ಇನ್ನಿಲ್ಲವಾದ ಕಾಸರಗೋಡಿನ ಕನ್ನಡ ಧ್ವನಿ ಕಯ್ಯಾರ ಕಿಂಞಣ್ಣ ರೈ
ನಿನ್ನೆ ಸಾಯಂಕಾಲ 6-30 ಗಂಟೆಗೆ ಎಂದಿನಂತೆ ಪೇಟೆಯ ಕಡೆಗೆ ದಿನ ಬಳಕೆಯ ಕೆಲ ಸಾಮಾನು ಸರಂಜಾಮು ತರಲು ಪೇಟಯ ಕಡೆಗೆ ಹೊರಟಿದ್ದೆ. ಜೂನ್ ತಿಂಗಳಿನ ನಂತರ ಇಲ್ಲಿ ಅಂತಹ ಮಳೆ ಸುರಿದಿಲ್ಲ. ಪುಷ್ಯ ಮಳೆ ಸದ್ದಿಲ್ಲದೆ ಹೊರಟು ಹೋಗಿದೆ ಆಶ್ಲೇಷಾ ಮಳೆಯಾದರೂ ಕೈಹಿಡಿಯಬಹುದೆ ಎಂದು ರೈತ ಮುಗಿಲೆಡೆಗೆ ಮುಖಮಾಡಿ ಕುಳಿತಿದ್ದಾನೆ. ಇದು ಸಹ ಕಣ್ಣು ಮುಚ್ಚಾಲೆಯ ಆಟ ನಡೆಸಿದೆ ಎಲ್ಲರಲಿ ಆಶಾಭಾವ ಮೂಡಿಸಿ ಒಂದು ರೀತಿಯ ಜೂಟಾಟ ನಡೆಸಿದೆ. ಬೆಳಗಿನಿಂದ ಮಳೆಯಾಗುವ ಎಲ್ಲ ಲಕ್ಷಣಗಳೂ ಇದ್ದು ಏತಕ್ಕೂ ಇರಲಿ ಎಂದು ಕೊಡೆಯೊಂದಿಗೆ ಮನೆ ಬಿಟ್ಟೆ. ಪ್ರಮುಖ ಡಾಂಬರ್ ರಸ್ತೆಗೆ ತಿರುಗುತ್ತಿದ್ದಂತೆ ಪರಿಚಿತರೊಬ್ಬರು ನಾನು ಕೊಡೆ ಹಿಡಿದುಕೊಂಡಿರುವುದನ್ನು ಗಮನಿಸಿ ನೀವು ಕೊಡೆ ಹಿಡಿದುಕೊಂಡು ಹೋಗುವುದನ್ನು ಗಮನಿಸಿ ಮಳೆ ಬರುತ್ತಲೆ ಇಲ್ಲ ಎಂದು ಕುಶಾಲಿಯಾಗಿ ಮಾತನಾಡಿದರು. ಏನು ಮಾಡುವುದು ಸ್ವಾಮಿ ..! ಮಳೆಗೆ ನನ್ನ ಕಂಡರೆ ಆಗುವುದಿಲ್ಲ ನಾನು ಕೊಡೆಯಿಲ್ಲದೆ ಮಳೆಯ ದಿನಗಳಲ್ಲಿ ಮನೆಯಿಂದ ಹೊರಗೆ ಹೊರಟೆನೆಂದರೆ ನನ್ನ ಗ್ರಹಚಾರ ಬಿಡಿಸಿ ಬಿಡುತ್ತದೆ ಎಂದು ಉತ್ತರಿಸಿ ಮುನ್ನಡೆದೆ.
ಈ ಮೊದಲು ಗಣ್ಯ ಸ್ನೇಹಿತರಾದ ರಮೇಶ ಕಾಮತರು ಲೋಕಾರೂಢಿಯಂತೆ ಫೋನ್ ಮಾಡಿದವರು ಕಯ್ಯಾರ ಕಿಂಞಣ್ಣ ರೈಯವರು ತೀರಿಕೊಂಡ ವಿಷಯ ತಿಳಿಸಿದ್ದರು. ಅವರೊಬ್ಬ ಹಿರಿಯ ಶತಾಯುಷಿ ಕವಿ ಸಾಹಿತಿ ಕನ್ನಡಪರ ಹೋರಾಟಗಾರ ಕಾಸರಗೋಡಿನ ಉತ್ತರ ಭಾಗವನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬ ಮಹಾಜನ ಆಯೋಗದ ವರದಿ ಜಾರಿ ಕುರಿತಂತೆ ಬಹಳ ಆಶೆ ಇಟ್ಟುಕೊಂಡು ಆ ಬಗೆಗೆ ಕ್ರಿಯಾಶೀಲವಾಗಿ ತೊಡಗಿ ಕೊಂಡಿದ್ದರು ಕೂಡ. ಇಳಿ ವಯಸ್ಸು ಜನ ಬೆಂಬಲ ರಾಜಕೀಯ ಸಂಕಲ್ಪ ಶಕ್ತಿ ಇಲ್ಲದ, ನಮ್ಮ ಆಳುವ ವರ್ಗ ಮತ್ತು ರಾಜಕೀಯ ಪಕ್ಷಗಳ ನಿರ್ಲಕ್ಷ್ಯದಿಂದಾಗಿ ಮಹಾಜನ ಆಯೋಗದ ವರದಿ ಇನ್ನೂ ಅನುಷ್ಟಾನಗೊಳ್ಳದೆ ಹಾಗೆಯೆ ಇದೆ. ಕಿಂಞಣ್ಣ ರೈಗಳು ತಮ್ಮ ಕನಸು ಸಾಕಾರಗೊಳ್ಳುವುದನ್ನು ನೋಡದೆ ಬದುಕಿಗೆ ವಿದಾಯ ಹೇಳಿ ಹೋಗಿದ್ದಾರೆ. ಹೀಗೆಯೆ ಯೋಚಿಸುತ್ತ ಪುರ ಪ್ರವೇಶ ಮಾಡಿದೆ ಯಾರೂ ಈ ವಿಷಯ ಕುರಿತು ಮಾತನಾಡಲಿಲ್ಲ. ಕೆಲಸಕ್ಕೆ ಬಾರದ ಎಲ್ಲ ವಿಷಯಗಳ ಬಗೆಗೆ ಜನ ಮಾತನಾಡುತ್ತಿದ್ದರು. ಜತ್ತ ಅಕ್ಕಲಕೋಟ ಮತ್ತು ಸೊಲ್ಲಾಪುರಗಳು ಸಹ ಮಹಾಜನ ಆಯೋಗದ ಪ್ರಕಾರ ಕರ್ನಾಟಕಕ್ಕೆ ಸೇರಬೇಕು. ಇದಕ್ಕಾಗಿ ಬೆಳಗಾವಿ ಕಡೆಯ ಅಣ್ಣು ಗುರೂಜಿ ಇತರರು ಕಿಂಞಣ್ಣರೈಯವರಂತೆ ಹೋರಾಟ ಮಾಡಿದರು ಅವರೂ ಸಹ ಮಣ್ಣಲ್ಲಿ ಮಣ್ಣಾಗಿ ಹೋದರು. ಮಹಾಜನ ವರದಿ ಇದೆ ನಾವೂ ಸುಮ್ಮನೆ ನಮ್ಮ ದೈನಂದಿನ ಬದುಕಿನ ಜಂಜಾಟದಲ್ಲಿ ಮುಳುಗಿ ಹೋಗಿದ್ದೇವೆ.
ಕವಿ ಕಿಂಞಣ್ಣ ರೈ ಎಂದರೆ ನನ್ನ ನೆನಪು ಬಾಲ್ಯದ ದಿನಗಳಿಗೆ ಓಡುತ್ತದೆ. ಆಗಿನ್ನೂ ಧಾರವಾಡ ಬೆಳಗಾಂವಿ ವಿಜಾಪುರ ಮತ್ತು ಕಾರವಾರಗಳು ಅಖಂಡ ಕರ್ನಾಟಕಕ್ಕೆ ಸೇರಿರಲಿಲ್ಲ. ಆ ಭಾಗ ಮುಂಬೈ ಪ್ರಾಂತದ ಆಡಳಿತಕ್ಕೆ ಒಳಪಟ್ಟಿತ್ತು. ನಮಗೆ ಕನ್ನಡದ ಪಾಠಗಳಲ್ಲಿ ಬೇಂದ್ರೆ, ಕುವೆಂಪುರವರಲ್ಲದೆ ಪಂಜೆ ಮಂಗೇಶರಾಯರು, ಗೋವಿಂದ ಪೈ, ಮಧುರಚನ್ನ, ಸಿಂಪಿ ಲಿಂಗಣ್ಣ, ಕಡಂಗೋಡ್ಲು ಶಂಕರಭಟ್ಟರು, ಜಿ.ಪಿ.ರಾಜರತ್ನಂ ರವರ ಜೊತೆಗೆ ಕಯ್ಯಾರ ಕಿಂಞಣ್ಣರೈ ಮತ್ತು ಇತರೆ ಕವಿಗಳ ಕವನಗಳೂ ಇರುತ್ತಿದ್ದವು. ಅವುಗಳನ್ನು ನಮಗೆ ಮನ ಮುಟ್ಟುವಂತೆ ಅರ್ಥಗರ್ಭಿತವಾಗಿ ನಮ್ಮ ಗುರುಗಳಾಗಿದ್ದ ಮೇಗುಂಡಿ ಚೆನ್ನಪ್ಪ ಮತ್ತು ಗಿರಿಯಪ್ಪನವರ ಹಾಗೂ ಎಂ.ಬಿ.ಪಾಟೀಲ ಮಾಸ್ತರರು ಪಾಠ ಮಾಡಿದ್ದರು. ಆ ದಿನ ಮಾನಗಳು ನನ್ನ ಕಣ್ಮುಂದೆ ಸುಳಿದು ಹೋದವು. ಮುಂದೆ ಆ ಮಟ್ಟದ ಕನ್ನಡ ಸಾಹಿತ್ಯ ಪಾಠ ಹೈಸ್ಕೂಲ್ ಮತ್ತು ಉನ್ನತ ವಿದ್ಯಾಭ್ಯಾಸಗಳಲ್ಲಿಯೂ ಆಗಲಿಲ್ಲವೆನ್ನುವುದು ಅಷ್ಟೇ ನಿಜ. ಇದೇ ಸಂಧರ್ಭದಲ್ಲಿ ಕಳೆದ ತಿಂಗಳು ಇಲ್ಲಿ ನಡೆದ ತಾಲೂಕಿನ ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲಿನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಖ್ಯಾತ ಗಾಯಕ ಗರತಿಕೆರೆ ರಾಘಣ್ಣ ಎಂದೆ ಕರೆಯಲ್ಪಡುವ ಹೋ.ನಾ.ರಾಘವೇಂದ್ರರವರು ಶತಾಯುಷಿ ಕಯ್ಯಾರರನ್ನು ನೆನಪಿಸಿಕೊಂಡು ಅವರ ರಚನೆಯೊಂದನ್ನು ಸುಶ್ರಾವ್ಯವಾಗಿ ಹಾಡಿ ನೆರೆದ ಸಾಹಿತ್ಯ ಪ್ರಿಯರನ್ನು ರಂಜಿಸಿದ್ದರು. ಆದರೆ ಇಂದು ಆ ಕವಿ ನಮ್ಮ ಮಧ್ಯದಿಂದ ಎದ್ದು ನಡೆದಿದ್ದಾರೆ. ಹಿರಿಯ ಸಾಹಿತ್ಯ ಲೋಕದ ಜೀವಿಗಳು ಸದ್ದಿಲ್ಲದೆ ನಮ್ಮನ್ನು ಬಿಟ್ಟು ನಡೆದು ಹೋಗುತ್ತಿದ್ದಾರೆ. ಒಂದು ಬಗೆಯ ದಿಗಿಲು ನಮ್ಮನ್ನು ಕಾಡುತ್ತಿದೆ ಅವರು ನಿರ್ಮಿಸಿ ಹೋದ ನಿರ್ವಾತವನ್ನು ತುಂಬುವವರು ಯಾರು? ಬಗೆ ಹರಿಯದ ಪ್ರಶ್ನೆ ನಮ್ಮೆದುರು ಧುತ್ತೆಂದು ನಿಲ್ಲುತ್ತದೆ.
ಕಯ್ಯಾರ ಕಿಂಞಣ್ಣ ರೈಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡಿನ ಕಯ್ಯಾರದಲ್ಲಿ 1915 ನೆಯ ಇಸವಿಯ ಜೂನ ತಿಂಗಳ 8 ನೇ ತಾರೀಕಿನಂದು ಜನಿಸಿದರು. ಇವರ ತಂದೆ ದುಗ್ಗಪ್ಪ ರೈ ತಾಯಿ ದೇಯಕ್ಕ. ಇವರು ತಮ್ಮ ಶಾಲಾ ದಿನಗಳಲ್ಲಿ ಕನ್ನಡ ಕಲಿತರು ಮಾತ್ರವಲ್ಲ ತಮ್ಮ ಹನ್ನೆರಡನೆಯ ವಯಸ್ಸಿಗೇನೆ ಕೈ ಬರಹದ ಪತ್ರಿಕೆಯನ್ನು ಹೊರ ತಂದರು. ಮಹಾತ್ಮಾ ಗಾಂಧೀಜಿಯವರ ಚಿಂತನೆಗಳಿಂದ ಪ್ರಭಾವಿತರಾದ ಇವರು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡರು. ಈ ದಿನಗಳಲ್ಲಿಯೆ ಅವರು ಉಂಞಕ್ಕ ಎನ್ನುವವರನ್ನು ಮದುವೆಯಾದರು. ಮುಂದೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ತಮ್ಮ ಬದುಕನ್ನು ಪ್ರಾರಂಭಿಸಿದರು. ಪತ್ರಿಕಾರಂಗದ ಕಡೆಗೆ ಒಲವಿದ್ದ ಇವರು ತಮ್ಮ ವೃತ್ತಿಯ ಜೊತೆಗೆ ಪತ್ರಿಕಾ ರಂಗದೆಡೆಗೆ ಒಲವನ್ನು ಬೆಳೆಸಿಕೊಂಡು ತಮ್ಮ ಬರಹಗಳನ್ನು ಸ್ವಾಭಿಮಾನ್, ಮದ್ರಾಸ ಮೇಲ್ ಮತ್ತು ದಿ ಹಿಂದೂ ಪತ್ರಿಕೆಗಳಿಗೆ ಕಳಿಸುತ್ತಿದ್ದರು. ಇವರ ಬರವಣಿಗೆಯ ಹರವು ಕಾವ್ಯವಲ್ಲದೆ ಕಲೆ ಸಂಸ್ಕೃತಿ ವ್ಯಾಕರಣ ಮತ್ತು ಶಿಶು ಸಾಹಿತ್ಯದ ರಚೆನೆಗಳ ಕಡೆಗೂ ಸಹ ಇದ್ದು ಕೃತಿರಚನೆಗಳನ್ನು ಮಾಡಿದರು. ಇವರ ಪ್ರಸಿದ್ಧ ರಚನೆಗಳನ್ನು ನೆನಪಿಸಿಕೊಳ್ಳುವುದಾದಲ್ಲಿ ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ ಮತ್ತು ಕೊರಗ ಕೃತಿಗಳನ್ನು ನೆನಪಿಸಿಕೊಳ್ಳಬಹುದು. ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈಗಳಿಂದ ಪ್ರಭಾವಿತರಾಗಿದ್ದ ಇವರು ಅವರ ಜೀವನ ಚರಿತ್ರೆ ಯನ್ನು ಹೃದಯಂಗಮವಾಗಿ ಮನ ಮುಟ್ಟುವಂತೆ ಬರೆದಿದ್ದಾರೆ. ಅದೇ ರೀತಿ ಮಲೆಯಾಳಿ ಸಾಹಿತಿ ಪಿ.ಕೆ.ಪರಮೇಶ್ವರನ್ ನಾಯರ್ ಬರೆದ ಸಾಹಿತ್ಯ ದೃಷ್ಟಿ ಕೃತಿಯ ಅನುವಾದವನ್ನು ಕನ್ನಡದಲ್ಲಿ ಮಲೆಯಾಳಿ ಸಾಹಿತ್ಯ ಚರಿತ್ರೆ ಎಂದು ಮೂಲ ಕೃತಿಗೆ ಚ್ಯುತಿ ಬಾರದಂತೆ ಸಮರ್ಥವಾಗಿ ಅನುವಾದಿಸಿದ್ದಾರೆ.
.
ಇವರು ಮಂಗಳೂರಿನಲ್ಲಿ ನಡೆದ 67 ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆ ಮಡಿತ್ತು. 2005 ರಲ್ಲಿ ಮಂಗಳೂರು ವಿಶ್ವ ವಿದ್ಯಾಲಯ ಇವರ ಸಾಹಿತ್ಯ ಮತ್ತು ನಾಡು ನುಡಿ ಸೇವೆಯನ್ನು ಗಮನಿಸಿ ಗೌರವ ಡಾಕ್ಟರೇಟ್ ಪದವಿಯನ್ನು ಕೊಡ ಮಾಡಿತು. ಇವರು ರಚಿಸಿದ ಕೆಲವು ಗೀತೆಗಳನ್ನು ಖ್ಯಾತ ಕನ್ನಡದ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರು ತಮ್ಮ ಚಿತ್ರ ‘ಪಡುವಾರ ಹಳ್ಳಿ ಪಾಂಡವರು’ ಚಿತ್ರದಲ್ಲಿ ಬಳಸಿ ಕೊಂಡಿದ್ದಾರೆ. ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬುದು ಅವರ ಆಶೆಯಾಗಿತ್ತು ಅದಕ್ಕಾಗಿ ಅವರು ಇ.ಎಂ.ಎಸ್ ನಂಬೂದರಿಪಾದ, ಸಿ.ಅಚ್ಯುತ್ ಮೆನನ್ ಮತ್ತು ಪಟ್ಟಂಥಾನು ಪೀಳ್ಳೆಯವರುಗಳು ಕೇರಳದ ಮುಖ್ಯ ಮಂತ್ರಿಗಳಾಗಿದ್ದ ಸಂಧರ್ಭದಲ್ಲಿ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಕುರಿತು ತಮ್ಮ ವಾದ ಮಂಡಿಸಿದ್ದಾರೆ. ಒಬ್ಬ ವ್ಯಕ್ತಿಯ ಹೋರಾಟಕ್ಕೆ ವಿಚಾರ ಮಂಡನೆಗೆ ಯಾವುದೆ ರಾಜಕಾರಣಿ ಸ್ಪಂದಿಸಿದ್ದು ಜಗತ್ತಿನ ಇತಿಹಾಸದಲ್ಲಿದೆಯೆ? ಕಾರಣ ಇವರು 1980 ರಲ್ಲಿ ಕಾಸರಗೋಡಿನಿಂದ ಕೇರಳ ರಾಜ್ಯ ಅಸೆಂಬ್ಲಿಗೆ ಚುನಾವಣೆಯಲ್ಲಿ ಸ್ಪರ್ದಿಸಿದರು ಆದರೆ ಇವರು ಸೋಲು ಕಂಡರು. ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸ ಬೇಕೆಂಬ ಅವರ ಆಶೆ ಆಶೆಯಾಗಿಯೆ ಉಳಿದು ಹೋದುದು ಅವರನ್ನು ಕೊನೆಯವರೆಗೂ ಕಾಡಿತು. ಮಹಾಜನ ಆಯೋಗದ ವರದಿಯ ಪ್ರಕಾರ ಈಗಿನ ಕಾಸರಗೋಡು ಜಿಲ್ಲೆಯ ಉತ್ತರ ಭಾಗ ಕರ್ನಾಟಕಕ್ಕೆ ಸೇರಬೇಕೆಂದಿತ್ತು. ಅದಕ್ಕಗಿ ಅವರು ಕಾಸರಗೋಡು ವಿಲಿನೀಕರಣ ಸಮಿತಿಯನ್ನು 2002 ರಲ್ಲಿ ರಚಿಸಿ ಹೋರಾಟ ಮಾಡಿದರು. ಹಾಗೆಯೆ ತುಳು ನಾಡಿನ ರಚನೆಯೂ ಸಹ ಅವರ ಆಲೋಚನೆಯಾಗಿತ್ತು.
ಇವರು ತಮ್ಮ ಬದುಕಿನಲ್ಲಿ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ ಅವು ಇಂತಿವೆ. 1969 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಷ್ಟ್ರೀಯ ಮಟ್ಟದಲ್ಲಿ ಕೊಡುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಅವರ ಸಮಗ್ರ ಸಾಹಿತ್ಯಕ್ಕಾಗಿ 2004 ರಲ್ಲಿ ಪೇಜಾವರ ಪ್ರಶಸ್ತಿ, 2005 ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ, 2006 ರಲ್ಲಿ ಆದರ್ಶ ರತ್ನ ಪ್ರಶಸ್ತಿ ಮತ್ತು ಹಂಪಿ ವಿಶ್ವ ವಿದ್ಯಾಲಯ ಕೊಡುವ ನಾಡೋಜ ಪ್ರಶಸ್ತಿ, 2007 ರಲ್ಲಿ ಕರ್ನಾಟಕ ಏಕೀಕರಣ ಪ್ರಶಸ್ತಿ, 2009 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಫೆಲೋಶಿಪ್ ನೀಡಿ ಗೌರವಿಸಿತು. ಇವರಿಗೆ ಮೊದಲ ಕರ್ನಾಟಕ ಗಡಿ ನಾಡ ಪ್ರಶಸ್ತಿ ದೊರೆಯಿತು. ತಮ್ಮ ನೂರು ವರುಷದ ಏಳು ಬೀಳಿನ ಸಾರ್ಥಕ ಜೀವನ ನಡೆಸಿದ ಅವರು ಇದೇ ವರ್ಷ ಜೂನ್ ನಲ್ಲಿ ತಮ್ಮ ನೂರು ವರ್ಷಗಳನ್ನು ಪೂರೈಸಿ ನೂರೊಂದನೆ ವರ್��ಕ್ಕೆ ಕಾಲಿರಿಸದ್ದರು. ಆದರೆ ಇತ್ತೀಚೆಗೆ ನ್ಯುಮೋನಿಯಾ ಕಾಯಿಲೆಗೆ ತುತ್ತಾದ ಅವರು ಬದಿಯಡ್ಕದ ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇದೇ ಅಗಷ್ಟ್ 8 ರಂದು ಅಸು ನೀಗಿದ್ದಾರೆ. ಈ ಸಾವಿನ ಸುದ್ದಿಗೆ ಹೇಗೆ ಪ್ರತಿಕ್ರಿಯಿಸುವುದು ಏನೇ ಹೇಳಿದರೂ ಅದು ಬರಿ ಕ್ಲೀಷೆಯಾಗಿ ಬಿಡುತ್ತದೆ. ಆದರೂ ಒಂದು ಸಂಪ್ರದಾಯ ಪರಲೋಕವೊಂದಿದ್ದರೆ ಅಲ್ಲಿ ಅವರಿಗೆ ಶಾಂತಿ ನೆಮ್ಮದಿ ಸಿಗಲಿ ಎನ್ನುವ ಹಾರೈಕೆಯೊಂದಿಗೆ.
– ಹನುಮಂತ ಅ ಪಾಟೀಲ