ಜೀವನಕ್ಕೆ ಹತ್ತಿರವಾದ ಪಾತ್ರ ಸೃಷ್ಟಿಸಿದವ

ವಿಲಿಯಂ ಶೇಕ್ಸ್‌ಪಿಯರ್‌ ಜನಿಸಿದ್ದು ಇಂಗ್ಲೆಂಡಿನಲ್ಲಿ. ಆತ ಹುಟ್ಟಿದ್ದು 1564ರ ಏಪ್ರಿಲ್‌ ತಿಂಗಳಲ್ಲಿ. ತನ್ನ ಸಮಕಾಲೀನ ನಾಟಕಕಾರರಂತೆ ಶೇಕ್ಸ್‌‍‍ಪಿಯರ್‌ ವಿಶ್ವವಿದ್ಯಾಲಯಗಳಲ್ಲಿ ಕಲಿತವ ಅಲ್ಲ. ಇಂಗ್ಲೆಂಡಿನ ರಾಜಧಾನಿ ಲಂಡನ್‌ಗೆ 1585ರಲ್ಲಿ ಬಂದ ಶೇಕ್ಸ್‌ಪಿಯರ್‌, ನಾಟಕಗಳಲ್ಲಿ ಅಭಿನಯಿಸಿದ. ಒಟ್ಟು 38 ನಾಟಕಗಳನ್ನು ಬರೆದ. ಅವುಗಳಲ್ಲಿ ಹಾಸ್ಯ ಪ್ರಧಾನವಾದ ದಿ ಮರ್ಚೆಂಟ್ ಆಫ್ ವೆನಿಸ್, ಆ್ಯಸ್ ಯೂ ಲೈಕ್ ಇಟ್, ಟ್ವೆಲ್ತ್‌ ನೈಟ್‌ ಕೂಡ ಸೇರಿವೆ. ಐತಿಹಾಸಿಕ ಕಥಾಹಂದರ ಹೊಂದಿರುವ ನಾಲ್ಕನೆಯ ಹೆನ್ರಿ, ದುರಂತ ಕಥೆಗಳನ್ನು ಹೇಳುವ ಹ್ಯಾಮ್ಲೆಟ್‌, ಒಥೆಲ್ಲೊ, ಕಿಂಗ್ ಲಿಯರ್, ಮೆಕ್‌ಬೆತ್‌, ರೋಮಿಯೊ ಮತ್ತು ಜೂಲಿಯೆಟ್ ಕೂಡ ಶೇಕ್ಸ್‌ಪಿಯರ್‌ನ ರಚನೆಗಳು. ಅವನು ಬರೆದ ಎಲ್ಲ ನಾಟಕಗಳ ಪೈಕಿ ದುರಂತ ಕಥೆ ಹೊಂದಿರುವವು ಬಹುಶಃ ಅತ್ಯಂತ ಜನಪ್ರಿಯ. 1592ರಲ್ಲಿ ಪ್ಲೇಗ್‌ ರೋಗ ಉಲ್ಬಣಿಸಿ ಲಂಡನ್ನಿನ ರಂಗಮಂದಿರಗಳು ಬಾಗಿಲು ಮುಚ್ಚಿದವು. ಅವು ಎರಡು ವರ್ಷ ಬಾಗಿಲು ತೆರೆಯಲಿಲ್ಲ. ಈ ಅವಧಿಯಲ್ಲಿ ಶೇಕ್ಸ್‌ಪಿಯರ್‌ ಪದ್ಯಗಳನ್ನು ಬರೆದು, ಪ್ರಕಟಿಸಿದ. ಶೇಕ್ಸ್‌ಪಿಯರ್ ಬರೆದ ಸಾನೆಟ್‌ಗಳು (14 ಸಾಲುಗಳ ಪದ್ಯಗಳು) ಅವನ ಅತ್ಯುತ್ತಮ ಕಾವ್ಯ ಕೃತಿಗಳು ಎಂಬ ಖ್ಯಾತಿ ಪಡೆದಿವೆ. ಆತ 154ಕ್ಕೂ ಹೆಚ್ಚು ಸಾನೆಟ್‌ಗಳನ್ನು ಬರೆದ. ಇಂದಿಗೂ ಇಂಗ್ಲಿಷ್‌ನಲ್ಲಿ ಅತ್ಯುತ್ತಮ ಸಾನೆಟ್‌ಗಳನ್ನು ಸೃಷ್ಟಿಸಿದವ ಎಂಬ ಹೆಗ್ಗಳಿಕೆ ಹೊಂದಿದ್ದಾನೆ ಶೇಕ್ಸ್‌ಪಿಯರ್.ಮನುಷ್ಯನ ಸ್ವಭಾವಗಳ ಕುರಿತ ಆಳವಾದ ತಿಳಿವಳಿಕೆ ಶೇಕ್ಸ್‌ಪಿಯರ್‌ನ ಅತ್ಯುತ್ತಮ ಸಾಹಿತ್ಯಕ ಗುಣಗಳಲ್ಲಿ ಒಂದು. ನಿಜ ಜೀವನಕ್ಕೆ ತೀರಾ ಹತ್ತಿರವಾಗಿರುವ ಪಾತ್ರಗಳನ್ನು ಆತ ಸೃಷ್ಟಿಸಿದ. ಪಾತ್ರಗಳನ್ನು ‘ಒಳ್ಳೆಯ–ಕೆಟ್ಟ’ ಎಂಬ ಗುಣಗಳನ್ನು ಮೀರಿ ಬೆಳೆಸಿದ. ಶೇಕ್ಸ್‌ಪಿಯರ್‌ ಸೃಷ್ಟಿಸಿದ ಅತ್ಯಂತ ದುಷ್ಟ ಪಾತ್ರಗಳಲ್ಲಿಯೂ ಒಂದಿಷ್ಟು ಒಳ್ಳೆಯತನ ಕಾಣಿಸುತ್ತಿತ್ತು. ಇಂಗ್ಲಿಷ್‌ನಲ್ಲಿ ಈಗ ಬಹಳ ವ್ಯಾಪಕವಾಗಿ ಬಳಕೆಯಲ್ಲಿ ಇರುವ a fool’s paradise (ಸಮಸ್ಯೆ ಏನು ಎಂಬುದನ್ನು ಅರಿಯದೆ ಖುಷಿಯಿಂದ ಇರುವುದು), All that glitters is not gold (ಹೊಳೆಯುವುದೆಲ್ಲ ಚಿನ್ನವಲ್ಲ), It’s all Greek to me (ನನಗೆ ಇದ್ಯಾವುದೂ ಅರ್ಥವಾಗುತ್ತಿಲ್ಲ), Uneasy lies the head that wears the crown (ಮಹತ್ವದ ಜವಾಬ್ದಾರಿ ಹೊತ್ತವನಿಗೆ ಯಾವಾಗಲೂ ಚಿಂತೆ ಕಾಡುತ್ತಿರುತ್ತದೆ, ಆತನಿಗೆ ಸರಿಯಾಗಿ ನಿದ್ರಿಸಲೂ ಸಾಧ್ಯವಾಗುವುದಿಲ್ಲ) ಎಂಬಂತಹ ಮಾತುಗಳನ್ನು ಸೃಷ್ಟಿಸಿದ್ದು ಶೇಕ್ಸ್‌ಪಿಯರ್.

courtsey:prajavani.net

https://www.prajavani.net/artculture/article-features/william-shakspear-

Leave a Reply