ಬದುಕಿನ ಕೆಲವು ಕಟು ವಾಸ್ತವಗಳು ದೇಶಾತೀತ ಮತ್ತು ಕಾಲಾತೀತ. ಯಾವುದೇ ಸಮಾಜವಾಗಲಿ, ಎಂತಹುದೇ ಸಂಸ್ಕೃತಿಯಾಗಲಿ ಮನುಷ್ಯರ ನಡುವಿನ ಸಂಬಂಧ, ಅದು ಗಟ್ಟಿಗೊಳ್ಳುವ ಪರಿ ಅಥವಾ ವಿಷಮಿಸುವ ಬಗೆಯ ಮೇಲೇ ವ್ಯಕ್ತಿಯೊಬ್ಬನ ಬದುಕಿನ ‘ಸೊಬಗು’ ಅಥವಾ ‘ವಿಮುಖತೆ’ ನಿಂತಿರುತ್ತದೆ ಎಂಬುದು ಸಾರ್ವಕಾಲಿಕ ಸತ್ಯ. ಹೀಗಾಗಿಯೇ, 1948ರಲ್ಲಿ ಅಮೆರಿಕದ ಆರ್ಥರ್ ಮಿಲ್ಲರ್ ಅವರು ರಚಿಸಿದ ‘ಡೆತ್ ಆಫ್ ಎ ಸೇಲ್ಸ್‌ಮನ್’ ನಾಟಕ, ಪರದೆಯ ಮೇಲಾಗಲಿ, ಅಕ್ಷರ ರೂಪದಲ್ಲಾಗಲಿ ಇಂದಿಗೂ ನಮ್ಮನ್ನು ಕಾಡುತ್ತಲೇ ಇರುತ್ತದೆ. 1920ರ ದಶಕದಲ್ಲಿ ಅಮೆರಿಕದ ರಂಗಭೂಮಿಯನ್ನಾಳಿದ ದಿಗ್ಗಜತ್ರಯರಲ್ಲಿ ಮಿಲ್ಲರ್ ಒಬ್ಬರು. ಅವರು ಸಾಕಷ್ಟು ನಾಟಕಗಳನ್ನು ರಚಿಸಿದ್ದರೂ ಮರ್ಲಿನ್ ಮನ್ರೋಳಂತಹ ಜಗತ್ಪ್ರಸಿದ್ಧ ಮಾದಕ ತಾರೆಯನ್ನು ವರಿಸಿದ್ದರೂ ಹೊರಜಗತ್ತು ಇಂದಿಗೂ ಅವರನ್ನು ಹೆಚ್ಚಾಗಿ ಗುರುತಿಸುವುದು ‘ಡೆತ್ ಆಫ್ ಎ ಸೇಲ್ಸ್‌ಮನ್’ನ ಕರ್ತೃ ಎಂದೇ! ಅಷ್ಟರಮಟ್ಟಿಗೆ ಈ ನಾಟಕ ಜನಜನಿತ. ಅಷ್ಟಾದರೂ ಚಿ.ನ.ಮಂಗಳಾ ಅವರ 40 ವರ್ಷಗಳ ಹಿಂದಿನ ‘ಆಲ್ ಮೈ ಸನ್ಸ್’ನ ಕನ್ನಡಾನುವಾದ ಬಿಟ್ಟರೆ ಮಿಲ್ಲರ್ ಅವರ ಕೃತಿಗಳು ಕನ್ನಡಕ್ಕೆ ತರ್ಜುಮೆಗೊಂಡಿರುವ ಸಾಧ್ಯತೆ ಇಲ್ಲ. ಹಾಗೆಂದ ಮಾತ್ರಕ್ಕೆ ಮಿಲ್ಲರ್ ಕನ್ನಡಕ್ಕೆ ಹೊಸಬರೇನಲ್ಲ. ಎರಡು ದಶಕಗಳ ಹಿಂದೆಯೇ ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಗಳಿಗೆ ‘ಡೆತ್ ಆಫ್ ಎ ಸೇಲ್ಸ್‌ಮನ್’ ಪಠ್ಯವಾಗಿತ್ತು. ಬಿ.ಜಯಶ್ರೀ ಅವರ ನಿರ್ದೇಶನದಲ್ಲಿ ಈ ನಾಟಕ, ಕನ್ನಡದ ರಂಗಪರದೆಯ ಮೇಲೂ ವಿಜೃಂಭಿಸಿದೆ. ಇದೀಗ ಎಂ.ಎಸ್.ರಘುನಾಥ್ ಅವರು ಇದನ್ನು ‘ಮಾರಾಟಗಾರನ ಸಾವು’ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕೆಳಮಧ್ಯಮ ವರ್ಗದ ಕುಟುಂಬವೊಂದರ ಏಳುಬೀಳು, ಅಪ್ಪ- ಮಕ್ಕಳ ನಡುವಿನ ಭಾವನಾತ್ಮಕ ಸಂಘರ್ಷ, ಅವರ ನಡುವೆ ಹೈರಾಣಾಗುವ ತಾಯಿ, ಪ್ರತಿಷ್ಠಿತ ಕಂಪನಿಯೊಂದರ ಮಾರಾಟಗಾರನಾಗಿ ಬದುಕು ಸವೆಸಿದರೂ ಪೋಲಿ ಬಿದ್ದ ಮಕ್ಕಳ ದೆಸೆಯಿಂದಾಗಿ ಮುಪ್ಪಿನಲ್ಲೂ ಗಾಣದೆತ್ತಿನಂತೆ ದುಡಿಮೆಗೆ ಒಡ್ಡಿಕೊಳ್ಳುವ ಅನಿವಾರ್ಯ, ಅಪಾರ್ಟ್‌ಮೆಂಟ್ ಸಂಸ್ಕೃತಿಯ ನೀರಸ ಬದುಕು, ಮನೆಗೆ ಕೊಂಡ ವಸ್ತುಗಳ ಕಂತು ಕಟ್ಟಲು ಪರದಾಡುವ ಹೆಂಡತಿ… ಜಾಗತೀಕರಣ ನಂತರದ ಭಾರತದ ಅಪ್ಪಟ ಮಧ್ಯಮ ವರ್ಗದ ಕುಟುಂಬವೊಂದರ ತಾಕಲಾಟಗಳನ್ನೇ ಧ್ವನಿಸುವುದು ಈ ಕೃತಿಯ ವೈಶಿಷ್ಟ್ಯ. ಕಾಗುಣಿತ ಮತ್ತು ವಾಕ್ಯರಚನೆ ದೋಷಗಳತ್ತ ಗಮನಹರಿಸಿ, ಸಂಭಾಷಣೆಯನ್ನು ಪದಶಃ ಭಾಷಾಂತರಿಸದೆ ನಮ್ಮ ಕನ್ನಡದ ನುಡಿಗಟ್ಟಿಗೆ ಒಗ್ಗಿಸುವ ಪ್ರಯತ್ನ ನಡೆಸಿದ್ದರೆ, ಅಕ್ಷರ ರೂಪದಲ್ಲಿ ಈ ದೃಶ್ಯರೂಪಕವನ್ನು ಕಟ್ಟಿಕೊಡುವ ಪ್ರಯತ್ನ ಹೆಚ್ಚು ಸಮರ್ಥವಾಗುತ್ತಿತ್ತು
“author”: “ನೀಳಾ ಎಂ.ಎಚ್.”,
courtsey:prajavani.net
https://www.prajavani.net/artculture/book-review/book-revie-660267.html