘ಚದರಕ್ಕೆ ಇಷ್ಟು ರೂಪಾಯಿ’ ಎಂದು ನಿಗದಿ ಮಾಡಹತ್ತುತ್ತಾನೆ! ಹಣ ಸಿಗುವುದಾದರೇ ಬೀದಿಯ ಬದಿಯ ಕಲ್ಲುಮಣ್ಣುಗಳನ್ನೂ ಲಾರಿಗಳಲ್ಲಿ ತುಂಬಿತಂದು ‘ಲೋಡ್ಗೆ ಇಷ್ಟು ಹಣ’ ಎಂದು ಮೌಲ್ಯ ಕಟ್ಟುತ್ತಾನೆ! ಒಟ್ಟಿನಲ್ಲಿ ಎಲ್ಲಕ್ಕೂ ಚಿನ್ನದ (ಹಣದ) ಗಳಿಕೆಯೇ ಮೂಲ! ವಸ್ತುಗಳಿರಲಿ, ವಿದ್ಯೆಯಿರಲಿ, ಮನುಷ್ಯರಿರಲಿ, ಸಂಪನ್ಮೂಲಗಳಿರಲಿ, ಹಣವನ್ನು ಕೊಡಿಸುವಂತಹದ್ದಾದರೆ ಅವು ‘ಮೂಲ್ಯಯುತ’, ‘ಹಣವನ್ನು ಒದಗಿಸಲಾರದ್ದಾದಲ್ಲಿ ಅದು ಎಷ್ಟೇ ಶ್ರೇಷ್ಠವಾದರೂ ಗುಣಯುತವಾದರೂ ‘ಹೇಯ’! ಹೀಗೆ ಲೋಕವ್ಯವಹಾರದಲ್ಲಿ ಮೌಲ್ಯಾಪಮೌಲ್ಯಗಳಿಗೆ ಮನುಷ್ಯನು ಅತಿಯಾಗಿಯೇ ಸ್ಪಂದಿಸುತ್ತಾನೆ.
ಯೋಗಿಯು ಹಾಗಲ್ಲ. ಆತ ಲೋಕವ್ಯವಹಾರದಲ್ಲಿದ್ದರೂ, ಈ ಕಲ್ಲುಕಾಂಚನಗಳ ಲೌಕಿಕ ಮೌಲ್ಯದತ್ತ ವ್ಯವಹಾರಕ್ಕೆ ಬೇಕದಷ್ಟು ಮಾತ್ರ ಗಮನಹರಿಯಿಸುತ್ತಾನೆ. ಆದರೆ ಆ ಮೌಲ್ಯವೇ ಆತ್ಯಂತಿಕವೆಂದೋ, ಆ ಲಾಭನಷ್ಟಗಳನ್ನೇ ಸರ್ವಸ್ವವೆಂದೂ ಭ್ರಮಿಸುವುದಿಲ್ಲ. ಕೈದಕ್ಕಿದ್ದರ ಬಗ್ಗೆಯೂ, ಕೈತಪ್ಪಿಹೋದದ್ದರ ಬಗ್ಗೆಯೂ ಭಾವುಕನಾಗಿ ಹಿಗ್ಗುವುದಿಲ್ಲ, ಕುಗ್ಗುವುದಿಲ್ಲ, ಸಮಭಾವದಿಂದಿರುತ್ತಾನೆ ಎನ್ನುವುದು ತಾತ್ಪರ್ಯ.
ಕೃಪೆ: ವಿಜಯವಾಣಿ